Mangalore, BJP, Congress, Dinesh Gundurao: ಹಲ್ವಾ ತಿನ್ನೋಕೆ ಕೆಡಿಪಿ ಸಭೆಗೆ ಬರೋದಾ..? ಐವಾನ್ ಉಸ್ತುವಾರಿ ಬಕೆಟ್ ಹಿಡಿಯುತ್ತಿದ್ದಾರೆಯೇ? ಅನುದಾನ ಇಲ್ಲದ್ದಕ್ಕೆ ಕೆಡಿಪಿ ಸಭೆಯಿಂದ ಹೊರನಡೆದ ಬಿಜೆಪಿ ಶಾಸಕರು, ಪ್ರೀ ಪ್ಲಾನ್ಡ್ ಆಗಿ ಬಂದಿದ್ದೀರಾ ಎಂದು ಕಿಚಾಯಿಸಿದ ಉಸ್ತುವಾರಿ

23-12-24 10:44 pm       Mangalore Correspondent   ಕರಾವಳಿ

ದಕ್ಷಿಣ ಕನ್ನಡ ಜಿಲ್ಲೆಯ ಅಭಿವೃದ್ಧಿಗೆ ಅನುದಾನ ಕೊಡುತ್ತಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಅವರನ್ನು ಪ್ರಶ್ನೆ ಮಾಡಿ, ಬಿಜೆಪಿ ಶಾಸಕ- ಸಂಸದರು ಜಿಲ್ಲಾ ಮಟ್ಟದ ತ್ರೈಮಾಸಿಕ ಸಭೆಯಿಂದ ಸಭಾತ್ಯಾಗ ಮಾಡಿ ಪ್ರತಿಭಟನೆ ವ್ಯಕ್ತಪಡಿಸಿದ್ದಾರೆ.

ಮಂಗಳೂರು, ಡಿ.23: ದಕ್ಷಿಣ ಕನ್ನಡ ಜಿಲ್ಲೆಯ ಅಭಿವೃದ್ಧಿಗೆ ಅನುದಾನ ಕೊಡುತ್ತಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಅವರನ್ನು ಪ್ರಶ್ನೆ ಮಾಡಿ, ಬಿಜೆಪಿ ಶಾಸಕ- ಸಂಸದರು ಜಿಲ್ಲಾ ಮಟ್ಟದ ತ್ರೈಮಾಸಿಕ ಸಭೆಯಿಂದ ಸಭಾತ್ಯಾಗ ಮಾಡಿ ಪ್ರತಿಭಟನೆ ವ್ಯಕ್ತಪಡಿಸಿದ್ದಾರೆ. ಈ ವೇಳೆ, ಬಿಜೆಪಿ ಶಾಸಕರು ಜೊತೆಯಾಗಿಯೇ ಉಸ್ತುವಾರಿ ಸಚಿವರ ಮೇಲೆ ಮುಗಿಬಿದ್ದು ಒಟ್ಟಿಗೇ ಸಭೆಯಿಂದ ಎದ್ದು ನಡೆದಿದ್ದಾರೆ.

