Mangalore, kabaddi player heart attack, Preetham Shetty: ಒಂದು ಕ್ಷಣ ಸಾವರಿಸಿದ್ದೇ ಮುಳುವಾಯ್ತು..! ಆಸ್ಪತ್ರೆಗೆ ಹೋದವರೇ ಗ್ಯಾಸ್ ಟ್ರಬಲ್ ಎಂದು ಅರ್ಧಕ್ಕೆ ಮರಳಿದ್ದರು..! ಮಂಡ್ಯದಲ್ಲಿ ಫೈನಲ್ ಆಟಕ್ಕಿಳಿದಿದ್ದ ಕಬಡ್ಡಿ ಆಟದ ‘ಬಾಹುಬಲಿ’ ಪ್ರೀತಂ ಶೆಟ್ಟಿ ಕುಸಿದು ಬಿದ್ದು ಸಾವು

14-12-24 02:52 pm       Mangalore Correspondent   ಕರಾವಳಿ

ಆತ ಕಬಡ್ಡಿ ಆಡ್ತಿದ್ದಾನೆ ಅಂದ್ರೆ, ಆ ಟೀಮ್ ಗೆದ್ದೇ ಗೆಲ್ಲುತ್ತೆ ಅನ್ನುವ ಭಾವನೆ ಬೆಳೆದಿತ್ತು. ಒಬ್ಬ ಡಿಫೆಂಡರ್ ಆಗಿದ್ದರೂ ಅಷ್ಟರ ಮಟ್ಟಿಗೆ ಇಡೀ ತಂಡವನ್ನು ಮತ್ತು ನೋಡುಗರನ್ನು ಆಕರ್ಷಿಸಿದ್ದ. ಹೌದು.. ಕಬಡ್ಡಿ ತಂಡದ ಬಾಹುಬಲಿ, ಮರಿಯಾನೆ ಎಂದೇ ಹೆಸರಾಗಿದ್ದ ಕಾರ್ಕಳ ಮುಟ್ಲುಪಾಡಿ ನಡುಮನೆ ನಿವಾಸಿ, ರಾಷ್ಟ್ರ ಮಟ್ಟದ ಕಬಡ್ಡಿ ಆಟಗಾರ ಪ್ರೀತಂ ಶೆಟ್ಟಿ(27) ಮಂಡ್ಯದಲ್ಲಿ ಹೃದಯಾಘಾತಕ್ಕೀಡಾಗಿ ದುರ್ಮರಣಕ್ಕೀಡಾಗಿದ್ದಾರೆ.

ಮಂಗಳೂರು, ಡಿ.14: ಆತ ಕಬಡ್ಡಿ ಆಡ್ತಿದ್ದಾನೆ ಅಂದ್ರೆ, ಆ ಟೀಮ್ ಗೆದ್ದೇ ಗೆಲ್ಲುತ್ತೆ ಅನ್ನುವ ಭಾವನೆ ಬೆಳೆದಿತ್ತು. ಒಬ್ಬ ಡಿಫೆಂಡರ್ ಆಗಿದ್ದರೂ ಅಷ್ಟರ ಮಟ್ಟಿಗೆ ಇಡೀ ತಂಡವನ್ನು ಮತ್ತು ನೋಡುಗರನ್ನು ಆಕರ್ಷಿಸಿದ್ದ. ಹೌದು.. ಕಬಡ್ಡಿ ತಂಡದ ಬಾಹುಬಲಿ, ಮರಿಯಾನೆ ಎಂದೇ ಹೆಸರಾಗಿದ್ದ ಕಾರ್ಕಳ ಮುಟ್ಲುಪಾಡಿ ನಡುಮನೆ ನಿವಾಸಿ, ರಾಷ್ಟ್ರ ಮಟ್ಟದ ಕಬಡ್ಡಿ ಆಟಗಾರ ಪ್ರೀತಂ ಶೆಟ್ಟಿ(27) ಮಂಡ್ಯದಲ್ಲಿ ಹೃದಯಾಘಾತಕ್ಕೀಡಾಗಿ ದುರ್ಮರಣಕ್ಕೀಡಾಗಿದ್ದಾರೆ.

ಮಂಡ್ಯ ಜಿಲ್ಲೆಯ ನಾಗಮಂಗಲದಲ್ಲಿ ನಿನ್ನೆ ರಾತ್ರಿ ಹೊನಲು ಬೆಳಕಿನ ಕಬಡ್ಡಿ ಇತ್ತು. ನಸುಕಿನ 5.30ರ ವೇಳೆಗೆ ಫೈನಲ್ ಆಗುವುದರಲ್ಲಿತ್ತು. ಪ್ರೀತಂ ಶೆಟ್ಟಿ ಆಡುತ್ತಿದ್ದ ಉಡುಪಿ ತಂಡ ಫೈನಲಿಗೆ ಬಂದಿತ್ತು. ಆದರೆ ಅದಕ್ಕೂ ಮೊದಲೇ ಪ್ರೀತಂಗೆ ಎದೆ ನೋವು ಕಾಣಿಸಿಕೊಂಡಿತ್ತು. 27 ವರ್ಷದ ಗಟ್ಟಿಮುಟ್ಟಾದ ಯುವಕನಿಗೆ ಎದೆ ನೋವು ಆಗಿದ್ದನ್ನು ಯಾರೂ ವಿಶೇಷ ಎಂದುಕೊಂಡಿರಲಿಲ್ಲ. ಪ್ರೀತಂ ಕೂಡ ಗ್ಯಾಸ್ ಟ್ರಬಲ್ ಎಂದೇ ಭಾವಿಸಿದ್ದರು.

