Anil Lobo, MCC Bank, Robert Rosario, Mangalore: ಅನಿಲ್ ಲೋಬೊ ಜೈಲು ಪಾಲಾಗಿದ್ದರೂ ಖಾಸಗಿ ಆಸ್ಪತ್ರೆಯಲ್ಲಿ ಇರಿಸಿದ್ಯಾಕೆ ? ಆಸ್ಪತ್ರೆ ವೈದ್ಯರು ಅನಾರೋಗ್ಯದ ಬಗ್ಗೆ ದಾಖಲೆ ಮುಂದಿಡಲಿ ; ರಾಬರ್ಟ್ ರೊಜಾರಿಯೋ

02-01-25 03:16 pm       Mangalore Correspondent   ಕರಾವಳಿ

ಆತ್ಮಹತ್ಯೆಗೆ ಪ್ರಚೋದನೆ ಪ್ರಕರಣದಲ್ಲಿ ಎಂಸಿಸಿ ಬ್ಯಾಂಕ್ ಅಧ್ಯಕ್ಷ ಅನಿಲ್ ಲೋಬೊ ಜೈಲು ಪಾಲಾಗಿದ್ದರೂ, ಯೇನಪೋಯ ಆಸ್ಪತ್ರೆಯಲ್ಲಿ ದಾಖಲಾಗಿ ಏಸಿ ಕೊಠಡಿಯಲ್ಲಿ ಮಲಗಿದ್ದಾನೆ. ಆತನಿಗೆ ಜೈಲು ಪಾಲಾದ ಕೂಡಲೇ ಆಸ್ಪತ್ರೆಗೆ ದಾಖಲಿಸುವಷ್ಟು ದೊಡ್ಡ ಕಾಯಿಲೆ ಏನಿದೆ ಎನ್ನುವ ಬಗ್ಗೆ ಯೇನಪೋಯ ಆಸ್ಪತ್ರೆ ವೈದ್ಯರು ಆತನ ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡಬೇಕು.

ಮಂಗಳೂರು, ಜ.2: ಆತ್ಮಹತ್ಯೆಗೆ ಪ್ರಚೋದನೆ ಪ್ರಕರಣದಲ್ಲಿ ಎಂಸಿಸಿ ಬ್ಯಾಂಕ್ ಅಧ್ಯಕ್ಷ ಅನಿಲ್ ಲೋಬೊ ಜೈಲು ಪಾಲಾಗಿದ್ದರೂ, ಯೇನಪೋಯ ಆಸ್ಪತ್ರೆಯಲ್ಲಿ ದಾಖಲಾಗಿ ಏಸಿ ಕೊಠಡಿಯಲ್ಲಿ ಮಲಗಿದ್ದಾನೆ. ಆತನಿಗೆ ಜೈಲು ಪಾಲಾದ ಕೂಡಲೇ ಆಸ್ಪತ್ರೆಗೆ ದಾಖಲಿಸುವಷ್ಟು ದೊಡ್ಡ ಕಾಯಿಲೆ ಏನಿದೆ ಎನ್ನುವ ಬಗ್ಗೆ ಯೇನಪೋಯ ಆಸ್ಪತ್ರೆ ವೈದ್ಯರು ಆತನ ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡಬೇಕು. ವೆನ್ಲಾಕ್ ಸರಕಾರಿ ಆಸ್ಪತ್ರೆ ಇರುವಾಗ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಯಾಕೆ ಕೊಡಿಸುತ್ತಿದ್ದಾರೆಂದು ಹೇಳಬೇಕು ಎಂದು ಸಾಮಾಜಿಕ ಕಾರ್ಯಕರ್ತ ರಾಬರ್ಟ್ ರೊಜಾರಿಯೋ ಆಗ್ರಹಿಸಿದ್ದಾರೆ.

ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಆತ್ಮಹತ್ಯೆ ಮಾಡಿಕೊಂಡ ಮನೋಹರ್ ಪಿರೇರಾ ಅವರಿಂದ ಖಾಲಿ ಚೆಕ್ ಪಡೆದು ಅದನ್ನು ಡ್ರಾ ಮಾಡಿ 9 ಲಕ್ಷ ಹಣವನ್ನು ಪಡೆದಿದ್ದು ಯಾರೆಂದು ತನಿಖೆಯಾಗಬೇಕು. ಅನಿಲ್ ಲೋಬೊ, ಮೃತ ಮನೋಹರ್ ಪಿರೇರಾ, ಈ ಹಿಂದಿನ ಅಧ್ಯಕ್ಷ ಫ್ರಾನ್ಸಿಸ್ ಕುಟಿನ್ಹೋ ಇವರೆಲ್ಲ ಉಳಾಯಿಬೆಟ್ಟಿನಲ್ಲಿ ಒಂದೇ ಊರಿನವರು. ಮನೋಹರ್ ಪಿರೇರಾ ತನ್ನ ಸಾವಿಗೆ ಅನಿಲ್ ಲೋಬೊ ಕಾರಣವೆಂದು ವಿಡಿಯೋ ಮಾಡಿದ್ದಾರೆ. ಆತನ ಖಾತೆಗೆ ಬಂದಿದ್ದ ಚಾರಿಟಿ ಸಂಸ್ಥೆಯ ಹಣವನ್ನು ಅನಿಲ್ ಲೋಬೊ ಡ್ರಾ ಮಾಡಿಸಿದ್ದಾನೆಂದು ಆರೋಪಗಳಿವೆ. ಆತನ ಉಪಸ್ಥಿತಿ ಇಲ್ಲದೆ ಸೆಲ್ಫ್ ಚೆಕ್ ಡ್ರಾ ಮಾಡಿದ್ದು ಹೇಗೆ ಎನ್ನುವ ಬಗ್ಗೆ ತನಿಖೆಯಾಗಬೇಕು. ಪ್ರಕರಣದಲ್ಲಿ ಅನಿಲ್ ಲೋಬೊ ಜೊತೆಗೆ ಬ್ಯಾಂಕಿನ ಸಿಬಂದಿಯೂ ಶಾಮೀಲಾಗಿದ್ದಾರೆ. ಪೊಲೀಸರು ಅವರನ್ನು ಬಂಧಿಸಿ ತನಿಖೆ ಮಾಡಬೇಕು ಎಂದು ಆಗ್ರಹ ಮಾಡಿದ್ದಾರೆ.

