Mangalore Drowning, Mysuru, Beach resort, Crime; ಈಜುಕೊಳ ದುರಂತಕ್ಕೀಡಾದ ರೆಸಾರ್ಟಿಗೆ ಬೀಗ, ಮಾಲೀಕ, ಮ್ಯಾನೇಜರ್ ಬಂಧನ, ಸಾವಿಗೂ ಮುನ್ನ ತಾಯಿಗೆ ವಿಡಿಯೋ ಕರೆ ಮಾಡಿದ್ದ ಯುವತಿಯರು, ಚೆಕ್ ಔಟ್ ಮಾಡೋಕೂ ಮುನ್ನ ಈಜಾಟಕ್ಕಿಳಿದಿದ್ದರು !  

18-11-24 05:23 pm       Mangalore Correspondent   ಕರಾವಳಿ

ಈಜುಕೊಳದಲ್ಲಿ ಮುಳುಗಿ ಮೂವರು ಇಂಜಿನಿಯರಿಂಗ್ ವಿದ್ಯಾರ್ಥಿನಿಯರು ಮೃತಪಟ್ಟ ಪ್ರಕರಣ ರಾಜ್ಯದಲ್ಲಿ ಸಂಚಲನ ಮೂಡಿಸಿದೆ. ಒಟ್ಟು ಘಟನೆಗೆ ರೆಸಾರ್ಟ್ ಸಿಬಂದಿಯ ನಿರ್ಲಕ್ಷ್ಯವೇ ಕಾರಣ ಎನ್ನಲಾಗುತ್ತಿದ್ದು, ರೆಸಾರ್ಟ್ ಮಾಲೀಕ ಮತ್ತು ಮ್ಯಾನೇಜರನ್ನು ಉಳ್ಳಾಲ ಪೊಲೀಸರು ಬಂಧಿಸಿದ್ದಾರೆ.

ಮಂಗಳೂರು, ನ.18: ಈಜುಕೊಳದಲ್ಲಿ ಮುಳುಗಿ ಮೂವರು ಇಂಜಿನಿಯರಿಂಗ್ ವಿದ್ಯಾರ್ಥಿನಿಯರು ಮೃತಪಟ್ಟ ಪ್ರಕರಣ ರಾಜ್ಯದಲ್ಲಿ ಸಂಚಲನ ಮೂಡಿಸಿದೆ. ಒಟ್ಟು ಘಟನೆಗೆ ರೆಸಾರ್ಟ್ ಸಿಬಂದಿಯ ನಿರ್ಲಕ್ಷ್ಯವೇ ಕಾರಣ ಎನ್ನಲಾಗುತ್ತಿದ್ದು, ರೆಸಾರ್ಟ್ ಮಾಲೀಕ ಮತ್ತು ಮ್ಯಾನೇಜರನ್ನು ಉಳ್ಳಾಲ ಪೊಲೀಸರು ಬಂಧಿಸಿದ್ದಾರೆ.

