ಪುತ್ತೂರು ; ಗ್ರಾಮೀಣ ಪತ್ರಕರ್ತರ ಜೀವನ ಭದ್ರತೆಗೆ ವಿನೂತನ ಯೋಜನೆ ಘೋಷಣೆ, ರಾಜ್ಯದಲ್ಲೇ ಮೊದಲು !!

14-12-20 03:03 pm       Mangalore Correspondent   ಕರಾವಳಿ

ಪತ್ರಕರ್ತರ ಸಂಘದ ಸದಸ್ಯರ ಜೀವನ ಭದ್ರತೆಗಾಗಿ 34 ಲಕ್ಷ ರೂ. ಮೊತ್ತದ ಯೋಜನೆಯನ್ನು ಜಾರಿಗೊಳ್ಳಲಿದೆ ಎಂದು ಪುತ್ತೂರು ತಾಲೂಕು ಪತ್ರಕರ್ತರ ಸಂಘ ಘೋಷಿಸಿದೆ. 

ಪುತ್ತೂರು, ಡಿ.14 : ರಾಜ್ಯದಲ್ಲೇ ಮೊದಲ ಬಾರಿಗೆ ಗ್ರಾಮೀಣ ಭಾಗದ ಪತ್ರಕರ್ತರ ಜೀವನ ಭದ್ರತೆಗಾಗಿ ಪುತ್ತೂರು ತಾಲೂಕು ಪತ್ರಕರ್ತರ ಸಂಘ ಅಭೂತಪೂರ್ವ ಯೋಜನೆ ಜಾರಿ ಮಾಡಿದೆ. ಪತ್ರಕರ್ತರ ಸಂಘದ ಸದಸ್ಯರ ಜೀವನ ಭದ್ರತೆಗಾಗಿ 34 ಲಕ್ಷ ರೂ. ಮೊತ್ತದ ಯೋಜನೆಯನ್ನು 2020ರ ಡಿ.14ರಿಂದ ಜಾರಿಗೊಳ್ಳಲಿದೆ ಎಂದು ಪುತ್ತೂರು ತಾಲೂಕು ಪತ್ರಕರ್ತರ ಸಂಘ ಘೋಷಿಸಿದೆ. 

ಪುತ್ತೂರು ಪತ್ರಿಕಾಭವನದಲ್ಲಿ ಸೋಮವಾರ ನಡೆದ ತಾಲೂಕು ಪತ್ರಕರ್ತರ ಸಂಘದ ವಿಶೇಷ ಮಹಾಸಭೆಯಲ್ಲಿ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರವಣ್ ಕುಮಾರ್ ನಾಳ, ಈ ಬಗ್ಗೆ ಮಾಹಿತಿ ನೀಡಿದ್ದಾರೆ.  ಪತ್ರಕರ್ತರ ಸಾಮಾಜಿಕ ಮತ್ತು ಕುಟುಂಬ ಭದ್ರತಾ ಯೋಜನೆ ಹೆಸರಲ್ಲಿ ಯೋಜನೆ ಜಾರಿಗೊಳಿಸಲಾಗುತ್ತಿದ್ದು   ಪುತ್ತೂರು ತಾ. ಪತ್ರಕರ್ತರ ಸಂಘದ ಸದಸ್ಯರ ಹೆಸರಿನಲ್ಲಿ ತಲಾ 25 ಸಾವಿರ ರೂ. ಬ್ಯಾಂಕ್ ಡೆಪೊಸಿಟ್ ಮಾಡಿ, ಸದಸ್ಯನಿಗೆ 60 ವರ್ಷ ವಯಸ್ಸು ದಾಟಿದ ನಂತರ ಬಡ್ಡಿ ಸಹಿತ ಪೂರ್ಣ ಪ್ರಮಾಣದ ಲಾಭಾಂಶ ದೊರೆಯಲಿದೆ. ಈ ಮೂಲಕ ಪುತ್ತೂರು ತಾಲೂಕು ಪತ್ರಕರ್ತರ ಸಂಘದ 23 ಸದಸ್ಯ ಪತ್ರಕರ್ತರು ಒಟ್ಟು 34 ಲಕ್ಷ ರೂ. ಮೊತ್ತದ ಫಲಾನುಭವಿ ಮೊತ್ತವನ್ನು ಪಡೆಯಲಿದ್ದಾರೆ. 

