MP Brijesh Chowta, Maravoor Railway bridge: ಮರವೂರು ರೈಲ್ವೇ ಮೇಲ್ಸೇತುವೆ ಅಗಲೀಕರಣಕ್ಕೆ ಒಪ್ಪಿಗೆ, ಸೌತ್ ವೆಸ್ಟರ್ನ್ ರೈಲ್ವೇ ಡಿಆರ್ ಎಂ ಗೈರು ಬಗ್ಗೆ ಸ್ಪಷ್ಟನೆ ಕೇಳಿದ ಸಂಸದ, ಬಂಟ್ವಾಳ ಸ್ಟೇಶನ್ ಕಾಮಗಾರಿ ವಿಳಂಬಕ್ಕೆ ಅಧಿಕಾರಿಗಳಿಗೆ ತರಾಟೆ  

04-11-24 10:38 pm       Mangalore Correspondent   ಕರಾವಳಿ

ಮಂಗಳೂರು ನಗರದಿಂದ ಕಾವೂರು ಮೂಲಕ ಏರ್ಪೋರ್ಟ್ ಸಂಪರ್ಕಿಸುವಲ್ಲಿ ಮರವೂರಿನ ರೈಲ್ವೇ ಬ್ರಿಡ್ಜ್ ರಸ್ತೆ ಅಗಲೀಕರಣಕ್ಕೆ ತೊಡಕಾಗಿರುವುದು ರೈಲ್ವೇ ಅಧಿಕಾರಿಗಳ ಜೊತೆಗಿನ ಸಭೆಯಲ್ಲಿ ಪ್ರಸ್ತಾಪವಾಗಿದ್ದು, ಆದಷ್ಟು ಶೀಘ್ರದಲ್ಲಿ ರೈಲ್ವೇ ಮೇಲ್ಸೇತುವೆಯನ್ನು ಅಗಲೀಕರಣಗೊಳಿಸುವಂತೆ ಸಂಸದ ಕ್ಯಾ. ಬ್ರಿಜೇಶ್ ಚೌಟ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಮಂಗಳೂರು, ನ.5: ಮಂಗಳೂರು ನಗರದಿಂದ ಕಾವೂರು ಮೂಲಕ ಏರ್ಪೋರ್ಟ್ ಸಂಪರ್ಕಿಸುವಲ್ಲಿ ಮರವೂರಿನ ರೈಲ್ವೇ ಬ್ರಿಡ್ಜ್ ರಸ್ತೆ ಅಗಲೀಕರಣಕ್ಕೆ ತೊಡಕಾಗಿರುವುದು ರೈಲ್ವೇ ಅಧಿಕಾರಿಗಳ ಜೊತೆಗಿನ ಸಭೆಯಲ್ಲಿ ಪ್ರಸ್ತಾಪವಾಗಿದ್ದು, ಆದಷ್ಟು ಶೀಘ್ರದಲ್ಲಿ ರೈಲ್ವೇ ಮೇಲ್ಸೇತುವೆಯನ್ನು ಅಗಲೀಕರಣಗೊಳಿಸುವಂತೆ ಸಂಸದ ಕ್ಯಾ. ಬ್ರಿಜೇಶ್ ಚೌಟ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಮಂಗಳೂರಿನ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸದರ್ನ್ ರೈಲ್ವೇ, ಕೊಂಕಣ ಮತ್ತು ಸೌತ್ ವೆಸ್ಟರ್ನ್ ರೈಲ್ವೇ ಅಧಿಕಾರಿಗಳ ಜೊತೆಗೆ ಪರಿಶೀಲನಾ ಸಭೆ ಸಂಸದರ ಅಧ್ಯಕ್ಷತೆಯಲ್ಲಿ ನಡೆಯಿತು. ಸಭೆಯಲ್ಲಿ ಮರವೂರು ರೈಲ್ವೇ ಮೇಲ್ಸೇತುವೆ ಅಗಲೀಕರಣ ಆಗದಿರುವುದು ಪ್ರಸ್ತಾಪಗೊಂಡಿತು. ಪಿಡಬ್ಲ್ಯುಡಿ ಅಧಿಕಾರಿಗಳು ಅದರ ವೆಚ್ಚವನ್ನು ಭರಿಸಿದರೆ, ಕಾಮಗಾರಿ ಶುರು ಮಾಡುವುದಾಗಿ ರೈಲ್ವೇ ಅಧಿಕಾರಿಗಳು ಒಪ್ಪಿಗೆ ನೀಡಿದ್ದಾರೆ. ಅದರಂತೆ, ಪಿಡಬ್ಲ್ಯುಡಿ ಇಲಾಖೆಯಿಂದ ಮೇಲ್ಸೇತುವೆ ಅಗಲೀಕರಣಕ್ಕಾಗಿ ಆರು ಕೋಟಿ ರೂ.ವನ್ನು ಡಿಪಾಸಿಟ್ ಇಡುವಂತೆ ಜಿಲ್ಲಾಧಿಕಾರಿಗಳು ಸೂಚಿಸಿದ್ದು, ಅದಕ್ಕೆ ಸಂಸದರು ಒಪ್ಪಿಗೆ ನೀಡಿದ್ದಾರೆ.

