ಆರೋಪ ಮಾಡಲು ನಮ್ಮಲ್ಲಿ ಟೈಮಿಲ್ಲ , ಅಭಿವೃದ್ಧಿ ಮಂತ್ರವೇ ಬಿಜೆಪಿಯ ಚುನಾವಣಾ ಅಸ್ತ್ರ 

14-12-20 08:59 pm       Mangaluru Correspondent   ಕರಾವಳಿ

ಆರೋಪಗಳಿಗೆ ಪ್ರತ್ಯಾರೋಪ ಮಾಡಲು ನಮ್ನಲ್ಲಿ ಟೈಮ್ ಇಲ್ಲ. ಕೇಂದ್ರ, ರಾಜ್ಯ ಬಿಜೆಪಿ ಸರಕಾರದ ಅಭಿವೃದ್ಧಿ ಮಂತ್ರವೇ ನಮ್ಮ ಚುನಾವಣಾ ಅಸ್ತ್ರವೆಂದು ಬಿಜೆಪಿ ಮಂಗಳೂರು ವಿಧಾನಸಭಾ ಕ್ಷೇತ್ರಾಧ್ಯಕ್ಷ ಚಂದ್ರಹಾಸ್ ಪಂಡಿತ್ ಹೌಸ್ ಹೇಳಿದರು. 

ಉಳ್ಳಾಲ, ಡಿ.14: ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಸೋಲುವ ಹತಾಶೆಯಲ್ಲಿರುವ ಕಾಂಗ್ರೆಸ್ ವೃಥಾ ಆರೋಪಗಳನ್ನು ಮಾಡುತ್ತಿದೆ. ಅವರ ಆರೋಪಗಳಿಗೆ ಪ್ರತ್ಯಾರೋಪ ಮಾಡಲು ನಮ್ನಲ್ಲಿ ಟೈಮ್ ಇಲ್ಲ. ಕೇಂದ್ರ, ರಾಜ್ಯ ಬಿಜೆಪಿ ಸರಕಾರದ ಅಭಿವೃದ್ಧಿ ಮಂತ್ರವೇ ನಮ್ಮ ಚುನಾವಣಾ ಅಸ್ತ್ರವೆಂದು ಬಿಜೆಪಿ ಮಂಗಳೂರು ವಿಧಾನಸಭಾ ಕ್ಷೇತ್ರಾಧ್ಯಕ್ಷ ಚಂದ್ರಹಾಸ್ ಪಂಡಿತ್ ಹೌಸ್ ಹೇಳಿದರು. 

ತೊಕ್ಕೊಟ್ಟಿ‌ನ ಕಾಪಿಕಾಡಿನ ಪಕ್ಷದ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಟಿಯನ್ನುದ್ದೇಶಿಸಿ ಅವರು ಮಾತನಾಡಿದರು. ಮಂಗಳೂರು ವಿಧಾನಸಭಾ ಕ್ಷೇತ್ರದ 19 ಗ್ರಾಮಗಳ ಚುನಾವಣೆಗೆ 332 ಸ್ಥಾನಗಳ ಪೈಕಿ 278 ಸ್ಥಾನಗಳಿಗೆ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದೇವೆ. ಅದರಲ್ಲಿ ಈಗಾಗಲೇ 7 ಅಭ್ಯರ್ಥಿಗಳು ಅವಿರೋಧ ಆಯ್ಕೆಯಾಗಿ ಪಕ್ಷದ ಉತ್ಸಾಹಕ್ಕೆ ಸ್ಫೂರ್ತಿಯಾಗಿದ್ದಾರೆ‌. ಕಾಂಗ್ರೆಸ್ ಪಕ್ಷದಲ್ಲಿ ಕಣಕ್ಕಿಳಿಸಲು‌ ಸೂಕ್ತ ಅಭ್ಯರ್ಥಿಗಳೇ ಇಲ್ಲದಂತಾಗಿದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ ಮತ್ತು ರಾಜ್ಯ ಮುಖ್ಯಮಂತ್ರಿ ಯಡಿಯೂರಪ್ಪರ ಜನಪರ ಆಡಳಿತದಿಂದ ಮತದಾರರು  ಬಿಜೆಪಿಯತ್ತ ಆಕರ್ಷಿತರಾಗುತ್ತಿದ್ದಾರೆ. ಚುನಾವಣಾ ಪೂರ್ವ ಬಿಜೆಪಿ ಬೂತ್ ಮಟ್ಟದಲ್ಲಿ ನಡೆಸಿರುವ ಕುಟುಂಬ ಸಮ್ಮಿಲನ ಕಾರ್ಯಕ್ರಮಗಳು ಪಂಚಾಯತ್ ಚುನಾವಣೆಗೆ ಹೆಚ್ಚಿನ ಬಲ ನೀಡಿದ್ದು, ಬಿಜೆಪಿಯು ತಳಮಟ್ಟದ ಕಾರ್ಯಕರ್ತನನ್ನು ನಾಯಕನನ್ನಾಗಿಸುವ ಕೆಲಸ ನಡೆಸುತ್ತಿದೆ ಎಂದರು. 

ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಸಂತೋಷ್ ಬೋಳಿಯಾರ್ ಮಾತನಾಡಿ ಇಂದು ಅಲ್ಪಸಂಖ್ಯಾತರು ಬಿಜೆಪಿಯ ಆಡಳಿತಕ್ಕೆ ಮನ್ನಣೆ ನೀಡಿ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ. ಇದನ್ನು ಸಹಿಸದ ಕಾಂಗ್ರೆಸ್ ಕಾರ್ಯಕರ್ತರು ಬಿಜೆಪಿಗೆ ಬೆಂಬಲ ನೀಡುವ ಅಲ್ಪಸಂಖ್ಯಾತರ ಮೇಲೆ ಮಾರಣಾಂತಿಕ ಹಲ್ಲೆ ನಡೆಸುವ ಹೀನ ಮಟ್ಟದ ಕೆಲಸಕ್ಕೆ ಇಳಿದಿದ್ದಾರೆ. ಕಳೆದ ಕೆಲ ದಿನಗಳ ಹಿಂದೆ ಮಂಜನಾಡಿಯಲ್ಲಿ ಬಿಜೆಪಿ ಕಾರ್ಯಕರ್ತ ಹನೀಫ್ ಉಸ್ತಾದ್ ಮೇಲೆ ಸುತ್ತಿಗೆಯಲ್ಲಿ ಹಲ್ಲೆ ನಡೆಸಿದ ಪ್ರಕರಣವೇ ಇದಕ್ಕೆ ತಾಜಾ ಉದಾಹರಣೆ. ಸೋಲು ನಿಶ್ಚಿತ ಎಂದಾಗ ಆರೋಪ ಮಾಡುವುದು ಕಾಂಗ್ರೆಸಿನ ಚಾಳಿಯಾಗಿದೆ. EVM ಬಗ್ಗೆ ಪ್ರತೀ ಬಾರಿ ಆರೋಪ ಮಾಡೋ ಕಾಂಗ್ರೆಸಿಗರು ಕಳೆದ ವಿಧಾನಸಭೆ ಚುನಾವಣೆಯಲ್ಲಿ ಜಿಲ್ಲೆಯ 8 ಕ್ಷೇತ್ರಗಳಲ್ಲಿ ಉಳ್ಳಾಲದಲ್ಲಿ ಕಾಂಗ್ರೆಸ್ನ ಓರ್ವನೇ ಅಭ್ಯರ್ಥಿ ಜಯ ಗಳಿಸಿದಾಗ ಯಾವುದೇ ಚಕಾರ ಎತ್ತಿಲ್ಲ. ಈಗ ಚುನಾವಣೆ ಸೋಲಿನ ಭೀತಿಯಲ್ಲಿ ಮತ್ತೆ ಸುಳ್ಳು ಆರೋಪಗಳನ್ನು ಮಾಡುತ್ತಾ ಕೀಳು ಮಟ್ಟದ ರಾಜಕೀಯ ನಡೆಸುತ್ತಿದ್ದಾರೆ ಎಂದರು. 

ಕ್ಷೇತ್ರ ಪ್ರಭಾರಿಗಳಾದ ಈಶ್ವರ್ ಕಟೀಲು, ಕಸ್ತೂರಿ ಪಂಜ, ಪ್ರಮುಖರಾದ ಮೋಹನ್ ದಾಸ್ ಶೆಟ್ಟಿ ಕಿನ್ಯ, ನವೀನ್ ಪಾದಲ್ಪಾಡಿ, ಯಶವಂತ್ ಅಮೀನ್, ಹೇಮಂತ್ ಶೆಟ್ಟಿ, ಪುರುಷೋತ್ತಮ ಕಲ್ಲಾಪು‌ ಇದ್ದರು.