ಬಾಲಕನ ಅಪಹರಣ ; ಕ್ಷಿಪ್ರ ಕಾರ್ಯಾಚರಣೆ ಮಾಡಿದ ಪೊಲೀಸ್ ತಂಡಕ್ಕೆ ಅಭಿನಂದನೆ 

21-12-20 09:10 pm       Mangaluru Correspondant   ಕರಾವಳಿ

ಉಜಿರೆ ಬಾಲಕನ ಅಪಹರಣ ಪ್ರಕರಣವನ್ನು ಕೇವಲ 36 ಗಂಟೆಯಲ್ಲೇ ಭೇದಿಸಿದ ದ.ಕ. ಜಿಲ್ಲಾ ಎಸ್ಪಿ ಲಕ್ಷ್ಮೀಪ್ರಸಾದ್ ನೇತೃತ್ವದ ಪೊಲೀಸ್ ತಂಡವನ್ನು ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅಭಿನಂದಿಸಿದ್ದಾರೆ. 

ಮಂಗಳೂರು, ಡಿ.21: ಸುಳಿವೇ ಇಲ್ಲದಿದ್ದರೂ ಉಜಿರೆ ಬಾಲಕನ ಅಪಹರಣ ಪ್ರಕರಣವನ್ನು ಕೇವಲ 36 ಗಂಟೆಯಲ್ಲೇ ಭೇದಿಸಿದ ದ.ಕ. ಜಿಲ್ಲಾ ಎಸ್ಪಿ ಲಕ್ಷ್ಮೀಪ್ರಸಾದ್ ನೇತೃತ್ವದ ಪೊಲೀಸ್ ತಂಡವನ್ನು ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅಭಿನಂದಿಸಿದ್ದಾರೆ. 

ಪೊಲೀಸ್ ತಂಡವನ್ನು ಅಭಿನಂದಿಸಿ ಮಾತನಾಡಿದ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಬಾಲಕನ ಅಪಹರಣ ಜಿಲ್ಲೆಯ ಜನತೆಯ ಆತಂಕಕ್ಕೆ ಕಾರಣವಾಗಿತ್ತು. ಪೊಲೀಸ್ ತಂಡ ಕರಾರುವಕ್ಕಾಗಿ, ಯೋಜನಾ ಬದ್ಧವಾಗಿ ಕಾರ್ಯಾಚರಣೆ ಮಾಡಿ ಆರೋಪಿಗಳನ್ನು ಬಂಧಿಸಿರುವುದು ಶ್ಲಾಘನೀಯ. ಪೊಲೀಸರ ಈ ಕಾರ್ಯ ಎಲ್ಲರಿಗೂ ಪ್ರೇರಣೆಯಾಗಲಿ ಎಂದರು.

ಜಿಲ್ಲೆಯಲ್ಲಿ ಕರ್ತವ್ಯನಿರತ ಪೊಲೀಸರ ಮೇಲೆ ಹಲ್ಲೆ ನಡೆಯುತ್ತಿರುವ ಕೃತ್ಯ ಖಂಡನೀಯ. ಇಂತಹ ಆರೋಪಿಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮಕ್ಕೆ ಪೊಲೀಸರಿಗೆ ಸೂಚನೆ ನೀಡಲಾಗಿದೆ ಎಂದು ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದರು.

ಅಭಿನಂದನೆ ಸ್ವೀಕರಿಸಿ ಮಾತನಾಡಿದ ಜಿಲ್ಲಾ ಎಸ್ಪಿ ಲಕ್ಷ್ಮೀಪ್ರಸಾದ್,  ಕಾರ್ಯಾಚರಣೆಯ ಹಿಂದೆ ಇಡೀ ಪೊಲೀಸ್ ತಂಡದ ಶ್ರಮವಿದೆ. ಅಧಿಕಾರಿಗಳು ಘಟನೆ ನಡೆದ ಬಳಿಕ ಎರಡು ದಿನ ನಿದ್ದೆಬಿಟ್ಟು ಕೆಲಸ ಮಾಡಿದ್ದಾರೆ. ಎಲ್ಲರ ಸಹಕಾರದಿಂದ ಇದು ಸಾಧ್ಯವಾಗಿದೆ ಎಂದರು.
ಮೇಯರ್ ದಿವಾಕರ್, ಡಿವೈಎಸ್ಪಿ ವೆಲೆಂಟೈನ್ ಡಿಸೋಜ, ಇನ್‌ಸ್ಪೆಕ್ಟರ್ ಸಂದೇಶ್, ಎಸ್ಸೈಗಳಾದ ನಂದಕುಮಾರ್, ರವಿ ಬಿ.ಎಸ್., ಪವನ್, ಈರಯ್ಯ, ಬಿಜೆಪಿ ಜಿಲ್ಲಾ ವಕ್ತಾರ ಜಗದೀಶ್ ಶೇಣವ ಉಪಸ್ಥಿತರಿದ್ದರು.

ನಗರ ಪೊಲೀಸರಿಗೂ ಅಭಿನಂದನೆ :

ಇತ್ತೀಚಿನ ಗೋಡೆ ಬರಹ ಪ್ರಕರಣವನ್ನು ಯಶಸ್ವಿಯಾಗಿ ಭೇದಿಸಿ ಆರೋಪಿಗಳನ್ನು ಬಂಧಿಸಿದ ನಗರ ಪೊಲೀಸರನ್ನೂ ಅಭಿನಂದಿಸಲಾಗುವುದು. ಯಾವುದೇ ಸುಳಿವಿಲ್ಲದ ಈ ಪ್ರಕರಣವನ್ನು ಬೇಧಿಸುವುದು ನಗರ ಪೊಲೀಸರಿಗೆ ದೊಡ್ಡ ಸವಾಲಾಗಿತ್ತು. ಆದರೆ ಸೂಕ್ಷ್ಮವಾಗಿ ತನಿಖೆ ನಡೆಸಿ ಮೂವರನ್ನು ಬಂಧಿಸಿದ್ದಾರೆ. ಇನ್ನೂ ಇಬ್ಬರ ಬಂಧನ ಬಾಕಿಯಿದೆ ಎಂಬ ಮಾಹಿತಿಯಿದ್ದು, ಆ ಬಳಿಕ ನಗರ ಪೊಲೀಸರನ್ನು ಅಭಿನಂದನೆ ಸಲ್ಲಿಸಲಾಗುವುದು ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಅಭಿನಂದನೆ ಹೇಳಿದರು.

MP Nalin Kumar Kateel and district in-charge minister Kota Srinivas Poojary congratulated superintendent of police B M Laxmi Prasad and his team here at DC office on Monday, December 21, for cracking the Ujire kidnap case where an eight-year-old boy was abducted by a gang of men in a car.