ಸಂಸದ ಬ್ರಿಜೇಶ್ ಚೌಟರ 'ಬ್ಯಾಕ್‌ ಟು ಊರು' ಪರಿಕಲ್ಪನೆಗೆ ಬಿ.ವೈ. ವಿಜಯೇಂದ್ರ ಮೆಚ್ಚುಗೆ ; ಮಂಗಳೂರಿನಲ್ಲಿ ಕಂಪನಿ ಸ್ಥಾಪಿಸಿದ ಹತ್ತು ಉದ್ಯಮಿಗಳಿಗೆ ಗೌರವ, ಕಂಬಳಕ್ಕೆ ಮೆರುಗು ತಂದ ಬಾಕ್ಸಿಂಗ್ ಚಾಂಪ್ಯನ್ ಮೇರಿ ಕೋಮ್‌ 

28-12-25 03:44 pm       Mangalore Correspondent   ಕರಾವಳಿ

ಗ್ರಾಮೀಣ ಸೊಗಡಿನ ಕಂಬಳವನ್ನು ನಗರಕ್ಕೆ ಪರಿಚಯಿಸಿದಂತೆ, ಜಗತ್ತಿನಾದ್ಯಂತ ಹರಡಿರುವ ಮಂಗಳೂರಿನ ಪ್ರತಿಭೆಗಳು ತಾಯ್ನಾಡಿಗೆ ಕೊಡುಗೆ ನೀಡಲು ಇಲ್ಲಿ ಉದ್ಯಮ ಸ್ಥಾಪಿಸುವಂತೆ ಹುರಿದುಂಬಿಸುವ ಸಂಸದ ಕ್ಯಾ. ಬ್ರಿಜೇಶ್‌ ಚೌಟ ಅವರ 'ಬ್ಯಾಕ್ ಟು ಊರು' ಪರಿಕಲ್ಪನೆ ಅತ್ಯಂತ ವಿಭಿನ್ನ ಹಾಗೂ ಶ್ಲಾಘನೀಯ ಎಂದು  ಬಿಜೆಪಿ ರಾಜ್ಯಾಧ್ಯಕ್ಷ ಬಿ. ವೈ. ವಿಜಯೇಂದ್ರ ಹೇಳಿದ್ದಾರೆ. 

ಮಂಗಳೂರು, ಡಿ.28 : ಗ್ರಾಮೀಣ ಸೊಗಡಿನ ಕಂಬಳವನ್ನು ನಗರಕ್ಕೆ ಪರಿಚಯಿಸಿದಂತೆ, ಜಗತ್ತಿನಾದ್ಯಂತ ಹರಡಿರುವ ಮಂಗಳೂರಿನ ಪ್ರತಿಭೆಗಳು ತಾಯ್ನಾಡಿಗೆ ಕೊಡುಗೆ ನೀಡಲು ಇಲ್ಲಿ ಉದ್ಯಮ ಸ್ಥಾಪಿಸುವಂತೆ ಹುರಿದುಂಬಿಸುವ ಸಂಸದ ಕ್ಯಾ. ಬ್ರಿಜೇಶ್‌ ಚೌಟ ಅವರ 'ಬ್ಯಾಕ್ ಟು ಊರು' ಪರಿಕಲ್ಪನೆ ಅತ್ಯಂತ ವಿಭಿನ್ನ ಹಾಗೂ ಶ್ಲಾಘನೀಯ ಎಂದು  ಬಿಜೆಪಿ ರಾಜ್ಯಾಧ್ಯಕ್ಷ ಬಿ. ವೈ. ವಿಜಯೇಂದ್ರ ಹೇಳಿದ್ದಾರೆ. 

