Zameer Ahmed, Mangalore, CP Yogeshwar: ಚನ್ನಪಟ್ಟಣದಲ್ಲಿ ಯೋಗೀಶ್ವರ್ 18 ರಿಂದ 20 ಸಾವಿರ ಮತದಿಂದ ಗೆಲ್ಲುತ್ತಾರೆ, ಬರೆದಿಟ್ಟುಕೊಳ್ಳಿ.. ಮುಸ್ಲಿಂ ಪಂಚರ್ ಹಾಕೋರು, ವೆಲ್ಡಿಂಗ್ ಮಾಡೋರು ಇವ್ರ ಓಟ್ ಬೇಡ ಎಂದ ಮೇಲೆ ಖರೀದಿ ಯಾಕೆ ಮಾಡ್ತೀರಿ..? 

16-11-24 02:23 pm       Mangalore Correspondent   ಕರಾವಳಿ

ನೀವು ಬರೆದಿಟ್ಟುಕೊಳ್ಳಿ, ಚನ್ನಪಟ್ಟಣದಲ್ಲಿ ಏನೇನು ಆಗುವುದಿಲ್ಲ. ಚನ್ನಪಟ್ಟಣದಲ್ಲಿ ಮೂರು ದಿನ ಪ್ರಚಾರ ಮಾಡಿದ್ದೇನೆ. ಯೋಗೀಶ್ವರ್ 18 ರಿಂದ 20 ಸಾವಿರ ಮತದಿಂದ ಗೆಲ್ಲುತ್ತಾರೆ, ಬರೆದಿಟ್ಟುಕೊಳ್ಳಿ ಎಂದು ಸಚಿವ ಜಮೀರ್ ಅಹ್ಮದ್ ಹೇಳಿದ್ದಾರೆ.

ಮಂಗಳೂರು, ನ.16: ನೀವು ಬರೆದಿಟ್ಟುಕೊಳ್ಳಿ, ಚನ್ನಪಟ್ಟಣದಲ್ಲಿ ಏನೇನು ಆಗುವುದಿಲ್ಲ. ಚನ್ನಪಟ್ಟಣದಲ್ಲಿ ಮೂರು ದಿನ ಪ್ರಚಾರ ಮಾಡಿದ್ದೇನೆ. ಯೋಗೀಶ್ವರ್ 18 ರಿಂದ 20 ಸಾವಿರ ಮತದಿಂದ ಗೆಲ್ಲುತ್ತಾರೆ, ಬರೆದಿಟ್ಟುಕೊಳ್ಳಿ ಎಂದು ಸಚಿವ ಜಮೀರ್ ಅಹ್ಮದ್ ಹೇಳಿದ್ದಾರೆ. ಜಮೀರ್ ಬಂದಿದ್ದರಿಂದ ಅನುಕೂಲ ಆಗಿದೆ, ಹೇಳಿಕೆಯಿಂದ ಸ್ವಲ್ಪ ಅನಾನುಕೂಲ ಆಗಬಹುದೋ ಏನೋ ಅಂತ ಯೋಗಿಶ್ವರ್ ಹೇಳಿದ್ದಾರೆ. ಅದನ್ನು ಮಾಧ್ಯಮದವರು ಉಲ್ಟಾ ಮಾಡಿದ್ದಾರೆ ಎಂದು ಈ ಕುರಿತ ಪ್ರಶ್ನೆಗೆ ಜಮೀರ್ ಅಹ್ಮದ್ ಪ್ರತಿಕ್ರಿಯಿಸಿದ್ದಾರೆ. 

ಖಾಸಗಿ ಕಾರ್ಯಕ್ರಮಕ್ಕೆ ಮಂಗಳೂರಿಗೆ ಬಂದಿದ್ದ ಜಮೀರ್ ಮಾಧ್ಯಮದ ಪ್ರಶ್ನೆಗೆ ಉತ್ತರಿಸಿದರು. ಲೋಕಾಯುಕ್ತ ನೋಟಿಸ್ ಬಂದಿದ್ದು ನನಗೆ ಗೊತ್ತಿಲ್ಲ.‌ ನೋಟಿಸ್ ಕೊಡೋದು ರೂಟೀನ್. ಕೊಟ್ಟರೆ ವಿಚಾರಣೆಗೆ ಹೋಗುತ್ತೇನೆ. ಇಡಿಯವರು ಕೇಸನ್ನು ಎಸಿಬಿಗೆ ಫಾರ್ವರ್ಡ್ ಮಾಡಿದ್ದಾರೆ. ಎಸಿಬಿ ರದ್ದಾಗಿದ್ದರಿಂದ ಕೇಸ್ ಅಲ್ಲಿಂದ ಲೋಕಾಯುಕ್ತಕ್ಕೆ ಬಂದಿದೆ. ನೋಟಿಸ್ ಬಂದ ಮೇಲೆ ವಿಚಾರಣೆಗೆ ಹೋಗಲೇ ಬೇಕು ಎಂದು ಲೋಕಾಯುಕ್ತ ನೋಟಿಸ್ ಬಗ್ಗೆ ಕೇಳಿದ್ದಕ್ಕೆ ಹೇಳಿದರು. 

