Muneer Katipalla, Mangalore, Anupam Agarwal; ರಸ್ತೆ ದುರವಸ್ಥೆ ಬಗ್ಗೆ ಪ್ರತಿಭಟನೆ ನಡೆಸಿದ್ದಕ್ಕೂ ಎಫ್ಐಆರ್ ; 15 ದಿನದಲ್ಲಿ ಎರಡನೇ ಕೇಸು, ಕಮಿಷನರ್ ವಿರುದ್ಧ ಆರೋಪಗಳಿದ್ದಲ್ಲಿ ಗೃಹ ಸಚಿವರಿಗೆ ದೂರು ನೀಡಲಿ ಎಂದ ಕಾಂಗ್ರೆಸ್,

27-11-24 09:36 pm       Mangalore Correspondent   ಕರಾವಳಿ

ಮಂಗಳೂರಿನ ಸುರತ್ಕಲ್- ನಂತೂರು ಹೆದ್ದಾರಿಯ ದುರವಸ್ಥೆ ಖಂಡಿಸಿ ಕುಳೂರಿನಲ್ಲಿ ರಸ್ತೆ ಬದಿಯಲ್ಲಿ ಪ್ರತಿಭಟನೆ ನಡೆಸಿದ ಕಾರಣಕ್ಕೆ ಪೊಲೀಸರು ಸಾಮಾಜಿಕ ಹೋರಾಟಗಾರ ಮುನೀರ್ ಕಾಟಿಪಳ್ಳ ವಿರುದ್ಧ ಕಾವೂರು ಠಾಣೆಯಲ್ಲಿ ಎಫ್ಐಆರ್ ದಾಖಲಿಸಿದ್ದಾರೆ.

ಮಂಗಳೂರು, ನ.27: ಮಂಗಳೂರಿನ ಸುರತ್ಕಲ್- ನಂತೂರು ಹೆದ್ದಾರಿಯ ದುರವಸ್ಥೆ ಖಂಡಿಸಿ ಕುಳೂರಿನಲ್ಲಿ ರಸ್ತೆ ಬದಿಯಲ್ಲಿ ಪ್ರತಿಭಟನೆ ನಡೆಸಿದ ಕಾರಣಕ್ಕೆ ಪೊಲೀಸರು ಸಾಮಾಜಿಕ ಹೋರಾಟಗಾರ ಮುನೀರ್ ಕಾಟಿಪಳ್ಳ ವಿರುದ್ಧ ಕಾವೂರು ಠಾಣೆಯಲ್ಲಿ ಎಫ್ಐಆರ್ ದಾಖಲಿಸಿದ್ದಾರೆ.

ಹೆದ್ದಾರಿಯನ್ನು ಪೂರ್ತಿಯಾಗಿ ಡಾಮರೀಕರಣ ಮಾಡಬೇಕು ಮತ್ತು ನಂತೂರು ವೃತ್ತದಲ್ಲಿ ಶೀಘ್ರದಲ್ಲಿ ಫ್ಲೈಓವರ್ ಮಾಡಬೇಕು ಎಂಬ ಬೇಡಿಕೆ ಮುಂದಿಟ್ಟು ಕುಳೂರಿನ ಸೇತುವೆ ಬಳಿಯ ಖಾಲಿ ಜಾಗದಲ್ಲಿ ಪ್ರತಿಭಟನೆ ನಡೆಸಲಾಗಿತ್ತು. ಪ್ರತಿಭಟನೆಗೆ ಪೊಲೀಸರಲ್ಲಿ ಅವಕಾಶ ಕೇಳಿದ್ದಕ್ಕೆ ಅವಕಾಶ ನೀಡಿರಲಿಲ್ಲ. ರಸ್ತೆ ಬದಿ ಪ್ರತಿಭಟನೆ ನಡೆಸಲು ಹೆದ್ದಾರಿ ಪ್ರಾಧಿಕಾರದ ಅನುಮತಿ ಬೇಕು ಎಂದು ನೆಪ ಹೇಳಿ ಅವಕಾಶ ನಿರಾಕರಿಸಲಾಗಿತ್ತು. ಸಮಾನ ಮನಸ್ಕ ಸಂಘಟನೆಗಳು, ಕಮ್ಯುನಿಸ್ಟ್ ಮತ್ತು ಕಾಂಗ್ರೆಸ್ ಪಕ್ಷದ ಪದಾಧಿಕಾರಿಗಳು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ಪ್ರತಿಭಟನೆ ಸಂದರ್ಭದಲ್ಲಿ ಪೊಲೀಸರ ನೀತಿಯನ್ನು ಖಂಡಿಸಿ ಧಿಕ್ಕಾರ ಕೂಗಲಾಗಿತ್ತು. ಅಲ್ಲದೆ, ಮಂಗಳೂರು ಪೊಲೀಸ್ ಕಮಿಷನರ್ ಅವರ ಧೋರಣೆಯನ್ನು ವಿರೋಧಿಸಿ ಮುನೀರ್ ಕಾಟಿಪಳ್ಳ ಹೇಳಿಕೆಯನ್ನು ನೀಡಿದ್ದರು. ಇದೇ ಕಾರಣಕ್ಕೋ ಏನೋ ಕಾವೂರು ಠಾಣೆಯಲ್ಲಿ ಎಫ್ಐಆರ್ ದಾಖಲಿಸಿದ್ದು, ಮುನೀರ್ ಕಾಟಿಪಳ್ಳ ಒಬ್ಬರನ್ನೇ ಆರೋಪಿಯಾಗಿ ತೋರಿಸಲಾಗಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮುನೀರ್, ಮಂಗಳೂರು ಪೊಲೀಸ್ ಕಮಿಷನರ್ ಗೆ ಜನಪರ ಚಳವಳಿಯ ಇತಿಹಾಸ ಗೊತ್ತಿಲ್ಲ. ನನ್ನ ಒಬ್ಬನನ್ನು ಟಾರ್ಗೆಟ್ ಮಾಡಿ ಎಫ್ಐಆರ್ ಹಾಕಿದ್ದಾರೆ. 15 ದಿನಗಳ ಹಿಂದೆಯೂ ಪಾಂಡೇಶ್ವರ ಠಾಣೆಯಲ್ಲಿ ಕೇಸು ಹಾಕಿದ್ದರು. ಇವರು ಕೇಸು ಹಾಕುತ್ತಾರೆಂದು ಹೆದರುವುದಿಲ್ಲ. ಇದೊಂದು ಬೆದರಿಕೆ ತಂತ್ರವಾಗಿದ್ದು ಎರಡೆರಡು ಕೇಸು ಹಾಕಿದ್ದಾರೆ, ಬಂಧಿಸಲಿ ಎಂದು ಹೇಳಿದ್ದಾರೆ.

