Mangalore, Ration cards, Koraga families: ಅನರ್ಹ ಪಡಿತರ ಪತ್ತೆಗೆ ಕಾರ್ಯಾಚರಣೆ ನಡುವಲ್ಲೇ ಬಡಕಟ್ಟು ಕುಟುಂಬಗಳಿಗೆ ಬಿಪಿಎಲ್ ಕಾರ್ಡ್ ವಿತರಣೆ ; ಆಹಾರ ಇಲಾಖೆ ಅಧಿಕಾರಿಗಳ ಕ್ಷಿಪ್ರ ಕಾರ್ಯಾಚರಣೆ, ದ.ಕ.ದಲ್ಲಿ 262, ಉಡುಪಿಯಲ್ಲಿ 14 ಕೊರಗ ಕುಟುಂಬಗಳಿಗೆ ರೇಶನ್ ಕಾರ್ಡ್  

31-12-24 05:52 pm       Mangalore Correspondent   ಕರಾವಳಿ

ದ.ಕ. ಜಿಲ್ಲೆಯಲ್ಲಿ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಯ ಅಧಿಕಾರಿಗಳು ಕ್ಷಿಪ್ರ ಕಾರ್ಯಾಚರಣೆ ಕೈಗೊಂಡಿದ್ದು ಆಮೂಲಕ 262 ಕೊರಗ ಕುಟುಂಬಗಳಿಗೆ ಬಿಪಿಎಲ್ ರೇಶನ್ ಕಾರ್ಡ್ ನೀಡಿದ್ದಾರೆ. 

ಮಂಗಳೂರು, ಡಿ.31: ರಾಜ್ಯದಲ್ಲಿ ಅನರ್ಹ ಬಿಪಿಎಲ್ ಕಾರ್ಡ್ ಪತ್ತೆಗೆ ಕಾರ್ಯಾಚರಣೆ ನಡೆಯುತ್ತಿರುವ ಸಂದರ್ಭದಲ್ಲೇ ವಿಶೇಷ ದುರ್ಬಲ ಬುಡಕಟ್ಟು ಗುಂಪು(ಪಿವಿಟಿಜಿ)ಗಳಾಗಿ ಗುರುತಿಸಿಕೊಂಡಿರುವ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯ ಕೊರಗ ಹಾಗೂ ಜೇನು ಕುರುಬ ಕುಟುಂಬಗಳಿಗೆ ರೇಶನ್‌ ಕಾರ್ಡ್ ವಿತರಣೆ ಮಾಡಲಾಗಿದೆ. ಕಳೆದ ಒಂದು ವಾರದ ಅವಧಿಯಲ್ಲಿ ದ.ಕ. ಜಿಲ್ಲೆಯಲ್ಲಿ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಯ ಅಧಿಕಾರಿಗಳು ಕ್ಷಿಪ್ರ ಕಾರ್ಯಾಚರಣೆ ಕೈಗೊಂಡಿದ್ದು ಆಮೂಲಕ 262 ಕೊರಗ ಕುಟುಂಬಗಳಿಗೆ ಬಿಪಿಎಲ್ ರೇಶನ್ ಕಾರ್ಡ್ ನೀಡಿದ್ದಾರೆ. 

ಇದೇ ವೇಳೆ, ಉಡುಪಿ ಜಿಲ್ಲೆಯಲ್ಲಿ 14 ಕೊರಗ ಕುಟುಂಬಗಳಿಗೆ ರೇಶನ್ ಕಾರ್ಡ್ ವಿತರಣೆ ಮಾಡಲಾಗಿದೆ. ಅವನತಿಯ ಅಂಚಿನಲ್ಲಿರುವ ಬುಡಕಟ್ಟು ಸಮುದಾಯಗಳಿಗೆ ವಿಶೇಷ ಒತ್ತು ನೀಡಿ ಅಗತ್ಯ ಸೌಲಭ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಪ್ರಧಾನ ಮಂತ್ರಿಗಳ ವಿಶೇಷ ದುರ್ಬಲ ಬುಡಕಟ್ಟು ಗುಂಪುಗಳ ಯೋಜನೆಯಡಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಇದಕ್ಕಾಗಿ ಬುಡಕಟ್ಟು ಸಮುದಾಯಗಳಿಗೆ ಆಧಾರ್‌, ರೇಶನ್ ಕಾರ್ಡ್ ಮೊದಲಾದ ಸೌಲಭ್ಯಗಳನ್ನು ಒದಗಿಸುವುದು ಅವಶ್ಯವಾಗಿದೆ. 