ನಾನು ದೇವೇಗೌಡ ಕುಟುಂಬ ಖರೀದಿ ಮಾಡುತ್ತೇನೆ ಅಂತ ಹೇಳಿಲ್ಲ. ಕುಮಾರಸ್ವಾಮಿ ಅವರು ಮುಸ್ಲಿಂ ಮತ ನನಗೆ ಬೇಕಾಗಿಲ್ಲ ಅಂತ ಹೇಳಿದ್ದರು.‌ ಆ ಹಿನ್ನೆಲೆಯಲ್ಲಿ ನಾನು ಹೇಳಿಕೆ ನೀಡಿದ್ದೆ. ಮುಸ್ಲಿಂ ಓಟ್ ಬೇಡ ಅನ್ನುತ್ತಲೇ ದುಡ್ಡು ಕೊಟ್ಟು ಖರೀದಿ ಮಾಡುತ್ತಿದ್ದೀರಿ ಯಾಕೆ.. ಇದು ಎಷ್ಟು ಸರಿ ಅಂತ ಕೇಳಿದ್ದೇನೆ.‌ ಮುಸ್ಲಿಮರು ಪಂಚರ್  ಹಾಕುವವರು, ವೆಲ್ಡಿಂಗ್‌ ಮಾಡುವರು ಅಂತ ಲಘುವಾಗಿ ಮಾತಾಡಿದ್ದಾರೆ. ಯಾಕೆ ಅವರ ಬಳಿ ಬಂದು ಓಟ್ ಕೇಳುತ್ತೀರಿ.‌ ನಿನ್ನೆ ಕುಮಾರಸ್ವಾಮಿ ಅದೇ ಮಾತು ಹೇಳಿದ್ದಾರೆ. ಹೌದು ಸ್ವಾಮಿ, ನಾವು ಬಡವರು ಪಂಚರ್ ಹಾಕೋರು, ಕೂಲಿ ಮಾಡೋರು. ಅಂಥವರ ಬಳಿ ಯಾಕೆ ಓಟ್ ಕೇಳುತ್ತೀರಿ.‌ ಕುಮಾರಸ್ವಾಮಿಗೆ ಅದೇ ಪ್ರಶ್ನೆ ‌ಕೇಳುತ್ತೇನೆ. 

ಕುಮಾರಸ್ವಾಮಿ ಯಾವಾಗ ಸತ್ಯ ಹೇಳಿದ್ದಾರೆ. ಯೂ ಟರ್ನ್ ಕುಮಾರಸ್ವಾಮಿ ಅಂತಾನೇ ಅವರಿಗೆ ಹೆಸರಿದೆ.‌ ಯಾವಾಗ ಬೇಕಾದರೂ ಹೇಗೆ ಬೇಕಾದರೂ ಟರ್ನ್ ಮಾಡುತ್ತಾರೆ ಅವರು. ನಾನು ವೈಯಕ್ತಿಕವಾಗಿ ಕುಮಾರಸ್ವಾಮಿಗೆ ಆ ಮಾತು ಹೇಳಿರುವುದು. ಒಕ್ಕಲಿಗರ ಬಗ್ಗೆ ಅಲ್ಲ. ಒಕ್ಕಲಿಗ ಸಮುದಾಯದ ಬಗ್ಗೆ ನನಗೆ ಗೌರವ ಇದೆ.‌ ಒಕ್ಕಲಿಗರ ಬಗ್ಗೆ ಯಾವ ಹೇಳಿಕೆಯನ್ನೂ ನೀಡಿಲ್ಲ. ನಾನು ಮಠದ ಹುಡುಗ, ಆದಿ ಚುಂಚನಗಿರಿ ಮಠದಲ್ಲಿ ಬೆಳೆದವನು ನಾನು.‌ ಜನತಾದಳಕ್ಕೆ ಬರಲು ಕಾರಣ ಆದಿ ಚುಂಚನಗಿರಿ ಸ್ವಾಮೀಜಿ. ಪ್ರತಿ ಶನಿವಾರ ನಾನು ಬೆಳಗ್ಗಿನಿಂದ ಸಂಜೆವರೆಗೂ ಮಠದಲ್ಲಿ ಇರುತ್ತೇನೆ. ನಾನು ಸ್ವಾಮೀಜಿ ಮಡಿಲಲ್ಲಿ ಬೆಳೆದವ. ಬೇಕಾದರೆ ಕುಮಾರಸ್ವಾಮಿ ಅವರಲ್ಲಿ ಕೇಳಿ ಎಂದು ಸಚಿವ ಜಮೀರ್ ಅಹ್ಮದ್ ತನ್ನ ಹೇಳಿಕೆ ಬಗ್ಗೆ ಸಮಜಾಯಿಷಿ ನೀಡಿದ್ದಾರೆ.

Zameer Ahmed speaking to media person in Mangalore  states that CP Yogeshwar will have clear victory in Channapatna. He will win over 18-20 thousand votes. He came to Mangalore to attend a private function in the city.