Hariprasad, Mangalore, Congress: ಮಹಾರಾಷ್ಟ್ರದಲ್ಲಿ ಟ್ಯಾಂಕರಿನಲ್ಲಿ ಹಣ ತಂದು ಸುರಿದಿದ್ದಾರೆ, ಅಂಪೈರ್ ಜೊತೆ ಸೇರಿದ ಮೇಲೆ ಮ್ಯಾಚ್ ಗೆಲ್ಲದಿರುತ್ತಾ ? ಅಮಿತ್ ಷಾ ಮಗ ತೆಂಡುಲ್ಕರ್ ಗಿಂತ ದೊಡ್ಡ ಕ್ರಿಕೆಟ್ ಪ್ಲೇಯರ್ ; ಬಿಕೆ ಹರಿಪ್ರಸಾದ್ ವ್ಯಂಗ್ಯ

24-11-24 05:16 pm       Mangalore Correspondent   ಕರಾವಳಿ

ಅಪಪ್ರಚಾರ, ಸುಳ್ಳು ವದಂತಿ ಮೂಲಕ ಕಾಂಗ್ರೆಸ್ ಪಕ್ಷದ ವರ್ಚಸ್ಸು ಕುಗ್ಗಿಸಲು ಬಿಜೆಪಿಯವರು ಪ್ರಯತ್ನ ಪಟ್ಟರು. ಆದರೆ ಇವರ ಸುಳ್ಳು ಮಾತುಗಳಿಗೆ ರಾಜ್ಯದ ಜನರು ಸೊಪ್ಪು ಹಾಕಿಲ್ಲ. ಮಹಾರಾಷ್ಟ್ರದಲ್ಲಿ ಚುನಾವಣೆ ಆಯೋಗವೇ ಬಿಜೆಪಿ ಪರವಾಗಿ ಕೆಲಸ ಮಾಡಿತ್ತು.

ಮಂಗಳೂರು, ನ.23: ಅಪಪ್ರಚಾರ, ಸುಳ್ಳು ವದಂತಿ ಮೂಲಕ ಕಾಂಗ್ರೆಸ್ ಪಕ್ಷದ ವರ್ಚಸ್ಸು ಕುಗ್ಗಿಸಲು ಬಿಜೆಪಿಯವರು ಪ್ರಯತ್ನ ಪಟ್ಟರು. ಆದರೆ ಇವರ ಸುಳ್ಳು ಮಾತುಗಳಿಗೆ ರಾಜ್ಯದ ಜನರು ಸೊಪ್ಪು ಹಾಕಿಲ್ಲ. ಮಹಾರಾಷ್ಟ್ರದಲ್ಲಿ ಚುನಾವಣೆ ಆಯೋಗವೇ ಬಿಜೆಪಿ ಪರವಾಗಿ ಕೆಲಸ ಮಾಡಿತ್ತು. ಅಂಪೈರ್ ಒಬ್ಬರ ಜೊತೆ ಸೇರಿದ ಮೇಲೆ ಮ್ಯಾಚ್ ಗೆಲ್ಲದಿರುತ್ತಾ ? ಹೀಗೆಂದು ಹಿರಿಯ ಕಾಂಗ್ರೆಸ್ ಮುಖಂಡ ಬಿ.ಕೆ. ಹರಿಪ್ರಸಾದ್ ಪ್ರಶ್ನೆ ಮಾಡಿದ್ದಾರೆ.

ಮಂಗಳೂರಿನ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಟಿ ನಡೆಸಿದ ಅವರು, ಮಹಾರಾಷ್ಟ್ರದಲ್ಲಿ ಟ್ಯಾಂಕರಿನಲ್ಲಿ ಮೂಟೆಗಟ್ಟಲೆ ಹಣ ತಂದು ಹಂಚಿದ್ದಾರೆ. ಈ ವೇಳೆ, ಬಿಜೆಪಿ ನಾಯಕ ವಿನೋದ್ ತಾವ್ಡೆ ಹಣದ ಕಂತೆಗಳ ಜೊತೆಗೆ ಸಿಕ್ಕಿಬಿದ್ದರೂ, ಚುನಾವಣೆ ಆಯೋಗದವರು 9 ಲಕ್ಷ ಇದ್ದುದಾಗಿ ಹೇಳಿ ರಕ್ಷಣೆ ಮಾಡಿದ್ದಾರೆ. ವಿಚಿತ್ರ ಎಂದರೆ, ಅಲ್ಪಸಂಖ್ಯಾತರು, ದಲಿತರು ಹೆಚ್ಚಿರುವ ಕಡೆಯೂ ಬಿಜೆಪಿ ಗೆದ್ದಿದೆ. ಅಲ್ಲಿನ ಬೂತ್ ಗಳನ್ನು ಗಮನಿಸಿದರೆ, ಮತದಾನ ಕೊನೆಯಾಗುವ ಹಂತದಲ್ಲಿ ಪರ್ಸೆಂಟೇಜ್ ಹೆಚ್ಚಾಗಿದೆ. ಅಲ್ಪಸಂಖ್ಯಾತರು ಮತ್ತು ದಲಿತರಲ್ಲಿ 90 ಶೇಕಡಾ ಮಂದಿ ಬಿಜೆಪಿಗೆ ಓಟ್ ಹಾಕಲ್ಲ. ಆದರೆ, ಅಂಥ ಕಡೆಯೂ ಬಿಜೆಪಿ ಗೆದ್ದಿರುವುದು ಅನುಮಾನ ಮೂಡಿಸಿದೆ ಎಂದು ಹೇಳಿದರು.