ಆದರೂ ಜೊತೆಗಿದ್ದ ಗೆಳೆಯರು ಆಸ್ಪತ್ರೆಗೆ ಹೋಗಿ ಬರೋಣ ಎಂದು ಕಾರಿನಲ್ಲಿ ಹೊರಟಿದ್ದರು. ಒಂದಷ್ಟು ದೂರ ಹೋಗುತ್ತಿದ್ದಂತೆ ಎದೆ ನೋವು ಮರೆಯಾಗಿತ್ತು. ಏನೋ ಗ್ಯಾಸ್ಟ್ರಿಕ್ ನಿಂದಲೇ ಆಗಿದೆ, ಏನೂ ಆಗಲ್ಲ ಎಂದು ಗೆಳೆಯರೊಂದಿಗೆ ಪ್ರೀತಂ ಶೆಟ್ಟಿ ಮತ್ತೆ ಕಬಡ್ಡಿ ಕಣದತ್ತ ಮರಳಿದ್ದರು. ಫೈನಲ್ ಆಡಿಯೇ ಆಸ್ಪತ್ರೆಗೆ ಹೋಗೋಣ ಎಂದು ಬಂದಿದ್ದರು. ಆದರೆ ಅಷ್ಟರಲ್ಲಿಯೇ ಎದೆ ಕವುಚಿಕೊಂಡು ಕಬಡ್ಡಿ ಅಂಗಣದಲ್ಲಿಯೇ ಪ್ರೀತಂ ಕುಸಿದು ಬಿದ್ದಿದ್ದಾರೆ. ಅಲ್ಲಿಯೇ ಪ್ರಾಣ ತ್ಯಜಿಸಿದ್ದಾರೆ. ಜೊತೆಗಿದ್ದವರೆಲ್ಲ ಶಾಕ್ ಆಗಿದ್ದಾರೆ.

ಕಬಡ್ಡಿ ಕಮೆಂಟೇಟರ್ ವಿಜಯ್ ಗೌಡ ಅತ್ತಾಜೆ ಈ ಬಗ್ಗೆ ಮಾಧ್ಯಮಕ್ಕೆ ಹೇಳಿಕೊಂಡಿದ್ದಾರೆ. ಪ್ರೀತಂ ಡಿಫೆಂಡರ್ ಆಗಿ ಆಡುತ್ತಿದ್ದ. ಆತ ತಂಡದಲ್ಲಿದ್ದಾನೆ ಅಂದ್ರೆ, ಆ ಟೀಮ್ ಗೆದ್ದೇ ಗೆಲ್ಲುತ್ತೆ ಎನ್ನುವ ಹುಮ್ಮಸ್ಸು ಇತ್ತು. ಪ್ರೇಕ್ಷಕರು, ಇತರೇ ಆಟಗಾರರು ಹಾಗೆಯೇ ನಿರೀಕ್ಷೆಯಲ್ಲಿರುತ್ತಿದ್ದರು. ಡಿಫೆಂಡರ್ ಆಗಿ ತಂಡವನ್ನು ಮುನ್ನಡೆಸುತ್ತಿದ್ದುದಲ್ಲದೆ, ಪ್ರಮುಖ ರೈಡರ್ ಔಟಾದರೆ ಅವರನ್ನು ಬೈಯುತ್ತಲೇ ರೈಡ್ ಮಾಡಿ ಎದುರಾಳಿಯ ಕೋರ್ಟ್ ಖಾಲಿ ಮಾಡಿಯೇ ಮರಳುತ್ತಿದ್ದರು. ಅಷ್ಟರ ಮಟ್ಟಿಗೆ ಹುಮ್ಮಸ್ಸಿನಿಂದ ಆಟವಾಡುತ್ತಿದ್ದ ಪ್ರೀತಂ ಶೆಟ್ಟಿಗೆ ನಾವೆಲ್ಲ ಬಾಹುಬಲಿ ಎಂದೇ ಕರೆಯುತ್ತಿದ್ದೆವು. ಕಮೆಂಟೇಟರ್ ದಿವಾಕರ್ ಉಪ್ಪಳ, ಮರಿಯಾನೆ ಎಂದೂ ಕರೆಯುತ್ತಿದ್ದರು. ಇವರ ಸಾವು ಕಬಡ್ಡಿ ಆಟಕ್ಕೆ ದೊಡ್ಡ ನಷ್ಟವಾಗಿದೆ. ದೊಡ್ಡ ಸಾಧನೆ ಮಾಡಬೇಕೆಂಬ ಹಂಬಲ ಇತ್ತು. ಏನೋ ದಾರಿ ಸಾಗಲಿಲ್ಲ. ಎಸ್ಡಿಎಂ ವಿದ್ಯಾರ್ಥಿಯಾಗಿ ಆಟದಲ್ಲಿ ಮುಂಚೂಣಿಗೆ ಬಂದಿದ್ದ ಯುವಕ.

