ಮಂಜೇಶ್ವರ ಬ್ಲಾಕ್ ಪಂ. ; ಯುಡಿಎಫ್ - ಬಿಜೆಪಿ ಸಮಬಲ, ಅತಂತ್ರ ಫಲಿತಾಂಶ 

16-12-20 10:42 pm       Headline Karnataka News Network   ಕರಾವಳಿ

ಬಿಜೆಪಿ ಮತ್ತು ಯುಡಿಎಫ್ ಸಮಬಲದ ಸಾಧನೆ ಮಾಡಿದ್ದು ಯಾರೇ ಅಧಿಕಾರ ಪಡೆಯಲು ಇತರೇ ಮಂದಿಯನ್ನು ಅವಲಂಬಿಸಬೇಕಾದ ಅನಿವಾರ್ಯತೆಗೆ ಸಿಲುಕಿವೆ. 

ಮಂಜೇಶ್ವರ, ಡಿ.16: ಮಂಜೇಶ್ವರ ಬ್ಲಾಕ್ ಪಂಚಾಯತ್ ಚುನಾವಣೆಯಲ್ಲಿ ಬಿಜೆಪಿ ಮತ್ತು ಯುಡಿಎಫ್ ಸಮಬಲದ ಸಾಧನೆ ಮಾಡಿದ್ದು ಯಾರೇ ಅಧಿಕಾರ ಪಡೆಯಲು ಇತರೇ ಮಂದಿಯನ್ನು ಅವಲಂಬಿಸಬೇಕಾದ ಅನಿವಾರ್ಯತೆಗೆ ಸಿಲುಕಿವೆ. 

ಯುಡಿಎಫ್ 6 ಸ್ಥಾನಗಳನ್ನು ಗೆದ್ದರೆ, ಬಿಜೆಪಿಯೂ ಅಷ್ಟೇ ಸ್ಥಾನಗಳನ್ನು ಗೆದ್ದುಕೊಂಡಿದೆ. ಬ್ಲಾಕ್ ಪಂಚಾಯತ್ ನಲ್ಲಿ ಎಲ್ ಡಿಎಫ್ ಅನ್ನು ಹಿಂದಿಕ್ಕಿ ಹೆಚ್ಚು ಸ್ಥಾನಗಳನ್ನು ಪಡೆದಿದ್ದು ಇದೇ ಮೊದಲು. ಎಲ್ ಡಿಎಫ್ ಕೇವಲ 2 ಕಡೆ ಗೆಲುವು ಪಡೆದರೆ, ಒಂದು ಕ್ಷೇತ್ರದಲ್ಲಿ ಸ್ವತಂತ್ರ ಅಭ್ಯರ್ಥಿ ಗೆಲುವು ಕಂಡಿದ್ದಾರೆ. ಬಡಾಜೆ ಡಿವಿಷನ್ ನಲ್ಲಿ ಸ್ವತಂತ್ರ ಅಭ್ಯರ್ಥಿ ಗೆಲುವು ಪಡೆದಿದ್ದಾರೆ. 

ಮುಳಿಗದ್ದೆ , ಪೆರ್ಮುದೆ, ಎಣ್ಮಕಜೆ, ಪೆರ್ಲ, ಮಜಿರ್ಪಳ್ಳ, ಕಡಂಬಾರು ಡಿವಿಷನ್ನಲ್ಲಿ ಬಿಜೆಪಿ ಗೆಲುವು ಸಾಧಿಸಿದೆ. ಇಚ್ಲಾಂಗೋಡು, ಕುಂಜತ್ತೂರು, ಬಂದ್ಯೋಡು, ನಯಾಬಝಾರ್, ಉಪ್ಪಳ, ಮಂಜೇಶ್ವರ ಡಿವಿಷನ್ನಲ್ಲಿ ಯುಡಿಎಫ್ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ. ವರ್ಕಾಡಿ ಮತ್ತು ಪುತ್ತಿಗೆ ಡಿವಿಷನ್ನಲ್ಲಿ ಎಲ್ ಡಿಎಫ್ ಗೆಲುವು ಸಾಧಿಸಿದೆ. 

ಮಜೀರ್ಪಳ್ಳ ಕ್ಷೇತ್ರದಲ್ಲಿ ಕಾಂಗ್ರೆಸ್ ನಿಂದ ಸ್ಪರ್ಧಿಸಿದ್ದ ಈ ಹಿಂದೆ ಜಿಲ್ಲಾ ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷರಾಗಿದ್ದ ಹರ್ಷಾದ್ ವರ್ಕಾಡಿ ಅಚ್ಚರಿಯ ಸೋಲು ಕಂಡಿದ್ದಾರೆ. ಕಳೆದ ಬಾರಿ ಅವರು ಜಿಲ್ಲಾ ಪಂಚಾಯತ್ ಕ್ಷೇತ್ರದಲ್ಲಿ ಗೆಲುವು ಕಂಡಿದ್ದರು. ಹರ್ಷಾದ್ ವಿರುದ್ಧ ಈ ಬಾರಿ ಮೀಯಪದವು ನಿವಾಸಿ, ಬಿಜೆಪಿಯ ಸಾಮಾನ್ಯ ಕಾರ್ಯಕರ್ತ ಕೆ.ವಿ.ರಾಧಾಕೃಷ್ಣ ಗೆಲುವು ಸಾಧಿಸಿದ್ದಾರೆ. ಕಡಂಬಾರು ಕ್ಷೇತ್ರದಲ್ಲಿ ಬಿಜೆಪಿಯ ಅಶ್ವಿನಿ ಪಜ್ವ ಗೆದ್ದಿದ್ದಾರೆ. 

ಅತಿ ಹೆಚ್ಚು ಸ್ಥಾನಗಳಲ್ಲಿ ಜಯ ಕಂಡಿರುವ ಬಿಜೆಪಿ ಮಂಜೇಶ್ವರ ಬ್ಲಾಕ್ ಪಂಚಾಯತ್ ನಲ್ಲಿ ಅಧಿಕಾರ ಪಡೆಯುವತ್ತ ಮುನ್ನುಗ್ಗಿದೆ. ಆದರೆ, ಅಧಿಕಾರ ಗಳಿಸುವುದು ಮಾತ್ರ ಕಷ್ಟದ ಕೆಲಸವೇ ಸರಿ.