ಕರ್ತವ್ಯ ಸಂದರ್ಭ ಅಪಘಾತ, ಮಾರಣಾಂತಿಕ ದಾಳಿ- ಹಲ್ಲೆ ಘಟನೆ ಸಂಭವಿಸಿದಲ್ಲಿ ಚಿಕಿತ್ಸೆಗಾಗಿ ಸದಸ್ಯನ ಹೆಸರಲ್ಲಿರುವ ಡೆಪೊಸಿಟ್ ಆಧಾರದಲ್ಲಿ ಗರಿಷ್ಠ 20 ಸಾವಿರ ರೂ. ತುರ್ತು ವೈಯಕ್ತಿಕ ಸಾಲ ಪಡೆಯುವ ಅವಕಾಶ ಇರಲಿದೆ ಎಂದು ಪುತ್ತೂರು ಪತ್ರಕರ್ತರ ಸಂಘದ ಅಧ್ಯಕ್ಷ ಶ್ರವಣ್ ಕುಮಾರ್ ನಾಳ ತಿಳಿಸಿದ್ದಾರೆ. 

ಪುತ್ತೂರು ತಾಲೂಕು ಪತ್ರಕರ್ತರ ಸಂಘದ ಕಾರ್ಯದರ್ಶಿ ಐ.ಬಿ ಸಂದೀಪ್ ಕುಮಾರ್, ಜತೆ ಕಾರ್ಯದರ್ಶಿ ಅಜಿತ್, ಕೋಶಾಧಿಕಾರಿ ಕೃಷ್ಣಪ್ರಸಾದ್ ಬಲ್ನಾಡ್, ಉಪ್ಯಾಧ್ಯಕ್ಷರಾದ ಸರ್ವೇಶ್ ಕುಮಾರ್ ಉಪ್ಪಿನಂಗಡಿ, ಅನೀಶ್ ಕುಮಾರ್ ಮರಿಲ್ ಉಪಸ್ಥಿತರಿದ್ದರು. 
 

ಯೋಜನೆಯ ಕಾರ್ಯ ನಿರ್ವಹಣೆ ಹೇಗೆ ? 

  • 2020ರ ಡಿ.14ರ ಸಂದರ್ಭ ಪುತ್ತೂರು ತಾ. ಪತ್ರಕರ್ತರ ಸಂಘದ ಸದಸ್ಯತ್ವ ಹೊಂದಿರುವ ಒಟ್ಟು 23 ಸದಸ್ಯರ ಹೆಸರಿನಲ್ಲಿ ಪುತ್ತೂರು ತಾ. ಪತ್ರಕರ್ತರ ಸಂಘದ ನೇರ ಹಿಡಿತದಲ್ಲಿ ತಲಾ 25 ಸಾವಿರ ರೂ. ಬ್ಯಾಂಕ್ ಡಿಪಾಸಿಟ್ 
  •  ಒಟ್ಟು 5.75 ಲಕ್ಷ ರೂ. ಬ್ಯಾಂಕ್ ಡೆಪಾಸಿಟ್‌ಗೆ ಪುತ್ತೂರು ತಾ. ಪತ್ರಕರ್ತರ ಸಂಘವೇ ಡಿಪಾಸಿಟರ್ ಪಾರ್ಟಿ 
  • ಯೋಜನಾ ವ್ಯಾಪ್ತಿಯಲ್ಲಿ ಬರುವ ಪುತ್ತೂರು ತಾ. ಪತ್ರಕರ್ತರ ಸಂಘದ ಸದಸ್ಯನಿಗೆ 60 ವರ್ಷ ವಯಸ್ಸು ದಾಟಿದ ನಂತರ ಪುತ್ತೂರು ತಾ. ಪತ್ರಕರ್ತರ ಸಂಘ ಡೆಪೊಸಿಟರ್ ಪಾರ್ಟಿ ಆಧಾರದಲ್ಲಿರಿಸಿದ 25 ಸಾವಿರ ರೂ. ಬ್ಯಾಂಕ್ ಡೆಪೊಸಿಟ್‌ನ ಪೂರ್ಣ ಪ್ರಮಾಣದ ಅಧಿಕಾರ ಹಸ್ತಾಂತರ
  • ಸದಸ್ಯನಿಗೆ 60 ವರ್ಷ ವಯಸ್ಸು ದಾಟಿದ ನಂತರ ಸದಸ್ಯರ ಹೆಸರಿನಲ್ಲಿರುವ 25 ಸಾ.ರೂ. ಬ್ಯಾಂಕ್ ಡೆಪೊಸಿಟ್, ಅಸಲು, ಬಡ್ಡಿ ರೂಪದಲ್ಲಿರುವ ಪತ್ರಕರ್ತರ ಸಾಮಾಜಿಕ ಮತ್ತು ಕುಟುಂಬ ಭದ್ರತಾ ಯೋಜನೆಯ ಒಟ್ಟು ಮೊತ್ತಕ್ಕೆ ಆಯಾ ಫಲಾನುಭವಿ, ಸಂಘದ ಸದಸ್ಯ/ ಪತ್ರಕರ್ತನೇ ಡೆಪೊಸಿಟರ್ ಪಾರ್ಟಿ 
  • ಕರ್ತವ್ಯ ಸಂದರ್ಭ ಅಪಘಾತ, ಮಾರಣಾಂತಿಕ ದಾಳಿ- ಹಲ್ಲೆ ಘಟನೆ ಸಂಭವಿಸಿದ್ದಲ್ಲಿ ಚಿಕಿತ್ಸೆಗಾಗಿ ಸದಸ್ಯನ ಹೆಸರಲ್ಲಿರುವ ಡೆಪೊಸಿಟ್ ಆಧಾರದಲ್ಲಿ ಗರಿಷ್ಠ 20 ಸಾವಿರ ರೂ. ತುರ್ತು ವೈಯಕ್ತಿಕ ಸಾಲ ಪಡೆಯಬಹುದು.

