ನಿಯಮ ಪಾಲನೆ ಲೋಪ ; ಸ್ಮಾರ್ಟ್‌ ಸಿಟಿ ಕಾಮಗಾರಿ ತಾತ್ಕಾಲಿಕ ಸ್ಥಗಿತ !

24-12-20 05:10 pm       Mangalore Correspondent   ಕರಾವಳಿ

ಕಾಮಗಾರಿ ನಡೆಸುತ್ತಾ ನಿತ್ಯ ಸಂಚಾರಿಗಳಿಗೆ ಕಿರಿಕಿರಿ ಉಂಟು ಮಾಡುತ್ತಿರುವ ಮಂಗಳೂರು ಸ್ಮಾರ್ಟ್‌ ಸಿಟಿ ಕಾಮಗಾರಿಗಳಿಗೆ ತಾತ್ಕಾಲಿಕ ಬ್ರೇಕ್ ಬೀಳಲಿದೆ. 

ಮಂಗಳೂರು, ಡಿ.24 : ನಗರದ ಎಲ್ಲೆಂದರಲ್ಲಿ ಕಾಮಗಾರಿ ನಡೆಸುತ್ತಾ ನಿತ್ಯ ಸಂಚಾರಿಗಳಿಗೆ ಕಿರಿಕಿರಿ ಉಂಟು ಮಾಡುತ್ತಿರುವ ಮಂಗಳೂರು ಸ್ಮಾರ್ಟ್‌ ಸಿಟಿ ಕಾಮಗಾರಿಗಳಿಗೆ ತಾತ್ಕಾಲಿಕ ಬ್ರೇಕ್ ಬೀಳಲಿದೆ. 

ಕಾಮಗಾರಿ ತಾತ್ಕಾಲಿಕ ನಿಲ್ಲಿಸುವ ಕುರಿತಾಗಿ ಪಾಲಿಕೆ ಆಯುಕ್ತ ಹಾಗೂ ಮಂಗಳೂರು ಸ್ಮಾರ್ಟ್ ಸಿಟಿ ಲಿಮಿಟೆಡ್‌‌ನ ವ್ಯವಸ್ಥಾಪಕ ನಿರ್ದೇಶಕ ಅಕ್ಷಯ್ ಶ್ರೀಧರ್‌ ಹೈಕೋರ್ಟ್‌ಗೆ ತಿಳಿಸಿದ್ದಾರೆ.

ನಿರ್ಮಾಣ ಹಾಗೂ ನೆಲಸಮ ತ್ಯಾಜ್ಯ ನಿರ್ವಹಣೆ- 2016ರ ನಿಯಮಗಳನ್ನು ಅನುಸರಿಸುವ ತನಕ ಮಂಗಳೂರಿನ ಸ್ಮಾರ್ಟ್ ಸಿಟಿ ಯೋಜನೆಗೆ ಸಂಬಂಧಿತ ಕಾಮಗಾರಿಗಳನ್ನು ಸ್ಥಗಿತಗೊಳಿಸಲಾಗುವುದು. ಈ ಸಂಬಂಧ ಆಯಾ ಗುತ್ತಿಗೆದಾರರಿಗೆ ಸೂಚನೆ ನೀಡಲಾಗುವುದು ಎಂದು ಸ್ಮಾರ್ಟ್ ಸಿಟಿ ಲಿಮಿಟೆಡ್‌‌ ವ್ಯವಸ್ಥಾಪಕ ನಿರ್ದೇಶಕ ಅಕ್ಷಯ್ ಶ್ರೀಧರ್ ತಿಳಿಸಿದ್ದಾರೆ.

ಪಚ್ಚನಾಡಿ, ಮಂದಾರದಲ್ಲಿ ಘನತ್ಯಾಜ್ಯ ಘಟಕದಿಂದ ಉಂಟಾದ ಅನಾಹುತಗಳ ಬಗ್ಗೆ ಕರ್ನಾಟಕ ಕಾನೂನು ಸೇವಾ ಪ್ರಾಧಿಕಾರ ಸಲ್ಲಿಸಿರುವ ಅರ್ಜಿಯನ್ನು ಮುಖ್ಯ ನ್ಯಾ.ಎ.ಎಸ್‌.ಓಕಾ ಹಾಗೂ ನ್ಯಾ.ಎಸ್‌.ವಿಶ್ವಜಿತ್ ಶೆಟ್ಟಿ ಅವರಿದ್ದ ವಿಭಾಗೀಯ ನ್ಯಾಯಪೀಠ ವಿಚಾರಣೆ ನಡೆಸಿದ್ದು ಈ ಸಂದರ್ಭದಲ್ಲಿ ಪಾಲಿಕೆ ಆಯುಕ್ತ ಅಕ್ಷಯ್ ಶ್ರೀಧರ್‌ ವಿಡಿಯೋ ಕಾನ್ಫರೆನ್ಸ್‌‌ ಮೂಲಕ ಹಾಜರಾಗಿದ್ದರು.

ನ್ಯಾಯಪೀಠ, ಅಕ್ಷಯ್ ಶ್ರೀಧರ್‌ ಅವರನ್ನು ಪ್ರಶ್ನೋತ್ತರ ವಿಧಾನದಲ್ಲಿ ವಿಚಾರಣೆ ನಡೆಸಿದ್ದು, ಸ್ಮಾರ್ಟ್‌ ಸಿಟಿ ಕಾಮಗಾರಿಗಳ ಅನುಷ್ಠಾನದಲ್ಲಿ ನಿಯಮ ಪಾಲಿಸಲಾಗುತ್ತಿದೆಯೇ ಎಂದು ಪ್ರಶ್ನೆ ಮಾಡಿದೆ. ಅಲ್ಲದೆ, ನಿಯಮ ಪಾಲಿಸುತ್ತಿಲ್ಲ ಎಂದಾದರೆ ನಿಯಮಗಳನ್ನು ಪಾಲಿಸುವ ತನಕ ಕಾಮಗಾರಿ ಸ್ಥಗಿತಗೊಳಿಸುತ್ತೀರಾ ಎಂದು ಪ್ರಶ್ನಿಸಿದೆ.

ಇದಕ್ಕೆ ಉತ್ತರಿಸಿದ ಆಯುಕ್ತರು, ಸದ್ರಿ ನಿಯಮಗಳನ್ನು ಪಾಲನೆ ಮಾಡಲಾಗುತ್ತಿಲ್ಲ. 2016ರ ನಿಯಮಗಳನ್ನು ಅನುಸರಿಸುವ ತನಕ ಕಾಮಗಾರಿಗಳನ್ನು ಸ್ಥಗಿತಗೊಳಿಸುವಂತೆ ಗುತ್ತಿಗೆದಾರರಿಗೆ ಸೂಚನೆ ನೀಡಲಾಗುವುದು ಎಂದು ನ್ಯಾಯಪೀಠಕ್ಕೆ ತಿಳಿಸಿದ್ದಾರೆ.