Ullal Police, Crime, Lokayukta: ಲೋಕಾಯುಕ್ತ ಅಧಿಕಾರಿಯೆಂದು ಸೋಮೇಶ್ವರ ಪುರಸಭೆ ರೆವಿನ್ಯೂ ಅಧಿಕಾರಿಗೆ ಫೋನ್ ಕರೆ ; ಕೇಸ್ ಹೆಸರಲ್ಲಿ ಹಣಕ್ಕಾಗಿ ಮಾತುಕತೆ, ಆಂಧ್ರ ಮೂಲದ ಆರೋಪಿ ಅರೆಸ್ಟ್ 

22-12-24 11:03 pm       Mangalore Correspondent   ಕರಾವಳಿ

ತಾನು ಲೋಕಾಯುಕ್ತ ಅಧಿಕಾರಿಯೆಂದು ಹೇಳಿ ಫೋನ್ ಮಾಡಿ, ಪ್ರಕರಣವನ್ನು ಹಣ ಕೊಟ್ಟರೆ ಮುಗಿಸುತ್ತೇನೆಂದು ನಂಬಿಸಿ ಹಣ ಪೀಕಿಸಲು ಯತ್ನಿಸಿದ ಘಟನೆ ಬಗ್ಗೆ ತನಿಖೆ ನಡೆಸಿದ ಉಳ್ಳಾಲ ಪೊಲೀಸರು ಆಂಧ್ರಪ್ರದೇಶ ಮೂಲದ ವ್ಯಕ್ತಿಯನ್ನು ಬಂಧಿಸಿದ್ದಾರೆ. 

ಮಂಗಳೂರು, ಡಿ.22:  ತಾನು ಲೋಕಾಯುಕ್ತ ಅಧಿಕಾರಿಯೆಂದು ಹೇಳಿ ಫೋನ್ ಮಾಡಿ, ಪ್ರಕರಣವನ್ನು ಹಣ ಕೊಟ್ಟರೆ ಮುಗಿಸುತ್ತೇನೆಂದು ನಂಬಿಸಿ ಹಣ ಪೀಕಿಸಲು ಯತ್ನಿಸಿದ ಘಟನೆ ಬಗ್ಗೆ ತನಿಖೆ ನಡೆಸಿದ ಉಳ್ಳಾಲ ಪೊಲೀಸರು ಆಂಧ್ರಪ್ರದೇಶ ಮೂಲದ ವ್ಯಕ್ತಿಯನ್ನು ಬಂಧಿಸಿದ್ದಾರೆ. 

2024ರ ಎಪ್ರಿಲ್ 6ರಂದು ಸೋಮೇಶ್ವರ ಪುರಸಭೆಯ ರೆವಿನ್ಯೂ ಅಧಿಕಾರಿ ಪುರುಷೋತ್ತಮ ಎಂಬವರಿಗೆ ಕರೆ ಮಾಡಿದ್ದ ಅಪರಿಚಿತ ವ್ಯಕ್ತಿ ತಾನು ಮಂಗಳೂರು ಲೋಕಾಯುಕ್ತ ಇಲಾಖೆಯ ಅಧಿಕಾರಿ ಪ್ರಭಾಕರ ಎಂದು ಪರಿಚಯಿಸಿದ್ದ. ನಿಮ್ಮ ಮೇಲೆ ಭ್ರಷ್ಟಾಚಾರದ ಆರೋಪಗಳಿದ್ದು ಟೆಕ್ನಿಕಲ್ ಟೀಮ್ ಬರುವ ಮೊದಲು ಮಾತನಾಡಿ ಮುಗಿಸಿ ಬಿಡುವುದಾದರೆ ಮಾತುಕತೆ ಮಾಡಿ ಎಂದು ಹೇಳಿದ್ದ. ಪುರುಷೋತ್ತಮ ಅವರು ಮಂಗಳೂರು ಲೋಕಾಯುಕ್ತದಲ್ಲಿ ವಿಚಾರಿಸಿದಾಗ ಪ್ರಭಾಕರ ಎಂಬ ವ್ಯಕ್ತಿ ಇಲ್ಲವೆಂದು ತಿಳಿದುಬಂದಿತ್ತು. ಟ್ರು ಕಾಲರ್ ನಲ್ಲಿ ಪ್ರಭಾಕರ, ಲೋಕಾಯುಕ್ತ ಪಿಐ ಎಂದು ತೋರಿಸಿತ್ತು. 

ಪುರಸಭೆಯಲ್ಲಿ ಆರೋಗ್ಯ ಇಲಾಖೆಯ ಇತರ ಅಧಿಕಾರಿಗಳಾದ ಲಿಲ್ಲಿ ನಾಯರ್ ಮತ್ತು ಕೃಷ್ಣ ಅವರಿಗು ಇದೇ ರೀತಿ ಬೆದರಿಕೆ ಕರೆಗಳು ಬಂದಿದ್ದವು. ಈ ಬಗ್ಗೆ ಅನುಮಾನಗೊಂಡ ಪುರುಷೋತ್ತಮ ಅವರು ಉಳ್ಳಾಲ ಠಾಣೆಗೆ ದೂರು ನೀಡಿದ್ದರು.‌ ಪೊಲೀಸರು ಪ್ರಕರಣ ದಾಖಲಿಸಿ ತನಿಖೆಯನ್ನು ನಡೆಸಿದ್ದರು. ಇದೀಗ ಆರೋಪಿ ಆಂಧ್ರಪ್ರದೇಶದ ಸತ್ಯಸಾಯಿ ಜಿಲ್ಲೆಯ ನಿವಾಸಿ ಧನಂಜಯ ರೆಡ್ಡಿ ತೋಟಾ (31) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ‌

ಆರೋಪಿ ಇದೇ ಮಾದರಿಯಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ಠಾಣೆ ಮತ್ತು ಹೈದರಾಬಾದ್ ನಗರದ ಶಾಬಾದ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಅಧಿಕಾರಿಗಳನ್ನು ಬೆದರಿಸಿ ಹಣ ಕೀಳಲು ಯತ್ನಿಸಿದ ಬಗ್ಗೆ ಪ್ರಕರಣ ದಾಖಲಾಗಿತ್ತು. ಎಸಿಪಿ ಧನ್ಯ ನಾಯಕ್ ಸೂಚನೆಯಂತೆ ಉಳ್ಳಾಲ ಪಿಎಸ್ಐ ಸಂತೋಷ್ ಕುಮಾರ್ ಮತ್ತು ಸಿಬಂದಿ ತಾಂತ್ರಿಕ ಸಾಕ್ಷ್ಯದಿಂದ ಆರೋಪಿಯನ್ನು ಪತ್ತೆ ಮಾಡಿ ಅರೆಸ್ಟ್ ಮಾಡಿದ್ದಾರೆ.

Mangalore Andhra native arrested by ullal police after posing as Lokayukta officer. The arrested has been identified as Dhananajaya Reddy.