ನ.4ರಂದು ಮಂಗಳೂರು ಮಿನಿ ವಿಧಾನಸೌಧ ಎದುರಲ್ಲಿ ಪ್ಯಾಲೆಸ್ತೀನಲ್ಲಿ ಮಾನವ ಹತ್ಯೆಯನ್ನು ಖಂಡಿಸಿ ಸಿಪಿಐ ಪಕ್ಷದ ವತಿಯಿಂದ ಪ್ರತಿಭಟನೆ ನಡೆಸಲಾಗಿತ್ತು. ಆ ಸಂದರ್ಭದಲ್ಲಿಯೂ ಪೊಲೀಸರು ಪ್ರತಿಭಟನೆಗೆ ಅನುಮತಿ ನಿರಾಕರಿಸಿದ್ದರು. ಆದರೆ ಪೊಲೀಸರ ಅನುಮತಿ ಇಲ್ಲದಿದ್ದರೂ ಪ್ರತಿಭಟನೆ ನಡೆಸಿ, ಇಸ್ರೇಲ್ ವಿರುದ್ಧ ಘೋಷಣೆ ಕೂಗಲಾಗಿತ್ತು. ಪೊಲೀಸರು ಇದನ್ನೇ ನೆಪವಾಗಿಸಿ ಮುನೀರ್ ಕಾಟಿಪಳ್ಳ, ಯಾದವ ಶೆಟ್ಟಿ, ಸುನಿಲ್ ಬಜಾಲ್ ಸೇರಿದಂತೆ ಎಂಟು ಮಂದಿ ವಿರುದ್ಧ ಪಾಂಡೇಶ್ವರ ಠಾಣೆಯಲ್ಲಿ ಕೇಸು ದಾಖಲಿಸಿದ್ದರು. ಐದು ತಿಂಗಳ ಹಿಂದೆ ಕಲ್ಲಡ್ಕ ಪ್ರಭಾಕರ ಭಟ್ ವಿರುದ್ಧ ಪ್ರಚೋದನಕಾರಿ ಭಾಷಣ ಮಾಡಿದ್ದನ್ನು ಖಂಡಿಸಿ ಪ್ರತಿಭಟನೆ ನಡೆಸಿದ್ದಕ್ಕೂ ಮಂಗಳೂರು ಪೊಲೀಸರು ಎಫ್ಐಆರ್ ದಾಖಲಿಸಿದ್ದರು.

ಈ ಬಾರಿ ರಸ್ತೆ ತಡೆ ನಡೆಸದೆ, ಸಾರ್ವಜನಿಕರಿಗೆ ತೊಂದರೆ ಕೊಡದೆ ಪ್ರತಿಭಟನೆ ನಡೆಸಿದ್ದಕ್ಕೂ ಪೊಲೀಸರು ಎಫ್ಐಆರ್ ದಾಖಲಿಸಿದ್ದಕ್ಕೆ ಸಾರ್ವಜನಿಕ ವಲಯದಲ್ಲಿ ಖಂಡನೆ ವ್ಯಕ್ತವಾಗಿದೆ. ಈ ಬಗ್ಗೆ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹರೀಶ್ ಕುಮಾರ್ ಅವರಲ್ಲಿ ಪ್ರಶ್ನೆ ಮಾಡಿದಾಗ, ಕಾನೂನು ವಿರೋಧಿಯಾಗಿ ನಡೆದುಕೊಂಡಲ್ಲಿ ಪೊಲೀಸರು ಕೇಸು ದಾಖಲಿಸುತ್ತಾರೆ, ಸುಮ್ಮನೆ ಕೇಸು ದಾಖಲಿಸಿದ್ದಾರೆ ಅಂದರೆ ತಪ್ಪು. ಯಾಕೆ ಕೇಸು ದಾಖಲಿಸಿದ್ದಾರೆಂದು ನನಗೆ ಮಾಹಿತಿ ಇಲ್ಲ. ಕಮಿಷನರ್ ವಿರುದ್ಧ ಆರೋಪಗಳಿದ್ದಲ್ಲಿ ಗೃಹ ಸಚಿವರಿಗೆ ದೂರು ನೀಡಲಿ, ತನಿಖೆಯಾಗುತ್ತದೆ ಎಂದು ಹೇಳಿದ್ದಾರೆ.

Mangalore Sumoto case against Muneer Katipalla for remarks made on Police commissioner Anupam Agarwal as Hitler.