ಜನವರಿಗೆ ಕೊರೊನಾ ಲಸಿಕೆ ; ಮೊದಲಿಗೆ 40 ಸಾವಿರ ಆರೋಗ್ಯ ಸಿಬಂದಿಗೆ ವ್ಯಾಕ್ಸಿನ್

21-12-20 05:04 pm       Mangalore Correspondent   ಕರಾವಳಿ

ಜನವರಿ ಮೊದಲ ವಾರ ಅಥವಾ 2ನೇ ವಾರದಲ್ಲಿ ದಕ್ಷಿಣ ಕನ್ನಡಕ್ಕೆ ಕೊರೊನಾ ಲಸಿಕೆ ತಲುಪಲಿದೆ.

ಮಂಗಳೂರು, ಡಿ.21: ಜನವರಿ ಮೊದಲ ವಾರ ಅಥವಾ 2ನೇ ವಾರದಲ್ಲಿ ದಕ್ಷಿಣ ಕನ್ನಡಕ್ಕೆ ಕೊರೊನಾ ಲಸಿಕೆ ತಲುಪಲಿದ್ದು, ಮೊದಲ ಹಂತದಲ್ಲಿ 40 ಸಾವಿರ ಮಂದಿ ಆರೋಗ್ಯ ಸಿಬಂದಿಗೆ ಲಸಿಕೆ ನೀಡಲು ಸಿದ್ಧತೆ ನಡೆಸಲಾಗಿದೆ.

ಸರಕಾರಿ ಮತ್ತು ಖಾಸಗಿ ಆಸ್ಪತ್ರೆಗಳ ವೈದ್ಯರು, ನರ್ಸ್ ಗಳು, ಆಸ್ಪತ್ರೆಯಲ್ಲಿ ಕಾರ್ಯ ನಿರ್ಹವಹಿಸುವ ಇತರೇ ಸಿಬಂದಿ, ಆಂಬುಲೆನ್ಸ್ ಸಿಬಂದಿ, ಆರೋಗ್ಯ ಕಾರ್ಯಕರ್ತರು ಹೀಗೆ ಆರೋಗ್ಯ ಸೇವೆಯಲ್ಲಿ ನಿರತರಾಗಿರುವ ಮಂದಿಗೆ ಮೊದಲ ಹಂತದಲ್ಲಿ ಕೊರೊನಾ ಲಸಿಕೆ ನೀಡಲು ತಯಾರಿ ನಡೆಸಲಾಗಿದೆ. ದಕ್ಷಿಣ ಕನ್ನಡ ಜಿಲ್ಲಾ ಆರೋಗ್ಯ ಇಲಾಖೆಯಿಂದ ಕೊರೊನಾ ಲಸಿಕೆ ನೀಡಲು ಅಗತ್ಯ ಸಿದ್ಧತೆ ನಡೆಸಲಾಗಿದ್ದು 4667 ಮಂದಿಯನ್ನು ಲಸಿಕೆ ನೀಡಲು ತರಬೇತಿ ನೀಡುವುದಕ್ಕಾಗಿ ಗುರುತಿಸಲಾಗಿದೆ. ಬೆಂಗಳೂರಿನಿಂದ ಆಗಮಿಸುವ ತಂಡ, ಲಸಿಕೆಯನ್ನು ಯಾವ ರೀತಿ ಪ್ರಯೋಗ ಮಾಡಬೇಕೆಂದು ತರಬೇತು ನೀಡಲಿದೆ.

ಲಸಿಕೆಗಳನ್ನು ಸ್ಟೋರೇಜ್ ಮಾಡಲು ರೆಫ್ರಿಜರೇಟರ್, ಫ್ರೀಜರ್, ಐಸ್ ಲೈನ್ ರೆಫ್ರಿಜರೇಟರ್, ವಾಕ್ ಇನ್ ಕೂಲರ್ಸ್ ಗಳನ್ನು ರೆಡಿ ಮಾಡಲಾಗಿದೆ. ಅಲ್ಲದೆ, ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಯಾವೆಲ್ಲ ಜಾಗಗಳಲ್ಲಿ ಲಸಿಕೆ ನೀಡಬೇಕು ಎಂಬುದನ್ನು ಈಗಾಗ್ಲೇ ಗುರುತು ಮಾಡಲಾಗಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ರಾಮಚಂದ್ರ ಬಾಯರಿ ಮಾಹಿತಿ ನೀಡಿದ್ದಾರೆ.