ಕರ್ನಾಟಕ ರಾಜ್ಯದಲ್ಲಿ ವಿಶೇಷ ದುರ್ಬಲ ಬುಡಕಟ್ಟು ಸಮುದಾಯಗಳಾಗಿ ಕೇಂದ್ರ ಸರಕಾರದಿಂದ ಗುರುತಿಸಲ್ಪಟ್ಟಿರುವ ಕೊರಗ ಹಾಗೂ ಜೇನು ಕುರುಬ ಕುಟುಂಬಗಳಿಗೆ ಆದ್ಯತೆ ನೆಲೆಯಲ್ಲಿ ಹೊಸ ರೇಶನ್ ಕಾರ್ಡ್‌ಗೆ ಅರ್ಜಿ ಸಲ್ಲಿಕೆ ಹಾಗೂ ವಿತರಣೆ ಕಾರ್ಯ ಡಿ.24ರಿಂದ ಆರಂಭಗೊಂಡಿತ್ತು. ಆಹಾರ ಇಲಾಖೆಯ ಮೂಲಕ ಡಿ.27ರ ವರೆಗೆ ನಡೆದ ಕ್ಷಿಪ್ರ ಕಾರ್ಯಾಚರಣೆಯಲ್ಲಿ ದ.ಕ. ಜಿಲ್ಲೆಯಲ್ಲಿ 262 ಹಾಗೂ ಉಡುಪಿಯಲ್ಲಿ 14 ಕೊರಗ ಕುಟುಂಬಗಳಿಗೆ ಬಿಪಿಎಲ್ ರೇಶನ್ ಕಾರ್ಡ್ ವಿತರಣೆ ಮಾಡಲಾಗಿದೆ. 

