Dr Krishna Nayak, Mangalore, Dentist: ಮಂಗಳೂರಿನ ಖ್ಯಾತ ದಂತ ವೈದ್ಯ ಡಾ.ಯು.ಎಸ್ ಕೃಷ್ಣ ನಾಯಕ್ ನಿಧನ 

04-12-24 02:32 pm       Mangalore Correspondent   ಕರಾವಳಿ

ಮಂಗಳೂರಿನ ಖ್ಯಾತ ದಂತ ವೈದ್ಯ, ಎ.ಬಿ. ಶೆಟ್ಟಿ ಸ್ಮಾರಕ ದಂತ ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲ ಹಾಗೂ ಡೀನ್‌ ಆಗಿದ್ದ ಡಾ.ಯು.ಎಸ್.ಕೃಷ್ಣ ನಾಯಕ್‌ (64) ಅಲ್ಪಕಾಲದ ಅಸೌಖ್ಯದಿಂದ ನಿಧನ ಹೊಂದಿದರು. 

ಮಂಗಳೂರು, ಡಿ.4: ಮಂಗಳೂರಿನ ಖ್ಯಾತ ದಂತ ವೈದ್ಯ, ಎ.ಬಿ. ಶೆಟ್ಟಿ ಸ್ಮಾರಕ ದಂತ ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲ ಹಾಗೂ ಡೀನ್‌ ಆಗಿದ್ದ ಡಾ.ಯು.ಎಸ್.ಕೃಷ್ಣ ನಾಯಕ್‌ (64) ಅಲ್ಪಕಾಲದ ಅಸೌಖ್ಯದಿಂದ ನಿಧನ ಹೊಂದಿದರು. 

ಅವರು ಪತ್ನಿ, ಪುತ್ರ ಡಾ.ಅರ್ಜುನ್‌ ನಾಯಕ್‌ ಯುಎಸ್‌, ಪುತ್ರಿ ಡಾ.ಏಕತಾ ನಾಯಕ್‌ ಯು.ಎಸ್ (ಇಬ್ಬರೂ ದಂತ ವೈದ್ಯರು) ಸಹಿತ ಅಪಾರ ಬಂಧುಗಳು, ಅಭಿಮಾನಿಗಳನ್ನು ಅಗಲಿದ್ದಾರೆ. ಮಂಗಳೂರಿನ ಸಂತ ಅಲೋಶಿಯಸ್‌ ಶಾಲೆ ಹಾಗೂ ಕಾಲೇಜಿನಲ್ಲಿ ತಮ್ಮ ಪ್ರೌಢಶಿಕ್ಷಣ, ಪದವಿ ಪೂರ್ವ ಶಿಕ್ಷಣ ಪೂರೈಸಿ ಮಣಿಪಾಲ ಕೆಎಂಸಿಯಲ್ಲಿ ದಂತ ವೈದ್ಯಕೀಯ ಪದವಿ ಹಾಗೂ ಸ್ನಾತಕೋತ್ತರ ಪದವಿ ಗಳಿಸಿದರು. ಮಂಗಳೂರಿನ ನಾಯಕ್ಸ್‌ ಡೆಂಟಲ್ ಕ್ಲಿನಿಕ್‌ನಲ್ಲೂ ಅವರು ಸೇವೆ ಸಲ್ಲಿಸುತ್ತಿದ್ದರು.

2003ರಲ್ಲಿ ರಾಜ್ಯೋತ್ಸವ ಪ್ರಶಸ್ತಿ, 2002ರಲ್ಲಿ ರಾಜೀವ್ ಗಾಂಧಿ ಹೂಮನ್ ಎಕ್ಸಲೆನ್ಸ್ ಅವಾರ್ಡ್, 2014ರಲ್ಲಿ ಔಟ್ ಸ್ಟ್ಯಾಂಡಿಂಗ್ ಪ್ರೊಫೆಸರ್ ಅವಾರ್ಡ್ ಕೂಡ ಪಡೆದಿದ್ದಾರೆ. 2024ರ ಸೆ.20, 21ರಂದು ಬೆಂಗಳೂರಿನಲ್ಲಿ ನಡೆದ ರಾಷ್ಟ್ರೀಯ ಐಒಎಸ್ ಕಾನ್ಫರೆನ್ಸ್‌ನಲ್ಲಿ ಪ್ರತಿಷ್ಠಿತ ಜೀವಮಾನ ಶ್ರೇಷ್ಠ ಸಾಧನೆ ಪ್ರಶಸ್ತಿಯನ್ನು ಕೂಡ ಗಳಿಸಿದ್ದರು. ಡಾ.ಯು.ಎಸ್. ಕೃಷ್ಣ ನಾಯಕ್ ಅವರ ಅಕಾಲಿಕ ನಿಧನಕ್ಕೆ ವೈದ್ಯಕೀಯ ರಂಗದ ಪ್ರಮುಖರು, ಸಮಾಜದ  ಗಣ್ಯರು ಕಂಬನಿ ಮಿಡಿದಿದ್ದಾರೆ. 

ಭಾರತೀಯ ದಂತ ವೈದ್ಯಕೀಯ ಸಂಘದ ಅಧ್ಯಕ್ಷರಾಗಿ, ಇಂಡಿಯನ್‌ ಅರ್ಥೋಡಾಂಟಿಕ್ಸ್ ಸೊಸೈಟಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಲ್ಲದೆ ರಾಜೀವ್‌ ಗಾಂಧಿ ಆರೋಗ್ಯ ವಿಜ್ಞಾನಗಳ ವಿವಿಯ ಡೆಂಟಲ್‌ ಸರ್ಜರಿ ಬೋರ್ಡ್‌ ಆಫ್‌ ಸ್ಟಡೀಸ್‌ ಸದಸ್ಯರಾಗಿದ್ದರು. ದೇಶ ವಿದೇಶಗಳಲ್ಲಿ ಹಲವು ಪ್ರವಾಸ ಕೈಗೊಂಡು ವಿಚಾರ ಸಂಕಿರಣಗಳಲ್ಲಿ ಭಾಗವಹಿಸಿದ್ದಾರೆ. ಅಮೆರಿಕನ್‌ ಬಯೋಗ್ರಾಫಿಕಲ್‌ ಸೊಸೈಟಿಯಿಂದ ಮ್ಯಾನ್‌ ಆಫ್ ದಿ ಇಯರ್‌ ಗೌರವ ಪ್ರಶಸ್ತಿಯೂ ಲಭಿಸಿದೆ.

Senior dentist and principal of Ab Shetty college Dr Krishna Nayak passes away in Mangalore. Senior orthodontist and principal of A.B. Shetty Memorial Institute of Dental Sciences (ABSMIDS) U.S. Krishna Nayak, 63, passed away in a private hospital at Attavar in Mangaluru following a brief illness on December 3.