ವಿದೇಶದ ಗಡಿಯನ್ನೇ ಹೊಂದಿಲ್ಲದ, ಗುಡ್ಡಗಾಡು ಜನರೇ ಹೆಚ್ಚಿರುವ ಜಾರ್ಖಂಡಿನಲ್ಲಿ ನುಸುಳುಕೋರರು ಇದ್ದಾರೆಂದು ಗೊಂದಲ ಎಬ್ಬಿಸಿದರು. ಆದರೆ ಅಲ್ಲಿನ ಜನರು ಇವರ ಸುಳ್ಳುಗಳಿಗೆ ಪಾಠ ಕಲಿಸಿದ್ದಾರೆ. ಕಾಂಗ್ರೆಸ್ ಪರವಾದ ಇಂಡಿಯಾ ಒಕ್ಕೂಟಕ್ಕೆ ಸ್ಪಷ್ಟ ಬಹುಮತ ನೀಡಿದ್ದಾರೆ. ಜಾತಿಗಣತಿ, ಆಮೂಲಕ ಕಡೆಗಣಿತ ಸಮುದಾಯಕ್ಕೆ 75 ಶೇ. ಮೀಸಲು ಘೋಷಣೆ ಮಾಡಿದ ರಾಹುಲ್ ಗಾಂಧಿ ಪರವಾಗಿ ಜನ ಮತ ಹಾಕಿದ್ದಾರೆ. ಕಮ್ಯುನಿಸ್ಟ್ ಇದೇ ಮೊದಲ ಬಾರಿಗೆ ಅಲ್ಲಿ ಎರಡು ಸ್ಥಾನ ಗೆದ್ದಿದೆ. ಆರ್ ಜೆಡಿಯೂ ನಾಲ್ಕು ಸ್ಥಾನ ಗಳಿಸಿದೆ.

ನುಸುಳುಕೋರರ ಬಗ್ಗೆ ಹೇಳುವ ಬಿಜೆಪಿ ಕೇಂದ್ರದಲ್ಲಿ 11 ವರ್ಷದಲ್ಲಿ ಅಧಿಕಾರದಲ್ಲಿದ್ದರೂ, ದೇಶದಲ್ಲಿ ಎಷ್ಟು ಅಕ್ರಮ ವಲಸಿಗರಿದ್ದಾರೆಂದು ಪತ್ತೆಹಚ್ಚಲು ಸಾಧ್ಯವಾಗಿಲ್ಲ ಎಂದು ಪ್ರಶ್ನೆ ಮಾಡಿದ ಹರಿಪ್ರಸಾದ್, ಕರ್ನಾಟಕದಲ್ಲಿಯೂ ಬಿಜೆಪಿ ದುಡ್ಡು ಸುರಿದಿತ್ತು. ಹಣ, ಹೆಂಡಕ್ಕೆದುರಾಗಿ ಕಾಂಗ್ರೆಸ್ ಕಡೆಯಿಂದಲೂ ಸರಿಯಾದ ವರ್ಕೌಟ್ ಮಾಡಿದ್ದರಿಂದ ಗೆಲುವಾಗಿದೆ. ಅಷ್ಟೇ ಅಲ್ಲ, ಗ್ಯಾರಂಟಿಗಳನ್ನು ಮೆಚ್ಚಿ ಮತ ನೀಡಿದ್ದಾರೆ. ಕೋಮುವಾದ, ವೈಷಮ್ಯ ಇಲ್ಲದ ಆಡಳಿತವನ್ನು ನೀಡಿದ್ದಕ್ಕೆ ಮನ್ನಣೆ ನೀಡಿದ್ದಾರೆ.

