Mangalore Areca nut, NITTE, Cancer: ಅಡಿಕೆ ಕ್ಯಾನ್ಸರ್‌ಕಾರಕ ಅಲ್ಲ, ಕ್ಯಾನ್ಸರ್ ಕಣಗಳನ್ನೇ ಕೊಲ್ಲಬಲ್ಲವು ; ನಿಟ್ಟೆ ವಿವಿಯ ತಜ್ಞರಿಂದ ಹೊಸ ಅಧ್ಯಯನ  

14-12-24 06:08 pm       Mangalore Correspondent   ಕರಾವಳಿ

ಅಡಿಕೆ ಕ್ಯಾನ್ಸರ್‌ಕಾರಕ ಎಂದು ಇತ್ತೀಚೆಗೆ ವಿಶ್ವ ಆರೋಗ್ಯ ಸಂಸ್ಥೆಗೆ ಅಧ್ಯಯನ ವರದಿಯೊಂದು ಸಲ್ಲಿಕೆಯಾಗಿರುವುದು ಸಾಕಷ್ಟು ವಿವಾದಕ್ಕೆ ಗುರಿಯಾಗಿತ್ತು. ಇದೀಗ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರು ಅಧ್ಯಯನ ಕೈಗೊಂಡಿದ್ದು ಅಡಿಕೆ ಕ್ಯಾನ್ಸರ್ ಕಾರಕವೇ ಅಲ್ಲ, ಬದಲಾಗಿ ಇದೇ ಅಡಿಕೆ ಕ್ಯಾನ್ಸರ್‌ ಕಣಗಳನ್ನೇ ಕೊಲ್ಲಬಲ್ಲವು ಎನ್ನುವ ಮಹತ್ವದ ಅಂಶವನ್ನು ಪತ್ತೆ ಮಾಡಿದ್ದಾರೆ. 

ಮಂಗಳೂರು, ಡಿ.14: ಅಡಿಕೆ ಕ್ಯಾನ್ಸರ್‌ಕಾರಕ ಎಂದು ಇತ್ತೀಚೆಗೆ ವಿಶ್ವ ಆರೋಗ್ಯ ಸಂಸ್ಥೆಗೆ ಅಧ್ಯಯನ ವರದಿಯೊಂದು ಸಲ್ಲಿಕೆಯಾಗಿರುವುದು ಸಾಕಷ್ಟು ವಿವಾದಕ್ಕೆ ಗುರಿಯಾಗಿತ್ತು. ಇದೀಗ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರು ಅಧ್ಯಯನ ಕೈಗೊಂಡಿದ್ದು ಅಡಿಕೆ ಕ್ಯಾನ್ಸರ್ ಕಾರಕವೇ ಅಲ್ಲ, ಬದಲಾಗಿ ಇದೇ ಅಡಿಕೆ ಕ್ಯಾನ್ಸರ್‌ ಕಣಗಳನ್ನೇ ಕೊಲ್ಲಬಲ್ಲವು ಎನ್ನುವ ಮಹತ್ವದ ಅಂಶವನ್ನು ಪತ್ತೆ ಮಾಡಿದ್ದಾರೆ. 