ಸಭೆಯ ಆರಂಭದಲ್ಲೇ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಉಸ್ತುವಾರಿ ಸಚಿವರನ್ನು ಪ್ರಶ್ನೆ ಮಾಡಿದ್ದು, ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಅಸ್ತಿತ್ವಕ್ಕೆ ಬಂದು ಒಂದು ವರ್ಷ ಕಳೆದಿದ್ದು, ಗುಲ್ಬರ್ಗಾ ಅಭಿವೃದ್ಧಿಗೆ ಅನುದಾನ ನೀಡುತ್ತಿರುವುದಕ್ಕೆ ನಮ್ಮ ಆಕ್ಷೇಪವಿಲ್ಲ. ಕರಾವಳಿಗೂ ಅದೇ ರೀತಿಯ ಆದ್ಯತೆ ನೀಡಬೇಕಲ್ವಾ.. ನೀವು ಯಾಕೆ ತಾರತಮ್ಯ ಮಾಡುತ್ತೀರಿ, ಇದರ ಬಗ್ಗೆ ಮುಖ್ಯಮಂತ್ರಿ ಜೊತೆ ಮಾತನಾಡಿದ್ದೀರಾ ಎಂದು ಪ್ರಶ್ನಿಸಿದರು. ಅಲ್ಲದೆ, ನೀವು ತ್ರೈಮಾಸಿಕ ಸಭೆ ಮಾಡುತ್ತೀರಿ. ರಸ್ತೆ ಗುಂಡಿ ಮುಚ್ಚುವುದಕ್ಕೂ ಅನುದಾನ ಇಲ್ಲದೆ ಜನರು ಪ್ರಶ್ನೆ ಮಾಡುತ್ತಿದ್ದಾರೆ. ಕೆಡಿಪಿ ಸಭೆಗೆ ನಾವು ಅಂಬಡೆ, ಹಲ್ವಾ ತಿನ್ನುವುದಕ್ಕಷ್ಟೇ ಬರೋದಾ ಎಂದು ಪ್ರಶ್ನಿಸಿದರು.

ಈ ವೇಳೆ, ನೀವು ಬೇಡ ಅಂದ್ರೆ ಹಲ್ವಾ ತಿನ್ನಬೇಡಿ, ನಾವೇನು ಒತ್ತಾಯ ಮಾಡಿದ್ವಾ ಎಂದು ಉಸ್ತುವಾರಿ ಸಚಿವರು ಕಿಚಾಯಿಸಿದರು. ಇದರಿಂದ ರೊಚ್ಚಿಗೆದ್ದ ಬಿಜೆಪಿಯ ಇತರ ಶಾಸಕರು ಕೂಡ ಹರೀಶ್ ಪೂಂಜ ಪರವಾಗಿ ಎದ್ದು ನಿಂತು ಉಸ್ತುವಾರಿ ವಿರುದ್ಧ ಮಾತನಾಡಿದರು. ಭರತ್ ಶೆಟ್ಟಿ, ವೇದವ್ಯಾಸ ಕಾಮತ್, ರಾಜೇಶ್ ನಾಯ್ಕ್ ಸಭೆಯಲ್ಲಿ ಎದ್ದು ನಿಂತು ಆಕ್ರೋಶ ವ್ಯಕ್ತಪಡಿಸಿದರು. ಕಿಂಡಿ ಅಣೆಕಟ್ಟು ಸೇರಿದಂತೆ ಯಾವುದಕ್ಕೂ ನೀವು ಅನುದಾನ ನೀಡುತ್ತಿಲ್ಲ, ಜನರೆದುರು ನಾವು ನಗೆಪಾಟಲಿಗೀಡಾಗುತ್ತಿದ್ದೇವೆ ಎಂದು ಭರತ್ ಶೆಟ್ಟಿ ಹೇಳಿದರೆ, ವೇದವ್ಯಾಸ ಕಾಮತ್ ಜಲಸಿರಿ ಸೇರಿದಂತೆ ಯಾವುದಕ್ಕೂ ಅನುದಾನ ಬರುತ್ತಿಲ್ಲ. ನಾವು ಯಾಕೆ ಕೆಡಿಪಿ ಸಭೆಯಲ್ಲಿ ಕುಳಿತುಕೊಳ್ಳಬೇಕು ಎಂದು ಪ್ರಶ್ನಿಸಿ ನಾವು ಎದ್ದು ಹೋಗುತ್ತೇವೆಂದು ಹೇಳಿದರು.

