Mangalore case, Police, Inspector Balakrishna: ಗಂಡ- ಹೆಂಡತಿ ಜಗಳ ; ಠಾಣೆಗೆ ಹೋದ ವಕೀಲನಿಗೆ ಒದ್ದು ಒಳಗೆ ಹಾಕುತ್ತೇನೆಂದು ಬೆದರಿಕೆ, ಏಕವಚನದಲ್ಲಿ ನಿಂದನೆ, ಇನ್ಸ್ ಪೆಕ್ಟರ್ ಬಾಲಕೃಷ್ಣ ವಿರುದ್ಧ ಆಯುಕ್ತರಿಗೆ ದೂರು 

18-11-25 11:27 am       Mangalore Correspondent   ಕರಾವಳಿ

ಭ್ರಷ್ಟಾಚಾರ ಆರೋಪದಡಿ ಉಳ್ಳಾಲ ಠಾಣೆಯಿಂದ ಹೊರ ದಬ್ಬಲ್ಪಟ್ಟು ಬಳಿಕ ಪಾಂಡೇಶ್ವರ ಮಹಿಳಾ ಠಾಣೆಯಲ್ಲಿ ನೆಲೆ ಕಂಡುಕೊಂಡಿದ್ದ ಇನ್ಸ್ ಪೆಕ್ಟರ್ ಎಚ್.ಎನ್ ಬಾಲಕೃಷ್ಣ ವಿರುದ್ಧ ಯುವ ವಕೀಲರೊಬ್ಬರು ಪೊಲೀಸ್ ಕಮಿಷನರ್ ಸುಧೀರ್ ರೆಡ್ಡಿಗೆ ದೂರು ನೀಡಿದ್ದಾರೆ. 

ಮಂಗಳೂರು, ನ.17 : ಭ್ರಷ್ಟಾಚಾರ ಆರೋಪದಡಿ ಉಳ್ಳಾಲ ಠಾಣೆಯಿಂದ ಹೊರ ದಬ್ಬಲ್ಪಟ್ಟು ಬಳಿಕ ಪಾಂಡೇಶ್ವರ ಮಹಿಳಾ ಠಾಣೆಯಲ್ಲಿ ನೆಲೆ ಕಂಡುಕೊಂಡಿದ್ದ ಇನ್ಸ್ ಪೆಕ್ಟರ್ ಎಚ್.ಎನ್ ಬಾಲಕೃಷ್ಣ ವಿರುದ್ಧ ಯುವ ವಕೀಲರೊಬ್ಬರು ಪೊಲೀಸ್ ಕಮಿಷನರ್ ಸುಧೀರ್ ರೆಡ್ಡಿಗೆ ದೂರು ನೀಡಿದ್ದಾರೆ. 

ಗಂಡ- ಹೆಂಡತಿ ಜಗಳ ವಿಚಾರದಲ್ಲಿ ಠಾಣೆಗೆ ತೆರಳಿದ್ದ ವೇಳೆ ಡಿವೋರ್ಸ್ ಕೊಡು, ಇಲ್ಲದಿದ್ದರೆ ಎಫ್ ಐಆರ್ ದಾಖಲಿಸುವುದಾಗಿ ತನ್ನ ಕಕ್ಷಿದಾರ ಪ್ರೇಮ್ ಪ್ರಕಾಶ್ ಅವರನ್ನು ಬೆದರಿಸಿದ್ದಲ್ಲದೆ, ಮಕ್ಕಳ ಚಿನ್ನವನ್ನ ಈಗಲೇ ಠಾಣೆಗೆ ತಂದು ಒಪ್ಪಿಸುವಂತೆ ಹೇಳಿ ಕಿರುಕುಳ ನೀಡಿದ್ದಾರೆ‌. ಪ್ರಶ್ನಿಸಲು ಹೋದ ತನ್ನನ್ನೂ ಅವಮಾನಕಾರಿ ನಿಂದಿಸಿದ್ದಾಗಿ ಮಂಗಳೂರಿನ ವಕೀಲ ನಿತಿನ್ ಕುತ್ತಾರ್ ಅವರು ಸುಧೀರ್ ಕುಮಾರ್ ರೆಡ್ಡಿಗೆ ದೂರು ನೀಡಿದ್ದಾರೆ.

