ಕೋವಿಡ್ ನಡುವೆ ಸರಳ ಕ್ರಿಸ್ಮಸ್ ; ಚರ್ಚ್ ಗಳಿಗೆ ಮಂಗಳೂರು ಬಿಷಪ್ ಕರೆ

23-12-20 04:55 pm       Mangalore Correspondent   ಕರಾವಳಿ

ಕೋವಿಡ್ ಸಂಕಷ್ಟದ ನಡುವೆ ಈ ಬಾರಿ ಸರಳ ಕ್ರಿಸ್‌ಮಸ್ ಆಚರಣೆ ನಮ್ಮದಾಗಲಿ ಎಂದು ಬಿಷಪ್ ಡಾ. ಪೀಟರ್ ಪಾವ್ಲ್ ಸಲ್ಡಾನಾ ಕರೆ ನೀಡಿದ್ದಾರೆ.

ಮಂಗಳೂರು, ಡಿ.23: ಕೋವಿಡ್ ಸಂಕಷ್ಟದ ನಡುವೆ ಈ ಬಾರಿ ಸರಳ ಕ್ರಿಸ್‌ಮಸ್ ಆಚರಣೆ ನಮ್ಮದಾಗಲಿ ಎಂದು ಮಂಗಳೂರು ಕ್ರೈಸ್ತ ಧರ್ಮಪ್ರಾಂತ್ಯದ ಬಿಷಪ್ ಡಾ. ಪೀಟರ್ ಪಾವ್ಲ್ ಸಲ್ಡಾನಾ ಕರೆ ನೀಡಿದ್ದಾರೆ. 

ಕೊಡಿಯಾಲ್ ಬೈಲಿನ ಬಿಷಪ್ ಹೌಸ್‌ನಲ್ಲಿ ಇಂದು ಅವರು ಸುದ್ದಿಗೋಷ್ಠಿಯಲ್ಲಿ ಕ್ರಿಸ್‌ಮಸ್ ಸಂದೇಶ ನೀಡಿದರು.

ಗೋದಲಿಯಲ್ಲಿ ಮಲಗಿದ್ದ ಬಾಲಯೇಸು ಆಹಾರವಿಲ್ಲದ ಹಸಿದ ಹೊಟ್ಟೆಯಲ್ಲಿ ನಿದ್ದೆಗೆ ಜಾರುವ ಬಡವರ ಕಷ್ಟಗಳನ್ನು ಅನುಭವಿಸಿದವರು. ವಸತಿ ಇಲ್ಲದೆ ಬೀದಿ ಬದಿಗಳಲ್ಲಿ ಮಲಗುವ ನಿರಾಶ್ರಿತ ಆತಂಕಗಳನ್ನು ಅರಿತವರು. ಕೋವಿಡ್ ಮತ್ತು ಇತರ ರೋಗಗಳಿಂದ ಔಷಧಕ್ಕಾಗಿ ಹಣ ಇಲ್ಲದವರ ಪಾಡನ್ನು ತಿಳಿದವರು. ತಮ್ಮ ಮಕ್ಕಳಿಗೆ ಶಿಕ್ಷಣ ಕೊಡಲು ಕಷ್ಟಪಡುತ್ತಿರುವ ಹೆತ್ತವರ ದುಖವನ್ನು ಅರಿತವರು ಯೇಸವಾಗಿದ್ದು, ಇಂತಹ ಸಮಾಜದಲ್ಲಿರುವ ನಾವು ಅಶಕ್ತರೊಡನೆ ಬೆರೆತು ಕ್ರಿಸ್‌ಮಸ್ ಆರಿಸೋಣ ಎಂದು ಅವರು ಹೇಳಿದರು.

