Anand Kateel, Yakshagana, Accident Mangalore: ರಸ್ತೆ ಅಪಘಾತ ; ಕಟೀಲು ಮೇಳದ ಯಕ್ಷಗಾನ ಕಲಾವಿದ ಸಾವು, 35 ವರ್ಷಗಳಿಂದ ಯಕ್ಷಗಾನ ಸೇವೆ, ಮೇಳದ ಕಡೆಯಿಂದ ಸಿಗದ ಉತ್ತಮ ಚಿಕಿತ್ಸೆ

25-01-25 05:05 pm       Mangalore Correspondent   ಕರಾವಳಿ

ರಸ್ತೆ ಅಪಘಾತದಲ್ಲಿ ತೀವ್ರ ಗಾಯಗೊಂಡಿದ್ದ ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನದ ಯಕ್ಷಗಾನ ಮೇಳದ ಕಲಾವಿದ ಆನಂದ ಕಟೀಲು(47) 25 ದಿನಗಳ ಬಳಿಕ ವೆನ್ಲಾಕ್ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ.

ಮಂಗಳೂರು, ಜ.25: ರಸ್ತೆ ಅಪಘಾತದಲ್ಲಿ ತೀವ್ರ ಗಾಯಗೊಂಡಿದ್ದ ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನದ ಯಕ್ಷಗಾನ ಮೇಳದ ಕಲಾವಿದ ಆನಂದ ಕಟೀಲು(47) 25 ದಿನಗಳ ಬಳಿಕ ವೆನ್ಲಾಕ್ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ.

ಜನವರಿ 1ರಂದು ಕಿನ್ನಿಗೋಳಿಯಲ್ಲಿ ಆಟೋ ರಿಕ್ಷಾದಲ್ಲಿ ತೆರಳುತ್ತಿದ್ದಾಗ ಪಲ್ಟಿಯಾಗಿ ಚಾಲನೆ ಮಾಡುತ್ತಿದ್ದ ಆನಂದ ತೀವ್ರ ಗಾಯಗೊಂಡಿದ್ದರು. ಆನಂತರ, ಕುತ್ತಿಗೆಯ ಭಾಗಕ್ಕೆ ಪೆಟ್ಟು ಬಿದ್ದ ಕಾರಣ ಮಂಗಳೂರಿನ ಸಿಟಿ ಹಾಸ್ಪಿಟಲ್ ಗೆ ದಾಖಲು ಮಾಡಲಾಗಿತ್ತು. ಆದರೆ ಶಸ್ತ್ರ ಚಿಕಿತ್ಸೆ ನಡೆಸಲು ಎಂಟು ಲಕ್ಷ ಖರ್ಚು ಆಗಬಹುದೆಂದು ವೈದ್ಯರು ಹೇಳಿದ್ದರಿಂದ ಅವರನ್ನು ಎರಡು ದಿನಗಳ ಬಳಿಕ ವೆನ್ಲಾಕ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು.

ಎದ್ದು ಕುಳಿತುಕೊಳ್ಳುವುದಕ್ಕೆ ಆಗದೇ ಬಳಲುತ್ತಿದ್ದ ಅವರಿಗೆ ವೆನ್ಲಾಕ್ ಆಸ್ಪತ್ರೆಯಲ್ಲಿ ಸೂಕ್ತ ಚಿಕಿತ್ಸೆ ಲಭಿಸಿರಲಿಲ್ಲ. ಇದರಿಂದಾಗಿ 25 ದಿನಗಳ ಕಾಲ ನರಳಿದ ಅವರು ಜ.25ರ ಶನಿವಾರ ಬೆಳಗ್ಗೆ ಮೃತಪಟ್ಟಿದ್ದಾರೆ. ಆಸ್ಪತ್ರೆ ಖರ್ಚು ನೋಡಿಕೊಳ್ಳುತ್ತೇವೆಂದು ಮೇಳದ ವ್ಯವಸ್ಥಾಪಕರು ಹೇಳಿದ್ದರೂ, ಹೆಚ್ಚಿನ ನೆರವು ನೀಡಿಲ್ಲ. ಈವರೆಗೆ 30 ಸಾವಿರ ಮಾತ್ರ ನೀಡಿದ್ದಾರೆ. 35 ವರ್ಷಗಳಿಂದ ಕಟೀಲು ಮೇಳದ ಕಲಾವಿದರಾಗಿದ್ದು, ಕೆಲವೊಮ್ಮೆ ಬಿಡುವು ಸಿಕ್ಕಾಗ ಆಟೋ ರಿಕ್ಷಾ ಚಲಾಯಿಸುತ್ತಿದ್ದರು ಎಂದು ಅವರ ಪತ್ನಿ ತಿಳಿಸಿದ್ದಾರೆ.

ಆನಂದ ಅವರು ಮೂಲತಃ ಕಾಸರಗೋಡು ಜಿಲ್ಲೆಯ ಜೋಡುಕಲ್ಲು ನಿವಾಸಿಯಾಗಿದ್ದು, ಮದುವೆಯಾದ ಬಳಿಕ ಕಟೀಲು ದೇವಸ್ಥಾನದ ಬಳಿಯಲ್ಲೇ ಮನೆ ಮಾಡಿ ಪತ್ನಿಯೊಂದಿಗೆ ನೆಲೆಸಿದ್ದರು. ಮದುವೆಯಾಗಿ 12 ವರ್ಷಗಳಾದರೂ ದಂಪತಿಗೆ ಮಕ್ಕಳು ಇರಲಿಲ್ಲ. ಈಗ ಅಪಘಾತಕ್ಕೀಡಾಗಿ ಮೃತಪಟ್ಟಿದ್ದು, ಮೇಳದ ಕಡೆಯವರ ನಿರ್ಲಕ್ಷ್ಯದಿಂದಲೇ ಸಾವಾಗಿದೆ. 25 ದಿನಗಳಲ್ಲಿ ಆಸ್ಪತ್ರೆಯಲ್ಲಿದ್ದರೂ, ಇಬ್ಬರು ಕಲಾವಿದರು ಮಾತ್ರ ಬಂದು ನೋಡಿದ್ದರು. ಇತರ ಯಾರು ಕೂಡ ಸಹಾಯ ಮಾಡಿಲ್ಲ ಎಂದು ಕುಟುಂಬಸ್ಥರು ಹೇಳಿದ್ದಾರೆ.

Mangalore 47 year old Yakshagana artist dies of road accident. The deceased has been identified as Anand Kateel.