Mangalore Lokayukta, Arrest, G S Dinesh, Mulki: ಪಹಣಿ ಪತ್ರದಲ್ಲಿ ಹೆಸರು ಸೇರಿಸಲು ನಾಲ್ಕು ಲಕ್ಷ ಲಂಚ ಕೇಳಿದ್ದ ಮುಲ್ಕಿ ಕಂದಾಯ ನಿರೀಕ್ಷಕ ಲೋಕಾಯುಕ್ತ ಬಲೆಗೆ ; ರೆಡ್ ಹ್ಯಾಂಡ್ ಅರೆಸ್ಟ್ 

19-12-24 04:28 pm       Mangalore Correspondent   ಕರಾವಳಿ

ಆಸ್ತಿ ಪಹಣಿ ಪತ್ರದಲ್ಲಿ ವಾರಸುದಾರರ ಹೆಸರು ಸೇರ್ಪಡೆ ಮಾಡಲು ನಾಲ್ಕು ಲಕ್ಷದ ಲಂಚದ ಬೇಡಿಕೆಯೊಡ್ಡಿದ್ದ ಮುಲ್ಕಿ ಕಂದಾಯ ನಿರೀಕ್ಷಕ ಜಿ.ಎಸ್ ದಿನೇಶ್ ಲೋಕಾಯುಕ್ತ ಬಲೆಗೆ ಬಿದ್ದಿದ್ದು ರೆಡ್ ಹ್ಯಾಂಡ್ ಆಗಿ ಬಂಧಿಸಲ್ಪಟ್ಟಿದ್ದಾನೆ. 

ಮಂಗಳೂರು, ಡಿ.19: ಆಸ್ತಿ ಪಹಣಿ ಪತ್ರದಲ್ಲಿ ವಾರಸುದಾರರ ಹೆಸರು ಸೇರ್ಪಡೆ ಮಾಡಲು ನಾಲ್ಕು ಲಕ್ಷದ ಲಂಚದ ಬೇಡಿಕೆಯೊಡ್ಡಿದ್ದ ಮುಲ್ಕಿ ಕಂದಾಯ ನಿರೀಕ್ಷಕ ಜಿ.ಎಸ್ ದಿನೇಶ್ ಲೋಕಾಯುಕ್ತ ಬಲೆಗೆ ಬಿದ್ದಿದ್ದು ರೆಡ್ ಹ್ಯಾಂಡ್ ಆಗಿ ಬಂಧಿಸಲ್ಪಟ್ಟಿದ್ದಾನೆ. 

ಅಜ್ಜಿ ಪದ್ಮಾವತಿ ಮೃತಪಟ್ಟ ಕಾರಣ ಅವರ ಹೆಸರಿನಲ್ಲಿದ್ದ ಆಸ್ತಿಯ ಪಹಣಿ ಪತ್ರದಲ್ಲಿ ಸಂಬಂಧಿತರನ್ನು ಸೇರಿಸುವ ಸಲುವಾಗಿ ಕಳೆದ ವರ್ಷ ಮುಲ್ಕಿ ತಾಲೂಕು ತಹಶೀಲ್ದಾರ್ ಕಚೇರಿಗೆ ವ್ಯಕ್ತಿಯೊಬ್ಬರು ಅರ್ಜಿ ಸಲ್ಲಿಸಿದ್ದರು. ಸದರಿ ಅರ್ಜಿಯನ್ನು ಮುಲ್ಕಿ ಕಂದಾಯ ನಿರೀಕ್ಷಕರ ಕಚೇರಿಗೆ ವಿಚಾರಣೆಗೆ ಕಳುಹಿಸಿದ್ದು, ಮುಲ್ಕಿ ಕಂದಾಯ ನಿರೀಕ್ಷಕ ಜಿ.ಎಸ್ ದಿನೇಶ್ ಒಂದು ವರ್ಷಕ್ಕಿಂತ ಹೆಚ್ಚು ಕಾಲ ಯಾವುದೇ ಕ್ರಮ ಕೈಗೊಳ್ಳದೇ ಬಾಕಿ ಇರಿಸಿಕೊಂಡಿದ್ದರು. 

