ತಾಯಿಯಿಂದಲೇ ದೌರ್ಜನ್ಯ ; ಎಂಟು ವರ್ಷದ ಬಾಲಕಿಯ ರಕ್ಷಣೆ 

29-12-20 09:36 pm       Udupi Reporter   ಕರಾವಳಿ

ತಾಯಿಯಿಂದ ಥಳಿತಕ್ಕೆ ಒಳಗಾದ ಎಂಟು ವರ್ಷದ ಬಾಲಕಿಯನ್ನು ಜಿಲ್ಲಾ ಮಕ್ಕಳ ರಕ್ಷಣಾ ಘಟಕ ರಕ್ಷಿಸಿರುವ ಘಟನೆ ಬ್ರಹ್ಮಾವರದ ಹೇರೂರು ಎಂಬಲ್ಲಿ ನಡೆದಿದೆ.

ಉಡುಪಿ, ಡಿ.29: ತಾಯಿಯಿಂದ ಥಳಿತಕ್ಕೆ ಒಳಗಾದ ಎಂಟು ವರ್ಷದ ಬಾಲಕಿಯನ್ನು ಜಿಲ್ಲಾ ಮಕ್ಕಳ ರಕ್ಷಣಾ ಘಟಕ ರಕ್ಷಿಸಿರುವ ಘಟನೆ ಬ್ರಹ್ಮಾವರದ ಹೇರೂರು ಎಂಬಲ್ಲಿ ನಡೆದಿದೆ.

ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಮೂಲದ ಕುಟುಂಬವೊಂದು ಬ್ರಹ್ಮಾವರದ ಹೇರೂರು ಎಂಬಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದು, ಕಳೆದ 4 ದಿನಗಳಿಂದ ಕ್ಷುಲ್ಲಕ ಕಾರಣಕ್ಕೆ ತಾಯಿ ತನ್ನ 8 ವರ್ಷದ ಮಗಳಿಗೆ ಮನಬಂದಂತೆ ಮುಖ ಮತ್ತು ತೋಳುಗಳಿಗೆ ಹೊಡೆದಿರುವುದಾಗಿ ತಿಳಿದು ಬಂದಿದೆ. ಆಕೆಯ ತಂದೆ ಕೂಲಿ ಕಾರ್ಮಿಕರಾಗಿದ್ದು, ಅಪರೂಪಕ್ಕೆ ಮನೆಗೆ ಬರುತ್ತಿದ್ದರೆನ್ನಲಾಗಿದೆ.

ಬಾಲಕಿಗೆ ತಾಯಿ ಹೊಡೆಯುವುದನ್ನು ಗಮನಿಸಿದ ಪರಿಸರದ ನಿವಾಸಿ, ಪೊಲೀಸ್ ಸಿಬ್ಬಂದಿಯಾಗಿರುವ ಸಂತೋಷ್, ಜಿಲ್ಲಾ ಮಕ್ಕಳ ರಕ್ಷಣಾ ಘಟಕಕ್ಕೆ ಮಾಹಿತಿ ನೀಡಿದ್ದು, ತಕ್ಷಣ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಕಾನೂನು ಪರಿವೀಕ್ಷಣಾಧಿಕಾರಿ ಪ್ರಭಾಕರ ಆಚಾರ್, ಬ್ರಹ್ಮಾವರ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಲೀಲಾವತಿ, ಅಂಗನವಾಡಿ ಮೇಲ್ವಿಚಾರಕಿ ವನಿತಾ ಹೆಗ್ಡೆ ಮನೆಗೆ ಭೇಟಿ ನೀಡಿ ಬಾಲಕಿಯನ್ನು ರಕ್ಷಿಸಿ ನಿಟ್ಟೂರಿ ನಲ್ಲಿರುವ ಮಕ್ಕಳ ಕಲ್ಯಾಣ ಸಮಿತಿಯ ಅಧ್ಯಕ್ಷ ರೊನಾಲ್ಡ್ ಫುರ್ಟಾಡೋ ಗಮನಕ್ಕೆ ತಂದರು. ನಂತರ ಸಮಿತಿಯ ನಿರ್ದೇಶನದಂತೆ ಬಾಲಕಿ ಯನ್ನು ಪುನರ್ವಸತಿಗಾಗಿ ನಿಟ್ಟೂರಿನಲ್ಲಿರುವ ಬಾಲಕಿಯರ ಬಾಲಮಂದಿರಕ್ಕೆ ದಾಖಲಿಸಲಾಗಿದೆ.

Childline department has rescued an eight-year-old girl allegedly beaten by mother in Udupi.