ಕರಾವಳಿಯಲ್ಲಿ ರೆಡ್ ಅಲರ್ಟ್ ; ಮತ್ತಷ್ಟು ಮಳೆ ಸಾಧ್ಯತೆ 

08-08-20 12:42 pm       Mangalore Reporter   ಕರಾವಳಿ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳೆದ 24 ಗಂಟೆಗಳಲ್ಲಿ ಸರಾಸರಿ 101 ಮಿಲಿಮೀಟರ್ ಮಳೆ ದಾಖಲಾಗಿದೆ. ಇಂದು ರಾತ್ರಿ ಮತ್ತು ನಾಳೆ ಬೆಳಗ್ಗೆ ಭಾರೀ ಮಳೆಯ ಸೂಚನೆ ಇದ್ದು ನದೀ ಪಾತ್ರಗಳಲ್ಲಿರುವ ನಿವಾಸಿಗಳು ಎಚ್ಚರ ವಹಿಸಬೇಕು.

ಮಂಗಳೂರು, ಆಗಸ್ಟ್ 8: ಕರಾವಳಿಯಲ್ಲಿ ಭಾರೀ ಮಳೆ ಇನ್ನೂ ಮೂರು ದಿನ ಮುಂದುವರಿಯಲಿದೆ. ಈಗಾಗ್ಲೇ ನಾಳೆ ಬೆಳಗ್ಗೆ ವರೆಗೆ ರೆಡ್ ಅಲರ್ಟ್ ಘೋಷಿಸಲಾಗಿದ್ದು ಕರಾವಳಿಯ ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡದಲ್ಲಿ ಮತ್ತಷ್ಟು ಮಳೆಯಾಗುವ ಬಗ್ಗೆ ಮುನ್ಸೂಚನೆ ನೀಡಲಾಗಿದೆ. 

ರಾಜ್ಯದ ಹವಾಮಾನ ಇಲಾಖೆಯ ಸೂಚನೆ ಪ್ರಕಾರ ಆಗಸ್ಟ್ 11ರ ವರೆಗೆ ಕರಾವಳಿ ಜಿಲ್ಲೆಗಳಲ್ಲಿ ಆರೆಂಜ್ ಎಲರ್ಟ್ ನೀಡಲಾಗಿದೆ. ಇಂದು ರಾತ್ರಿ ಮತ್ತು ನಾಳೆ ಬೆಳಗ್ಗೆ ಭಾರೀ ಮಳೆಯ ಸೂಚನೆ ಇದ್ದು ನದೀ ಪಾತ್ರಗಳಲ್ಲಿರುವ ನಿವಾಸಿಗಳು ಎಚ್ಚರ ವಹಿಸಬೇಕು. ಅಪಾಯ ಕಂಡುಬಂದರೆ ಸ್ಥಳಾಂತರಗೊಳ್ಳಬೇಕು. ಯಾರು ಕೂಡ ನದಿ, ಸಮುದ್ರಕ್ಕೆ ಇಳಿಯುವ ಸಾಹಸ ಮಾಡದಂತೆ ದಕ್ಷಿಣ ಕನ್ನಡ ಜಿಲ್ಲಾಡಳಿತ ಎಚ್ಚರಿಕೆ ನೀಡಿದೆ. 

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳೆದ 24 ಗಂಟೆಗಳಲ್ಲಿ ಸರಾಸರಿ 101 ಮಿಲಿಮೀಟರ್ ಮಳೆ ದಾಖಲಾಗಿದೆ. ಬೆಳ್ತಂಗಡಿ ತಾಲೂಕಿನಲ್ಲಿ 136, ಸುಳ್ಯ 111, ಪುತ್ತೂರು 94, ಬಂಟ್ವಾಳ 93, ಮಂಗಳೂರು 37 ಮಿಲಿಮೀಟರ್ ಮಳೆಯಾಗಿರುವ ಬಗ್ಗೆ ಜಿಲ್ಲಾಡಳಿತ ಮಾಹಿತಿ ನೀಡಿದೆ.