Harish Poonja, Mangalore, kabaddi association: ಕಬಡ್ಡಿ ಅಸೋಸಿಯೇಶನ್ನಿಗೆ ನೂರು ಚದರಡಿ ಕಚೇರಿಯನ್ನೂ ಮಾಡಿಕೊಳ್ಳಲು ಆಗಿಲ್ಲ, ಮನೆಯನ್ನೇ ಅಧಿಕೃತ ಕಚೇರಿ ಮಾಡಿ 15 ವರ್ಷಗಳಿಂದ ಸರ್ವಾಧಿಕಾರ ನಡೆಸುತ್ತಿದ್ದಾರೆ ; ರಾಕೇಶ್ ಮಲ್ಲಿ ವಿರುದ್ಧ ಹರೀಶ್ ಪೂಂಜ ಗರಂ  

27-12-24 08:41 pm       Mangalore Correspondent   ಕರಾವಳಿ

ದಕ್ಷಿಣ ಕನ್ನಡ ಜಿಲ್ಲಾ ಅಮೆಚೂರ್ ಕಬಡ್ಡಿ ಅಸೋಸಿಯೇಶನ್ ಅವ್ಯವಸ್ಥೆ ಮತ್ತು ಅಲ್ಲಿಗೆ ಆಡಳಿತಾಧಿಕಾರಿ ನೇಮಕ ಮಾಡುವಂತೆ ಅಧಿವೇಶನದಲ್ಲಿ ಪ್ರಸ್ತಾಪ ಮಾಡಿದ್ದೆ. ಆದರೆ ಅಸೋಸಿಯೇಶನ್ ಅಧ್ಯಕ್ಷ ರಾಕೇಶ್ ಮಲ್ಲಿ ನನಗೆ ಕಬಡ್ಡಿ ಸ್ಟೇಡಿಯಂ ಮಾಡುವುದಕ್ಕೆ ಹೇಳಿದ್ದಾರೆ.

ಮಂಗಳೂರು, ಡಿ.27: ದಕ್ಷಿಣ ಕನ್ನಡ ಜಿಲ್ಲಾ ಅಮೆಚೂರ್ ಕಬಡ್ಡಿ ಅಸೋಸಿಯೇಶನ್ ಅವ್ಯವಸ್ಥೆ ಮತ್ತು ಅಲ್ಲಿಗೆ ಆಡಳಿತಾಧಿಕಾರಿ ನೇಮಕ ಮಾಡುವಂತೆ ಅಧಿವೇಶನದಲ್ಲಿ ಪ್ರಸ್ತಾಪ ಮಾಡಿದ್ದೆ. ಆದರೆ ಅಸೋಸಿಯೇಶನ್ ಅಧ್ಯಕ್ಷ ರಾಕೇಶ್ ಮಲ್ಲಿ ನನಗೆ ಕಬಡ್ಡಿ ಸ್ಟೇಡಿಯಂ ಮಾಡುವುದಕ್ಕೆ ಹೇಳಿದ್ದಾರೆ. ಇವರು 15 ವರ್ಷದಲ್ಲಿ ಕಬಡ್ಡಿ ಅಸೋಸಿಯೇಶನ್ನಲ್ಲಿ ಸರ್ವಾಧಿಕಾರ ನಡೆಸುತ್ತಿದ್ದು ಇವರ ಯೋಗ್ಯತೆಗೆ, ಕ್ರೀಡಾಳುಗಳಿಗೆ ಪ್ರೋತ್ಸಾಹ ಕೊಡುವುದು ಬಿಡಿ ನೂರು ಚದರಡಿಯ ಕಚೇರಿಯನ್ನೂ ಮಾಡಿಕೊಳ್ಳಲು ಆಗಿಲ್ಲ. ರಾಕೇಶ್ ಮಲ್ಲಿ ಅಧ್ಯಕ್ಷರಾಗಿ ಕಬಡ್ಡಿಗೆ ಕೊಟ್ಟ ಕೊಡುಗೆಯೇನು ಎಂದು ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಪ್ರಶ್ನಿಸಿದ್ದಾರೆ.

ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ರಾಕೇಶ್ ಮಲ್ಲಿ ಕಬಡ್ಡಿ ಅಸೋಸಿಯೇಶನ್ ಸದಸ್ಯತ್ವ ಇಲ್ಲದೇ ಇದ್ದರೂ 2009ರಲ್ಲಿ ಉಪಾಧ್ಯಕ್ಷ ಸ್ಥಾನಕ್ಕೇರಿದ್ದರು. ಇವರು ಸದಸ್ಯತ್ವ ಪಡೆದುಕೊಂಡಿದ್ದು 2012ರಲ್ಲಿ. ಆನಂತರ ನಿರಂತರವಾಗಿ ಅಧ್ಯಕ್ಷ ಸ್ಥಾನದಲ್ಲಿ ಮುಂದುವರಿದಿದ್ದಾರೆ. ಪ್ರಧಾನ ಕಾರ್ಯದರ್ಶಿ ಮನೆಯನ್ನೇ ಅಧಿಕೃತ ಕಚೇರಿ ಮಾಡಿಕೊಂಡಿದ್ದಾರೆ. ಶಾಸಕರು, ಎಂಎಲ್ಸಿಗಳು ತಮ್ಮ ಅನುದಾನದಲ್ಲಿ ತೆಗೆಸಿಕೊಟ್ಟ ಕಬಡ್ಡಿ ಮ್ಯಾಟ್ ಗಳನ್ನು ಇಟ್ಟುಕೊಳ್ಳಲು ಜಾಗ ಇಲ್ಲದೆ ಕ್ರೀಡಾ ಇಲಾಖೆಗೆ ಕೊಟ್ಟಿದ್ದಾರೆ. ಕ್ರೀಡಾ ಇಲಾಖೆಯಿಂದ ಅವನ್ನೇ ಬಾಡಿಗೆಗೆ ಕೊಡುತ್ತಿದ್ದು ಕ್ರೀಡಾಪಟುಗಳು ಬೆಲೆ ತೆರುತ್ತಿದ್ದಾರೆ.  

ಕಬಡ್ಡಿ ಅಮೆಚೂರ್ ಸಂಸ್ಥೆಯು ಕೋ ಆಪರೇಟಿವ್ ಕಾಯ್ದೆಯಡಿ ರಿಜಿಸ್ಟರ್ ಆಗಿದ್ದು, ಅಲ್ಲಿ ಅವ್ಯವಹಾರ ಆಗಿರುವುದನ್ನು ಜಿಲ್ಲಾ ಸಹಕಾರಿ ಇಲಾಖೆಯ ಉಪ ನಿಬಂಧಕರು ತನಿಖೆ ನಡೆಸಿ ವರದಿ ನೀಡಿದ್ದಾರೆ. ವರದಿಯಲ್ಲಿ ಆಡಳಿತಾಧಿಕಾರಿ ನೇಮಿಸಲು ಶಿಫಾರಸು ಮಾಡಿದ್ದಾರೆ. ಅಲ್ಲದೆ, 2021-22ರಲ್ಲಿ 150 ಮಂದಿ ಸದಸ್ಯರಲ್ಲಿ ತಲಾ ಒಂದು ಸಾವಿರದಂತೆ ಸದಸ್ಯತನ ಸಂಗ್ರಹಿಸಿದ್ದು, ಅದನ್ನು ಬ್ಯಾಂಕಿಗೆ ಕಟ್ಟದೆ ಮೋಸ ಮಾಡಿದ್ದಾರೆ. ಪ್ರಶ್ನೆ ಮಾಡಿದ ಬಳಿಕ 2023ರಲ್ಲಿ 36 ಸಾವಿರ ಮಾತ್ರ ಕಟ್ಟಿದ್ದಾರೆ. ನಕಲಿ ದಾಖಲೆ, ಸಹಿಗಳನ್ನು ಬಳಸಿ ಕಬಡ್ಡಿ ಆಟಗಾರ ಅಲ್ಲದವರನ್ನು ಸದಸ್ಯರನ್ನಾಗಿ ಮಾಡಿದ್ದಾರೆ. ನಿಮ್ಮ ಸರ್ವಾಧಿಕಾರದ ಆಡಳಿತವನ್ನು ಒಪ್ಪಿಕೊಳ್ಳಲು ಕ್ರೀಡಾಳುಗಳು ತಯಾರಿಲ್ಲ ಎಂದು ಹರೀಶ್ ಪೂಂಜ ಹೇಳಿದರು.