ಅರ್ಜಿ ಸಲ್ಲಿಕೆಗೂ ಸುಮಾರು 15 ದಿನಗಳ ಮೊದಲು ಐಟಿಡಿಪಿ ಇಲಾಖೆಯು ತಾಲೂಕು ಮಟ್ಟದಲ್ಲಿ ರೇಶನ್ ಕಾರ್ಡ್ ಹೊಂದಿರದ ಕೊರಗ ಕುಟುಂಬಗಳ ಅಗತ್ಯ ಅಂಕಿ ಅಂಶಗಳನ್ನು (ಹೆಸರು, ಜಾತಿ ಹಾಗೂ ಆದಾಯ ಪ್ರಮಾಣ ಪತ್ರ ಹಾಗೂ ಆಧಾರ್ ಕಾರ್ಡ್) ಸಂಗ್ರಹಿಸಿ ಆಹಾರ ಇಲಾಖೆಗೆ ಸಲ್ಲಿಸಿತ್ತು. ಈ ಅಂಕಿ ಅಂಶಗಳನ್ನು ಇಲಾಖೆಯು ಕೇಂದ್ರ ಕಚೇರಿಗೆ ಕಳುಹಿಸಿ ಮ್ಯಾಪಿಂಗ್ ಕಾರ್ಯ ನಡೆಸಲಾಗಿತ್ತು. ಬಳಿಕ ಡಿ.24ರಿಂದ ಅರ್ಹ ಫಲಾನುಭವಿಗಳಿಂದ ಆನ್‌ಲೈನ್ ಅರ್ಜಿಯನ್ನು ಪಡೆದು ಕಾರ್ಡ್ ವಿತರಣೆ ಕಾರ್ಯ ನಡೆಸಲಾಗಿದೆ ಎಂದು ದ.ಕ. ಮತ್ತು ಉಡುಪಿ ಜಿಲ್ಲಾ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಯ ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ರಾಜ್ಯದಲ್ಲಿ ವಿಶೇಷ ದುರ್ಬಲ ಬುಡಕಟ್ಟು ಗುಂಪುಗಳಡಿ ಗುರುತಿಸಲ್ಪಟ್ಟಿರುವ ಜೇನು ಕುರುಬ ಸಮುದಾಯ ಹೊಂದಿರುವ ಮೈಸೂರು, ಕೊಡಗು ಹಾಗೂ ಚಾಮರಾಜನಗರ ವ್ಯಾಪ್ತಿಯಲ್ಲಿಯೂ ಅರ್ಹ ಫಲಾನುಭವಿಗಳಿಗೆ ರೇಶನ್ ಕಾರ್ಡ್ ವಿತರಣೆ ಕಾರ್ಯ ನಡೆಯುತ್ತಿದೆ. ಜೇನುಕುರುಬ ಹಾಗೂ ಕೊರಗ ಸಮುದಾಯದ ಒಟ್ಟು 1670 ಪಿವಿಟಿಜಿ ಕುಟುಂಬಳಿಗೆ ಬಿಪಿಎಲ್ ರೇಶನ್ ಕಾರ್ಡ್ ಒದಗಿಸಲು ರಾಜ್ಯದಲ್ಲಿ ಕ್ರಮ ವಹಿಸಲಾಗಿದೆ. ಇದರಲ್ಲಿ ಮೈಸೂರಿನಲ್ಲಿ 365, ಕೊಡಗಿನಲ್ಲಿ 342 ಹಾಗೂ ಚಾಮರಾಜನಗರದಲ್ಲಿ 516 ಜೇನು ಕುರುಬ ಕುಟುಂಬಗಳು ಸೇರಿವೆ. 

ದ.ಕ. ಜಿಲ್ಲೆಯಲ್ಲಿ ಐಟಿಡಿಪಿಯಿಂದ ರೇಶನ್ ಕಾರ್ಡ್‌ ಹೊಂದಿಲ್ಲದ 361 ಕೊರಗ ಕುಟುಂಬಗಳನ್ನು ಗುರುತಿಸಲಾಗಿತ್ತು. 262 ಕುಟುಂಬಗಳಿಗೆ ಈಗಾಗಲೇ ರೇಶನ್ ಕಾರ್ಡ್ ವಿತರಣೆ ಮಾಡಲಾಗಿದೆ. ಉಳಿದ 99 ಫಲಾನುಭವಿಗಳ ಪೈಕಿ ಕೆಲವು ಅರ್ಜಿಗಳಲ್ಲಿ ಜಾತಿ ಪ್ರಮಾಣ ಪತ್ರ, ಆದಾಯ ಪ್ರಮಾಣ ಪತ್ರದ ತಾಂತ್ರಿಕ ದೋಷದಿಂದಾಗಿ ರೇಶನ್ ಕಾರ್ಡ್ ಅರ್ಜಿ ಸಲ್ಲಿಕೆಗೆ ತೊಂದರೆಯಾಗಿದೆ. ಅವುಗಳನ್ನು ಸರಿಪಡಿಸಿ ಜನವರಿ 4ರ ವರೆಗೆ ಈ ಫಲಾನುಭವಿಗಳಿಗೆ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಯ ಉಪ ನಿರ್ದೇಶಕಿ ಡಾ. ಹೇಮಲತಾ ತಿಳಿಸಿದ್ದಾರೆ.‌

The department of food, civil supplies, and consumer affairs in Dakshina Kannada, in a rapid drive, provided ration cards to 262 Koraga families, who come under the Particularly Vulnerable Tribal Groups (PVTG).