ಪೊಲೀಸರ ಕರ್ತವ್ಯಕ್ಕೆ ಅಡ್ಡಿ ಪ್ರಕರಣ ; ಇಬ್ಬರಿಗೆ ಜೈಲು ಶಿಕ್ಷೆ

22-12-20 10:52 am       Mangalore Correspondent   ಕರಾವಳಿ

ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಪ್ರಕರಣದಲ್ಲಿ ಇಬ್ಬರು ಆರೋಪಿಗಳಿಗೆ ಜೈಲು ಶಿಕ್ಷೆ ವಿಧಿಸಿದೆ. 

ಮಂಗಳೂರು, ಡಿ.22 : ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಪ್ರಕರಣದಲ್ಲಿ ಇಬ್ಬರು ಆರೋಪಿಗಳಿಗೆ ಮಂಗಳೂರಿನ 4ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಜೈಲು ಶಿಕ್ಷೆ ವಿಧಿಸಿದೆ. 

ಮೂಲತಃ ಕೆಳಿಂಜಾರು ನಿವಾಸಿ, ಪ್ರಸ್ತುತ ಕಲ್ಲಡ್ಕದ ನಿವಾಸಿಯಾಗಿರುವ ಮುಹಮ್ಮದ್ ಇರ್ಷಾದ್(30) ಮತ್ತು ಬಂಟ್ವಾಳ ಪುದು ನಿವಾಸಿ ಸದ್ದಾಂ ಹುಸೇನ್(30) ಶಿಕ್ಷೆಗೊಳಗಾದವರು.

2018ರ ಮೇ 30ರ ಮಧ್ಯರಾತ್ರಿ ದರೋಡೆಗೆ ಸಂಚು ಹೂಡಿರುವ ಬಗ್ಗೆ ಖಚಿತ ಮಾಹಿತಿ ಆಧರಿಸಿ ಬಂಟ್ವಾಳ ಗ್ರಾಮಾಂತರ ಪೊಲೀಸರು ಬಿ.ಸಿ.ರೋಡ್- ಬೆಳ್ತಂಗಡಿ ರಸ್ತೆಯ ಮಣಿಹಳ್ಳ ಜಂಕ್ಷನ್‌ನಲ್ಲಿ ಕಾರ್ಯಾಚರಣೆಗೆ ಇಳಿದಿದ್ದರು. ಬಂಟ್ವಾಳ ಗ್ರಾಮಾಂತರ ಠಾಣಾ ಪಿಎಸ್‌ಐ ಪ್ರಸನ್ನ ಎಂ.ಎಸ್. ಹಾಗೂ 5 ಮಂದಿ ಪೊಲೀಸ್ ಸಿಬ್ಬಂದಿ ತಪಾಸಣೆಯಲ್ಲಿ ನಿರತರಾಗಿದ್ದರು. 

ಈ ವೇಳೆ ಆಗಮಿಸಿದ ಕಾರೊಂದು ಪೊಲೀಸರಿಗೆ ಡಿಕ್ಕಿಯಾಗಿ ಪರಾರಿಯಾಗಲು ಮುಂದಾಗಿದ್ದು ಪೊಲೀಸರು ಕಾರಿನ ಚಕ್ರಕ್ಕೆ ಗುಂಡು ಹಾರಿಸಿದ್ದರು. ಕಾರು ಪಕ್ಕದ ತೋಡಿಗೆ ಬಿದ್ದಿತ್ತು. ಈ ವೇಳೆ, ಅದರಲ್ಲಿದ್ದ ಇಬ್ಬರು ಓಡಿ ತಪ್ಪಿಸಿಕೊಂಡಿದ್ದರೆ, ಮತ್ತಿಬ್ಬರು ಪೊಲೀಸರ ಮೇಲೆ ತಲವಾರು ದಾಳಿಗೆ ಮುಂದಾಗಿದ್ದರು. ಬಳಿಕ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿದ್ದರು.

ಕಾರನ್ನು ತಪಾಸಣೆ ನಡೆಸಿದಾಗ ತಲವಾರು, ಮೆಣಸಿನ ಹುಡಿ, ಮಂಕಿ ಕ್ಯಾಪ್, ಹಗ್ಗ ಮೊದಲಾದವು ಪತ್ತೆಯಾಗಿದ್ದವು. ಆರೋಪಿಗಳ ವಿರುದ್ಧ ದರೋಡೆಗೆ ಸಿದ್ಧತೆ ನಡೆಸಿರುವುದು, ಪೊಲೀಸರ ಕರ್ತವ್ಯಕ್ಕೆ ಅಡ್ಡಿ ಮತ್ತು ಕೊಲೆಯತ್ನ ಪ್ರಕರಣ ದಾಖಲಾಗಿದ್ದವು. ಬಂಟ್ವಾಳ ಗ್ರಾಮಾಂತರ ಠಾಣಾ ಪಿಎಸ್‌ಐ ಪ್ರಸನ್ನ ಎಂ.ಎಸ್. ಪ್ರಕರಣ ದಾಖಲಿಸಿಕೊಂಡಿದ್ದರು. ವೃತ್ತ ನಿರೀಕ್ಷಕ ಟಿ.ಡಿ. ನಾಗರಾಜ್ ನ್ಯಾಯಾಲಯಕ್ಕೆ ದೋಷಾರೋಪ ಸಲ್ಲಿಸಿದ್ದರು.

ವಿಚಾರಣೆ ನಡೆಸಿದ ನ್ಯಾಯಾಧೀಶ ಟಿ.ಪಿ.ರಾಮಲಿಂಗೇ ಗೌಡ ಕರ್ತವ್ಯಕ್ಕೆ ಅಡ್ಡಿ ಪ್ರಕರಣದಲ್ಲಿ ಇಬ್ಬರು ಆರೋಪಿಗಳಿಗೆ ಒಂದು ವರ್ಷದ ಸಾದಾ ಕಾರಾಗೃಹ ಶಿಕ್ಷೆ ಹಾಗೂ ತಲಾ 3,000 ರೂ. ದಂಡ ವಿಧಿಸಿದ್ದಾರೆ. ದಂಡ ಪಾವತಿಸಲು ತಪ್ಪಿದರೆ ಒಂದು ತಿಂಗಳು ಹೆಚ್ಚುವರಿ ಕಾರಾಗೃಹ ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ.

ಇಬ್ಬರು ಆರೋಪಿಗಳು ಸಾಕ್ಷಾಧಾರ ಕೊರತೆಯ ಹಿನ್ನೆಲೆಯಲ್ಲಿ ಖುಲಾಸೆಗೊಂಡಿದ್ದಾರೆ. ಓರ್ವ ಆರೋಪಿ ಮುಹಮ್ಮದ್ ಮುಕ್ಸಿನ್ ವಿಚಾರಣೆಯ ಕೊನೆಯ ಹಂತದಲ್ಲಿ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದಾನೆ. ಆತನ ವಿರುದ್ಧ ಪ್ರತ್ಯೇಕ ಪ್ರಕರಣ ಮುಂದುವರಿಯಲಿದೆ. ಸರಕಾರದ ಪರವಾಗಿ ಸರಕಾರಿ ಅಭಿಯೋಜಕ ಹರೀಶ್ಚಂದ್ರ ಉದ್ಯಾವರ ವಾದಿಸಿದ್ದಾರೆ.