ಹೆಜಮಾಡಿ: ನದಿಗೆ ಮೀ‌ನು ಹಿಡಿಯಲು ಹೋದ ವ್ಯಕ್ತಿ ಬಲೆಯಲ್ಲಿ ಸಿಲುಕಿ ಸಾವು

19-12-20 03:58 pm       Mangalore Correspondent   ಕರಾವಳಿ

ಶಾಂಭವಿ ನದಿಯಲ್ಲಿ ವ್ಯಕ್ತಿಯೊಬ್ಬರು ರಾತ್ರಿ ವೇಳೆ ಮೀನು ಹಿಡಿಯಲು ಹಾಕಿದ ಬಲೆಗೆ ಸಿಲುಕಿ ಮೃತಪಟ್ಟ ಘಟನೆ ಮುಲ್ಕಿಯಲ್ಲಿ ನಡೆದಿದೆ.

ಮುಲ್ಕಿ, ಡಿ.19: ಇಲ್ಲಿನ ಹೆಜಮಾಡಿ ಗ್ರಾ.ಪಂ. ವ್ಯಾಪ್ತಿಯ ಶಾಂಭವಿ ನದಿಯಲ್ಲಿ ವ್ಯಕ್ತಿಯೊಬ್ಬರು ರಾತ್ರಿ ವೇಳೆ ಮೀನು ಹಿಡಿಯಲು ಹಾಕಿದ ಬಲೆ ತೆಗೆಯಲು ಹೋಗಿ ಅದೇ ಬಲೆಯಲ್ಲಿ ಸಿಲುಕಿ ದಾರುಣವಾಗಿ ಮೃತಪಟ್ಟ ಘಟನೆ ನಡೆದಿದೆ. 

ಮೃತರನ್ನು ಮುಲ್ಕಿ ಬಳಿಯ ಕಕ್ವ ನಿವಾಸಿ ವಿಜಯ್ ಫುರ್ಟಾಡೋ(47) ಎಂದು ಗುರುತಿಸಲಾಗಿದೆ. ಶುಕ್ರವಾರ ಸಂಜೆ ಅವರು ಕೊಕ್ರಾಣಿಯ ಶಾಂಭವಿ ನದಿ ತೀರದಲ್ಲಿ ಮೀನು ಹಿಡಿಯಲು ಬಲೆ ಹಾಕಿದ್ದರು. ರಾತ್ರಿ 10ರ ಸುಮಾರಿಗೆ ಪರಿಶೀಲಿಸಲು ತೆರಳಿದಾಗ, ಬಲೆಯೊಳಗೆ ಸಿಲುಕಿ ಮೃತಪಟ್ಟಿದ್ದಾರೆ.

ನದಿ ತೀರಕ್ಕೆ ತೆರಳಿದ ವಿಜಯ್ ಮನೆ ಕಡೆ ಬಾರದ್ದರಿಂದ ತಾಯಿ ಆತಂಕಗೊಂಡು ಬಂದು ನೋಡಿದಾಗ ಘಟನೆ ಬೆಳಕಿಗೆ ಬಂದಿದೆ. ಕೂಡಲೇ ಸ್ಥಳೀಯರು ಕಾರ್ನಾಡು ಆಪತ್ಪಾಂಧವ ಆಸೀಫ್ ಅವರ ನೆರವಿನಿಂದ ರಾತ್ರೋರಾತ್ರಿ ಶವವನ್ನು ಮೇಲೆತ್ತಿದ್ದಾರೆ.

ಮೃತ ವಿಜಯ್ ಅವರು ದುಬೈನ ಹೋಟೆಲಿನಲ್ಲಿ ಕೆಲಸ ಮಾಡುತ್ತಿದ್ದು, ಕೊರೊನಾ ಲಾಕ್ ಡೌನ್ ಸಮಯದಲ್ಲಿ ಊರಿಗೆ ಬಂದು ಮೀನುಗಾರಿಕೆ ಉದ್ಯಮ ನಡೆಸುತ್ತಿದ್ದರು. 

ಮುಲ್ಕಿಯ ವಿಜಯಾ ಕಾಲೇಜು ಹಳೆ ವಿದ್ಯಾರ್ಥಿಯಾಗಿದ್ದ ಅವರು ಕ್ರಿಕೆಟ್, ವಾಲಿಬಾಲ್ ನಲ್ಲಿ ಪ್ರತಿಭಾವಂತರಾಗಿದ್ದರು. ವಿಜಯ್ ಅವರು ತಾಯಿ, ಪತ್ನಿ, ಇಬ್ಬರು ಸಹೋದರರು, ಸಹೋದರಿಯನ್ನು ಅಗಲಿದ್ದಾರೆ. ಪಡುಬಿದ್ರಿ ಪೊಲೀಸರು ಪ್ರಕರಣ ದಾಖಲಿಸಿ, ತನಿಖೆ ನಡೆಸುತ್ತಿದ್ದಾರೆ.