ಕೇಪು ಜಾತ್ರೆ ಕೋಳಿ ಅಂಕಕ್ಕೆ ಎರಡನೇ ದಿನವೂ ಪೊಲೀಸ್ ದಾಳಿ ; ಸ್ಥಳ ಬಿಟ್ಟು ಕದಲದ ಜನ, ಬಿಜೆಪಿ ಮುಖಂಡರ ಸಾಥ್, ಬಿಜೆಪಿಗರು ಸೇರಿ 27 ಮಂದಿ ವಿರುದ್ಧ ಕೇಸು 

21-12-25 11:04 pm       Mangalore Correspondent   ಕರಾವಳಿ

ಕೇಪು ಜಾತ್ರೆಯ ನಿಮಿತ್ತ ಎರಡನೇ ದಿನ ಭಾನುವಾರವೂ ವಿಟ್ಲ ಪೊಲೀಸರು ದಾಳಿ ನಡೆಸಿದ್ದು 20 ಕೋಳಿಗಳನ್ನು ಸ್ವಾಧೀನಪಡಿಸಿ, 27 ಜನರ ವಿರುದ್ದ ಪ್ರಕರಣ ದಾಖಲಿಸಿದ್ದಾರೆ. ‌

ಬಂಟ್ವಾಳ, ಡಿ.21 : ಕೇಪು ಜಾತ್ರೆಯ ನಿಮಿತ್ತ ಎರಡನೇ ದಿನ ಭಾನುವಾರವೂ ವಿಟ್ಲ ಪೊಲೀಸರು ದಾಳಿ ನಡೆಸಿದ್ದು 20 ಕೋಳಿಗಳನ್ನು ಸ್ವಾಧೀನಪಡಿಸಿ, 27 ಜನರ ವಿರುದ್ದ ಪ್ರಕರಣ ದಾಖಲಿಸಿದ್ದಾರೆ. ‌

ಭಾನುವಾರ ಬೆಳಗ್ಗೆ ಮುರಳೀಧರ ರೈ ಎಂಬವರಿಗೆ ಸೇರಿದ ಗದ್ದೆಯಲ್ಲಿ ಅಕ್ರಮವಾಗಿ ಕೋಳಿ ಅಂಕ ನಡೆಸುತ್ತಿರುವ ಬಗ್ಗೆ, ವಿಟ್ಲ ಪೊಲೀಸ್‌ ಠಾಣೆಯ ಪೊಲೀಸ್‌ ನಿರೀಕ್ಷಕರು, ಠಾಣಾ ಅಧಿಕಾರಿ/ಸಿಬ್ಬಂದಿಗಳೊಂದಿಗೆ ಸದ್ರಿ ಸ್ಥಳಕ್ಕೆ ತೆರಳಿ ಪರಿಶೀಲಿಸಿದಾಗ, ಹಲವಾರು ಜನ ಸೇರಿ ಹಿಂಸಾತ್ಮಕವಾಗಿ ಕೋಳಿ ಅಂಕ ಆಡುತ್ತಿರುವುದು ಕಂಡುಬಂದಿರುತ್ತದೆ. ಅಲ್ಲಿ ನೆರೆದಿದ್ದ ಜನರಿಗೆ ಅಕ್ರಮ‌ ಕೋಳಿ ಅಂಕದ ಬಗ್ಗೆ ಕಾನೂನು ತಿಳುವಳಿಕೆ ನೀಡಿದರೂ, ಸೇರಿದ್ದ ಜನರು ಸ್ಥಳದಿಂದ ತೆರಳದೇ ನಿಂತುಕೊಂಡಿರುತ್ತಾರೆ 

ಅಲ್ಲದೆ, ಸ್ಥಳದಲ್ಲಿ ಹಾಜರಿದ್ದ ಬಿಜೆಪಿ ಮುಖಂಡರಾದ ಸಂಜೀವ ಮಠಂದೂರು, ಮುರಳೀಧರ ರೈ, ಸತೀಶ ಕುಂಪಲ, ದಯಾನಂದ ಉಜಿರೆಮಾರು, ಹರಿಪ್ರಸಾದ್‌ ಯಾದವ್‌, ಅಶೋಕ ಶೆಟ್ಟಿ ವಿಟ್ಲ,  ರಾಜೇಶ್‌ ಬಾಳೆಕಲ್ಲು ಎಂಬವರುಗಳು ಅಲ್ಲಿ ಸೇರಿದ್ದ ಜನರಿಗೆ ಕಾನೂನು ಬಾಹಿರ ಕೋಳಿ ಅಂಕವನ್ನು ಮುಂದುವರಿಸುವಂತೆ ಪ್ರಚೋದನೆ ಮತ್ತು ದುಷ್ಪ್ರೇರಣೆಯನ್ನು ನೀಡಿರುತ್ತಾರೆ. ಬಳಿಕ ಅಗತ್ಯ ಪೊಲೀಸ್ ಭದ್ರತೆಯನ್ನು ಏರ್ಪಡಿಸಿ, ಕೃತ್ಯದಲ್ಲಿ ತೊಡಗಿಸಿಕೊಂಡಿದ್ದ 20 ಜನರನ್ನು ವಶಕ್ಕೆ ಪಡೆದು, ಸ್ಥಳದಲ್ಲಿದ್ದ 20 ಹುಂಜ ಕೋಳಿಗಳನ್ನು ಹಾಗೂ ಕೋಳಿ ಅಂಕಕ್ಕೆ ಬಳಸುವ ಕತ್ತಿ (ಬಾಲು)ಗಳನ್ನು ಸ್ವಾಧೀನಪಡಿಸಲಾಗಿದ್ದು, ಸದ್ರಿ ಕಾನೂನು ಬಾಹಿರ ಕೃತ್ಯಕ್ಕೆ ಪ್ರಚೋದನೆ ಮತ್ತು ದುಷ್ಪ್ರೇರಣೆ ನೀಡಿದವರು ಹಾಗೂ ಕಾನೂನು ಬಾಹಿರ ಕೃತ್ಯದಲ್ಲಿ ತೊಡಗಿಸಿಕೊಂಡಿದ್ದವರು ಸೇರಿ ಒಟ್ಟು 27 ಜನರ ವಿರುದ್ಧ ವಿಟ್ಲ ಪೊಲೀಸ್ ಠಾಣೆಯಲ್ಲಿ ಅ.ಕ್ರ: 191/2025, ಕಲಂ: 189(2), 49, 221, 223, 190 BNS 2023 ಮತ್ತು  3, 11 PREVENTION OF CRUELTY TO ANIMALS ACT ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

For the second consecutive day, Vitla Police conducted a raid at the annual Kepu Ullalthi Jatre, seized 20 roosters, and registered a case against 27 individuals, including several BJP leaders, for organising and promoting illegal cockfighting.