ಸಭೆಗೆ ಸೌತ್ ವೆಸ್ಟರ್ನ್ ರೈಲ್ವೇ ಡಿಆರ್ ಎಮ್ ಶಿಲ್ಪಿ ಅಗರ್ವಾಲ್ ಗೈರು ಹಾಜರಾದ ಬಗ್ಗೆ ಸಂಸದ ಚೌಟ ಪ್ರಶ್ನೆ ಮಾಡಿದ್ದು, ಸಭೆಗೆ ಹಾಜರಾಗಬೇಕೆಂದು ಹೇಳಿದ್ದರೂ ಯಾಕೆ ನಿರ್ಲಕ್ಷ ಮಾಡ್ತಿದ್ದೀರಿ. ಈ ಬಗ್ಗೆ ಸ್ಪಷ್ಟನೆ ನೀಡುವಂತೆ ಸಂಸದರು ಸೂಚನೆ ನೀಡಿದರು. ಇದೇ ವೇಳೆ, ತೊಕ್ಕೊಟ್ಟು ಒಳಪೇಟೆಯಲ್ಲಿ ಜನರಿಗೆ ಸಮಸ್ಯೆಯಾಗುತ್ತಿದ್ದು, ಸ್ಕೈವಾಕ್ ನಿರ್ಮಿಸುವಂತೆ ಪಾಲ್ಘಾಟ್ ವಿಭಾಗದ ರೈಲ್ವೇ ಅಧಿಕಾರಿಗಳಿಗೆ ಸಂಸದ ಚೌಟ ಪ್ರಸ್ತಾಪಿಸಿದ್ದು, ಅದಕ್ಕೆ ಅಧಿಕಾರಿಗಳು ಒಪ್ಪಿಕೊಂಡಿದ್ದಾರೆ.

ಪಾಂಡೇಶ್ವರ ರೈಲ್ವೇ ಗೇಟ್ ಸಮಸ್ಯೆ ಬಗ್ಗೆಯೂ ಸಭೆಯಲ್ಲಿ ಚರ್ಚೆಯಾಯಿತು. ಪೊಲೀಸ್ ಇಲಾಖೆ ಕಡೆಯಿಂದ ಹಾಜರಾಗಿದ್ದ ಸಂಚಾರ ವಿಭಾಗದ ಡಿಸಿಪಿ ದಿನೇಶ್ ಕುಮಾರ್, ದಿನದಲ್ಲಿ 7-8 ಬಾರಿ ಗೇಟ್ ಹಾಕುವುದರಿಂದ ಸಮಸ್ಯೆ ಆಗಿದೆ ಎಂದು ಹೇಳಿದಾಗ, ರೈಲ್ವೇ ಅಧಿಕಾರಿಗಳು ಒಪ್ಪಲಿಲ್ಲ. ನಮ್ಮ ಮಾಹಿತಿ ಪ್ರಕಾರ, ದಿನದಲ್ಲಿ ಮೂರು ಬಾರಿ ಮಾತ್ರ ಗೇಟ್ ಬಂದ್ ಮಾಡಲಾಗುತ್ತದೆ ಎಂದರು. ಗೂಡ್ಸ್ ರೈಲು ಶೆಡ್ ನಿಂದಾಗಿ ತೀವ್ರ ಸಮಸ್ಯೆ ಆಗುತ್ತಿರುವ ಬಗ್ಗೆ ಸಭೆಯಲ್ಲಿ ಶಾಸಕ ವೇದವ್ಯಾಸ ಕಾಮತ್ ರೈಲ್ವೇ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ಬಂಟ್ವಾಳ ರೈಲ್ವೇ ಸ್ಟೇಶನಲ್ಲಿ ಕಾಮಗಾರಿ ಆಮೆಗತಿಯಲ್ಲಿ ಸಾಗುತ್ತಿರುವುದನ್ನು ಆಕ್ಷೇಪಿಸಿದ ಸಂಸದ ಚೌಟ, ಒಟ್ಟು ಕೆಲಸ ಶೀಘ್ರ ಗತಿಯಲ್ಲಿ ಮುಗಿಸುವಂತೆ ತಾಕೀತು ಮಾಡಿದರು. ಮಹಾಕಾಳಿಪಡ್ಪು ಅಂಡರ್ ಪಾಸ್ ಕೆಲಸವನ್ನೂ ಆದಷ್ಟು ಬೇಗ ಮುಗಿಸಲು ಗಡುವು ನೀಡಿದರು. ಮಾರ್ಚ್ ವೇಳೆಗೆ ಕಾಮಗಾರಿ ಮುಗಿಸುವುದಾಗಿ ಅಧಿಕಾರಿಗಳು ಸಭೆಗೆ ಭರವಸೆ ನೀಡಿದರು. ಇದೇ ವೇಳೆ, ಮರವೂರು ಡಬಲ್ ಟ್ರ್ಯಾಕ್ ಅಗಲೀಕರಣ ಮಾಡುವ ವಿಚಾರದಲ್ಲಿಯೂ ಚರ್ಚೆ ನಡೆಯಿತು.