ಬಂಗ್ರಕೂಳೂರಿನ ಗೋಲ್ಡ್‌ ಫಿಂಚ್‌ ಸಿಟಿಯ ರಾಮ-ಲಕ್ಷ್ಮಣ ಜೋಡುಕರೆಯಲ್ಲಿ ಸಂಸದ ಕ್ಯಾ. ಬ್ರಿಜೇಶ್‌ ಚೌಟ ಅವರ ನೇತೃತ್ವದಲ್ಲಿ ನಡೆದ ನವ ವರ್ಷದ ನವ ವಿಧದ 9ನೇ ವರ್ಷದ ಕಂಬಳದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕಂಬಳ ಎನ್ನುವುದು ಕೇವಲ ಗ್ರಾಮೀಣ ಜಾನಪದ ಕ್ರೀಡೆಯಲ್ಲ. ಈ ಕಂಬಳವು ತುಳುನಾಡಿನ ಅಸ್ಮಿತೆಯ ಪ್ರತೀಕ. ಇಂಥಹ ಕಂಬಳ ವೇದಿಕೆಯಲ್ಲಿ ಕ್ಯಾ. ಚೌಟ ಅವರು ತಮ್ಮ ಬ್ಯಾಕ್‌ ಟು ಊರು ಪರಿಕಲ್ಪನೆಯಡಿ ತಾಯ್ನಾಡಿಗೆ ವಾಪಸ್ಸಾಗಿ ತುಳುನಾಡಿಗೆ ಕೊಡುಗೆ ನೀಡುತ್ತಿರುವ ಕರಾವಳಿ ಭಾಗದ ಯಶಸ್ವಿ ಉದ್ಯಮಿಗಳನ್ನು ಗುರುತಿಸಿ ಅಂಥಹ ಸಾಧಕರನ್ನು ಗೌರವಿಸುತ್ತಿರುವುದು ಪ್ರಶಂಸನೀಯ ಹಾಗೂ ಮಾದರಿಯ ನಡೆ ಎಂದು ಅವರು ಹೇಳಿದ್ದಾರೆ. 

ಕ್ಯಾ.ಬ್ರಿಜೇಶ್‌ ಚೌಟ ಅವರು ಕಳೆದ ಎಂಟು ವರ್ಷಗಳಿಂದ ಮಂಗಳೂರು ಕಂಬಳವನ್ನು ಬಹಳ ವ್ಯವಸ್ಥಿತವಾಗಿ ಆಯೋಜಿಸುತ್ತಿರುವುದು ನಿಜಕ್ಕೂ ಶ್ಲಾಘನೀಯ ವಿಚಾರ. ಹಿಂದೆ ಯಡಿಯೂರಪ್ಪ ಸಿಎಂ ಆಗಿದ್ದಾಗ ಕರಾವಳಿಯ ಕಂಬಳಕ್ಕೆ ಪ್ರೋತ್ಸಾಹ ನೀಡಲು ಪ್ರತಿ ಕಂಬಳಕ್ಕೂ 5 ಲಕ್ಷ ಅನುದಾನ ನೀಡಿದ್ದರು.‌ ಆದರೆ ಕಾಂಗ್ರೆಸ್ ಸರ್ಕಾರ, ಕಂಬಳದಲ್ಲು ರಾಜಕೀಯ ಮಾಡುತ್ತಿದ್ದು ಪ್ರೋತ್ಸಾಹ ಧನ ಕೊಡುವುದನ್ನೂ ನಿಲ್ಲಿಸಿದ್ದು ದುರ್ದೈವ ಎಂದು ವಿಜಯೇಂದ್ರ ಹೇಳಿದರು. 