ವಿಶ್ವ ಆರೋಗ್ಯ ಸಂಸ್ಥೆಗೆ ಸಲ್ಲಿಕೆಯಾದ 'ಅಡಿಕೆ ಕ್ಯಾನ್ಸರ್‌ಕಾರಕ' ಎಂಬ ವರದಿ ಅಡಿಕೆ ಬೆಳೆಗಾರರಲ್ಲಿ ತೀವ್ರ ಕಳವಳ ಮೂಡಿಸಿತ್ತು. ಅಡಿಕೆಯ ಉಪ ಉತ್ಪನ್ನಗಳಾದ ತಂಬಾಕು ಸಹಿತ ಪಾನ್‌, ಪಾನ್‌ ಮಸಾಲಾ, ಗುಟ್ಕಾ ಇತ್ಯಾದಿಗಳನ್ನೇ ಮುಂದಿಟ್ಟು ಅಧ್ಯಯನ ನಡೆಸಿ, ಅದರಿಂದ ಕ್ಯಾನ್ಸರ್‌ ಉಂಟಾಗುತ್ತೆ  ಎಂದು ವರ್ಗೀಕರಣ ಮಾಡಿದ್ದಕ್ಕೆ ಟೀಕೆಯೂ ವ್ಯಕ್ತವಾಗಿತ್ತು. ಇದರ ನಡುವೆಯೇ ಕರಾವಳಿಯ ಹೆಸರಾಂತ ನಿಟ್ಟೆ ವಿವಿಯ ತಜ್ಞರು ಸಂಶೋಧನೆ ನಡೆಸಿದ್ದು ಮೂಲತಃ ಅಡಿಕೆ ಆರೋಗ್ಯಕರ ಎನ್ನುವುದನ್ನು ಜಗತ್ತಿಗೆ ಸಾರಲು ಮುಂದಾಗಿದ್ದಾರೆ. 

ಮೂರು ವರ್ಷಗಳ ಹಿಂದೆಯೇ ಈ ಕುರಿತು ಅಧ್ಯಯನ ನಡೆಸುವುದಕ್ಕೆ ಕ್ಯಾಂಪ್ಕೋ, ಅಡಿಕೆ ಸಂಶೋಧನೆ ಮತ್ತು ಅಭಿವೃದ್ಧಿ ಪ್ರತಿಷ್ಠಾನ ಹಾಗೂ ನಿಟ್ಟೆ ವಿವಿಗಳು ಒಪ್ಪಂದ ಮಾಡಿಕೊಂಡಿದ್ದವು. ಅಡಿಕೆ ಕುರಿತು ಒಟ್ಟು ನಾಲ್ಕು ವಿಷಯಗಳಲ್ಲಿ ಸಂಶೋಧನೆ ನಡೆಸಲು ನಿರ್ಧರಿಸಲಾಗಿತ್ತು.
ಅಡಿಕೆಯ ಸಾರದಿಂದ ಝೀಬ್ರಾ ಮೀನಿನ ಮೇಲಿನ ಪರಿಣಾಮ, ಅಡಿಕೆಯಿಂದ ನೊಣಗಳ ಮೇಲಾಗುವ ಪರಿಣಾಮ, ಅಡಿಕೆಯ ರಸದಿಂದ ಕ್ಯಾನ್ಸರ್‌ ಕಣಗಳ ಮೇಲಿನ ಪರಿಣಾಮ ಹಾಗೂ ಕೇವಲ ಅಡಿಕೆ ಜಗಿಯುವ ಜನರ ಕುರಿತು ವೈಜ್ಞಾನಿಕ ಸಮೀಕ್ಷೆ ನಡೆಸುವುದು ಇದರ ಮುಖ್ಯ ಗುರಿಯಾಗಿತ್ತು. 

