ಶಿಬರೂರು ಜಾತ್ರೆ ; ಸಂತೆ ವ್ಯಾಪಾರಿಗಳ ಮೇಲೆ ಲಾಠಿಚಾರ್ಜ್ !

18-12-20 10:56 am       Mangalore Correspondent   ಕರಾವಳಿ

ಶಿಬರೂರು ಕೊಡಮಣಿತ್ತಾಯ ದೈವಸ್ಥಾನದ ವರ್ಷಾವಧಿ ಉತ್ಸವದಲ್ಲಿ ಕೊರೊನಾ ನಿಯಮ ಉಲ್ಲಂಘಿಸಿ ಸಂತೆ ವ್ಯಾಪಾರ ನಡೆಸಿದ್ದನ್ನು ವಿರೋಧಿಸಿ ಲಾಠಿಚಾರ್ಜ್ ನಡೆಸಿದ ಘಟನೆ ನಡೆದಿದೆ. 

ಮಂಗಳೂರು, ಡಿ.18 : ಸುರತ್ಕಲ್ ಸಮೀಪದ ಶಿಬರೂರು ಕೊಡಮಣಿತ್ತಾಯ ದೈವಸ್ಥಾನದ ವರ್ಷಾವಧಿ ಉತ್ಸವದಲ್ಲಿ ಸರಕಾರದ ಕೊರೊನಾ ನಿಯಮ ಉಲ್ಲಂಘಿಸಿ ಸಂತೆ ವ್ಯಾಪಾರ ನಡೆಸಿದ್ದನ್ನು ವಿರೋಧಿಸಿ ಸುರತ್ಕಲ್ ಪೊಲೀಸರು ಏಕಾಏಕಿ ಲಾಠಿಚಾರ್ಜ್ ನಡೆಸಿದ ಘಟನೆ ನಡೆದಿದೆ. 

ಬುಧವಾರ ಶಿಬರೂರು ಕೊಡಮಣಿಂತ್ತಾಯ ವರ್ಷಾವಧಿ ಉತ್ಸವ ಆರಂಭವಾಗಿದ್ದು, ಸಂತೆ ಇನ್ನಿತರ ಯಾವುದೇ ವ್ಯಾಪಾರಕ್ಕೂ ಅವಕಾಶ ನೀಡುವುದಿಲ್ಲ ಎಂದು ಪೊಲೀಸರು ತಿಳಿಸಿದ್ದರು.‌ ಆದರೆ, ರಾತ್ರಿ ಸುಮಾರು 8.30 ರ ವೇಳೆಗೆ ದೈವಸ್ಥಾನಕ್ಕೆ ಹೋಗುವ ದಾರಿಯಲ್ಲಿ ಕೆಲವರು ಸಂತೆ ವ್ಯಾಪಾರ ಆರಂಭಿಸಿದ್ದು ಏಕಾಏಕಿ ಅಲ್ಲಿಗೆ ಆಗಮಿಸಿದ ಪೊಲೀಸರು ವ್ಯಾಪಾರಿಗಳ ಮೇಲೆ ಲಾಠಿ ಬೀಸಿದ್ದಾರೆ. ಈ ಸಂದರ್ಭ ಸಂತೆ ವ್ಯಾಪಾರಿಗಳು ಎದ್ದು ಬಿದ್ದು ಓಡಿದ್ದು, ಕೆಲವರಿಗೆ ಲಾಟಿ ಏಟು ಬಿದ್ದು ಗಾಯಗಳಾಗಿವೆ. 

ದೈವಸ್ಥಾನದ ಎರಡು ಬದಿಯಲ್ಲಿಯೂ ಕೊರೊನಾ ನಿಯಮ ಉಲ್ಲಂಘಿಸಿ ಅನಧಿಕೃತ ಸಂತೆ ವ್ಯಾಪಾರ ನಡೆಸುತ್ತಿರುವವರನ್ನು ಪೊಲೀಸರು ತೆರವುಗೊಳಿಸಿದ್ದಾರೆ. ಬೆಳಗಿನಿಂದಲೂ ಶಿಬರೂರು ದೈವಸ್ಥಾನಕ್ಕೆ ಬರುವ ರಿಕ್ಷಾ ಪ್ರಯಾಣಿಕರ ಮೇಲೂ ಪೊಲೀಸರು ನಿಗಾ ಇರಿಸಿದ್ದು, ಕಿನ್ನಿಗೋಳಿ ಬಳಿ ಅನೇಕ ರಿಕ್ಷಾ ಚಾಲಕರಿಗೆ ದಂಡ ವಿಧಿಸಲಾಗಿದೆ.

ಶಿಬರೂರು ದೈವಸ್ಥಾನದಲ್ಲಿ ಕೋವಿಡ್ 19 ನಿಯಮ ಉಲ್ಲಂಘಿಸಿ ಭಕ್ತಾದಿಗಳು ಸೇರಿದ್ದರೂ, ಪೊಲೀಸರು ಕ್ರಮ ಕೈಗೊಂಡಿಲ್ಲ. ಕೇವಲ ಸಂತೆ ವ್ಯಾಪಾರಸ್ಥರ ಮೇಲೆ ಪೊಲೀಸರು ದೌರ್ಜನ್ಯ ನಡೆಸಿದ್ದಾರೆ ಎಂಬ ಆರೋಪ ಕೇಳಿಬಂದಿದ್ದು, ಪೊಲೀಸರ ನಡೆಗೆ ಸಂತೆ ವ್ಯಾಪಾರಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.