Mangalore Accident, Ullal: ಮಧ್ಯರಾತ್ರಿ ಕುಡಿದ ಮತ್ತಿನಲ್ಲಿ ಜೀಪ್ ಚಾಲಕನ ಧಾವಂತ !ತೊಕ್ಕೊಟ್ಟು ಹೆದ್ದಾರಿ ಸರ್ವಿಸ್ ರಸ್ತೆಯಲ್ಲಿ ಸ್ಕೂಟರ್ ಗೆ ಡಿಕ್ಕಿ, ಬಾರ್ ವೈಟರ್ ದಾರುಣ ಸಾವು 

15-12-24 11:01 am       Mangalore Correspondent   ಕರಾವಳಿ

ಹೆದ್ದಾರಿಯ ಸರ್ವಿಸ್ ರಸ್ತೆಯಲ್ಲಿ ಜೀಪ್ ಚಾಲಕನ ಧಾವಂತಕ್ಕೆ ಸ್ಕೂಟರ್ ಸವಾರನೋರ್ವ ದಾರುಣ ಸಾವನ್ನಪ್ಪಿರುವ ಘಟನೆ ನಿನ್ನೆ ತಡರಾತ್ರಿ ತೊಕ್ಕೊಟ್ಟು ಓವರ್ ಬ್ರಿಡ್ಜ್ ನ ಹೈ ಸ್ಪಿರಿಟ್ಸ್ ವೈನ್ ಶಾಪ್ ಎದುರುಗಡೆ ನಡೆದಿದೆ.

ಉಳ್ಳಾಲ, ಡಿ.15: ಹೆದ್ದಾರಿಯ ಸರ್ವಿಸ್ ರಸ್ತೆಯಲ್ಲಿ ಜೀಪ್ ಚಾಲಕನ ಧಾವಂತಕ್ಕೆ ಸ್ಕೂಟರ್ ಸವಾರನೋರ್ವ ದಾರುಣ ಸಾವನ್ನಪ್ಪಿರುವ ಘಟನೆ ನಿನ್ನೆ ತಡರಾತ್ರಿ ತೊಕ್ಕೊಟ್ಟು ಓವರ್ ಬ್ರಿಡ್ಜ್ ನ ಹೈ ಸ್ಪಿರಿಟ್ಸ್ ವೈನ್ ಶಾಪ್ ಎದುರುಗಡೆ ನಡೆದಿದೆ.

ಉಳ್ಳಾಲ ತಾಲೂಕಿನ ಎಲಿಯಾರ್ ಪದವು ಸಂಪಿಗೆದಡಿ ನಿವಾಸಿ ಅರುಣ್ ಪೂಜಾರಿ(43) ಮೃತಪಟ್ಟ ವ್ಯಕ್ತಿ. ಅರುಣ್ ಅವರು ತೊಕ್ಕೊಟ್ಟು ಕಾಪಿಕಾಡುವಿನ ವೈನ್ & ಡೈನ್ ಬಾರ್ ಆಂಡ್ ರೆಸ್ಟೋರೆಂಟಲ್ಲಿ ವೈಟರ್ ಕೆಲಸ ನಿರ್ವಹಿಸುತ್ತಿದ್ದರು. ಶನಿವಾರ ರಾತ್ರಿ ಅರುಣ್ ಅವರು ಕೆಲಸ ಮುಗಿಸಿ ತನ್ನ ಆಕ್ಟಿವಾ ಸ್ಕೂಟರಲ್ಲಿ ಹೆದ್ದಾರಿಯ ಸರ್ವಿಸ್ ರಸ್ತೆಯಲ್ಲಿ ಮನೆಗೆ ಹಿಂತಿರುಗುವಾಗ ಜಿಪ್ಸಿ ಜೀಪ್ ಮುಖಾಮುಖಿ ಢಿಕ್ಕಿ ಹೊಡೆದಿದೆ. ಗಂಭೀರ ಗಾಯಗೊಂಡ ಸ್ಕೂಟರ್ ಸವಾರ ಅರುಣ್ ಅವರು ಆಸ್ಪತ್ರೆಗೆ ಸಾಗಿಸುವ ದಾರಿಯಲ್ಲಿ ಮೃತಪಟ್ಟಿದ್ದಾರೆ.

