ಮತಗಟ್ಟೆ ಮುಂದೆಯೇ ಅಭ್ಯರ್ಥಿ ಚಿಹ್ನೆ ಇರುವ ಚೀಟಿ ಹಂಚಿಕೆ ; ಎಸಿ ಭೇಟಿ ವೇಳೆ ಅಕ್ರಮ ಬೆಳಕಿಗೆ 

27-12-20 01:10 pm       Mangaluru Correspondent   ಕರಾವಳಿ

ಇಂದು ಮತದಾನ ನಡೆಯುತ್ತಿದ್ದ ಮತಗಟ್ಟೆ ಒಂದಕ್ಕೆ ಪುತ್ತೂರು ಸಹಾಯಕ ಕಮಿಷನರ್ ಭೇಟಿ ನೀಡಿದಾಗ, ಮತದಾರರ ಕೈಯಲ್ಲಿ ಅಭ್ಯರ್ಥಿಯ ಚಿಹ್ನೆ ಇರುವುದು ಪತ್ತೆಯಾಗಿದೆ. 

ಪುತ್ತೂರು, ಡಿ.27: ಗ್ರಾಮ ಪಂಚಾಯತ್ ಚುನಾವಣೆ ಪಕ್ಷ ರಹಿತ ಎಂದಿದ್ದರೂ, ರಾಜಕೀಯ ಪ್ರೇರಿತ ಆಗಿಯೇ ನಡೆಯುತ್ತಿದೆ. ಇಂದು ಮತದಾನ ನಡೆಯುತ್ತಿದ್ದ ಮತಗಟ್ಟೆ ಒಂದಕ್ಕೆ ಪುತ್ತೂರು ಸಹಾಯಕ ಕಮಿಷನರ್ ಭೇಟಿ ನೀಡಿದಾಗ, ಮತದಾರರ ಕೈಯಲ್ಲಿ ಅಭ್ಯರ್ಥಿಯ ಚಿಹ್ನೆ ಇರುವುದು ಪತ್ತೆಯಾಗಿದೆ. 

ಪುತ್ತೂರು ಹಂಟ್ಯಾರು ಶಾಲಾ ಮತಗಟ್ಟೆಯ ವಠಾರದಲ್ಲಿ ಅಭ್ಯರ್ಥಿಗಳ ಚಿಹ್ನೆಯ‌ ಪತ್ರಗಳನ್ನು ಮತದಾರರಿಗೆ ಹಂಚುತ್ತಿರುವುದನ್ನು ಅಧಿಕಾರಿಗಳು ಪತ್ತೆ ಮಾಡಿದ್ದಾರೆ.  

ಮತಗಟ್ಟೆಗಳನ್ನು ಪರಿಶೀಲನೆ ಮಾಡಲೆಂದು ಚುನಾವಣಾಧಿಕಾರಿ ಡಾ.ಯತೀಶ್ ಉಳ್ಳಾಲ್ ತೆರಳಿದ್ದಾಗ, ಮತಗಟ್ಟೆಯಲ್ಲಿ ಮತದಾರನ ಕೈಯಲ್ಲಿರುವ ಚೀಟಿಯನ್ನು ನೋಡಿ ವಿಚಾರಿಸಿದ್ದಾರೆ. ಈ ವೇಳೆ, ಚೀಟಿಯ ಬಗ್ಗೆ ವಿಚಾರಿಸಿದಾಗ ಬೂತ್ ನಲ್ಲಿ ನೀಡುತ್ತಿರುವುದಾಗಿ ಹೇಳಿದ್ದಾರೆ. ಮತದಾರನ ಮಾಹಿತಿಯಂತೆ ತಕ್ಷಣ ಅಲ್ಲಿಗೆ ಧಾವಿಸಿದ ಯತೀಶ್ ಉಳ್ಳಾಲ್,  ಬೂತ್ ನಲ್ಲಿ ಟೇಬಲ್ ಹಾಕಿ ಕೂತಿದ್ದವರನ್ನು ವಿಚಾರಿಸಿದ್ದಾರೆ. ಟೇಬಲ್ ಕೆಳಗೆ ಅಭ್ಯರ್ಥಿಗಳ ಚಿಹ್ನೆ ಇದ್ದ ಚೀಟಿನ ಕಟ್ಟನ್ನು ಪತ್ತೆ ಮಾಡಿ ಕಾನೂನು ಕ್ರಮ ಜರಗಿಸುವಂತೆ ಮತಗಟ್ಟೆಯ ಪರಿಶೀಲನಾಧಿಕಾರಿಗೆ ಸೂಚನೆ ನೀಡಿದ್ದಾರೆ.

ಇದೆ ವೇಳೆ ಅಭ್ಯರ್ಥಿಯೋರ್ವ ಮತದಾರರಿಗೆ ತನ್ನ ಚಿಹ್ನೆ ಇರುವ ಚೀಟಿ ಕೊಡುತ್ತಿರುವುದನ್ನು ಸಹ ಸಹಾಯಕ ಕಮೀಷನರ್ ಪತ್ತೆ ಮಾಡಿದ್ದಾರೆ.