ಕೊಲ್ಲೂರು ; ನದಿಯಲ್ಲಿ ಕೊಚ್ಚಿ ಹೋಗಿದ್ದ ಬೆಂಗಳೂರಿನ ಮಹಿಳೆಯ ಶವ ಪತ್ತೆ, ಆತ್ಮಹತ್ಯೆಯೇ, ಸ್ನಾನಕ್ಕಿಳಿದು ಕೊಚ್ಚಿ ಹೋಗಿದ್ದೇ ? 

30-08-25 09:16 pm       Udupi Correspondent   ಕರಾವಳಿ

ಕೊಲ್ಲೂರು ದೇವಸ್ಥಾನಕ್ಕೆ ಆಗಮಿಸಿ ನಾಪತ್ತೆಯಾಗಿದ್ದ ಬೆಂಗಳೂರು ಮೂಲದ ವಿವಾಹಿತ ಮಹಿಳೆಯ ಮೃತದೇಹ ಮಾವಿನಕಾರು ಎಂಬಲ್ಲಿ ನದಿಯಲ್ಲಿ ಪತ್ತೆಯಾಗಿದೆ.

ಕುಂದಾಪುರ, ಆ.30: ಕೊಲ್ಲೂರು ದೇವಸ್ಥಾನಕ್ಕೆ ಆಗಮಿಸಿ ನಾಪತ್ತೆಯಾಗಿದ್ದ ಬೆಂಗಳೂರು ಮೂಲದ ವಿವಾಹಿತ ಮಹಿಳೆಯ ಮೃತದೇಹ ಮಾವಿನಕಾರು ಎಂಬಲ್ಲಿ ನದಿಯಲ್ಲಿ ಪತ್ತೆಯಾಗಿದೆ.

ಬೆಂಗಳೂರು ತ್ಯಾಗರಾಜ ನಗರ ನಿವಾಸಿ ಸಿ. ಆರ್. ಗೋವಿಂದರಾಜು ಅವರ ಪುತ್ರಿ ವಸುಧಾ ಚಕ್ರವರ್ತಿ (46) ಅವರು ಆ.28ರಂದು ಕೊಲ್ಲೂರಿಗೆ ಆಗಮಿಸಿದ್ದು, ಖಾಸಗಿ ವಸತಿಗೃಹದ ಬಳಿ ಕಾರು ನಿಲ್ಲಿಸಿ ದೇಗುಲಕ್ಕೆ ತೆರಳಿ ಆಂಜನೇಯನ ಗುಡಿಯಲ್ಲಿ ಕೆಲ ಕಾಲ ಕಳೆದು ಸೌಪರ್ಣಿಕಾ ನದಿಯತ್ತ ತೆರಳಿದ್ದು ಸಿಸಿಟಿವಿಯಲ್ಲಿ ಪತ್ತೆಯಾಗಿತ್ತು. ‌ಮೊಬೈಲ್ ಸೇರಿದಂತೆ ಎಲ್ಲ ವಸ್ತುಗಳನ್ನು ಕಾರಿನಲ್ಲಿಯೇ ಬಿಟ್ಟು ಹೋಗಿದ್ದು ಶಂಕೆಗೆ ಕಾರಣವಾಗಿತ್ತು.

ಮುಳುಗು ತಜ್ಞ ಈಶ್ವರ ಮಲ್ಪೆ ಹಾಗೂ ಅಗ್ನಿಶಾಮಕ ದಳದವರು ನದಿಯ ವಿವಿಧ ಕಡೆ ಶೋಧ ನಡೆಸಿದರೂ ಶುಕ್ರವಾರ ಸಂಜೆಯ ತನಕ ಯಾವುದೇ ಸುಳಿವು ಸಿಕ್ಕಿರಲಿಲ್ಲ. ಇತ್ತ ವಿಷಯ ತಿಳಿದು ಆಕೆಯ ಕುಟುಂಬಸ್ಥರು ಕೂಡ ಕೊಲ್ಲೂರಿಗೆ ಆಗಮಿಸಿದ್ದರು. 

ಈಶ್ವರ ಮಲ್ಪೆ ತಂಡ ಹಾಗೂ ಅಗ್ನಿಶಾಮಕದಳ ಶನಿವಾರವೂ ಹುಡುಕಾಟ ನಡೆಸಿತ್ತು. ಹುಡುಕಾಟ ಸಂದರ್ಭದಲ್ಲಿ ಮಾವಿನಕಾರು ಎಂಬಲ್ಲಿ ನದಿಯಲ್ಲಿ ಶವ ಪತ್ತೆಯಾಗಿದೆ. ವಸುಧಾ ಅವರು ಈಜು ಪಟುವಾಗಿದ್ದು ವೇಗವಾಗಿ ಹರಿಯುತ್ತಿದ್ದ ಸೌಪರ್ಣಿಕಾ ನದಿಯಲ್ಲಿ ಸ್ನಾನಕ್ಕಿಳಿದ ಸಂದರ್ಭ ನೀರಿನಲ್ಲಿ ಕೊಚ್ಚಿ ಹೋಗಿದ್ದರೇ, ಆತ್ಮಹತ್ಯೆ ಮಾಡಿಕೊಂಡಿದ್ದಾರೆಯೇ ಎಂಬುದು ಗೊತ್ತಾಗಿಲ್ಲ. ಸ್ಥಳೀಯರು ನದಿಗೆ ಕಾಲು ಜಾರಿ ಬಿದ್ದಿರುವ ಶಂಕೆ ವ್ಯಕ್ತಪಡಿಸಿದ್ದಾರೆ. 

ಕೊಲ್ಲೂರು ಪೊಲೀಸರು, ಸ್ಥಳೀಯರು ಹುಡುಕಾಟದಲ್ಲಿ ತೊಡಗಿಸಿದ್ದರು. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.

ಕೊಲ್ಲೂರಿಗೆ ಬಂದು ನದಿಗೆ ಸ್ನಾನಕ್ಕಿಳಿದಿದ್ದ ಬೆಂಗಳೂರಿನ ಮಹಿಳೆ ನಾಪತ್ತೆ ; ಕಾರು ನಿಲ್ಲಿಸಿ ದೇವಸ್ಥಾನ ಪರಿಸರ ಸುತ್ತಾಡಿ ಈಜಾಟಕ್ಕಿಳಿದ ದೃಶ್ಯ ಸೆರೆ 

The body of a married woman from Bengaluru, who had gone missing after visiting the Kollur temple, has been found in the Souparnika River near Mavinakaru. The circumstances surrounding her death remain unclear – whether it was a case of suicide or a tragic accident during a ritual bath.