Minister Gundu Rao, Mangalore: ಮುಸ್ಲಿಂ ಮುಖಂಡರ ಸಭೆ ನಡೆಸಿದ್ದಾರೆನ್ನುವುದು ತಪ್ಪು ಕಲ್ಪನೆ ; ಅಹವಾಲು ಆಲಿಸಿದ್ದು ಬಿಟ್ಟರೆ ಸಭೆ ನಡೆಸಿಲ್ಲ ; ಜಿಲ್ಲಾ ಉಸ್ತುವಾರಿ ಸಚಿವ ಗುಂಡೂರಾವ್ ಸ್ಪಷ್ಟನೆ 

04-05-25 08:39 pm       Mangalore Correspondent   ಕರಾವಳಿ

ಇತ್ತೀಚೆಗೆ ಮಂಗಳೂರಿನಲ್ಲಿ ನಡೆದ ಅಹಿತಕರ ಘಟನೆಗಳ ಬೆನ್ನಲ್ಲೇ ಕಾನೂನು ಸುವ್ಯವಸ್ಥೆ ಕುರಿತಂತೆ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಹಾಗೂ ಗೃಹ ಸಚಿವ ಜಿ. ಪರಮೇಶ್ವರ್ ಅವರು ಮೇ 3ರಂದು ಮಂಗಳೂರಿಗೆ ಭೇಟಿ ನೀಡಿ ಪೊಲೀಸ್ ಅಧಿಕಾರಿಗಳ ಜೊತೆ ಸಭೆ ನಡೆಸಿ ಅಗತ್ಯ ನಿರ್ದೇಶನಗಳನ್ನು ನೀಡಿದ್ದಾರೆ.

ಮಂಗಳೂರು, ಮೇ 4 : ಇತ್ತೀಚೆಗೆ ಮಂಗಳೂರಿನಲ್ಲಿ ನಡೆದ ಅಹಿತಕರ ಘಟನೆಗಳ ಬೆನ್ನಲ್ಲೇ ಕಾನೂನು ಸುವ್ಯವಸ್ಥೆ ಕುರಿತಂತೆ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಹಾಗೂ ಗೃಹ ಸಚಿವ ಜಿ. ಪರಮೇಶ್ವರ್ ಅವರು ಮೇ 3ರಂದು ಮಂಗಳೂರಿಗೆ ಭೇಟಿ ನೀಡಿ ಪೊಲೀಸ್ ಅಧಿಕಾರಿಗಳ ಜೊತೆ ಸಭೆ ನಡೆಸಿ ಅಗತ್ಯ ನಿರ್ದೇಶನಗಳನ್ನು ನೀಡಿದ್ದಾರೆ. ಆದರೆ ಕೆಲವು ಮಾಧ್ಯಮಗಳಲ್ಲಿ ಸಚಿವರು ಕೇವಲ ಮುಸ್ಲಿಂ ಸಮುದಾಯದ ಮುಖಂಡರೊಂದಿಗೆ ಮಾತ್ರ ಸಭೆ ನಡೆಸಿದ್ದಾರೆ ಎಂದು ತಪ್ಪಾಗಿ ವರದಿಯಾಗಿದೆ. 