ಜೀಪ್ ಚಾಲಕ ಕಂಠಪೂರ್ತಿ ಮದ್ಯ ಸೇವಿಸಿ ಜೀಪನ್ನ ಸರ್ವಿಸ್ ರಸ್ತೆಯಲ್ಲಿ ಎರ್ರಾ ಬಿರ್ರೀ ಚಲಾಯಿಸಿದರ ಪರಿಣಾಮ ಅಪಘಾತ ನಡೆದಿದೆ ಎನ್ನಲಾಗಿದೆ. ಮಂಗಳೂರು ದಕ್ಷಿಣ ಸಂಚಾರಿ ಠಾಣಾ ಪೊಲೀಸರು ಜೀಪ್ ಚಾಲಕನನ್ನ ವಶಕ್ಕೆ ಪಡೆದು ವೈದ್ಯಕೀಯ ಪರೀಕ್ಷೆಗೊಳಪಡಿಸಿದ್ದು ಪ್ರಕರಣ ದಾಖಲಿಸಿದ್ದಾರೆ.

ಮೃತ ಅರುಣ್ ಅವರು ಕಳೆದ ವಾರವಷ್ಟೆ ಅಯೋಧ್ಯೆ ಶ್ರೀರಾಮ ಮಂದಿರಕ್ಕೆ ಕುಟುಂಬಸ್ಥರು, ಸ್ನೇಹಿತರೊಂದಿಗೆ ಪ್ರವಾಸಗೈದು ಹಿಂತಿರುಗಿದ್ದರು. ತಂದೆ- ತಾಯಿ ಇಬ್ಬರೂ ಅನಾರೋಗ್ಯದಿಂದ ಹಾಸಿಗೆ ಹಿಡಿದಿದ್ದು ಅವರನ್ನ ಅರುಣ್ ಅವರೇ ಆರೈಕೆ ಮಾಡುತ್ತಿದ್ದರು. ನಿನ್ನೆ ರಾತ್ರಿ ವರೆಗೂ ಲವಲವಿಕೆಯಿಂದ ಬಾರಲ್ಲಿ ಕೆಲಸ ನಿರ್ವಹಿಸಿದ್ದ ಅರುಣ್ ಅವರ ಅಕಾಲಿಕ ಅಗಲಿಕೆಯ ಸುದ್ದಿ ಬಾರ್ ಸಿಬ್ಬಂದಿಗಳು, ಗ್ರಾಹಕರಿಗೆ ಬರಸಿಡಿಲು ಬಡಿದಂತಾಗಿದೆ. ಅರುಣ್ ಅವರು ತಂದೆ, ತಾಯಿ ಪತ್ನಿ , ಇಬ್ಬರು ಗಂಡು ಮಕ್ಕಳನ್ನ ಅಗಲಿದ್ದಾರೆ.

ಇನ್ನು ಅರುಣ್ ಜತೆಗೆ ಸ್ಕೂಟರ್ ನಲ್ಲಿ ವೈನ್ & ಡೈನ್ ನ ಸ್ವಚ್ಚತಾ ಸಿಬ್ಬಂದಿ ಹೇಮಾವತಿ ಎಂಬ ಮಹಿಳೆ ಇದ್ದರು, ಆಕೆಯೂ ಗಂಭೀರ ಗಾಯಗೊಂಡಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 

A tragic accident occurred near the Ullal service road, resulting in the death of Arun Poojary, 43, at the scene. Reports suggest that the driver of the jeep was under the influence of alcohol and lost control of the vehicle.