Udupi, Sultanpu, Dr Vidya Kumari: ಉಡುಪಿ ನಗರದೊಳಗೆ 'ಸುಲ್ತಾನ್ ಪುರ' ; ದಿಶಾಂಕ್ ಏಪ್ ಎಡವಟ್ಟು ಬಗ್ಗೆ ಜಿಲ್ಲಾಧಿಕಾರಿ ಸ್ಪಷ್ಟನೆ, ಅಂತಹ ಹೆಸರು ಕಂದಾಯ ದಾಖಲೆಯಲ್ಲಿ ಇಲ್ಲ ! 

03-11-24 02:43 pm       Udupi Correspondent   ಕರಾವಳಿ

ಉಡುಪಿ ನಗರದೊಳಗೆ 'ಸುಲ್ತಾನ್ ಪುರ' ಎಂಬ ಹೆಸರು ಸರ್ಕಾರದ ದಿಶಾಂಕ್ ಆಪ್ ನಲ್ಲಿ ಕಾಣಿಸಿಕೊಂಡ ಕುರಿತು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.

ಉಡುಪಿ, ನ.3: ಉಡುಪಿ ನಗರದೊಳಗೆ 'ಸುಲ್ತಾನ್ ಪುರ' ಎಂಬ ಹೆಸರು ಸರ್ಕಾರದ ದಿಶಾಂಕ್ ಆಪ್ ನಲ್ಲಿ ಕಾಣಿಸಿಕೊಂಡ ಕುರಿತು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ವಕ್ಫ್ ವಿವಾದ ಎದ್ದಿರುವಾಗಲೇ ಇಂತಹ ಹೆಸರು ಕೇಳಿಬಂದಿದ್ದರಿಂದ ಜನರು ತಮ್ಮ ಭೂಮಿಯ ದಾಖಲೆಗಳನ್ನು ಪರಿಶೀಲಿಸಲು ಆರಂಭಿಸಿದ್ದರು. ಈ ಬಗ್ಗೆ ಸಾಕಷ್ಟು ಗೊಂದಲವೂ ಉಂಟಾಗಿತ್ತು. ಇದೀಗ ಉಡುಪಿ ಜಿಲ್ಲಾಧಿಕಾರಿ ವಿದ್ಯಾ ಕುಮಾರಿ ಅವರೇ ಸ್ಪಷ್ಟನೆ ನೀಡಿದ್ದು ಅಂತಹ ಹೆಸರು ಕಂದಾಯ ದಾಖಲೆಗಳಲ್ಲಿ ಇಲ್ಲ ಎಂದಿದ್ದಾರೆ. 

ಸರ್ವೇ ನಂಬರ್ ಗಳನ್ನು ದಾಖಲಿಸುವ ರಾಜ್ಯ ಸರ್ಕಾರದ ದಿಶಾಂಕ್ ಆಪ್ ನಲ್ಲಿ ಉಡುಪಿ ಜಿಲ್ಲೆಯ ಶಿವಳ್ಳಿ ಗ್ರಾಮದ ಸರ್ವೆ ನಂಬರ್ 120 ರಲ್ಲಿ ‘ಸುಲ್ತಾನಪುರ’ ಎಂಬ ಹೆಸರು ಪತ್ತೆಯಾಗಿರುವುದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಈ ಬಗ್ಗೆ ಸ್ಪಷ್ಟನೆ ನೀಡಿದ ಜಿಲ್ಲಾಧಿಕಾರಿ, Dishank app ನಲ್ಲಿ ಉಡುಪಿ ತಾಲ್ಲೂಕು ಶಿವಳ್ಳಿ ಗ್ರಾಮದ ಸರ್ವೆ ನಂಬರ್ 120 ಮತ್ತು 85 ರಲ್ಲಿ SULTANAPURA ಎಂದು ದಾಖಲಾಗಿರುತ್ತದೆ ಎಂಬ ವಿಷಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುವುದನ್ನು ಗಮನಿಸಲಾಗಿದೆ. ಶಿವಳ್ಳಿ ಗ್ರಾಮದ ಸರ್ವೆ ನಂಬರ್ 120& 85 ರ ಗ್ರಾಮ ನಕಾಶೆಯನ್ನು ಲಗತ್ತಿಸಲಾಗಿದೆ.

ಸಾರ್ವಜನಿಕರು ಸಹ ಸದರಿ ಗ್ರಾಮದ ಪೂರ್ಣ ಗ್ರಾಮ ನಕಾಶೆಯನ್ನು www.landrecords.karnataka.gov.in ನಲ್ಲಿ Download ಮಾಡಬಹುದಾಗಿದೆ. ಗ್ರಾಮ ನಕಾಶೆಯಲ್ಲಿ SULTANAPUR ಎಂದು ದಾಖಲಾಗಿರುದಿಲ್ಲ. 

ಕಂದಾಯ/ಭೂಮಾಪನ ಇಲಾಖೆ ದಾಖಲೆಗಳಲ್ಲೂ Sultanpur ಎಂದು ಇರುವುದಿಲ್ಲ. ಸರ್ವೇ ನಂಬರು 120ರ RTC ಯಲ್ಲೂ ಈ ರೀತಿಯ ಯಾವುದೇ ಉಲ್ಲೇಖವಿಲ್ಲ. ಆದ್ದರಿಂದ ಸಾರ್ವಜನಿಕರು ಯಾವುದೇ ಆತಂಕ ಪಡಬೇಕಾಗಿಲ್ಲ ಎಂದು ಈ ಮೂಲಕ ಸ್ಪಷ್ಟಪಡಿಸಿದ್ದಾರೆ.

Udupi Deputy Commissioner Dr Vidya Kumari provided clarification regarding the appearance of the name ‘Sultanpur’ under survey number 120 in Udupi on the state government’s Dishaank app.