ಎರಡನೇ ಹಂತದಲ್ಲಿ ಪೊಲೀಸರು, ರಕ್ಷಣಾ ಸಿಬಂದಿ, ನಾಗರಿಕ ಸೇವೆಗಳಲ್ಲಿ ನಿರತರಾಗಿರುವ ಮಂದಿಗೆ ಲಸಿಕೆ ನೀಡಲು ನಿರ್ಧರಿಸಲಾಗಿದೆ. ಮೂರನೇ ಹಂತದಲ್ಲಿ 50 ವರ್ಷಕ್ಕಿಂತ ಮೇಲ್ಪಟ್ಟವರನ್ನು ಗುರುತಿಸಿ, ಲಸಿಕೆ ನೀಡಲಾಗುವುದು. ಆದರೆ, 2 ಮತ್ತು ಮೂರನೇ ಹಂತದಲ್ಲಿ ಎಷ್ಟು ಮಂದಿಗೆ ಲಸಿಕೆ ನೀಡಬೇಕು ಎಂಬ ಬಗ್ಗೆ ಸರಕಾರದಿಂದ ಯಾವುದೇ ಸೂಚನೆ ಬಂದಿಲ್ಲ ಎಂದು ಆರೋಗ್ಯಾಧಿಕಾರಿ ಮಾಹಿತಿ ನೀಡಿದ್ದಾರೆ. ಅಲ್ಲದೆ, ಸದ್ಯಕ್ಕೆ ದಿನವೊಂದರಲ್ಲಿ ಜಿಲ್ಲೆಯಲ್ಲಿ 25ರಿಂದ 30ರಷ್ಟು ಮಂದಿ ಕೊರೊನಾ ಸೋಂಕಿತರು ಕಂಡುಬರುತ್ತಿದ್ದಾರೆ. ನವರಾತ್ರಿ ಬಳಿಕ ಜನ ಸೇರುವ ಕಾರ್ಯಕ್ರಮ, ಉತ್ಸವಗಳು ಹೆಚ್ಚಿದ್ದರೂ, ಕೊರೊನಾ 2ನೇ ಅಲೆಯ ಯಾವುದೇ ಲಕ್ಷಣ ಜಿಲ್ಲೆಯಲ್ಲಿ ಕಂಡುಬಂದಿಲ್ಲ. ಹಾಗೆಂದು ಜನರು ತಾಳ್ಮೆ ಕಳಕೊಳ್ಳದೆ ಕೋವಿಡ್ ಮುಂಜಾಗ್ರತೆಯನ್ನು ಪಾಲಿಸಬೇಕು ಎಂದು ಎಚ್ಚರಿಕೆ ನೀಡಿದ್ದಾರೆ.

ಇದೇ ವೇಳೆ, ಉಡುಪಿ ಜಿಲ್ಲೆಯಲ್ಲಿ ಮೊದಲ ಹಂತದಲ್ಲಿ 14 ಸಾವಿರ ಮಂದಿ ಆರೋಗ್ಯ ಇಲಾಖೆಯ ಸಿಬಂದಿಗೆ ಕೊರೊನಾ ಲಸಿಕೆ ನೀಡಲು ನಿರ್ಧರಿಸಲಾಗಿದೆ. ಇದಕ್ಕಾಗಿ ಲಸಿಕೆ ಸ್ಟೋರೇಜ್ ಮತ್ತು ಲಸಿಕೆ ನೀಡಲು ಆರೋಗ್ಯ ಕಾರ್ಯಕರ್ತರನ್ನು ಸಿದ್ಧತೆ ಮಾಡಲಾಗಿದೆ ಎಂದು ಉಡುಪಿ ಜಿಲ್ಲಾಧಿಕಾರಿ ಡಾ.ಜಗದೀಶ್ ಹೇಳಿದ್ದಾರೆ.