ಪ್ರೊ.ಅರಬಿ ವಿರುದ್ಧ ವಜಾ ಶಿಕ್ಷೆ ಜಾರಿಗೆ ಮೀನಮೇಷ ! ಹಿಂಬಡ್ತಿಗಾಗಿ ಲಾಬಿ ನಡೆಸ್ತಿದ್ಯಾ ಮಂಗಳೂರು ವಿವಿ ?

28-12-20 10:52 am       Mangalore Correspondent   ಕರಾವಳಿ

ವಿದ್ಯಾರ್ಥಿನಿಗೆ ಕಿರುಕುಳ ನೀಡಿದ ಪ್ರಕರಣದಲ್ಲಿ ಆರೋಪಿ ಪ್ರಾಧ್ಯಾಪಕ ಪ್ರೊ.ಅರಬಿ ವಿರುದ್ಧ ಕ್ರಮ ಕೈಗೊಳ್ಳಲು ವಿವಿಯ ಆಡಳಿತ ಇನ್ನೂ ಮೀನ ಮೇಷ ಎಣಿಸುತ್ತಿದೆ.  

ಮಂಗಳೂರು, ಡಿ.27: ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಸಂಶೋಧನಾ ವಿದ್ಯಾರ್ಥಿನಿಗೆ ಕಿರುಕುಳ ನೀಡಿದ ಪ್ರಕರಣದಲ್ಲಿ ಆರೋಪಿ ಪ್ರಾಧ್ಯಾಪಕ ಪ್ರೊ.ಅರಬಿ ವಿರುದ್ಧ ಕ್ರಮ ಕೈಗೊಳ್ಳಲು ವಿವಿಯ ಆಡಳಿತ ಇನ್ನೂ ಮೀನ ಮೇಷ ಎಣಿಸುತ್ತಿದೆ.  

ಎರಡು ತಿಂಗಳ ಹಿಂದೆ ಪ್ರೊ.ಅರಬಿ ಮೇಲಿನ ಆರೋಪದ ಬಗ್ಗೆ ವಿವಿಯ ಆಂತರಿಕ ಸಮಿತಿ ನೀಡಿದ್ದ ವರದಿಯನ್ನು ರಾಜ್ಯ ಮಹಿಳಾ ಆಯೋಗಕ್ಕೆ ಸಲ್ಲಿಸಲಾಗಿತ್ತು. ಇದೇ ವೇಳೆ, ಪ್ರೊ.ಅರಬಿಯನ್ನು ಸೇವೆಯಿಂದ ವಜಾಗೊಳಿಸುವಂತೆ ಸಿಂಡಿಕೇಟ್ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿತ್ತು. ಆದರೆ, ಸಿಂಡಿಕೇಟ್ ಸಭೆಯ ನಿರ್ಣಯವನ್ನು ವಿವಿಯ ಆಡಳಿತ ಇನ್ನೂ ಜಾರಿ ಮಾಡಿಲ್ಲ.

ಆರೋಪಿಗೆ ವಜಾ ಶಿಕ್ಷೆಯ ಬದಲು ಹಿಂಬಡ್ತಿ ನೀಡಲು ವಿವಿಯ ಕುಲಪತಿ ಪ್ರೊ.ಪಿ.ಎಸ್.ಯಡಪಡಿತ್ತಾಯ ಲಾಬಿ ನಡೆಸುತ್ತಿದ್ದಾರಂತೆ. ವಜಾ ಶಿಕ್ಷೆ ಜಾರಿಯಾದರೆ ಪೂರ್ತಿ ಸೇವಾವಧಿಯ ಗ್ರಾಚ್ಯುಟಿ ಇನ್ನಿತರ ವೇತನ ಸೌಲಭ್ಯ ನಷ್ಟವಾಗುತ್ತದೆ. ಇಬ್ಬರು ಹೆಣ್ಮಕ್ಕಳನ್ನು ಹೊಂದಿರುವ ಅರಬಿ ಕುಟುಂಬಕ್ಕೆ ಇದರಿಂದ ತೊಂದರೆಯಾಗುತ್ತದೆ ಎಂದು ಕುಲಪತಿಯವರು ಅನುಕಂಪ ತೋರುತ್ತಿದ್ದಾರೆಂದು ಅಲ್ಲಿನ ಮೂಲಗಳು ಹೇಳುತ್ತವೆ. ವಿವಿಯ ಮುಖ್ಯಸ್ಥರಾದವರೇ ಆರೋಪಿಗೆ ಈ ರೀತಿಯ ನೈತಿಕ ಬೆಂಬಲ ನೀಡಿದರೆ, ಆತನಿಂದ ಶೋಷಣೆಗೆ ಒಳಗಾದ ಹೆಣ್ಮಕ್ಕಳಿಗೆ ನ್ಯಾಯ ಸಿಕ್ಕಂತಾಗುತ್ತದೆಯೇ ಎಂಬ ಪ್ರಶ್ನೆಗೆ ಯಾರು ಉತ್ತರ ಕೊಡುತ್ತಾರೆ.

