ಬಪ್ಪನಾಡು ದೇವಿಗೆ 365 ದಿನವೂ ಮಲ್ಲಿಗೆ ; ಡಿಕೆಶಿ ಹೆಸರಲ್ಲಿ ಅಭಯಾರ್ಪಣೆ !

10-08-20 05:37 am       Mangalore Reporter   ಕರಾವಳಿ

ಬಪ್ಪನಾಡು ದುರ್ಗಾಪರಮೇಶ್ವರಿ ದೇವಿ ಈ ಬಾರಿ ಲಾಕ್ ಡೌನ್ ಸಂದರ್ಭದಲ್ಲಿ ಮಲ್ಲಿಗೆ ಅಟ್ಟೆಯ ಅಭಾವ ಕಂಡಿದ್ದಳಂತೆ. ಈ ಮಾತು ಕೇಳಿದ ಶಾಸಕರೊಬ್ವರ ಮನವೂ ಕರಗಿತ್ತಂತೆ.. 

ಮಂಗಳೂರು, ಆಗಸ್ಟ್ 9: ಯಾವತ್ತೂ ಮಲ್ಲಿಗೆ ಹೂವಿನ ಕೊರತೆಯನ್ನೇ ಎದುರಿಸಿರದ ಬಪ್ಪನಾಡು ದುರ್ಗಾಪರಮೇಶ್ವರಿ ದೇವಿ ಈ ಬಾರಿ ಲಾಕ್ ಡೌನ್ ಸಂದರ್ಭದಲ್ಲಿ ಮಲ್ಲಿಗೆ ಅಟ್ಟೆಯ ಅಭಾವ ಕಂಡಿದ್ದಳಂತೆ. ದೇವಿಯ ಪೂಜೆಗೂ ಹೀಗಾಯ್ತಲ್ಲ ಅಂತ ಅಲ್ಲಿನ ಅರ್ಚಕರು ಮರುಕವನ್ನೂ ಪಟ್ಟಿದ್ದರಂತೆ. ಈ ಮಾತು ಕೇಳಿದ ಶಾಸಕರೊಬ್ವರ ಮನವೂ ಕರಗಿತ್ತಂತೆ.. 

ಹೌದು.. ಮೂಲ್ಕಿ ಸೀಮೆಯ ತಾಯಿ ಬಪ್ಪನಾಡು ದೇವಿಗೆ ಇನ್ನು ಯಾವತ್ತೂ ಮಲ್ಲಿಗೆಯ ಕೊರತೆ ಎದುರಾಗಬಾರದು. ಯಾವುದೇ ಲಾಕ್ ಡೌನ್ ಬರಲಿ, ಮುಷ್ಕರವೇ ಎದುರಾಗಲಿ.. ಪ್ರತಿ ದಿನವೂ ಮಲ್ಲಿಗೆ ಅಟ್ಟೆ ದೇವಿಗೆ ಅರ್ಪಣೆಯಾಗಲೇಬೇಕು ಎಂದು ನಿರ್ಧರಿಸಿದ್ದು ಮೂಡುಬಿದ್ರೆಯ ಮಾಜಿ ಶಾಸಕ ಅಭಯಚಂದ್ರ ಜೈನ್.‌ ದೇವಸ್ಥಾನಕ್ಕೆ ತೆರಳಿದ್ದ ವೇಳೆ ಅರ್ಚಕರ ಮಾತು ಕೇಳಿದ ಅಭಯಚಂದ್ರ ಜೈನ್, ವರ್ಷದ 365 ದಿನವೂ ತಾನೇ ಮಲ್ಲಿಗೆ ಅಟ್ಟೆ ಅರ್ಪಿಸುತ್ತೇನೆ ಎಂದು ಅಭಯ ನೀಡಿದ್ದಾರೆ. 

ಆದರೆ, ಅಭಯರು ತಾವು ಅರ್ಪಿಸುವ ಮಲ್ಲಿಗೆ ಅಟ್ಟೆಯ ಅರ್ಪಣೆಯ ಹಿಂದೆ ರಾಜಕೀಯ ಉದ್ದೇಶ ಇಟ್ಟುಕೊಂಡಿದ್ದಾರೆ. ರಾಜ್ಯದ ಕಾಂಗ್ರೆಸ್ ಸಾರಥ್ಯ ವಹಿಸಿರುವ ಡಿ.ಕೆ.ಶಿವಕುಮಾರ್ ಹೆಸರಲ್ಲಿ ಮಲ್ಲಿಗೆ ಅಟ್ಟೆ ದೇವಿಗೆ ಅರ್ಪಣೆಯಾಗಲಿ ಎಂದಿದ್ದಾರೆ. ತಮ್ಮ ಹೆಸರು ಬೇಡ. ಡಿಕೆಶಿ ಹೆಸರಿನಲ್ಲಿಯೇ ದೇವಿಗೆ ಮಲ್ಲಿಗೆ ಸೇವೆ ರೂಪದಲ್ಲಿ ಅರ್ಪಿಸುವುದಾಗಿ ದೇವಸ್ಥಾನದಲ್ಲಿ ಬರೆಸಿಕೊಂಡಿದ್ದಾರಂತೆ. ದೇವಿಯ ಅಭಯ ಡಿಕೆಶಿಗೆ ಸದಾ ಇರಲೆಂದು ಅಭಯರು ಹಾರೈಸಿದ್ದಾರೆಂದು ಜೈ‌ನರ ಆಪ್ತರು ತಿಳಿಸಿದ್ದಾರೆ. 

ಮುಲ್ಕಿ ಅರಸರಾದ ದುಗ್ಗಣ್ಣ ಸಾವಂತರ ಸಮ್ಮುಖದಲ್ಲಿ ಅಭಯಚಂದ್ರ ಜೈನ್ ಮತ್ತು ಕಾಂಗ್ರೆಸ್ ಪ್ರಮುಖರು ಸೇರಿ ಮಲ್ಲಿಗೆ ಸೇವೆ ಅರ್ಪಿಸಿದ್ದು ವಿಶೇಷ.