ಮಂಗಳೂರು ಧರ್ಮಪ್ರಾಂತ್ಯವು ಬಡವರಿಗೆ ನೆರವಾಗುವ ನಿಟ್ಟಿನಲ್ಲಿ ಕೋವಿಡ್ ಲಾಕ್‌ಡೌನ್ ಸಂದರ್ಭದಲ್ಲಿ ಸುಮಾರು 1.5 ಕೋಟಿ ರೂ. ಮೌಲ್ಯದ ನಾನಾ ರೀತಿಯ ನೆರವನ್ನು ನೀಡಿದೆ. ವಲಸೆ ಕಾರ್ಮಿಕರಿಗೆ ವಸತಿ ಉಪಹಾರ ಒದಗಿಸಿದೆ. ಹೊಸ ವರ್ಷದಲ್ಲಿ ಬಡವರ ಮನೆಗಳ ದುರಸ್ತಿ ಹಾಗೂ ಇತರ ಸೌಕರ್ಯಗಳ ಅಭಿವೃದ್ಧಿಗೆ ಪ್ರಯತ್ನಿಸಿ, ಅಶಕ್ತರನ್ನು ಸಬಲರನ್ನಾಗಿಸಲು ಪ್ರಯತ್ನಿಸೋಣ ಎಂದು ಅವರು ಸಂದೇಶ ನೀಡಿದರು.

ಕ್ರಿಸ್‌ಮಸ್ ಹಬ್ಬವು ನಮ್ಮ ಸಂಕುಚಿತ ದೃಷ್ಟಿಕೋನವನ್ನು ತ್ಯಜಿಸಲು ಮತ್ತು ಕಷ್ಟದಲ್ಲಿರುವವರು, ಬಡವರು, ತಿರಸ್ಕೃತರನ್ನು ಸ್ವಾಗತಿಸಲು ನಮಗೆ ಪಂಥಾಹ್ವಾನವನ್ನು ನೀಡುತ್ತಿದೆ ಎಂದು ಅವರು ಹೇಳಿದರು. 

ಕೋವಿಡ್ ಮುಂಜಾಗೃತೆ ವಹಿಸಿ ಚರ್ಚ್‌ಗಳಲ್ಲಿ ಪ್ರಾರ್ಥನೆ

ಕೋವಿಡ್ ಹಿನ್ನೆಲೆಯಲ್ಲಿ ಕ್ರಿಸ್‌ಮಸ್ ಹಬ್ಬದ ಪ್ರಯುಕ್ತ ನಡೆಯುವ ಪ್ರಾರ್ಥನಾ ವಿಧಿ ವಿಧಾನಗಳಲ್ಲಿ ಹೆಚ್ಚು ಜನ ಸೇರದಂತೆ, ಶಿಸ್ತಿನೊಂದಿಗೆ ಪೂಜೆಗಳನ್ನು ಚರ್ಚ್‌ಗಳಲ್ಲಿ ನೆರವೇರಿಸಲಾಗುವುದು. ಚರ್ಚ್‌ಗಳಲ್ಲಿ ವಿವಿಧ ಸಮಯಗಳಲ್ಲಿ ಪ್ರಾರ್ಥನೆಗಳನ್ನು ನಡೆಸುವ ಮೂಲಕ ಏಕಕಾಲದಲ್ಲಿ ಹೆಚ್ಚು ಭಕ್ತರು ಸೇರುವುದನ್ನು ನಿಯಂತ್ರಿಸಲಾಗುವುದು. ಅಲ್ಲದೆ ಕ್ರಿಸ್‌ಮಸ್ ಹಿನ್ನೆಲೆಯಲ್ಲಿ ಸಂಜೆಯ ವೇಳೆಗೆ ನಡೆಯುವ ಹಲವು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಮೊಟಕುಗೊಳಿಸಲಾಗಿದೆ ಎಂದು ಬಿಷಪ್ ರೆ.ಡಾ. ಪೀಟರ್ ಪಾವ್ಲ್ ಸಲ್ಡಾನಾ ಹೇಳಿದ್ದಾರೆ. ‌

ಗೋಷ್ಠಿಯಲ್ಲಿ ಸಾರ್ವಜನಿಕ ಸಂಪರ್ಕ ಅಧಿಕಾರಿಗಳಾದ ರಾಯ್ ಕ್ಯಾಸ್ತಲಿನೊ, ರೆ.ಫಾ ವಿಕ್ಟರ್ ವಿಜಯ್ ಲೋಬೋ, ಫಾ. ರಿಚ್ಚರ್ಡ್ ಲೋಬೋ, ಎಲಿಯಾಸ್ ಫೆರ್ನಾಂಡಿಸ್ ಉಪಸ್ಥಿತರಿದ್ದರು.

Video: 

Bishop of Mangalore diocese Dr Peter Paul Saldanha on Wednesday December 23 in his Christmas message said stressed on helping the poor and needy.