ಪ್ರೊ.ಅರಬಿಯಿಂದ ಒಬ್ಬಳು ಹೆಣ್ಮಗಳು ಮಾತ್ರ ಲೈಂಗಿಕ ಶೋಷಣೆಗೆ ಒಳಗಾಗಿದ್ದಲ್ಲ ಎಂಬ ಮಾತನ್ನು ವಿಶ್ವವಿದ್ಯಾನಿಲಯದ ಸಿಬಂದಿಗಳೇ ಹೇಳುತ್ತಾರೆ. ಅನೇಕ ಮಂದಿಯನ್ನು ಶೋಷಣೆಗೆ ಒಳಗಾಗಿಸಿದ್ದಾನೆ, ಸಂಶೋಧನಾರ್ಥಿಗಳಾಗಿ ಬಂದವರನ್ನು ಹಣಕ್ಕಾಗಿ ಪೀಡಿಸಿದ್ದಾನೆಂದು ದೂರುತ್ತಾರೆ. ಈ ಬಗ್ಗೆ ಹಲವಾರು ದೂರುಗಳು ವಿವಿಯ ಆಡಳಿತದ ಕೈಸೇರಿದ್ದವು. ಹೀಗಿದ್ದರೂ, ಇಂಥ ಮನುಷ್ಯನನ್ನು ಇನ್ನೂ ವಿಶ್ವವಿದ್ಯಾನಿಲಯದಲ್ಲಿ ಸೇವೆ ಮುಂದುವರಿಸಲು ಅವಕಾಶ ಕೊಟ್ಟಿದ್ದಾರೆ ಎನ್ನುವುದೇ ದುರಂತ.

ಪೊಲೀಸ್ ಕೇಸು ದಾಖಲಾದರೆ ಬಂಧನ

ಯಾವುದೇ ವ್ಯಕ್ತಿಯ ವಿರುದ್ಧ ಲೈಂಗಿಕ ಕಿರುಕುಳ ಪ್ರಕರಣ ಪೊಲೀಸ್ ಠಾಣೆಯಲ್ಲಿ ದಾಖಲಾದರೆ, ಆತನನ್ನು ಕೂಡಲೇ ಬಂಧಿಸಲಾಗುತ್ತದೆ. ಆದರೆ, ಒಂದು ಪ್ರತಿಷ್ಠಿತ ವಿಶ್ವವಿದ್ಯಾನಿಲಯ ಅಷ್ಟೇ ಅಲ್ಲ ವಿದ್ಯಾರ್ಥಿಗಳಿಗೆ ಜ್ಞಾನ ದೇಗುಲ ಎಂದೇ ಪರಿಗಣಿತವಾಗಿರುವ ಶಿಕ್ಷಣ ಸಂಸ್ಥೆಯಲ್ಲಿ ಶಿಕ್ಷಕನೇ ಹೆಣ್ಮಕ್ಕಳ ಮೇಲೆ ಲೈಂಗಿಕ ಕಿರುಕುಳ ನೀಡಿಯೂ ಆತನನ್ನು ಉಳಿಸಿಕೊಳ್ಳುತ್ತಾರೆ ಅಂದರೆ ಈ ವಿವಿಯ ಅಧೋಗತಿಗೆ ಏನನ್ನಬೇಕು ಹೇಳಿ. ಜನಸಾಮಾನ್ಯರ ಪಾಲಿಗೆ ಕುತ್ತಿಗೆ ಹಿಡಿಯುವ ಈ ದೇಶದ ಕಾನೂನು ಮಂಗಳೂರು ವಿಶ್ವವಿದ್ಯಾನಿಲಯಕ್ಕೆ ಅನ್ವಯ ಆಗೋದಿಲ್ಲವೇ ಎಂಬ ಪ್ರಶ್ನೆಯನ್ನು ಜನರು ಕೇಳುವಂತಾಗಿದೆ.

ಇಷ್ಟಕ್ಕೂ ಹಿಂಬಡ್ತಿ ಅಂದರೇನು ?