ಉಳಿದಂತೆ, ಮಂಗಳೂರು ನಗರ ವ್ಯಾಪ್ತಿಯೊಳಗಿನ ಸಮಸ್ಯೆ ಪರಿಹರಿಸಲು ಮಹಾನಗರ ಪಾಲಿಕೆ ಇಂಜಿನಿಯರುಗಳು ಸೇರಿದಂತೆ ಆಡಳಿತ ವರ್ಗ ಮತ್ತು ಸದರ್ನ್ ರೈಲ್ವೇಯವರು ಕುಳಿತು ಚರ್ಚಿಸಿ ಕೆಲಸ ಮಾಡುವಂತೆ ಸಂಸದರು ಸೂಚನೆ ನೀಡಿದರು. ಸಭೆಯಲ್ಲಿ ಶಾಸಕರಾದ ವೇದವ್ಯಾಸ ಕಾಮತ್, ಭರತ್ ಶೆಟ್ಟಿ, ಉಮಾನಾಥ ಕೋಟ್ಯಾನ್, ರೈಲ್ವೇ ಅಧಿಕಾರಿಗಳು, ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಉಪಸ್ಥಿತರಿದ್ದರು.

24 ಗಂಟೆ ಆರೋಗ್ಯ ಮಿತ್ರ ನೇಮಕ

ರೈಲ್ವೇ ಅಧಿಕಾರಿಗಳ ಜೊತೆಗಿನ ಸಭೆಯ ಬಳಿಕ ಆಯುಷ್ಮಾನ್ ಭಾರತ್ ಯೋಜನೆ ಸಮರ್ಪಕ ಜಾರಿ ಕುರಿತಾಗಿ ಮಂಗಳೂರಿನ ಖಾಸಗಿ ಮೆಡಿಕಲ್ ಕಾಲೇಜು ಆಸ್ಪತ್ರೆಗಳ ಪ್ರತಿನಿಧಿಗಳ ಜೊತೆಗೆ ಸಂಸದ ಬ್ರಿಜೇಶ್ ಚೌಟ ಸಭೆ ನಡೆಸಿದ್ದಾರೆ. ಆಯುಷ್ಮಾನ್ ಭಾರತ್ ಎಲ್ಲ ಖಾಸಗಿ ಆಸ್ಪತ್ರೆಗಳಲ್ಲಿಯೂ ದೊರಕುವಂತೆ ಆಗಬೇಕು. ಇದಕ್ಕಾಗಿ ಜಿಲ್ಲಾಡಳಿತದಿಂದ ಜನರಿಗೆ ಉಪಯೋಗ ಆಗುವಂತೆ ಪ್ರತ್ಯೇಕ ಮೊಬೈಲ್ ಏಪ್ ರಚಿಸುವಂತೆ ಸಂಸದರು ಸಲಹೆ ನೀಡಿದ್ದಾರೆ. ಇದಲ್ಲದೆ, ಎಲ್ಲ ಖಾಸಗಿ ಆಸ್ಪತ್ರೆಗಳಲ್ಲಿಯೂ 24 ಗಂಟೆಯೂ ಆರೋಗ್ಯ ಮಿತ್ರ ವಿಭಾಗದಲ್ಲಿ ಅಧಿಕಾರಿಯನ್ನು ನೇಮಿಸುವಂತೆ ಸೂಚಿಸಿದ್ದಾರೆ.

MP Capt Brijesh Chowta has directed South Western Railway officials to prepare a detailed plan for the development of Farangipete railway station. Speaking at the progress review meeting of the South Western, Southern, and Konkan railway divisions held at the district commissioner's office on Monday, Capt Chowta emphasized the need to upgrade Farangipete station to better serve the public.