ದಕ್ಷಿಣ ಕನ್ನಡ ಜಿಲ್ಲೆಯ ಪ್ರತಿಭಾನ್ವಿತ ಕಬಡ್ಡಿ ಆಟಗಾರರಿಗೆ ರಾಜ್ಯ ಮತ್ತು ರಾಷ್ಟ್ರೀಯ ತಂಡದಲ್ಲಿ ಅವಕಾಶ ಸಿಗುತ್ತಿಲ್ಲ. ರಾಷ್ಟ್ರ ಮಟ್ಟದಲ್ಲಿ ಪರೀಕ್ಷೆ ಬರೆದು ತೇರ್ಗಡೆಯಾಗಿರುವ ಅನೇಕ ತೀರ್ಪುಗಾರರು, ಕೋಚ್ ಗಳಿದ್ದಾರೆ. ಅವರಿಗೆ ಪ್ರೊ ಕಬಡ್ಡಿ ಲೀಗ್ ನಂತಹ ಪಂದ್ಯಗಳಲ್ಲಿ ಅವಕಾಶ ಸಿಗುತ್ತಿಲ್ಲ. ಇದನ್ನು ಜಿಲ್ಲಾ ಕಬಡ್ಡಿ ಅಮೆಚೂರ್ ಸಂಸ್ಥೆಯವರು ಮಾಡಬೇಕಲ್ಲದೆ ಬೇರೆ ಯಾರು ಮಾಡಬೇಕು. ಮಂಗಳೂರು ವಿವಿಯ ತಂಡ 35 ವರ್ಷಗಳ ಬಳಿಕ ರಾಷ್ಟ್ರ ಮಟ್ಟದಲ್ಲಿ ಚಾಂಪ್ಯನ್ ಆಗಿದೆ, ಇವರನ್ನು ಯಾಕೆ ರಾಜ್ಯ ತಂಡಕ್ಕೂ ನೇಮಿಸಿಕೊಳ್ಳುತ್ತಿಲ್ಲ ಎಂದು ಪ್ರಶ್ನಿಸಿದ ಹರೀಶ್ ಪೂಂಜ, ಕಬಡ್ಡಿ ಅಸೋಸಿಯೇಶನ್ ಒಳಗಿನ ಅವ್ಯವಸ್ಥೆ ಸರಿಯಾಗಬೇಕು ಎಂದಷ್ಟೇ ನನ್ನ ಕಾಳಜಿ. ಜಿಲ್ಲೆಯಲ್ಲಿ ಆಳ್ವಾಸ್, ವಿವೇಕಾನಂದ ರೀತಿಯ ಶಿಕ್ಷಣ ಸಂಸ್ಥೆಗಳಿಂದ ಅಥವಾ ಕೆಲವು ಸಂಘ ಸಂಸ್ಥೆಗಳಿಂದಾಗಿ ಉತ್ತಮ ಆಟಗಾರರು ಮೇಲೆ ಬಂದಿದ್ದಾರೆ ವಿನಾ ಜಿಲ್ಲಾ ಕಬಡ್ಡಿ ಅಸೋಸಿಯೇಶನ್ನಿಂದ ಅಲ್ಲ. ಇವರಿಂದ ಯಾವುದೇ ಕ್ರೀಡಾಳುಗಳಿಗೆ ಪ್ರೋತ್ಸಾಹ ಸಿಗುತ್ತಿಲ್ಲ ಎಂದು ಹೇಳಿದರು.