ಅದೇ ವೇಳೆ, ರಾಜ್ಯ ಸರಕಾರದ ಪರವಾಗಿ ಎಂಎಲ್ಸಿ ಐವಾನ್ ಡಿಸೋಜ ಸಮರ್ಥನೆಗೆ ನಿಂತಾಗ, ಬಿಜೆಪಿ ಎಂಎಲ್ಸಿ ಕಿಶೋರ್ ಕುಮಾರ್ ನೀವು ಸಮರ್ಥನೆ ಮಾಡೋದು ಬೇಡ. ನೀವು ಅನುದಾನ ಬರದಿರುವುದನ್ನು ಸಮರ್ಥನೆ ಮಾಡೋದಾದ್ರೆ ದಕ್ಷಿಣ ಕನ್ನಡ ಜಿಲ್ಲೆಯ ಅಭಿವೃದ್ಧಿ ಬೇಡ ಎಂದಾಯಿತು. ಉಸ್ತುವಾರಿ ಸಚಿವರಿಗೆ ಬಕೆಟ್ ಹಿಡಿಯಲು, ಅವರನ್ನು ಖುಷಿ ಪಡಿಸಲು ಐವಾನ್ ಡಿಸೋಜ ಮಾತನಾಡುತ್ತಿದ್ದಾರೆ ಎಂದು ಟಾಂಗ್ ಇಟ್ಟರು. ಆನಂತರ, ಎಂಎಲ್ಸಿ ಕಿಶೋರ್ ಸೇರಿದಂತೆ ಎಲ್ಲ ಬಿಜೆಪಿ ಶಾಸಕರು ಸಭೆಯಿಂದ ಎದ್ದು ನಡೆದರು. ಜೊತೆಗೆ, ವೇದಿಕೆಯಲ್ಲಿದ್ದ ಬಿಜೆಪಿ ಸಂಸದ ಕ್ಯಾ.ಬ್ರಿಜೇಶ್ ಚೌಟ ಕೂಡ ಎದ್ದು ಶಾಸಕರೊಂದಿಗೆ ತೆರಳಿದರು.

ವಿಶೇಷ ಅಂದ್ರೆ, ಬಿಜೆಪಿ ಮೈತ್ರಿ ಪಕ್ಷ ಜೆಡಿಎಸ್ ಸದಸ್ಯ ಭೋಜೇಗೌಡ ಸಭೆಯಲ್ಲೇ ಇದ್ದರಲ್ಲದೆ, ಮೈತ್ರಿ ಪಕ್ಷದ ಶಾಸಕರ ಜೊತೆಗೂಡದೆ ಚರ್ಚೆಯಲ್ಲಿ ಪಾಲ್ಗೊಂಡರು. ಬಿಜೆಪಿ ಸದಸ್ಯರು ಸಭಾತ್ಯಾಗ ಮಾಡಿದ ಬಗ್ಗೆ ಪ್ರತಿಕ್ರಿಯಿಸಿದ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್, ಇವರು ಜೊತೆಯಾಗಿಯೇ ಎದ್ದು ನಡೆದಿರುವುದನ್ನು ನೋಡಿದರೆ ಪೂರ್ವಯೋಜಿತ ಎನ್ನುವಂತೆ ತೋರುತ್ತಿದೆ. ಇವರಿಗೆ ಅಧಿಕಾರಿಗಳ ಉತ್ತರ ಕೇಳುವುದಕ್ಕೂ ವ್ಯವಧಾನ ಇಲ್ವಾ.. ಈಗಾಗಲೇ ಮುಖ್ಯಮಂತ್ರಿಗಳು 6 ಸಾವಿರ ಕೋಟಿ ಅನುದಾನ ಕೊಡುವುದಾಗಿ ಹೇಳಿದ್ದಾರೆ. ಇದರಲ್ಲಿ ನಾಲ್ಕು ಸಾವಿರ ಕೋಟಿ ಪಿಡಬ್ಲ್ಯುಡಿಗೆ ಮತ್ತು ಉಳಿದದ್ದು ಶಾಸಕರ ಕ್ಷೇತ್ರ ಅಭಿವೃದ್ಧಿಗೆ ಅನುದಾನ ದೊರಕಲಿದೆ ಎಂದಿದ್ದಾರೆ. ಇದು ತಿಳಿದಿದ್ದರೂ, ಇಲ್ಲಿನ ಬಿಜೆಪಿ ಶಾಸಕರು ಕೆಡಿಪಿ ಸಭೆಯಿಂದ ಹೊರ ನಡೆದಿದ್ದಾರೆ ಎಂದು ಹೇಳಿದರು.

