ಬ್ರಿಟನ್ ವೈರಸ್ ಆತಂಕ ದೂರ ; ದ.ಕ. ಜಿಲ್ಲೆಗೆ ಬಂದಿದ್ದ ಯಾರಲ್ಲೂ ಇಲ್ಲ ಸೋಂಕು ! 

24-12-20 10:49 pm       Mangaluru Correspondent   ಕರಾವಳಿ

ಆರೋಗ್ಯ ಇಲಾಖೆ ವತಿಯಿಂದ ಪರೀಕ್ಷೆಗೆ ಒಳಪಡಿಸಿದ್ದು 66 ಮಂದಿಯೂ ನೆಗೆಟಿವ್ ಆಗಿದ್ದಾರೆ. 

ಮಂಗಳೂರು, ಡಿ. 24: ಬ್ರಿಟನ್ ಮೂಲದ ರೂಪಾಂತರಿ ವೈರಸ್ ಕರಾವಳಿಯಲ್ಲಿ ಹುಟ್ಟಿಸಿದ್ದ ಆತಂಕವನ್ನು ಆರೋಗ್ಯ ಇಲಾಖೆ ದೂರ ಮಾಡಿಸಿದೆ. ಡಿ.7ರ ಬಳಿಕ ದಕ್ಷಿಣ ಕನ್ನಡ ಜಿಲ್ಲೆಗೆ 66 ಜನ ಬ್ರಿಟನ್ ನಿಂದ ಬಂದಿದ್ದರು. ಎಲ್ಲರನ್ನೂ ಆರೋಗ್ಯ ಇಲಾಖೆ ವತಿಯಿಂದ ಪರೀಕ್ಷೆಗೆ ಒಳಪಡಿಸಿದ್ದು 66 ಮಂದಿಯೂ ನೆಗೆಟಿವ್ ಆಗಿದ್ದಾರೆ. 

ಬುಧವಾರ 47 ಮಂದಿಯನ್ನು ಪರೀಕ್ಷೆಗೆ ಒಳಪಡಿಸಿದ್ದು 41 ಮಂದಿಯ ವರದಿ ಬಂದಿತ್ತು. ಅವು ನೆಗೆಟಿವ್ ಆಗಿತ್ತು. ಉಳಿದವರನ್ನು ಗುರುವಾರ ಆರ್ ಟಿಪಿಸಿಆರ್ ಪರೀಕ್ಷೆ ನಡೆಸಲಾಗಿದ್ದು ಎಲ್ಲರೂ ಕೋವಿಡ್ ನೆಗೆಟಿವ್ ಆಗಿದ್ದಾರೆ ಎಂದು ಜಿಲ್ಲಾ ಆರೋಗ್ಯಧಿಕಾರಿ ಡಾ.ರಾಮಚಂದ್ರ ಬಾಯರಿ ಹೇಳಿದ್ದಾರೆ. 

66 ಮಂದಿಯ ಪೈಕಿ ಹಲವರು ತಾಯ್ನಾಡಿಗೆ ಬಂದು ಹತ್ತು ದಿನ ಕಳೆದಿತ್ತು. ಎರಡು ದಿನಗಳ ಹಿಂದೆ 15 ಮಂದಿಯಷ್ಟೆ ಇಂಗ್ಲೆಂಡ್ ನಿಂದ ಬಂದಿದ್ದರು. ಅವರು ಸೇರಿದಂತೆ ಈ ಹಿಂದೆ ಬಂದಿದ್ದವರನ್ನೂ ಪರೀಕ್ಷೆ ನಡೆಸಲಾಗಿದೆ. 66 ಮಂದಿಯಲ್ಲಿ ಮೂವರು ಜಿಲ್ಲೆಗೆ ಆಗಮಿಸಿ ಬ್ರಿಟನ್ ಗೆ ಮರಳಿದ್ದಾರೆ. ಇಬ್ಬರು ಬೆಂಗಳೂರಿನಲ್ಲಿದ್ದು ಅಲ್ಲಿಯೇ ಪರೀಕ್ಷೆಗೆ ಒಳಗಾಗಿದ್ದಾರೆ. 

ವರದಿ ನೆಗೆಟಿವ್ ಬಂದಿರುವ ಕಾರಣ ಇನ್ನು ಕ್ವಾರಂಟೈನ್ ಆಗುವ ಅವಶ್ಯಕತೆಯಿಲ್ಲ. ಎರಡು ದಿನಗಳ ಹಿಂದೆ ಬಂದವರು ಮಾತ್ರ ಏಳು ದಿನಗಳ ಕಾಲ ಸ್ವಯಂ ಕ್ವಾರಂಟೈನ್ ಆಗುವಂತೆ ಸೂಚಿಸಲಾಗಿದೆ. ಇದರೊಂದಿಗೆ ದಕ್ಷಿಣ ಕನ್ನಡ ಜಿಲ್ಲೆಗೆ ಬ್ರಿಟನ್ ವೈರಸ್ ಆತಂಕ ತರುವ ಸಾಧ್ಯತೆ ಕಡಿಮೆ ಎಂದು ಆರೋಗ್ಯ ಅಧಿಕಾರಿ ಹೇಳಿದ್ದಾರೆ.