ಈ ಬಗ್ಗೆ ಪಿರ್ಯಾದಿದಾರರು ಡಿ.9ರಂದು ಅರ್ಜಿಯ ಬಗ್ಗೆ ಕಂದಾಯ ನಿರೀಕ್ಷಕರ ಕಚೇರಿಗೆ ಹೋಗಿ ವಿಚಾರಿಸಿದಾಗ, ಮುಲ್ಕಿ ಕಂದಾಯ ನಿರೀಕ್ಷಕ ಜಿ.ಎಸ್ ದಿನೇಶ್ ಪಹಣಿ ಪತ್ರದಲ್ಲಿ ವಾರಸುದಾರರುಗಳ ಹೆಸರುಗಳನ್ನು ಸೇರ್ಪಡೆ ಮಾಡಲು 4 ಲಕ್ಷ ರೂಪಾಯಿ ಲಂಚದ ಹಣಕ್ಕೆ ಬೇಡಿಕೆ ಇಟ್ಟಿದ್ದರು. ಆದರೆ ಕಾನೂನು ಬದ್ಧವಾಗಿ ಮಾಡಬೇಕಾದ ಸರ್ಕಾರಿ ಕೆಲಸಕ್ಕೆ ಲಂಚ ನೀಡಿ ಕೆಲಸ ಮಾಡಿಸಿಕೊಳ್ಳಲು ಇಚ್ಛೆ ಇಲ್ಲದ ಕಾರಣ ಮಂಗಳೂರು ಲೋಕಾಯುಕ್ತ ಪೊಲೀಸ್ ಠಾಣೆಗೆ ದೂರು ನೀಡಿದ್ದರು. 

ಅದರಂತೆ, ಲೋಕಾಯುಕ್ತ ಅಧಿಕಾರಿಗಳು ಟ್ರಾಪ್ ಮಾಡಿದ್ದು ಡಿ.19ರ ಬೆಳಗ್ಗೆ ಕಂದಾಯ ನಿರೀಕ್ಷಕ ಜಿ.ಎಸ್ ದಿನೇಶ್ ಅವರು ವ್ಯಕ್ತಿಯಿಂದ ರೂ.4 ಲಕ್ಷ ಲಂಚದ ಹಣವನ್ನು ಸ್ವೀಕರಿಸುವಾಗಲೇ ಸುರತ್ಕಲ್ ಜಂಕ್ಷನ್ ಬಳಿ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದು ಬಂಧಿಸಲಾಗಿದೆ. 

ಕಾರ್ಯಾಚರಣೆಯಲ್ಲಿ ಲೋಕಾಯುಕ್ತ ಎಸ್ಪಿ ಎಂ.ಎ ನಟರಾಜ್ ಮಾರ್ಗದರ್ಶನದಲ್ಲಿ ಮಂಗಳೂರು ಲೋಕಾಯುಕ್ತ ಪೊಲೀಸ್ ಠಾಣೆಯ ಪೊಲೀಸ್ ಉಪಾಧೀಕ್ಷಕರಾದ ಡಾ. ಗಾನ ಪಿ. ಕುಮಾರ್, ಪೊಲೀಸ್ ನಿರೀಕ್ಷಕ ಅಮಾನುಲ್ಲಾ ಎ, ಸುರೇಶ್ ಕುಮಾರ್ ಪಿ, ಚಂದ್ರಶೇಖರ್ ಕೆ.ಎನ್ ಇವರು ಸಿಬ್ಬಂದಿಗಳ ಜೊತೆ ಟ್ರಾಪ್ ಕಾರ್ಯಾಚರಣೆ ಕೈಗೊಂಡಿದ್ದರು.

Mangalore Mulki Revenue officer caught red handed for demanding bribe of  Four lakhs by Lokayukta. The arrested has been identified as G S Dinesh.