Subscribe ಎನ್ನಲು ಪರದಾಡಿದ್ದೇ ಈ ಪೋರನನ್ನು ವಿಶ್ವಕ್ಕೆ ಪರಿಚಯಿಸ್ತು !! 

09-08-20 02:28 pm       Mangalore Reporter   ಕರಾವಳಿ

ವಿಡಿಯೋ 'Subscribe' ಮಾಡಿ ಅಂತಾ ಹೇಳಲು ಪರದಾಡಿದ್ದೇ ಈ ಹುಡುಗನನ್ನು ಈಗ ಜಗತ್ತಿನ ಗಮನ ಸೆಳೆಯುವಂತೆ ಮಾಡಿದೆ. ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದ ಈ ಹುಡುಗನ ವಿಡಿಯೋ ಸೆಲೆಬ್ರಿಟಿಗಳ ಗಮನಸೆಳೆದಿದೆ.

ಮಂಗಳೂರು, ಆಗಸ್ಟ್ 9: ಕರಾವಳಿಯ ಪೋರನೊಬ್ಬ ರಾತ್ರಿ ಬೆಳಗಾಗೋದರ ಒಳಗೆ  ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡ್ ಆಗಿದ್ದಾನೆ. ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದ ಈ ಹುಡುಗನ ವಿಡಿಯೋ ಸೆಲೆಬ್ರಿಟಿಗಳ ಗಮನಸೆಳೆದಿದೆ. ವಿಡಿಯೋ 'Subscribe' ಮಾಡಿ ಅಂತಾ ಹೇಳಲು ಪರದಾಡಿದ್ದೇ ಈ ಹುಡುಗನನ್ನು ಈಗ ಜಗತ್ತಿನ ಗಮನ ಸೆಳೆಯುವಂತೆ ಮಾಡಿದೆ. 