ಕರಾವಳಿಯಲ್ಲಿ ಬಹುತೇಕ ಬೀಚ್ ರೆಸಾರ್ಟ್ ಗಳಲ್ಲಿ ಈಜು ಕೊಳ ಸಾಮಾನ್ಯ, ಆದರೆ, ಈಜು ಕೊಳಕ್ಕೆ ಈಜು ತಿಳಿಯದವರೂ ಇಳಿಯುತ್ತಾರೆ, ಪ್ರವಾಸಿಗರ ಬಗ್ಗೆ ನಿಗಾ ಇಡಲೆಂದೇ ಜೀವ ರಕ್ಷಕ ಸಿಬಂದಿ ಇರುತ್ತಾರೆ. ಆದರೆ, ಮೂವರು ಯುವತಿಯರ ಸಾವಿಗೆ ಕಾರಣವಾದ ಮಂಗಳೂರು ಹೊರವಲಯದ ಉಚ್ಚಿಲದ ವಾಜ್ಕೋ ಸಾಯಿರಾಂ ರೆಸಾರ್ಟಿನಲ್ಲಿ ಅಂತಹ ಸಿಬಂದಿಯನ್ನೇ ಇಟ್ಟುಕೊಂಡಿರಲಿಲ್ಲ. ಕಳೆದ ಜೂನ್ ತಿಂಗಳಲ್ಲಿ ಪ್ರವಾಸೋದ್ಯಮ ಇಲಾಖೆಯ ಲೈಸನ್ಸ್ ಪಡೆದಿದ್ದ ರೆಸಾರ್ಟಿನಲ್ಲಿ ಇದ್ದುದು ಕೇವಲ ಏಳು ಮಂದಿ ಸಿಬಂದಿ ಮಾತ್ರ. ಇದೇ ಕಾರಣಕ್ಕೆ ಯುವತಿಯರು ಈಜುಕೊಳಕ್ಕೆ ಬಿದ್ದು ವಿಲ ವಿಲ ಒದ್ದಾಡಿ, ಬೊಬ್ಬೆ ಹೊಡೆದರೂ ಯಾರ ಗಮನಕ್ಕೂ ಬಂದಿರಲಿಲ್ಲ.

ಬಾಲ್ಯದಿಂದಲೂ ಗೆಳತಿಯರಾಗಿದ್ದ ಯುವತಿಯರು ಮೈಸೂರಿನ ಮೇಟಗಳ್ಳಿಯ ಜಿಎಸ್ಎಸ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಬಿಇ ವ್ಯಾಸಂಗ ಮಾಡುತ್ತಿದ್ದರು. ಯುವತಿಯರು ವಿಹಾರಕ್ಕಾಗಿ ಶುಕ್ರವಾರ ರೈಲಿನಲ್ಲಿ ಕುಳಿತು ಮಂಗಳೂರಿಗೆ ಬಂದಿದ್ದರು. ಉಳ್ಳಾಲದ ರೆಸಾರ್ಟನ್ನು ಆನ್ಲೈನಲ್ಲಿಯೇ ಬುಕ್ ಮಾಡಿ ಶನಿವಾರ ಇಡೀ ದಿನವಿದ್ದು ಸೋಮೇಶ್ವರ ಸಮುದ್ರ ತೀರದಲ್ಲಿ ಸುತ್ತಾಟವನ್ನೂ ಮಾಡಿದ್ದರು. ಶನಿವಾರ ರಾತ್ರಿ ಪಾರ್ವತಿ ತನ್ನ ತಾಯಿಗೆ ವಿಡಿಯೋ ಕರೆ ಮಾಡಿ, ಸ್ನೇಹಿತೆಯರೊಂದಿಗೆ ಖುಷಿಯಾಗಿರುವುದನ್ನು ತಿಳಿಸಿದ್ದಳು. ಭಾನುವಾರ ಬೆಳಗ್ಗೆಯೂ ತಂದೆಗೆ ಕರೆ ಮಾಡಿ, 11 ಗಂಟೆಗೆ ಹೊರಡಲಿದ್ದು, ಇವತ್ತೇ ಮನೆ ತಲುಪುತ್ತೇವೆ ಎಂದು ಹೇಳಿದ್ದಳು. ಭಾನುವಾರ ಬೆಳಗ್ಗೆ 11 ಗಂಟೆಗೆ ಚೆಕ್ ಔಟ್ ಮಾಡಿ, ತಮ್ಮ ಮನೆಗೆ ಹಿಂತಿರುವುದಕ್ಕೆ ಸಿದ್ಧತೆಯನ್ನೂ ಮಾಡಿದ್ದರು. ಆದರೆ,.ಅಷ್ಟರಲ್ಲಿಯೇ ಜವರಾಯ ಈಜುಕೊಳಕ್ಕೆ ಎಳೆದೊಯ್ದಿದ್ದು, ಆಕರ್ಷಕ ಈಜು ಕೊಳದಲ್ಲಿ ತಿಳಿ ನೀಲಿಯಾಗಿದ್ದ ನೀರನ್ನು ನೋಡಿ ನೀರಿಗಿಳಿದಿದ್ದು, ಜೀವಂತ ಸಮಾಧಿಯಾಗಿದ್ದಾರೆ.

