ತೊಕ್ಕೊಟ್ಟು: ಒಂದು ಕೋಟಿ ವೆಚ್ಚದಲ್ಲಿ ಮಾರುಕಟ್ಟೆ ; ಶಾಸಕ ಖಾದರ್ ಶಿಲಾನ್ಯಾಸ

19-12-20 01:27 pm       Mangalore Correspondent   ಕರಾವಳಿ

ಮಾಜಿ ಸಚಿವ ಯು.ಟಿ ಖಾದರ್ ನೂತನ ಮಾರುಕಟ್ಟೆ ಕಾಮಗಾರಿಗೆ ಶಿಲಾನ್ಯಾಸ ಮಾಡಿದ್ದಾರೆ. 

ಉಳ್ಳಾಲ, ಡಿ.19: ನಗರೋತ್ಥಾನ ಯೋಜನೆಯಡಿ ಸುಮಾರು ಒಂದು ಕೋಟಿ ರೂ. ಅನುದಾನದಲ್ಲಿ ತೊಕ್ಕೊಟ್ಟು ಒಳಪೇಟೆಯಲ್ಲಿ ಸುಸಜ್ಜಿತ ಮಾರುಕಟ್ಟೆ ನಿರ್ಮಾಣಗೊಳ್ಳಲಿದ್ದು ಮಾಜಿ ಸಚಿವ ಯು.ಟಿ ಖಾದರ್ ನೂತನ ಮಾರುಕಟ್ಟೆ ಕಾಮಗಾರಿಗೆ ಶಿಲಾನ್ಯಾಸ ಮಾಡಿದ್ದಾರೆ. 

ಈ ವೇಳೆ ಮಾತನಾಡಿದ ಅವರು, ತೊಕ್ಕೊಟ್ಟಿನ ಹೃದಯಭಾಗ ಒಳಪೇಟೆಯನ್ನು ಅಭಿವೃದ್ಧಿ ಪಡಿಸಲು ನಗರೋತ್ಥಾನ ಯೋಜನೆಯಡಿ ದೊಡ್ಡ ಮೊತ್ತದ ಅನುದಾನ ವ್ಯಯಿಸಲಾಗುತ್ತಿದೆ. ಸುಸಜ್ಜಿತ ಹಾಗೂ ಮಾದರಿಯಾದ ಮಾರುಕಟ್ಟೆ ನಿರ್ಮಾಣವಾಗುತ್ತಿದೆ. ತೊಕ್ಕೊಟ್ಟು ಒಳಪೇಟೆಯ ನಾಗರಿಕರು, ವರ್ತಕರ ಸಹಕಾರ ಇದಕ್ಕೆ ಅಗತ್ಯ.

ಅಂಬೇಡ್ಕರ್ ಮೈದಾನ ಅಭಿವೃದ್ಧಿಗೂ ಒಂದು ಕೋಟಿ ಹತ್ತು ಲಕ್ಷ ರೂಪಾಯಿಗಳನ್ನು ಬಿಡುಗಡೆಗೊಳಿಸಲಾಗಿದೆ. ಮೈದಾನವನ್ನು ಯಾವ ರೀತಿ ಅಭಿವೃದ್ಧಿ ಪಡಿಸಬೇಕೆಂದು ಚರ್ಚಿಸಿ ರೂಪುರೇಷೆ ಸಿದ್ಧಪಡಿಸಲಾಗುವುದು. ಒಳಪೇಟೆ ಜಂಕ್ಷನ್ ಅನ್ನು ಅಭಿವೃದ್ಧಿ ಪಡಿಸುವ ಯೋಜನೆ ಇದೆ ಎಂದರು.

ಉಳ್ಳಾಲ ನಗರಸಭೆ ಅಧ್ಯಕ್ಷರಾದ ಚಿತ್ರಕಲಾ, ಉಪಾಧ್ಯಕ್ಷರಾದ ಅಯೂಬ್ ಮಂಚಿಲ, ಸದಸ್ಯರಾದ ಭಾಝಿಲ್ ಡಿ ಸೋಜ, ಭಾರತಿ, ಸಪ್ನಾ ಹರೀಶ್, ಶಶಿಕಲಾ, ಗೀತಾ ಬಾಯಿ, ರವಿಚಂದ್ರ ಗಟ್ಟಿ, ಇಸ್ಮಾಯಿಲ್, ಮಾಜಿ ಸದಸ್ಯರಾದ ಕಿಶೋರ್ ತೊಕ್ಕೊಟ್ಟು, ವರ್ತಕರಾದ ಮೆಹರಾಜ್ ಲತೀಫ್ ಮೊದಲಾದವರು ಇದ್ದರು.