ಕೇರಳ, ತಮಿಳುನಾಡು, ಮಹಾರಾಷ್ಟ್ರ, ಆಂಧ್ರಪ್ರದೇಶ ಹೀಗೆ ಹಲವೆಡೆ ತಂಡ ಕಟ್ಟಿಕೊಂಡು ಹೋಗಿ ಗೆದ್ದು ಬರುತ್ತಿದ್ದ. ಕಬಡ್ಡಿ ಪ್ರಿಯರಿಗೆಲ್ಲ ಪ್ರೀತಂ ಶೆಟ್ಟಿ ಬಗ್ಗೆ ಗೊತ್ತಿತ್ತು. ಆತನ ಆಟವನ್ನು ನೋಡುವುದಕ್ಕಾಗಿಯೇ ಗಲ್ಫ್ ರಾಷ್ಟ್ರಕ್ಕೂ ಕರೆದು ಆಡಿಸಿದ್ದರು. ಹೊಸ ಆಟಗಾರರಿಗೂ ಪ್ರೋತ್ಸಾಹ ನೀಡುತ್ತಿದ್ದ. ತನ್ನೊಂದಿಗೆ ಆಡುವವರನ್ನೂ ಹುರಿದುಂಬಿಸುತ್ತ ಎಲ್ಲರನ್ನೂ ಬೆಳೆಸಿಕೊಂಡು ಹೋಗುತ್ತಿದ್ದ ಯುವಕ. ಕಾರ್ಕಳ ಮುಟ್ಲುಪಾಡಿಯ ನಡುಮನೆ ಗುತ್ತಿನ ಮನೆಯವನು. ಅಂಥ ಯುವಕ ಈಗ ಇಲ್ಲ ಅಂತ ಹೇಳೋಕೆ ಆಗುತ್ತಿಲ್ಲ. 26 ವರ್ಷದಲ್ಲಿ ಹೃದಯಾಘಾತ ಆಗಿರುವ ಬಗ್ಗೆ ಯುವಜನಾಂಗ ಯೋಚನೆ ಮಾಡಬೇಕಿದೆ. ಪ್ರಮುಖವಾಗಿ ದುಶ್ಚಟಗಳಿಂದ ದೂರವಿರಬೇಕಿದೆ. ಆಡುವ ಹುಮ್ಮಸ್ಸಿನಲ್ಲಿ ಪೈನ್ ಕಿಲ್ಲರ್, ಉತ್ತೇಜಕ ಪಾನೀಯಗಳನ್ನು ತೆಗೆದುಕೊಳ್ಳುವುದನ್ನು ನಿಲ್ಲಿಸಬೇಕು. ತಮ್ಮ ಕುಟುಂಬದ ಬಗ್ಗೆಯೂ ಯೋಚನೆ ಮನದಲ್ಲಿಟ್ಟುಕೊಳ್ಳಬೇಕು ಎಂದು ಯುವ ಆಟಗಾರರಿಗೆ ವಿಜಯ್ ಅತ್ತಾಜೆ ಸಲಹೆ ಮಾಡಿದ್ದಾರೆ.

ಪ್ರೀತಂ ಶೆಟ್ಟಿ ನಿನ್ನೆ ರಾತ್ರಿ ಕೊನೆಯ ಬಾರಿ ಆಡಿರುವ ವಿಡಿಯೋ ವೈರಲ್ ಆಗಿದ್ದು, ರೈಡರ್ ಒಬ್ಬನನ್ನ ಹಿಡಿಯುವ ಯತ್ನದಲ್ಲಿ ನೆಲಕ್ಕೆ ಬೀಳುವ ದೃಶ್ಯ ಇದೆ. ಪ್ರೀತಂ ಶೆಟ್ಟಿ ರೈಡ್ ಮಾಡುವ ದೃಶ್ಯವೂ ಇದೆ. ಯುವ ಆಟಗಾರ, ಅದರಲ್ಲೂ ಕ್ರೀಡಾಪಟುಗಳು ಈ ರೀತಿ ಹಾರ್ಟ್ ಅಟ್ಯಾಕ್ ನಿಂದ ಸಾವನ್ನಪ್ಪುತ್ತಿರುವುದು ಕಬಡ್ಡಿ ಪ್ರಿಯರ ಮನ ಕಲಕುವಂತಿದೆ.

Mangalore 27 year old kabaddi player dies of heart attack  while playing in Mandya. The deceased has been identified as Preetham Shetty. Pritam was participating in a Kabaddi tournament in Mandya when he complained of chest pain during the match. He was rushed to the hospital but succumbed to a heart attack.