ಪ್ರೊ.ಅರಬಿ ನಿವೃತ್ತಿಯಾಗಲು ಇನ್ನು ಒಂದು ವರ್ಷ ಅಷ್ಟೇ ಬಾಕಿಯಿದೆ. ಇಂಥ ಸಂದರ್ಭದಲ್ಲಿ ಲೈಂಗಿಕ ಕಿರುಕುಳ ಪ್ರಕರಣದಲ್ಲಿ ಸೇವೆಯಿಂದ ವಜಾಗೊಂಡರೆ ಆತನಿಗೆ ಯಾವುದೇ ನಿವೃತ್ತಿ ಸೌಲಭ್ಯ ಸಿಗಲ್ಲ. ಅದರ ಬದಲಿಗೆ, ಡಿಮೋಷನ್ ಮಾಡಿದರೆ ಒಂದಷ್ಟಾದರೂ ಸರ್ವಿಸ್ ರೂಪದಲ್ಲಿ ದುಡ್ಡು ಸಿಗಬಹುದು. ಡಿಮೋಷನ್ ಮಾಡೋದಿದ್ದರೆ, ವಿವಿಗೆ ಸೇರುವಾಗಿನ ಅಸಿಸ್ಟೆಂಟ್ ಪ್ರೊಫೆಸರ್ ಹುದ್ದೆಗೆ ಮಾಡಬೇಕು. ಅದಕ್ಕಿಂತ ಮೇಲಿನದ್ದು ಅಸೋಸಿಯೇಟ್ ಪ್ರೊಫೆಸರ್ ಹುದ್ದೆ. ಸೀನಿಯರ್ ಪ್ರೊಫೆಸರ್ ಆಗಿರುವ ಅರಬಿ ಯಾವುದೇ ಶಿಕ್ಷೆಯಿಲ್ಲದೆ ನಿವೃತ್ತಿಯಾದರೆ ಎಲ್ಲ ಸೇರಿ 80 ಲಕ್ಷದಷ್ಟು ಬರಬಹುದೆಂಬ ಲೆಕ್ಕಾಚಾರ ಇದೆ. ಅದೇ ಅಸಿಸ್ಟೆಂಟ್ ಪ್ರೊಫೆಸರ್ ಹುದ್ದೆಯಲ್ಲಿದ್ದು ನಿವೃತ್ತನಾದರೆ 20 ಲಕ್ಷ ಬಂದರೆ, ಅಸೋಸಿಯೇಟ್ ಪ್ರೊಫೆಸರ್ ಹುದ್ದೆಯಲ್ಲಿ ನಿವೃತ್ತನಾದರೆ 45 ಲಕ್ಷದಷ್ಟು ಸಿಗಬಹುದು ಎನ್ನುವ ಲೆಕ್ಕಾಚಾರ ಇದೆ.

ಕಲಿಯಲು ಬಂದಿದ್ದ ಹೆಣ್ಮಕ್ಕಳನ್ನೇ ತನ್ನ ಕಾಮದ ಕಣ್ಣಿನಲ್ಲಿ ನೋಡುತ್ತಿದ್ದ ಕಾಮಾಂಧನಿಗೆ ಇದ್ಯಾವುದೇ ಸೌಲಭ್ಯವೂ ಸಿಗಬಾರದು. ಪೊಲೀಸ್ ಕೇಸು ದಾಖಲಾದರೆ, ಯಾವ ರೀತಿ ಜೈಲು ಶಿಕ್ಷೆಯಾಗುತ್ತದೋ, ಈತನಿಗೆ ಅದೇ ಗತಿಯಾಗಬೇಕು. ಸದ್ರಿ ಪ್ರಕರಣದಲ್ಲಿ ಪೊಲೀಸ್ ಕೇಸು ದಾಖಲಾಗದ ಕಾರಣ ಸೇವೆಯಿಂದ ವಜಾಗೊಳಿಸುವ ಶಿಕ್ಷೆಯೇ ಆಗಬೇಕು. ಕುಲಪತಿಗಳು ಯಾವುದೇ ಒತ್ತಡಕ್ಕೆ ಒಳಗಾಗದೇ ಶಿಕ್ಷೆಯನ್ನು ಜಾರಿಗೊಳಿಸಬೇಕು. ಕಾಮಾಂಧರಿಗೆ ತಕ್ಕ ಶಿಕ್ಷೆ ಜಾರಿಗೊಳಿಸಿ ಪಾಠವಾಗಿಸಬೇಕು. ಡಿಮೋಷನ್ ನೆಪದಲ್ಲಿ ಆರೋಪಿಗೆ ಸಹಕರಿಸುವ ಕೆಲಸ ಮಾಡಬಾರದು ಎನ್ನುವುದು ಸಾರ್ವಜನಿಕರ ಆಗ್ರಹ.

Mangalore University, Prof Arabi U, who has been facing the allegation of sexually harassing a student of the university, has been suspended from service. But it is said that the university officials are on the verge of saving him from permanent suspension.