ಬ್ರಿಟನ್ ರಿಟರ್ನ್ ; ಉಡುಪಿಯಲ್ಲಿ ಎಲ್ಲ ವರದಿ ನೆಗೆಟಿವ್, ಸೋಂಕು ಸಾಧ್ಯತೆ ಇಲ್ಲ ; ಜಿಲ್ಲಾಧಿಕಾರಿ

30-12-20 11:07 am       Udupi Correspondent   ಕರಾವಳಿ

ಬ್ರಿಟನ್‌ನಿಂದ 36 ಮಂದಿ ಉಡುಪಿ ಜಿಲ್ಲೆಗೆ ಆಗಮಿಸಿದ್ದು, ಇವರೆಲ್ಲರ ಆರ್‌ಟಿ- ಪಿಸಿಆರ್ ಪರೀಕ್ಷೆ ನೆಗೆಟಿವ್ ಬಂದಿದೆ

Photo credits : Google

ಉಡುಪಿ, ಡಿ.30: ರೂಪಾಂತರಿತ ಕೊರೋನ ವೈರಸ್ ಕಂಡುಬಂದ ಬ್ರಿಟನ್‌ನಿಂದ 36 ಮಂದಿ ಉಡುಪಿ ಜಿಲ್ಲೆಗೆ ಆಗಮಿಸಿದ್ದು, ಇವರೆಲ್ಲರ ಆರ್‌ಟಿ- ಪಿಸಿಆರ್ ಪರೀಕ್ಷೆ ನೆಗೆಟಿವ್ ಬಂದಿದೆ ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ನೆಗೆಟಿವ್ ಬಂದಿರುವ ಎಲ್ಲರನ್ನೂ 14 ದಿನಗಳ ಹೋಮ್ ಕ್ವಾರಂಟೈನ್‌ನಲ್ಲಿ ಇರಿಸಲಾಗಿದೆ. ಈ ಅವಧಿಯಲ್ಲಿ ಅವರನ್ನು ವೈದ್ಯರು ನಿಗಾದಲ್ಲಿ ಇರಿಸಲಿದ್ದಾರೆ ಎಂದು ಜಗದೀಶ್ ನುಡಿದರು.

36 ಮಂದಿಗೆ ಒಟ್ಟು 47 ಮಂದಿ ಪ್ರಾಥಮಿಕ ಸಂಪರ್ಕಿತರನ್ನು ಗುರುತಿಸಲಾಗಿದೆ. ಇವರೆಲ್ಲರನ್ನು ಸಹ ಕೋವಿಡ್ ಪರೀಕ್ಷೆಗೊಳಪಡಿಸಿದ್ದು, ಇವರು ಸಹ ನೆಗೆಟಿವ್ ಬಂದಿದ್ದಾರೆ. ಹೀಗಾಗಿ ಜಿಲ್ಲೆಯಲ್ಲಿ ಬ್ರಿಟನ್‌ನಿಂದ ಬಂದವರಿಂದ ಸೋಂಕು ಹರಡುವ ಅಪಾಯ ಇಲ್ಲ ಎಂದು ಅವರು ತಿಳಿಸಿದರು.

ಜಿಲ್ಲೆಯಲ್ಲೀಗ ಕೇವಲ 66 ಮಂದಿ ಸಕ್ರಿಯ ಪ್ರಕರಣಗಳಿವೆ. ಇವುಗಳಲ್ಲಿ 40 ಮಂದಿ ಹೋಮ್ ಐಸೋಲೇಷನ್‌ನಲ್ಲಿದ್ದರೆ, 26 ಮಂದಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತಿದ್ದಾರೆ ಎಂದರು. ಮೊದಲೆಲ್ಲ ಶೇ.20ಕ್ಕಿಂತ ಅಧಿಕವಿದ್ದ ಪಾಸಿಟಿವ್ ರೇಟ್ ಈಗ ತೀರಾ ಕಡಿಮೆಯಾಗಿದೆ. ಹಿಂದಿನಂತೆ ಈಗಲೂ ಪ್ರತಿದಿನ ಸರಾಸರಿ 1500 ಮಂದಿ ಕೋವಿಡ್ ಪರೀಕ್ಷೆಗೊಳಗಾಗುತ್ತಿದ್ದಾರೆ. ಪಾಸಿಟಿವ್ ಸಂಖ್ಯೆ 10ರೊಳಗಿದೆ ಎಂದರು.

ಉಡುಪಿ ಜಿಲ್ಲೆಯಲ್ಲಿ ಪ್ರತಿ 10 ಲಕ್ಷ ಜನಸಂಖ್ಯೆಯಲ್ಲಿ 2,16,640 ಮಂದಿ ಕೋವಿಡ್ ಪರೀಕ್ಷೆಗೊಳಗಾದರೆ, ಭಾರತದಲ್ಲಿ ಈ ಸಂಖ್ಯೆ 1,24,983 ಹಾಗೂ ಕರ್ನಾಟಕದಲ್ಲಿ 2,09,000 ಮಂದಿಯ ಪರೀಕ್ಷೆ ನಡೆದಿದೆ ಎಂದು ಅವರು ಹೇಳಿದರು.

Britain to Udupi all passengers have been tested negative said Udupi Dc Jagadeesh.