ಹಿಂದೆಲ್ಲಾ ಮುಕ್ತ ಕಬಡ್ಡಿ ಟೂರ್ನಮೆಂಟುಗಳಲ್ಲಿ 50-60 ತಂಡಗಳು ಬರುತ್ತಿದ್ದವು. ಈಗ 10-20ಕ್ಕೆ ಈ ಸಂಖ್ಯೆ ಇಳಿದಿದೆ. ಇದಕ್ಕೆ ಪ್ರೋತ್ಸಾಹ ಇಲ್ಲದಿರುವುದೇ ಕಾರಣ. ಮೊದಲ ಬಾರಿಗೆ ಶಾಸಕನಾಗಿದ್ದಾಗಲೇ ಕೆಪಿಟಿಸಿಎಲ್, ಮೆಸ್ಕಾಂ, ಹೆಸ್ಕಾಂನಂತಹ ಸಂಸ್ಥೆಗಳಲ್ಲಿ ಕಬಡ್ಡಿ ತಂಡಗಳನ್ನು ಮಾಡುವ ಬಗ್ಗೆ ಪ್ರಯತ್ನ ಪಟ್ಟಿದ್ದೆ. ಕ್ರೀಡಾ ಕೋಟಾದಲ್ಲಿ ಕೆಲಸ ಕೊಡಿಸಲು ಹೇಳಿದ್ದೆ. ಬೆಳ್ತಂಗಡಿಯಲ್ಲಿ ಎರಡು ಕಬಡ್ಡಿ ಮ್ಯಾಟ್ ತೆಗೆಸಿಕೊಟ್ಟು ಕ್ರೀಡಾ ಭಾರತಿ ಮೂಲಕ ಅದರ ನಿರ್ವಹಣೆ ಮಾಡಿಸುತ್ತಿದ್ದೇನೆ. ಬೆಳ್ತಂಗಡಿಯಲ್ಲಿ 12 ಎಕರೆ ಜಾಗ ಗುರುತಿಸಿ ಇಂಡೋರ್ ಸ್ಟೇಡಿಯಂ ಮಾಡುವುದಕ್ಕೆ ಪ್ರಯತ್ನಿಸಿದ್ದೆ. ಈಗಿನ ಸರ್ಕಾರದಿಂದ ಅನುದಾನ ಸಿಗಬಹುದೆಂಬ ನಿರೀಕ್ಷೆಯಲ್ಲಿದ್ದೇನೆ. ಹಿಂದೆ ಯುನಿವರ್ಸಿಟಿಯಲ್ಲಿದ್ದಾಗ ಕಬಡ್ಡಿ ಆಟಗಾರನಾಗಿದ್ದರಿಂದ ಮತ್ತು ಕಬಡ್ಡಿ ಮೇಲಿನ ಪ್ರೀತಿಯಿಂದಾಗಿ ಅಸೋಸಿಯೇಶನ್ ಬಗ್ಗೆ ಪ್ರಶ್ನೆ ಮಾಡಿದ್ದೆ ವಿನಾ ರಾಕೇಶ್ ಮಲ್ಲಿ ಬಗ್ಗೆ ನನಗೇನೂ ದ್ವೇಷ ಇಲ್ಲ ಎಂದರು.

ಸಹಕಾರಿ ಇಲಾಖೆ ನಿಬಂಧಕರ ತನಿಖಾ ವರದಿ ಸಹಕಾರಿ ಸಚಿವರ ಟೇಬಲ್ ಮುಟ್ಟಿದೆ, ಮೊನ್ನೆ ಅಧಿವೇಶನದಲ್ಲಿ ಪ್ರಶ್ನೆ ಮಾಡಿದಾಗ, ಪರಿಶೀಲಿಸುತ್ತೇನೆ ಎಂದು ಸಚಿವರು ತಿಳಿಸಿದ್ದರು. ಒಂದು ವರ್ಷದ ಹಿಂದೆಯೇ ವರದಿ ಹೋಗಿದ್ದರೂ ಅದು ಸಚಿವರ ಬಳಿಗೆ ತಲುಪದಂತೆ ಕಾಣದ ಕೈಗಳು ಕೆಲಸ ಮಾಡಿದ್ದವು. ಆಡಳಿತಾಧಿಕಾರಿ ನೇಮಕ ಮಾಡುವಂತೆ ಆಗ್ರಹ ಮಾಡಿದ್ದೇನೆ, ಸಚಿವರು ಈ ಬಗ್ಗೆ ಗಮನ ಹರಿಸುತ್ತಾರೆಂಬ ವಿಶ್ವಾಸ ಇದೆ ಎಂದು ಹರೀಶ್ ಪೂಂಜ ಹೇಳಿದರು.

Holding the District Amateur Kabaddi Association responsible for poor representation of players from Dakshina Kannada in State and national level kabaddi tournaments, Belthangady MLA Harish Poonja, a former Kabaddi player, expressed the need for the State government to restructure the administration of district kabaddi association, which is mired with charges of maladministration and corruption.