ಈ ಮೂಲಕ ಸ್ಪಷ್ಟಪಡಿಸುವುದೇನೆಂದರೆ ಗೃಹ ಸಚಿವರಾಗಲಿ, ಜಿಲ್ಲಾ ಉಸ್ತುವಾರಿ ಸಚಿವರಾಗಲಿ ಪೊಲೀಸ್ ಅಧಿಕಾರಿಗಳ ಉಪಸ್ಥಿತಿಯಲ್ಲಿ ಯಾವುದೇ ಮುಸ್ಲಿಂ ಮುಖಂಡರೊಂದಿಗೆ ಸಭೆ ನಡೆಸಿಲ್ಲ. ಅಲ್ಲದೇ ಪ್ರತ್ಯೇಕವಾಗಿ ಮುಸ್ಲಿಂ ಸಮುದಾಯದ ಸಭೆಯನ್ನೂ ಕರೆದಿರಲಿಲ್ಲ. ಕಠಿಣ ಕಾನೂನು ಕ್ರಮಗಳನ್ನ ಕೈಗೊಳ್ಳುವ ಕುರಿತಂತೆ ಪೊಲೀಸ್ ಅಧಿಕಾರಿಗಳೊಂದಿಗೆ ಮಾತ್ರ ಇಬ್ಬರು ಸಚಿವರು ಸಭೆ ನಡೆಸಿದ್ದಾರೆ. ಸಚಿವರು ಸರ್ಕೌಟ್ ಹೌಸ್ ನಲ್ಲಿ ಇದ್ದ ವೇಳೆ ಮುಸ್ಲಿಂ ಸೇರಿದಂತೆ ಇತರ ಸಮುದಾಯದ ಹಾಗೂ ಸಂಘ ಸಂಸ್ಥೆಗಳ ಮುಖಂಡರ ನಿಯೋಗ ಭೇಟಿ ನೀಡಿತ್ತು. 

ನಿಯೋಗದ ಅಹವಾಲುಗಳನ್ನ ಸಚಿವರು ಆಲಿಸಿದ್ದಾರೆಯೇ ಹೊರತಾಗಿ ಪೊಲೀಸರ ಸಮಕ್ಷಮದಲ್ಲಿ ಮುಸ್ಲಿಂ ಮುಖಂಡರ ಜೊತೆ ಯಾವುದೇ ಸಭೆ ನಡೆಸಿಲ್ಲ. ಬೆಳಗ್ಗೆ 7 ಗಂಟೆಯಿಂದ 11 ಗಂಟೆ ವರೆಗೆ ಇಬ್ಬರು ಸಚಿವರು ಸರ್ಕೌಟ್ ಹೌಸ್ ನಲ್ಲಿ ತಂಗಿದ್ದರು. ಈ ವೇಳೆ ದಕ್ಷಿಣ ಕನ್ನಡ ಜಿಲ್ಲೆಯ ಮುಖಂಡರುಗಳಿಗೆ ಭೇಟಿ ನೀಡಲು ಅವಕಾಶವಿತ್ತು. ಮೇಲೆ ತಿಳಿಸಲಾದ ನಿಯೋಗದ ಹೊರತಾಗಿ, ಬೇರೆ ಇತರ ಮುಖಂಡರು ಹಾಗೂ ನಿಯೋಗಗಳಿಗೆ ಸಚಿವರನ್ನ ಭೇಟಿ ಮಾಡಲು ಸಮಯವಕಾಶವಿತ್ತು. 

ಯಾವುದೇ ಒಂದು ಸಮುದಾಯವನ್ನ ಓಲೈಸುವ ಪ್ರಶ್ನೆಯಿಲ್ಲ. ತಪ್ಪಿತಸ್ಥರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲು ಇಬ್ಬರು ಸಚಿವರು ಪೊಲೀಸ್ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.‌ ಸಚಿವರು ಕೇವಲ ಮುಸ್ಲಿಂ ಮುಖಂಡರೊಂದಿಗೆ ಸಭೆ ನಡೆಸಿದ್ದಾರೆ ಎಂಬ ರೀತಿಯ ತಪ್ಪು ಸಂದೇಶಗಳನ್ನ ರವಾನಿಸುವುದು ಸರಿಯಲ್ಲ. ಈ ರೀತಿಯ ವರದಿಗಳನ್ನ ಬಿತ್ತರಿಸುವಾಗ ಮಾಧ್ಯಮಗಳು ಅತ್ಯಂತ ಜವಾಬ್ದಾರಿಯಿಂದ ಎಚ್ಚರಿಕೆ ವಹಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಈ ಮೂಲಕ ಮನವಿ ಮಾಡಿದ್ದಾರೆ.

Misconception That Muslim Leaders Held a Meeting; Only Heard Grievances, No Meeting Conducted, Clarifies District In Charge Minister Gundu Rao.