ನಿಟ್ಟೆ ವಿ.ವಿ.ಯ ವಿಜ್ಞಾನಿ ಪ್ರೊ. ಕರುಣಾಸಾಗರ್‌ ಮತ್ತವರ ತಂಡವು ನಡೆಸಿದ ಮೂರೂ ವಿಭಾಗಗಳ ಸಂಶೋಧನೆಯಲ್ಲಿ ಅಡಿಕೆಯಿಂದ ಆರೋಗ್ಯದ ಮೇಲೆ ಯಾವ ದುಷ್ಪರಿಣಾಮ ಉಂಟಾಗುವುದಿಲ್ಲ ಎನ್ನುವುದು ಕಂಡುಬಂದಿದೆ. ಅಧ್ಯಯನದಲ್ಲಿ ಅಡಿಕೆಯ ಜಲೀಯ ಸಾರವನ್ನು ಹಣ್ಣಿನ ನೊಣ (ಡ್ರೊಸೊಫಿಲಾ) ಮತ್ತು ಝೀಬ್ರಾ ಮೀನುಗಳ ಬೆಳವಣಿಗೆಯ ವಿವಿಧ ಹಂತಗಳಲ್ಲಿ (ಮೊಟ್ಟೆಯಿಂದ ಪ್ರೌಢಾವಸ್ಥೆಗೆ ಬರುವವ ವರೆಗೆ) ನೀಡಲಾಗಿದೆ. ಅಡಿಕೆಯಿಂದ ಅವುಗಳ ಮೇಲೆ ಯಾವುದೇ ನೇರ ಪರಿಣಾಮ ಕಂಡುಬಂದಿಲ್ಲ. ಝೀಬ್ರಾ ಮೀನು ಹಾಗೂ ಡ್ರೊಸೊಫಿಲಾಗಳ ಕ್ರೊಮೋಸೋಮ್‌ಗಳು ಮಾನವನ ಕ್ರೋಮೊಸೋಮ್‌ ಹೋಲುವುದರಿಂದ ಮಾನವನನ್ನು ಉದ್ದೇಶಿಸಿ ನಡೆಸುವ ಯಾವುದೇ ವೈಜ್ಞಾನಿಕ ಸಂಶೋಧನೆಗೆ ಆರಂಭದಲ್ಲಿ ಇವನ್ನೇ ಹೆಚ್ಚಾಗಿ ಬಳಸಲಾಗುತ್ತದೆ. ಇನ್ನು, ಅಡಿಕೆಯ ಸಾರವು ಕ್ಯಾನ್ಸರ್‌ ಕಣಗಳ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎನ್ನುವುದನ್ನು ಪ್ರತ್ಯೇಕ ಅಧ್ಯಯನ ಮಾಡಲಾಗಿದೆ. 

ಪ್ರಯೋಗಾಲಯದಲ್ಲಿ ಕ್ಯಾನ್ಸರ್‌ ಕಣಗಳನ್ನು ಬೆಳೆಸಿ, ಅವುಗಳ ಮೇಲೆ ಅಡಿಕೆಯ ಸಾರವನ್ನು ಪ್ರಯೋಗಿಸಿದಾಗ ಅದು ಕ್ಯಾನ್ಸರ್‌ ಕಣಗಳ ಬೆಳವಣಿಗೆಯನ್ನು ಪ್ರತಿಬಂಧಿಸುತ್ತದೆ ಎನ್ನುವುದನ್ನು ತಜ್ಞರು ಕಂಡುಕೊಂಡಿದ್ದಾರೆ. ಆದರೆ ಸಾಮಾನ್ಯ ಕಣಗಳ ಮೇಲೆ ಇದು ಯಾವುದೇ ಪರಿಣಾಮ ಬೀರುವುದಿಲ್ಲ. ಒಟ್ಟಾರೆಯಾಗಿ ಅಡಕೆಯ ಬಳಕೆಯಿಂದ ಆರೋಗ್ಯಕ್ಕೆ ಯಾವುದೇ ಹಾನಿಯಿಲ್ಲ ಎನ್ನುವ ಭಾರತದ ಸಂಪ್ರದಾಯಿಕ ಜ್ಞಾನಕ್ಕೆ ಈ ವರದಿ ಪೂರಕವಾಗಿ ಕಂಡುಬಂದಿದೆ ಎನ್ನುತ್ತಾರೆ ತಜ್ಞರು. ಈ ಪೈಕಿ ಮೂರು ವಿಭಾಗಗಳ ಸಂಶೋಧನೆ ಪೂರ್ಣಗೊಂಡಿದ್ದು, ಅಂತಾರಾಷ್ಟ್ರೀಯ ನಿಯತಕಾಲಿಕದಲ್ಲಿ ಪ್ರಕಟಿಸಲು ತೀರ್ಮಾನಿಸಲಾಗಿದೆ.

Mangalore Areca nut consumption is good to kill cancer, not cancerous says NITTE research report.