ಇದಲ್ಲದೆ, ಅನಿಲ್ ಲೋಬೊ ವಿರುದ್ಧ ಬ್ಯಾಂಕಿನಲ್ಲಿ ಅವ್ಯವಹಾರ ಮಾಡಿರುವ ಬಗ್ಗೆಯೂ ಆರೋಪಳಿದ್ದು, ಈ ಬಗ್ಗೆ ಸಹಕಾರಿ ಇಲಾಖೆಯ ನಿಬಂಧಕರಿಗೆ ದೂರು ಸಲ್ಲಿಸಿದ್ದರೂ ತನಿಖೆ ಮಾಡಿಲ್ಲ. ಸಾಕಷ್ಟು ದಾಖಲೆಗಳಿದ್ದರೂ ಅನಿಲ್ ಲೋಬೊ ಪರವಾಗಿ ವರದಿ ಕೊಟ್ಟಿರುವ ಸಹಕಾರಿ ಇಲಾಖೆಯ ಅಧಿಕಾರಿಗಳ ಬಗ್ಗೆಯೂ ತನಿಖೆ ಆಗಬೇಕು ಎಂದು ರಾಬರ್ಟ್ ರೊಜಾರಿಯೋ ಆರೋಪಿಸಿದ್ದಾರೆ.

ಇದೇ ವೇಳೆ ಉಪಸ್ಥಿತರಿದ್ದ ಎಂಸಿಸಿ ಬ್ಯಾಂಕಿನ ಮಾಜಿ ಅಧ್ಯಕ್ಷ ಫ್ರಾನ್ಸಿಸ್ ಕುಟಿನ್ಹೋ, ಮೃತ ಮನೋಹರ್ ಪಿರೇರಾ ಬಗ್ಗೆ ಚೆನ್ನಾಗಿ ಗೊತ್ತಿದೆ. ನಾನು ಅಧ್ಯಕ್ಷನಾಗಿದ್ದಾಗಲೇ ಬ್ಯಾಂಕ್ ಲೋನ್ ಕೊಟ್ಟಿದ್ದೆ. ಆನಂತರ ಪ್ಯಾರಾಲಿಸಿಸ್ ಆಗಿ ಅಂಗವೈಕಲ್ಯಕ್ಕೆ ಈಡಾಗಿದ್ದ. ಆತನ ಸೋದರನಿಗೂ ಬ್ಯಾಂಕ್ ಸಾಲ ಕಟ್ಟಲು ಆಗಿರಲಿಲ್ಲ. ಈ ಬಗ್ಗೆ ಅನಿಲ್ ಲೋಬೊ ಜೊತೆಗೆ ಮಾತನಾಡು ಎಂದು ಪಿರೇರಾಗೆ ತಿಳಿಸಿದ್ದೆ. ಆನಂತರ, ಚಾರಿಟಿ ಸಂಸ್ಥೆಯಿಂದ ಕೊಟ್ಟ ನೆರವನ್ನೂ ಚೆಕ್ ಗೋಲ್ಮಾಲ್ ಮಾಡಿ ಹಣ ಸಿಗದಂತೆ ಮಾಡಿದ್ದು ಖಂಡನೀಯ. ಅಂಗವಿಕಲ ವ್ಯಕ್ತಿಗೆ ಈ ರೀತಿ ಅನ್ಯಾಯ ಮಾಡಬಾರದಿತ್ತು. ಪೊಲೀಸರು ತನಿಖೆ ಮಾಡುತ್ತಿದ್ದಾರೆ, ನ್ಯಾಯ ಸಿಗುವ ವಿಶ್ವಾಸವಿದೆ ಎಂದು ಹೇಳಿದರು. ಸುದ್ದಿಗೋಷ್ಟಿಯಲ್ಲಿ ಎಂಸಿಸಿ ಬ್ಯಾಂಕ್ ಮಾಜಿ ಅಧ್ಯಕ್ಷ ಮೆಲ್ವಿನ್ ಡಿಕುನ್ಹಾ, ಮಾಜಿ ನಿರ್ದೇಶಕ ಹೆರಾಲ್ಡ್ ಫೆರ್ನಾಂಡಿಸ್, ಎಂಸಿಸಿ ಬ್ಯಾಂಕ್ ಸದಸ್ಯ ಲೋನ ಗೋಮ್ಸ್, ಪೀಟರ್ ಪಿಂಟೋ ಇದ್ದರು.

Mcc Bank Director Anil Lobo is admitted to hospital to avoid being in jail slams social activist Robert Rosario in Mangalore. Medical reports of anil Lobo should be examined and doctors should give it into our hands he added. Anil Lobo is admitted in the hospital soon after his arrest was made in suicide case.