ಹಳ್ಳಿ ಫೈಟ್ ಕ್ಷಣಗಣನೆ ; ಮೂರು ತಾಲೂಕಿನಲ್ಲಿ ನಾಳೆಯೇ ಭವಿಷ್ಯ ನಿರ್ಣಯ

21-12-20 06:47 pm       Mangaluru Correspondent   ಕರಾವಳಿ

ಗ್ರಾಮ ಪಂಚಾಯತ್ ಚುನಾವಣೆ ಪಕ್ಷದ ಚಿಹ್ನೆಯಡಿ ನಡೆಯದಿದ್ದರೂ ಬೆಂಬಲಿತ ಅಭ್ಯರ್ಥಿಯ ಪರ ಬಿಜೆಪಿ ಹಾಗು ಕಾಂಗ್ರೆಸ್ ಕಾರ್ಯಕರ್ತರು ಪ್ರಚಾರ ನಡೆಸಿದ್ದಾರೆ.

ಮಂಗಳೂರು, ಡಿ.21: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಎರಡು ಹಂತದಲ್ಲಿ ಗ್ರಾಮ ಪಂಚಾಯತ್ ಚುನಾವಣೆ ನಡೆಯಲಿದ್ದು, ಡಿ.22ರಂದು ಮಂಗಳೂರು, ಮೂಡುಬಿದ್ರೆ ಹಾಗೂ ಬಂಟ್ವಾಳ ತಾಲೂಕು ವ್ಯಾಪ್ತಿಯಲ್ಲಿ ಮೊದಲ ಹಂತದ ಮತದಾನ ನಡೆಯಲಿದೆ. ಡಿ.27ರಂದು 2ನೇ ಹಂತದ ಚುನಾವಣೆ ನಡೆಯಲಿದ್ದು, ಜಿಲ್ಲೆಯ ಬೆಳ್ತಂಗಡಿ, ಸುಳ್ಯ, ಪುತ್ತೂರಿನಲ್ಲಿ ಮತದಾನಕ್ಕೆ ವ್ಯವಸ್ಥೆ ಮಾಡಲಾಗಿದೆ.

ಗ್ರಾಮ ಪಂಚಾಯತ್ ಚುನಾವಣೆ ಪಕ್ಷದ ಚಿಹ್ನೆಯಡಿ ನಡೆಯದಿದ್ದರೂ ಬೆಂಬಲಿತ ಅಭ್ಯರ್ಥಿಯ ಪರ ಬಿಜೆಪಿ ಹಾಗು ಕಾಂಗ್ರೆಸ್ ಕಾರ್ಯಕರ್ತರು ಪ್ರಚಾರ ನಡೆಸಿದ್ದಾರೆ. ಮೊದಲ ಹಂತದಲ್ಲಿ ಮಂಗಳೂರು, ಮೂಡುಬಿದ್ರೆ, ಬಂಟ್ವಾಳ ತಾಲೂಕಿನ ಒಟ್ಟು 106 ಗ್ರಾಮ ಪಂಚಾಯಿತಿಯ 1681 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ಈ ಮೂರು ತಾಲೂಕುಗಳಲ್ಲಿ 6,86,692 ಮತದಾರರಿದ್ದು ಒಟ್ಟು 817 ಮತಗಟ್ಟೆಗಳ ವ್ಯವಸ್ಥೆಯನ್ನು ಮಾಡಲಾಗಿದೆ.

ಗ್ರಾಮ ಪಂಚಾಯತ್ ಚುನಾವಣೆ ಹಿನ್ನೆಲೆಯಲ್ಲಿ ಮಂಗಳೂರು ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಶಾಂತಿಯುತ ಚುನಾವಣೆ ನಡೆಸುವ ನಿಟ್ಟಿನಲ್ಲಿ ಐಪಿಸಿ ಸೆಕ್ಷನ್ 144 ರನ್ವಯ ನಿಷೇಧಾಜ್ಞೆ ಹೊರಡಿಸಲಾಗಿದೆ.  ಮಂಗಳೂರು ಮತ್ತು ಮೂಡುಬಿದಿರೆ ಹಾಗು ತಾಲೂಕುಗಳಲ್ಲಿ  ಡಿಸೆಂಬರ್ 22ರಂದು ಸಂಜೆ 5 ಗಂಟೆ ವರೆಗೆ ನಿಷೇಧಾಜ್ಞೆ ಇರಲಿದೆ. ಹೀಗಾಗಿ ಮತದಾನ ಕೇಂದ್ರಗಳ 200 ಮೀಟರ್ ವ್ಯಾಪ್ತಿಯಲ್ಲಿ ಮತ ಚಲಾಯಿಸಲು ಬರುವ ಮತದಾರರನ್ನು ಹೊರತುಪಡಿಸಿ ಇತರ ವ್ಯಕ್ತಿಗಳಿಗೆ ಐದು ಅಥವಾ ಅದಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ಗುಂಪು ಸೇರುವುದನ್ನು ನಿಷೇಧಿಸಲಾಗಿದೆ.