 ಸೌಲಭ್ಯಕ್ಕೆ ಅಗತ್ಯ ಮಾನದಂಡಗಳು 

  • ಪುತ್ತೂರು ತಾ. ಪತ್ರಕರ್ತರ ಸಂಘಕ್ಕೆ ದ್ರೋಹ ಬಗೆದ, ಅಪಮಾನಗೈದ, ಸಂಘದಿಂದ ಅನರ್ಹತೆ ಪಡೆದ ಸದಸ್ಯ/ಪತ್ರಕರ್ತನಿಗೆ ಈ ಯೋಜನೆಯನ್ನು ತಡೆಹಿಡಿಯುವ, ಡೆಪೊಸಿಟ್ ಮೊತ್ತ ಹಿಂಪಡೆಯುವ, ಪತ್ರಕರ್ತರ ಸಾಮಾಜಿಕ ಮತ್ತು ಕುಟುಂಬ ಭದ್ರತಾ ಯೋಜನೆಯಿಂದಲೇ ಕೈಬಿಡುವ ಅಧಿಕಾರ ಪುತ್ತೂರು ತಾ. ಪತ್ರಕರ್ತರ ಸಂಘಕ್ಕಿದೆ. ಹಿಂಪಡೆದ ಯೋಜನಾ ಮೊತ್ತವನ್ನು ಸಂಘದ ಉಳಿತಾಯ ಖಾತೆಗೆ ನೇರ ಜಮೆ ಮಾಡುವುದು. 
  • ಪತ್ರಿಕೋದ್ಯಮದಿಂದ ನಿವೃತ್ತಿಯಾಗಿ, ಸಂಘದ ಸದಸ್ಯತ್ವದಿಂದ ಹೊರನಡೆದರೆ, ರಾಜೀನಾಮೆ ನೀಡಿದರೆ ಅಂತಹ  ಸದಸ್ಯನ ಬಗ್ಗೆ ನಿರ್ಣಯ ಪಡೆದು ಅಧ್ಯಕ್ಷ, ಕಾರ್ಯದರ್ಶಿಗಳ ಸಹಿಯುಳ್ಳ ಪತ್ರ(ಎನ್‌ಓಸಿ) ಪಡೆದು ಕೋಶಾಧಿಕಾರಿಗಳ ಸಮ್ಮುಖದಲ್ಲಿ ನಿವೃತ್ತ ಸದಸ್ಯನಿಗೆ ಯೋಜನೆಯ ಫಲಾನುಭವಿಯಾಗಲು ಅವಕಾಶ ನೀಡುವುದು.
  • ಸಭಾ ನಿರ್ಣಯ ಪಡೆಯದೆ ಅಧ್ಯಕ್ಷ, ಕಾರ್ಯದರ್ಶಿ, ಕೋಶಾಧಿಕಾರಿಗಳು ಯಾವುದೇ ಇತರೆ ಸದಸ್ಯ ಹಾಗೂ ನಿವೃತ್ತ ಸದಸ್ಯನಿಗೆ ಮಧ್ಯಂತರದಲ್ಲಿ ಯೋಜನೆಯ ಫಲಾನುಭವಿಯಾಗಲು ಸಹಕರಿಸಿದ್ದಲ್ಲಿ ಆ ಸಂದರ್ಭ ಆಡಳಿತ ಮಂಡಳಿ ನಿರ್ಣಯ ದಾಖಲೀಕರಿಸಿ ಅಧ್ಯಕ್ಷ, ಕಾರ್ಯದರ್ಶಿ, ಕೋಶಾಧಿಕಾರಿ, ಸಹಕರಿಸಿದ ಇತರೆ ಸದಸ್ಯ ಹಾಗೂ ನಿವೃತ್ತ ಸದಸ್ಯನ ಡೆಪೊಸಿಟ್ ಸಹಿತ ಅಸಲು, ಬಡ್ಡಿ ಮೊತ್ತವನ್ನು ಮುಲಾಜಿಲ್ಲದೆ ಸಂಘದ ಖಾತೆಗೆ ಜಮೆ ಮಾಡುವುದು. 
