ಬ್ರಿಟನ್ ವೈರಸ್ ಆತಂಕ ; ದ.ಕ.ದಲ್ಲಿ ಮತ್ತೆ 20 ಮಂದಿಯ ಪತ್ತೆಗೆ ಸೂಚನೆ

29-12-20 05:06 pm       Mangalore Correspondent   ಕರಾವಳಿ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬ್ರಿಟನ್ ದೇಶದಿಂದ ಆಗಮಿಸಿರುವ ಮಂದಿಗಾಗಿ ಮತ್ತಷ್ಟು ಹುಡುಕಾಟ ನಡೆಸಲಾಗುತ್ತಿದೆ.

Photo credits : Google

ಮಂಗಳೂರು, ಡಿ.29: ಬ್ರಿಟನ್ ವೈರಸ್ ಆತಂಕ ಎದುರಾಗಿರುವ ಮಧ್ಯೆಯೇ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬ್ರಿಟನ್ ದೇಶದಿಂದ ಆಗಮಿಸಿರುವ ಮಂದಿಗಾಗಿ ಮತ್ತಷ್ಟು ಹುಡುಕಾಟ ನಡೆಸಲಾಗುತ್ತಿದೆ. ನ.25ರ ಬಳಿಕ ಮಂಗಳೂರಿಗೆ ಆಗಮಿಸಿರುವ 20 ಮಂದಿಯನ್ನು ಈಗ ಪತ್ತೆ ಮಾಡಲಾಗಿದ್ದು, ಅವರನ್ನು ಪರೀಕ್ಷೆಗೆ ಒಳಪಡಿಸಲು ಆರೋಗ್ಯ ಇಲಾಖೆ ಸಿದ್ಧತೆ ನಡೆಸಿದೆ.

ಇದಕ್ಕೂ ಮುನ್ನ ಡಿ.7ರಿಂದ 24ರ ನಡುವೆ ಮಂಗಳೂರಿಗೆ ಆಗಮಿಸಿದ್ದ 66 ಮಂದಿಯನ್ನು ಪರೀಕ್ಷೆಗೆ ಒಳಪಡಿಸಲಾಗಿತ್ತು. ಅವರನ್ನು ಕೋವಿಡ್ ಪರೀಕ್ಷೆಗೆ ಒಳಪಡಿಸಿದಾಗ, ಎಲ್ಲರಿಗೂ ನೆಗೆಟಿವ್ ಬಂದಿತ್ತು. ಇದೀಗ ಅದಕ್ಕೂ ಹಿಂದೆ ಆಗಮಿಸಿದ್ದ 20 ಮಂದಿಯ ಪಟ್ಟಿಯನ್ನು ಕೇಂದ್ರ ಸರಕಾರದಿಂದ ನೀಡಲಾಗಿದ್ದು, ಅವರನ್ನು ಕೂಡ ಪರೀಕ್ಷೆಗೆ ಒಳಪಡಿಸಲು ಸೂಚಿಸಲಾಗಿದೆ.

ಹೀಗಾಗಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ರಾಜೇಂದ್ರ ಕೆ.ವಿ., 20 ಮಂದಿಯನ್ನು ಪತ್ತೆ ಮಾಡಲು ಆರೋಗ್ಯ ಇಲಾಖೆಗೆ ಸೂಚಿಸಿದ್ದಾರೆ. ವಿದೇಶಗಳಿಂದ ಬಂದಿರುವ ಮಂದಿಯ ಹೆಸರು ಮತ್ತು ಮೊಬೈಲ್ ನಂಬರ್ ಇದ್ದರೂ, ಕೆಲವರು ಊರಿಗೆ ಬಂದ ಬಳಿಕ ಸಿಮ್ ಬದಲಾವಣೆ ಮಾಡಿರುತ್ತಾರೆ. ಇದರಿಂದಾಗಿ ಕೂಡಲೇ ಆರೋಗ್ಯ ಇಲಾಖೆ ಸಿಬಂದಿಗೆ ಅವರನ್ನು ಪತ್ತೆ ಹಚ್ಚಲು ಸಾಧ್ಯವಾಗುವುದಿಲ್ಲ.