ಕೌಟುಂಬಿಕ ಕಲಹ ಪ್ರಕರಣದಲ್ಲಿ ವಕೀಲ ನಿತಿನ್ ಅವರು ತನ್ನ ನೆರೆಮನೆಯ ನಿವಾಸಿ ಪ್ರೇಮ್‌ ಪ್ರಕಾಶ್ ಡಿಸೋಜ ಜೊತೆಗೆ ನ.13ರಂದು ಪಾಂಡೇಶ್ವರ ಮಹಿಳಾ ಠಾಣೆಗೆ ತೆರಳಿದ್ದರು. ಪತಿ- ಪತ್ನಿಯ ಜೊತೆಗೆ ಇನ್ಸ್ ಪೆಕ್ಟರ್ ಬಾಲಕೃಷ್ಣ ಮಾತುಕತೆ ನಡೆಸಿದ್ದು ಪ್ರೇಮ್ ಅವರು ಹೆಂಡತಿಯ ಜೊತೆ ಸಹಬಾಳ್ವೆ ನಡೆಸುವುದಾಗಿ ಹೇಳಿದರೂ ಮರುದಿನವೇ ಬಂದು ಡಿವೋರ್ಸ್ ಗೆ ಸಹಿ ಹಾಕಬೇಕು. ಇಲ್ಲದಿದ್ದರೆ ನಿನ್ನ ವಿರುದ್ಧ ಎಫ್ ಐಆರ್ ದಾಖಲಿಸಿ ಜೈಲಿಗೆ ಹಾಕುತ್ತೇನೆಂದು ಇನ್ಸ್ ಪೆಕ್ಟರ್ ಬೆದರಿಸಿದ್ದಾರೆ. 

ನ.15ರಂದು ವಕೀಲ ನಿತಿನ್ ಮತ್ತು ಪ್ರೇಮಪ್ರಕಾಶ್ ಮತ್ತೆ ಠಾಣೆಗೆ ತೆರಳಿದ್ದು, ಇನ್ಸ್ ಪೆಕ್ಟರ್ ಬಾಲಕೃಷ್ಣ ತನ್ನ ಕಚೇರಿಯಲ್ಲಿ ಮತ್ತೆ ಮಾತುಕತೆ ನಡೆಸಿದ್ದಾರೆ. ಈ ವೇಳೆ, ಪ್ರೇಮ್ ಪ್ರಕಾಶ್ ಅವರು ಮ್ಯೂಚುವಲ್ ಡಿವೋರ್ಸ್ ಗೆ ಒಪ್ಪಿದ್ದು ಆಗ ಇನ್ಸ್ ಪೆಕ್ಟರ್ ಬಾಲಕೃಷ್ಣ ಅವರು ಮಕ್ಕಳ ಚಿನ್ನವನ್ನು ಈಗಲೇ ತಂದುಕೊಡಬೇಕು. ಇಲ್ಲದಿದ್ದರೆ ಪತ್ನಿಯ ದೂರು ಪಡೆದು ನಿನ್ನ ಮೇಲೆ ಎಫ್ಐಆರ್ ದಾಖಲಿಸಿ ಜೈಲಿಗೆ ಹಾಕುತ್ತೇನೆಂದು ಬೆದರಿಸಿದ್ದಾರೆ. ಇದೇ ವೇಳೆ, ವಕೀಲ ನಿತಿನ್ ಅವರನ್ನು ಏಕವಚನದಲ್ಲಿ ಮಾತನಾಡಿ, ನೀನು ಯಾವ ವಕೀಲ, ನಿನ್ನ ಹೋರಾಟ ಎಲ್ಲ ಹೊರಗಡೆ ಇರಲಿ. ಒದ್ದು ಒಳಗೆ ಹಾಕುತ್ತೇನೆಂದು ಹೇಳುತ್ತ ಅವಹೇಳನಕಾರಿ ವರ್ತಿಸಿದ್ದಾರೆ. 