  • ಸಾಲ ಪಡೆದ ಸಂದರ್ಭ ಯಾವುದೇ ಸದಸ್ಯ/ಪತ್ರಕರ್ತ 60 ವರ್ಷಕ್ಕಿಂತ ಕೆಳಗಿನ ವಯಸ್ಸಿನಲ್ಲಿ ಮೃತಪಟ್ಟರೆ ಅಂತಹ ಸದಸ್ಯನ ಕುಟುಂಬಕ್ಕೆ ಮಾನವೀಯತೆ ದೃಷ್ಟಿಯಿಂದ ಆತನ ಡೆಪೊಸಿಟ್ ಮೊತ್ತ, ಪೂರ್ಣ ಪ್ರಮಾಣದ ಅಸಲು, ಬಡ್ಡಿ ವಿತರಿಸಲು ಕ್ರಮ ಕೈಗೊಳ್ಳುವುದು. 
  • ಡೆಪೊಸಿಟ್ ಆಧಾರದಲ್ಲಿ ಸಂಘ ನಿರ್ಣಯದ ಮೂಲಕ ಸದಸ್ಯ/ಪತ್ರಕರ್ತ ತುರ್ತು ಬ್ಯಾಂಕ್ ಸಾಲ ಪಡೆದು 5 ಕಂತುಗಳ ವರೆಗೆ ಮರು ಪಾವತಿಸದಿದ್ದರೆ ಆ ಸದಸ್ಯ/ಪತ್ರಕರ್ತನ ಡೆಪೊಸಿಟ್ ಬರ್ಖಾಸ್‌ಗೊಳಿಸಿ ಬ್ಯಾಂಕ್ ಮೂಲಕವೇ ಸಾಲ ಮೊತ್ತಕ್ಕೆ ಜಮೆ ಮಾಡುವುದು, ಅಂದಿನ ವರೆಗಿನ ಬಡ್ಡಿ ಸಹಿತ ಉಳಿತಾಯ ಮೊತ್ತವನ್ನು ಸಂಘದ ಖಾತೆಗೆ ವರ್ಗಾಯಿಸುವುದು. ಜತೆಗೆ ಸಾಲ ಮರುಪಾವತಿಸದ ಸದಸ್ಯ/ ಪತ್ರಕರ್ತನನ್ನು ಸಂಘದ ಸದಸ್ಯತ್ವದಲ್ಲಿ ಮುಂದುವರಿಸಿ ಮುಂದಿನ ದಿನದಲ್ಲಿ ನೀಡಬಹುದಾದ ಎಲ್ಲಾ ಪ್ರಮುಖ ತುರ್ತು ಸಹಾಯಧನ, ವೈಯಕ್ತಿಕ ಅನುಧಾನ ಯೋಜನೆಯಿಂದ ಸಂಪೂರ್ಣವಾಗಿ ಕೈಬಿಡುವುದು.

Puttur press club to be states first club in providing welfare fund to Rural Journalists. Puttur taluk journalist union Shravan Kumar Nala announced its packages.