ಡಿಸಿಸಿ ಬ್ಯಾಂಕಿನ ಆಸ್ತಿ ಪೋಲು! 

ಸಭಾತ್ಯಾಗದ ಬಳಿಕ ಎಂಎಲ್ಸಿ ಭೋಜೇಗೌಡ ಡಿಸಿಸಿ ಬ್ಯಾಂಕಿನ ಎಂಡಿಯನ್ನು ತೀವ್ರ ತರಾಟೆಗೆತ್ತಿಕೊಂಡರು. ಡಿಸಿಸಿ ಬ್ಯಾಂಕು ಇರೋದು ರೈತರಿಗಾಗಿ. ಆದರೆ ಮಂಗಳೂರಿನ ಡಿಸಿಸಿ ಬ್ಯಾಂಕಿನಿಂದ ದೊಡ್ಡ ಬಂಡವಾಳ ಶಾಹಿಗಳಿಗೇ 50 ಶೇಕಡಕ್ಕಿಂತ ಹೆಚ್ಚು ಸಾಲ ಹೋಗುತ್ತಿದೆ. ರೈತರಿಗೆ ಶೂನ್ಯ ಬಡ್ಡಿ ಸಾಲವನ್ನು 3 ಲಕ್ಷದಿಂದ 5 ಲಕ್ಷಕ್ಕೆ ಏರಿಸಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ರೈತರಿಗೆ ಬಡ್ಡಿ ರಹಿತ ಸಾಲದ ಪ್ರಮಾಣ ಹೆಚ್ಚಿದೆಯೇ ಎಂದು ಪ್ರಶ್ನಿಸಿದರು. ಡಿಸಿಸಿ ಬ್ಯಾಂಕ್ ಎಂಡಿ ಗೋಪಿನಾಥ ಭಟ್ ಸಮಜಾಯಿಷಿ ನೀಡಲು ಯತ್ನಿಸಿದರೂ, 3 ಲಕ್ಷಕ್ಕಿಂತ ಹೆಚ್ಚು ಸಾಲ ನೀಡಿದ ಬಗ್ಗೆ ಅಂಕಿ ಅಂಶ ಇದೆಯೇ ಎಂದು ಭೋಜೇಗೌಡ ಕೇಳಿದರು. ಅಧಿಕಾರಿಯಲ್ಲಿ ಉತ್ತರ ಇರಲಿಲ್ಲ.

ಡಿಸಿಸಿ ಬ್ಯಾಂಕಿನ ಅಧ್ಯಕ್ಷರು ಸೇರಿದಂತೆ ಪ್ರಮುಖ ಸದಸ್ಯರೇ ರಿಯಲ್ ಎಸ್ಟೇಟ್ ನಡೆಸುತ್ತಿದ್ದಾರೆ ಎಂದು ಭೋಜೇಗೌಡರು ಸಭೆಯ ಗಮನಕ್ಕೆ ತಂದಾಗ, ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಎಷ್ಟು ರೈತರಿಗೆ ಸಾಲ ಕೊಟ್ಟಿದ್ದೀರಿ ಎನ್ನುವ ಬಗ್ಗೆ ಜಿಲ್ಲಾಧಿಕಾರಿಗೆ ವರದಿ ನೀಡುವಂತೆ ಡಿಸಿಸಿ ಬ್ಯಾಂಕ್ ಅಧಿಕಾರಿಗೆ ಸೂಚನೆ ನೀಡಿದರು. ಸಭೆಯಲ್ಲಿ ಪೊಲೀಸ್ ಕಮಿಷನರ್ ಅನುಪಮ್ ಅಗರ್ವಾಲ್, ಎಸ್ಪಿ ಯತೀಶ್, ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್, ಜಿಪಂ ಸಿಇಓ ಆನಂದ್ ಉಪಸ್ಥಿತರಿದ್ದರು.

Mangalore BJP leaders slam Incharge Minister Dinesh Gundurao, move out of meeting. Funds are being released for the development of other districts but why not for Mangalore questioned leaders.