Anil Lobo Arrest, Mcc Bank, Jail: ಎಂಸಿಸಿ ಬ್ಯಾಂಕಿನ ಅನಿಲ್ ಲೋಬೊಗಿಲ್ಲ ಜಾಮೀನು ; ಹೊಸ ವರ್ಷ ಬಂದರೂ ಜೈಲೇ ಗತಿ ! ಕಾನೂನು ಕುಣಿಕೆ ಇನ್ನಷ್ಟು ಬಿಗಿ

31-12-24 10:40 pm       Mangalore Correspondent   ಕರಾವಳಿ

ಕ್ರಿಸ್ತಿಯನ್ನರ ಪ್ರಕಾರ ಜನವರಿ 1ರ ಹೊಸ ವರ್ಷಕ್ಕೆ ಸಡಗರ. ಡಿ.31ರಂದು ವಿಶೇಷ ಪೂಜೆ ಮತ್ತು ಪವಿತ್ರ ದಿನ. ಕೆಥೋಲಿಕ್ ಕ್ರೈಸ್ತರ ಎಂಸಿಸಿ ಬ್ಯಾಂಕಿನ ಅಧ್ಯಕ್ಷ ಅನಿಲ್ ಲೋಬೊಗೆ ಮಾತ್ರ ಹೊಸ ವರ್ಷವೂ ಕಹಿಯಾಗುವ ಸಾಧ್ಯತೆ ಹೆಚ್ಚಿದೆ.

ಮಂಗಳೂರು, ಡಿ.31: ಕ್ರಿಸ್ತಿಯನ್ನರ ಪ್ರಕಾರ ಜನವರಿ 1ರ ಹೊಸ ವರ್ಷಕ್ಕೆ ಸಡಗರ. ಡಿ.31ರಂದು ವಿಶೇಷ ಪೂಜೆ ಮತ್ತು ಪವಿತ್ರ ದಿನ. ಕೆಥೋಲಿಕ್ ಕ್ರೈಸ್ತರ ಎಂಸಿಸಿ ಬ್ಯಾಂಕಿನ ಅಧ್ಯಕ್ಷ ಅನಿಲ್ ಲೋಬೊಗೆ ಮಾತ್ರ ಹೊಸ ವರ್ಷವೂ ಕಹಿಯಾಗುವ ಸಾಧ್ಯತೆ ಹೆಚ್ಚಿದೆ. ಸಾಲಗಾರನ ಆತ್ಮಹತ್ಯೆ ಪ್ರಕರಣದಲ್ಲಿ ಜಾಮೀನು ದೊರೆತಿಲ್ಲ. ಡಿ.31ರಂದು ನಡೆದ ಜಾಮೀನು ಅರ್ಜಿ ವಿಚಾರಣೆಯನ್ನು ಕೋರ್ಟ್ ಮತ್ತೆ ಜನವರಿ 4ಕ್ಕೆ ಮುಂದೂಡಿದೆ.

ಮಂಗಳೂರಿನ 3ನೇ ಹೆಚ್ಚುವರಿ ಜಿಲ್ಲಾ ಸೆಶನ್ಸ್ ನ್ಯಾಯಾಲಯದಲ್ಲಿ ಜಾಮೀನು ಅರ್ಜಿ ವಿಚಾರಣೆ ನಡೆಯುತ್ತಿದ್ದು, ಡಿ.30ರಂದು ವಿಚಾರಣೆ ನಡೆದು ಹೆಚ್ಚುವರಿ ಅರ್ಜಿ ಸಲ್ಲಿಕೆಯಾಗಿದ್ದರಿಂದ 31ಕ್ಕೆ ಮುಂದೂಡಿಕೆಯಾಗಿತ್ತು. ಮನೋಹರ್ ಪಿರೇರಾ ಕುಟುಂಬದ ಕಡೆಯಿಂದ ಅನಿಲ್ ಲೋಬೊಗೆ ಜಾಮೀನು ನೀಡಬಾರದು, ಜಾಮೀನು ನೀಡಿದರೆ ಸಾಕ್ಷ್ಯ ನಾಶ ಮಾಡುತ್ತಾನೆಂದು ಅರ್ಜಿ ಸಲ್ಲಿಕೆಯಾಗಿದೆ. ಈ ಅರ್ಜಿಯನ್ನು ಪರಿಗಣಿಸಬಾರದೆಂದು ಪ್ರತಿವಾದಿ ವಕೀಲರು ವಾದಿಸಿದ್ದರೆ, ಇತ್ತ ಅರ್ಜಿ ಪರಿಗಣಿಸಬೇಕೆಂದು ಕುಟುಂಬದ ಕಡೆಯ ವಕೀಲರು ವಾದಿಸಿದ್ದಾರೆ.

ಡಿ.31ರ ಮಂಗಳವಾರ ಅರ್ಜಿಯನ್ನು ಪರಿಗಣಿಸಿದ ಕೋರ್ಟ್ ವಾದವನ್ನು ಆಲಿಸಲು ಒಪ್ಪಿಕೊಂಡಿದ್ದು ಜನವರಿ 4ಕ್ಕೆ ಮುಂದೂಡಿದೆ. ಇದೇ ವೇಳೆ, ಪೊಲೀಸರು ಪ್ರಕರಣದ ಸಾಕ್ಷ್ಯ ಸಂಗ್ರಹಿಸಲು ಮುಂದಾಗಿದ್ದು, ಆರೋಪಿಗೆ ಜಾಮೀನು ನೀಡದಂತೆ ಒತ್ತಡ ಹೇರುವ ಸಾಧ್ಯತೆಯಿದೆ. ಹೀಗಾಗಿ ಆರೋಪಿ ಅನಿಲ್ ಲೋಬೊಗೆ ಒಂದೆರಡು ವಾರಕ್ಕೆ ಜಾಮೀನು ಸಿಗುವ ಸಾಧ್ಯತೆ ಕಡಿಮೆ ಎಂದೇ ಹೇಳಲಾಗುತ್ತಿದೆ. ಇತ್ತ ಅನಿಲ್ ಲೋಬೊಗೆ ಸರ್ಜರಿ ಅಗತ್ಯವಿದೆಯೆಂದು ನ್ಯಾಯಾಲಯಕ್ಕೆ ಆತನ ಪರ ವಕೀಲರು ಅರ್ಜಿ ಸಲ್ಲಿಸಿದ್ದು, ಅದರ ವಿಚಾರಣೆಯೂ ನಡೆದಿದೆ. ಇದೇ ವೇಳೆ, ಆರೋಪಿ ಅನಿಲ್ ಲೋಬೊ ಪರವಾಗಿ ಕೆಲವು ಪ್ರಭಾವಿಗಳು ಪೊಲೀಸರಿಗೆ ಒತ್ತಡ ಹೇರುತ್ತಿದ್ದಾರೆ ಎನ್ನುವ ಮಾಹಿತಿಯೂ ಇದೆ.

Mcc Bank Anil Lobo arrest, Bail plea rejected again by Mangalore court, New year 2025 in Jail. The Mangalore court has rejected anil Lobo Bail plea in suicide case of Manohar Pereira from Fermai in Mangalore.