ಮಂಗಳೂರು ಹೊರವಲಯದ ತೊಕ್ಕೊಟ್ಟಿನ ಬಬ್ಬುಕಟ್ಟೆ ಹೀರಾ ಪ್ರಾಥಮಿಕ ಶಾಲೆಯ 6ನೇ ತರಗತಿಯ ವಿದ್ಯಾರ್ಥಿಯಾಗಿರುವ ಅಬ್ದುರ್ರಹ್ಮಾನ್ ಹೀಗೆ ಗಮನ ಸೆಳೆದ ಹುಡುಗ. ಈ ಹುಡುಗನ ಸಾಧನೆಗೆ ಕಾರಣವಾಗಿದ್ದು ಲಾಕ್ ಡೌನ್ ಎಫೆಕ್ಟ್ ಅಂದ್ರೆ ನೀವು ನಂಬಲೇಬೇಕು. ಲಾಕ್ ಡೌನ್ ಕಾರಣ ಶಾಲೆ ಇಲ್ಲದೆ ಮನೆಯಲ್ಲಿರುವ ಮಕ್ಕಳು ಈಗ ಮೊಬೈಲ್ ದಾಸರಾಗಿದ್ದು ಗೊತ್ತೇ ಇದೆ. ಮೊಬೈಲ್ ಹುಚ್ಚು ಈ ಹುಡುಗನನ್ನು ಬಿಟ್ಟಿಲ್ಲ‌. ಮನೆಯಲ್ಲಿ ಹೆತ್ತವರ ಮೊಬೈಲ್ ತಗೊಂಡು ಅದರಲ್ಲಿ ಯೂಟ್ಯೂಬ್ ನೋಡುವುದು ಈತನ ಡೈಲಿ ದಿನಚರಿಯಾಗಿತ್ತು. ಹೆಚ್ಚಾಗಿ ಅರಬ್ಬೀಗಳ ಮಕ್ಕಳು ಮಾಡುವ ಕೀಟಲೆಗಳ ವಿಡಿಯೋ ನೋಡುವ ಅಬ್ದುರ್ರಹ್ಮಾನ್, ಆ ಮಕ್ಕಳು ಇಂಗ್ಲಿಷ್ ನಲ್ಲಿ ಮಾತಾಡಲು ಕಷ್ಟಪಡುವುದನ್ನು ನೋಡಿ ನಗುತ್ತಿದ್ದ. ಇತರೇ ಮಕ್ಕಳ ಜೊತೆ ಸೇರಿ ಅರಬ್ಬೀ ಮಕ್ಕಳ ರೀತಿ ಮಾತಾಡುತ್ತಾ ಕೀಟಲೆ ಮಾಡುತ್ತಿದ್ದ. ಒಂದು ದಿನ ಯೂಟ್ಯೂಬ್ ಕೊನೆಯಲ್ಲಿ ಈ ಚಾನೆಲ್ ಸಬ್ ಸ್ಕ್ರೈಬ್ ಮಾಡಿ ಅನ್ನುವುದನ್ನು ಅರಬ್ಬೀ ಮಕ್ಕಳ ತೊದಲು ನುಡಿಯ ರೀತಿ ಅನುಕರಿಸಿ ವಿಡಿಯೋ ಮಾಡಿದ್ದ. ಮುದ್ದು ಮುದ್ದಾಗಿರುವ ಈ ಹುಡುಗ  ಸಬಕರ.. ಸಬಕರರಾ ಎನ್ನುತ್ತಾ  ಈ ವಿಡಿಯೋ ಒಂದು ಲಕ್ಷ ಲೈಕ್ಸ್ ಪಡೀಬೇಕು ಎಂದಿದ್ದನ್ನು ನೋಡಿದ ಸಂಬಂಧಿಕರೊಬ್ಬರು ವಿಡಿಯೋವನ್ನು ಫೇಸ್ ಬುಕ್ಕಿಗೆ ಅಪ್ಲೋಡ್ ಮಾಡಿದ್ದಾರೆ. ಹುಡುಗ ತೊಳಲಾಡುವುದೇ ನೋಡುಗರ ಗಮನ ಸೆಳೆದಿದ್ದು ಆಕರ್ಷಣೆಗೆ ಕಾರಣವಾಗಿದೆ. 'Subscribe' ಮಾಡುವಂತೆ ಹೇಳಲು ಬಾಲಕ ಪರದಾಡಿದ್ದೇ ಈಗ ಟ್ರೆಂಡ್ ಆಗಿದೆ. ನಿಜಕ್ಕಾದರೆ ಆತ ಅರಬ್ಬೀ ಮಕ್ಕಳ ಶೈಲಿಯನ್ನು ಅಣಕಿಸಿದ್ದ.. 

Video:

ವಿಡಿಯೋ ಗಮನಿಸಿದ ಬಹುಭಾಷಾ ಗಾಯಕ ಅರ್ಮಾನ್ ಮಲಿಕ್, ವಿಡಿಯೋವನ್ನು ತೆಗೆದು ತನ್ನ ಇನ್ ಸ್ಟಾ ಗ್ರಾಮಿನಲ್ಲಿ ಶೇರ್ ಮಾಡಿದ್ದಾರೆ. ಇದು ಭಾರೀ ವೈರಲ್ ಆಗಿದ್ದು ಕಾಮಿಡಿಯನ್ ಆಶಿಶ್ ಚಂಚ್ಲಾನಿ ಕೂಡಾ ಬಾಲಕನ ವಿಡಿಯೋ ತಮ್ಮ ಖಾತೆಗೆ ಅಪ್ ಲೋಡ್ ಮಾಡಿದ್ದಾರೆ. ಅಬ್ದುಲ್ ರೆಹ್ಮಾನ್ ನ ವಿಡಿಯೋ ಈಗ ಲಕ್ಷ ಅಲ್ಲ , 35ಲಕ್ಷ ಕ್ಕೂ ಹೆಚ್ಚು ಜನರು ವೀಕ್ಷಣೆ ಮಾಡಿ ದಾಖಲೆ ಸೇರಿದೆ. ಹಾಗೆಯೇ ಹುಡುಗನ ಏಕ್ಟಿಂಗ್ ವಿಶ್ವ ಮಟ್ಟದಲ್ಲಿ ಜಾಲತಾಣಿಗರ ಗಮನ ಸೆಳೆದಿದೆ.