ವಕ್ಫ್ ಪರವಾಗಿ 1998ರಲ್ಲಿ ಸುಪ್ರೀಂ ಕೋರ್ಟ್ ತೀರ್ಪು ನೀಡಿದ್ದು, ಪಹಣಿ ಪತ್ರಗಳಲ್ಲಿ ವಕ್ಫ್ ಉಲ್ಲೇಖ ಇರುವಂತೆ ಹೇಳಿದೆ. ಇವರು ಗುಲ್ಲು ಎಬ್ಬಿಸಿದ್ದು, ಬಿಟ್ಟರೆ ಬೇರೇನು ಮಾಡಿದ್ದಾರೆ. ಜಮೀರ್ ಮಾತಿಗೆದುರಾಗಿ ಜನ ಮತ ಕೊಡುತ್ತಿದ್ದಂತೆ ಕಾಂಗ್ರೆಸ್ ಠೇವಣಿ ಹೋಗಬೇಕಿತ್ತು. ಬಿಜೆಪಿ ಸುಳ್ಳನ್ನು ಜನ ನಂಬಿಲ್ಲ ಎನ್ನುವುದಕ್ಕೆ ಈ ಫಲಿತಾಂಶ ಸಾಕ್ಷಿ ಎಂದು ಹೇಳಿದರು. ಅಪ್ಪ ಮಕ್ಕಳ, ಕುಟುಂಬ ರಾಜಕಾರಣಕ್ಕೆ ಜನ ಪೆಟ್ಟು ಕೊಟ್ಟಿದ್ದಾರೆಯೇ ಎಂದು ಕೇಳಿದ್ದಕ್ಕೆ, ಕುಟುಂಬ ರಾಜಕಾರಣ ಕಾಂಗ್ರೆಸಿಗಿಂತ ಬಿಜೆಪಿಯಲ್ಲಿ ಡಬಲ್ ಎನ್ನುವಷ್ಟಿದೆ. ರಾಜಸ್ಥಾನ, ಯುಪಿಯಲ್ಲಿ ತಾಯಿ- ಮಗ, ಅಪ್ಪ- ಮಕ್ಕಳು ಎಷ್ಟು ಮಂದಿ ಇಲ್ಲ. ಅಮಿತ್ ಷಾ ಮಗ ತೆಂಡುಲ್ಕರ್ ಗಿಂತ ಒಳ್ಳೆಯ ಕ್ರಿಕೆಟ್ ಪ್ಲೇಯರ್ ಆಗಿದ್ದಾನೆ. ಮಹಾನ್ ಬಿಸಿಸಿಐ ಸಂಘದ ಅಧ್ಯಕ್ಷನಾಗಿದ್ದಾನೆ. ಇದಕ್ಕಿಂತ ಬೇರೇನು ಬೇಕು ಎಂದು ಕೇಳಿದರು.

ಮೂರು ಕಡೆಯೂ ಕಾಂಗ್ರೆಸ್ ಗೆದ್ದಿರುವುದರಿಂದ ಸಿದ್ದರಾಮಯ್ಯ ಸ್ಥಾನ ಗಟ್ಟಿಯಾಯಿತೇ ಎಂದು ಕೇಳಿದ್ದಕ್ಕೆ, ಸಿಎಂ ಬದಲಾವಣೆ ಎನ್ನುವುದೇ ಮಾಧ್ಯಮ ಸೃಷ್ಟಿ. ಇಡಿ, ಸಿಬಿಐ ಮೂಲಕ ಕಾಂಗ್ರೆಸ್ ಸರ್ಕಾರವನ್ನು ಕೆಡಹುವ ಪ್ರಯತ್ನ ಮಾಡಿದರು. ಯತ್ನಾಳ್, ಜಾರಕಿಹೊಳಿಯಂಥವರು ಇದನ್ನು ಚೆನ್ನಾಗಿಯೇ ಹೇಳಿದ್ದರು. ಮರಿ ಯಡಿಯೂರಪ್ಪ ಡಿಸೆಂಬರ್ ನಲ್ಲಿ ಸಿಎಂ ಬದಲಾವಣೆ ಎಂದು ಗಡುವು ಹೇಳಿದ್ದರು. ಆದರೆ ಇವೆಲ್ಲ ಯಡಿಯೂರಪ್ಪ ಬಳಿ ಫೈಲಿಗೆ ಸೈನ್ ಮಾಡಿಸಿಕೊಂಡ ರೀತಿಯಲ್ಲ ಎಂದು ತಿಳ್ಕೋಬೇಕು. ನಮ್ಮಲ್ಲಿ ಹೈಕಮಾಂಡ್ ಇದೆ, ಯಾವಾಗ ಏನಾಗಬೇಕೆಂದು ಅವರೇ ನಿರ್ಧರಿಸುತ್ತಾರೆ ಎಂದು ಹೇಳಿದರು.

ಸುದ್ದಿಗೋಷ್ಟಿಯಲ್ಲಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹರೀಶ್ ಕುಮಾರ್, ಪದ್ಮರಾಜ್ ರಾಮಯ್ಯ, ಅಭಯಚಂದ್ರ ಜೈನ್, ಮಿಥುನ್ ರೈ, ಜೆ.ಆರ್.ಲೋಬೊ, ಲುಕ್ಮಾನ್ ಬಂಟ್ವಾಳ ಮತ್ತಿತರರು ಇದ್ದರು.

MLC and Congress leader B.K. Hariprasad on Sunday (November 24, 2024) said people of Jharkhand and Karnataka ignored the Bharatiya Janata Party’s (BJP’s) divisive politics by re-electing the Indian National Developmental Inclusive Alliance (INDIA) government, and Congress candidates in the bye-elections respectively.