ಘಟನೆಗೆ ಕಾರಣವಾದ ಇಡೀ ರೆಸಾರ್ಟನ್ನು ಪೊಲೀಸರು ಸೀಲ್ ಮಾಡಿದ್ದು, ಅಧಿಕಾರಿಗಳು ಟ್ರೇಡ್ ಲೈಸನ್ಸ್, ಪ್ರವಾಸೋದ್ಯಮ ಇಲಾಖೆಯ ಲೈಸನ್ಸನ್ನೂ ರದ್ದುಪಡಿಸಿದ್ದಾರೆ. ಒಟ್ಟು ಘಟನೆಗೆ ರೆಸಾರ್ಟಿನಲ್ಲಿ ರೂಲ್ಸ್ ಬ್ರೇಕ್ ಮಾಡಿರುವುದು, ಸೂಕ್ತ ಸಿಬಂದಿಯನ್ನು ಇಟ್ಟುಕೊಳ್ಳದಿರುವುದು, ಪ್ರವಾಸಿಗರ ಬಗ್ಗೆ ನಿರ್ಲಕ್ಷ್ಯ ವಹಿಸಿದ್ದೇ ಕಾರಣ ಎನ್ನುವುದು ಮೇಲ್ನೋಟಕ್ಕೆ ವ್ಯಕ್ತವಾಗಿದ್ದು, ರೆಸಾರ್ಟ್ ಮಾಲೀಕ ಮನೋಹರ ಪುತ್ರನ್ ಮತ್ತು ಮ್ಯಾನೇಜರ್ ಭರತ್ ಎಂಬಾತನನ್ನು ಉಳ್ಳಾಲ ಪೊಲೀಸರು ಬಂಧಿಸಿದ್ದಾರೆ.

ಮಂಗಳೂರಿನ ವೆನ್ಲಾಕ್ ಜಿಲ್ಲಾಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ಪೂರೈಸಿದ ಬಳಿಕ ನಿನ್ನೆ ರಾತ್ರಿ 2 ಗಂಟೆ ಸುಮಾರಿಗೆ ಕುಟುಂಬಸ್ಥರು ಯುವತಿಯರ ಶವಗಳನ್ನು ಮೈಸೂರಿಗೆ ಒಯ್ದಿದ್ದಾರೆ  ಮೈಸೂರಿನಲ್ಲಿ ಶವಗಳ ಅಂತ್ಯಸಂಸ್ಕಾರ ನಡೆದಿದ್ದು, ಮಾಧ್ಯಮ ಮಂದಿಯನ್ನು ಹತ್ತಿರಕ್ಕೆ ಬಿಟ್ಟುಕೊಂಡಿಲ್ಲ. ಇದೇ ವೇಳೆ, ನಿಶಿತಾ ಎನ್ನುವ ಯುವತಿಯ ತಂದೆ ನವೀನ್ ಕುಮಾರ್ ದೂರಿನಂತೆ ಉಳ್ಳಾಲ ಠಾಣೆಯಲ್ಲಿ ರೆಸಾರ್ಟ್ ನಿರ್ಲಕ್ಷ್ಯ ವಿರುದ್ಧ ಪ್ರಕರಣ ದಾಖಲಾಗಿದೆ.

Mangalore Sairam Vazco beach resort owner and manager both attested in three Mysuru girls Drowning case for negligence and running business without any legal documents. Allegations have surfaced that the incident occurred due to the resort's failure to adhere to regulations.