ಆನಂತರ, ಪ್ರೇಮ್ ತನ್ನ ತಾಯಿ ಜೊತೆಗೆ ಠಾಣೆಯಿಂದ ತೆರಳಿದಾಗ, ನನ್ನನ್ನು ಉದ್ದೇಶಿಸಿ ಅವರೇನು ನಿನ್ನ ಸಂಬಂಧಿಕರಾ.. ಆರೋಪಿಯ ಮುಖ ನಿನ್ನ ಮುಖ ಒಂದೆ ತರಹ ಇದೆ. ನಿನ್ನನ್ನು ನೋಡುವಾಗ ನನಗೆ ಡೌಟು ಆಗುತ್ತದೆ ಎಂದು ಹೇಳಿ ನಿಂದಿಸಿ ಮಾತನಾಡಿದ್ದಾರೆ. ಈ ಬಗ್ಗೆ ಇನ್ಸ್ ಪೆಕ್ಟರ್ ಬಾಲಕೃಷ್ಣ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕಾಗಿ ವಕೀಲ ನಿತಿನ್ ಮಂಗಳೂರು ಕಮೀಷನರ್ ಸುಧೀರ್ ಕುಮಾರ್ ರೆಡ್ಡಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

ಈ ಹಿಂದೆಯೂ ನಡೆದಿತ್ತು ಕಳ್ಳಾಟ ! 

ಪಿಐ ಬಾಲಕೃಷ್ಣ ಅವರು ಈ ಹಿಂದೆ ಉಳ್ಳಾಲದಲ್ಲಿ ಅಧಿಕಾರದಲ್ಲಿದ್ದಾಗಲೂ ಆರೋಪಿಗಳಿಂದಲೇ ಹಣ ಪಡೆದಿದ್ದು, ಒಬ್ಬ ಆರೋಪಿಯ ಚಿನ್ನ ಕಿತ್ತುಕೊಂಡು ಮೋಸ ಮಾಡಿದ ಬಗ್ಗೆ ದೂರು ಕೇಳಿಬಂದಿತ್ತು. ಉಳ್ಳಾಲದ ಮನೆಯೊಂದರಲ್ಲಿ 15 ಲಕ್ಷ ಬೆಲೆಯ ಚಿನ್ನಾಭರಣ ಕಳ್ಳತನವಾದ ಪ್ರಕರಣದಲ್ಲಿ ದೂರು ನೀಡಿದ ವ್ಯಕ್ತಿಯ ಪುತ್ರ ವಿದ್ಯಾರ್ಥಿ ಸೇರಿ ಇಬ್ಬರು ಅಪ್ರಾಪ್ತರು ಮತ್ತು ಆತನ ಮೂವರು ಗೆಳೆಯರು ಕಳವು ಮಾಡಿದ್ದೆಂದು ಪೊಲೀಸರು ಪತ್ತೆಹಚ್ಚಿದ್ದರು. ಆದರೆ ಪ್ರಕರಣದ ಆರೋಪಿಯಾಗಿದ್ದ ಬೆಳ್ತಂಗಡಿ ಮೂಲದ ಯುವಕನೊಬ್ಬನ ತಾಯಿಯಲ್ಲಿ ಪ್ರಕರಣ ಮುಚ್ಚಿ ಹಾಕಲು 3 ಲಕ್ಷ ರೂ. ಕೇಳಿ ಪಡೆದಿದ್ದಲ್ಲದೆ, ಮಗನ ಮೈಮೇಲಿದ್ದ 50 ಗ್ರಾಂ ಚಿನ್ನಾಭರಣವನ್ನ ಎಗರಿಸಿದ ಬಗ್ಗೆ ಸ್ವತಃ ಆರೋಪಿ ತಾಯಿಯೇ ಇನ್ಸ್ ಪೆಕ್ಟರ್ ಬಾಲಕೃಷ್ಣ ವಿರುದ್ಧ ಅಂದಿನ ಕಮಿಷನರ್ ಅವರಿಗೆ ದೂರು ನೀಡಿದ್ದರು. ಇಲಾಖಾ ತನಿಖೆ ವೇಳೆ ಬಾಲಕೃಷ್ಣ ಅವರು ದೂರುದಾರ ಮಹಿಳೆಗೆ ನಾಲ್ಕೂವರೆ ಲಕ್ಷ ಕೊಟ್ಟು ಸಮಾಧಾನಪಡಿಸಿ ಕೇಸು ಹಿಂಪಡೆಯುವಂತೆ ಮಾಡಿದ್ದರು ಎನ್ನುವ ಮಾಹಿತಿ ಇದೆ.

A young advocate from Mangaluru, Nithin Kuthar, has filed a formal complaint with Police Commissioner Sudheer Kumar Reddy against Inspector H.N. Balakrishna of the Pandeshwara Women’s Police Station. The lawyer alleges that during an inquiry into a domestic dispute, the inspector threatened his client, Prem Prakash, to either sign divorce papers or face an FIR and arrest.