ಕಂಬಳ ಸಮಿತಿ ಅಧ್ಯಕ್ಷರು ಹಾಗೂ ಸಂಸದ ಕ್ಯಾ.ಬ್ರಿಜೇಶ್‌ ಚೌಟ ಮಾತನಾಡಿ, ತುಳುನಾಡಿನ ಕಲೆ ಹಾಗೂ ಸಾಂಸ್ಕೃತಿಕ ಅಸ್ಮಿತೆಯನ್ನು ಮುಂದಿನ ಜನಾಂಗಕ್ಕೂ ಪರಿಚಯಿಸಲು ಈ ಕಂಬಳವನ್ನು ನಡೆಸಲಾಗುತ್ತಿದೆ. ಈ ಬಾರಿ ರಾಷ್ಟ್ರ ಜಾಗೃತಿಯ ಕಾರ್ಯಕ್ರಮ, ಬ್ಯಾಕ್‌ ಟು ಊರು ಸೇರಿದಂತೆ ನವ-ವಿಧ ಕಾರ್ಯಕ್ರಮಗಳ ಮೂಲಕ ಮಂಗಳೂರು ಕಂಬಳವನ್ನು ಮತ್ತಷ್ಟು ಅರ್ಥಪೂರ್ಣಗೊಳಿಸುವ ಪ್ರಯತ್ನ ಮಾಡಿರುವುದಾಗಿ ಹೇಳಿದರು.

ಬ್ಯಾಕ್‌ ಟು ಊರು ಉದ್ಯಮಿಗಳಿಗೆ ಸನ್ಮಾನ 

ದೇಶ- ವಿದೇಶದಲ್ಲಿ ಉದ್ಯಮ ಸ್ಥಾಪಿಸಿ, ಕಂಪನಿಗಳಲ್ಲಿ ಉನ್ನತ ಹುದ್ದೆಯಲ್ಲಿದ್ದು ತಾಯ್ನಾಡಿನಲ್ಲು ಉದ್ಯಮ ಕಟ್ಟಿ ಸ್ಥಳೀಯರಿಗೆ ಉದ್ಯೋಗಾವಕಾಶ ನೀಡಲು ಮುಂದಾಗಿರುವ ಹತ್ತು ಉದ್ಯಮಿಗಳನ್ನು ಗುರುತಿಸಿ ಅವರನ್ನು ಕಂಬಳದ ಅದ್ದೂರಿ ವೇದಿಕೆಯಲ್ಲಿ ಗೌರವಿಸಲಾಗಿದೆ. ಆಮೂಲಕ ಬ್ಯಾಕ್‌ ಟು ಊರು ಪರಿಕಲ್ಪನೆಯಡಿ ಮತ್ತಷ್ಟು ಮಂಗಳೂರಿನ ಉದ್ಯಮಿಗಳು ಹಿಂದಿರುಗಲು ಪ್ರೇರಣೆ ನೀಡಿರುವುದು ಈ ಬಾರಿಯ ಮಂಗಳೂರು ಕಂಬಳದ ಬಹಳ ವಿಶೇಷತೆಯಾಗಿದೆ. 

ಅದರಂತೆ ಮಂಗಳೂರಿನಲ್ಲಿ ಈಜಿ ಕಂಪೆನಿಯ ಆಪರೇಷನ್‌ ಆರಂಭಿಸಿ ಸಾಕಷ್ಟು ಉದ್ಯೋಗಾವಕಾಶ ನೀಡಿರುವ ಆನಂದ್‌ ಫೆರ್ನಾಂಡಿಸ್‌, ಮಂಗಳೂರಿನ ಎಸ್‌ಇಝೆಡ್‌ನಲ್ಲಿ ಸುಸ್ಥಿರ ಕಟ್ಟಡ ಸಾಮಗ್ರಿಗಳ ಘಟಕ ಸ್ಥಾಪಿಸಿರುವ ಎಂಐಆರ್‌ ಗ್ರೂಪ್‌ನ ಕಾರ್ಯ ನಿರ್ವಾಹಕ ನಿರ್ದೇಶಕ ನಿತಿನ್‌ ರತ್ನಾಕರ್‌, ಮಂಗಳೂರಿನ ಎಸ್‌ಇಝೆಡ್‌ನಲ್ಲಿ ಇ-ಟ್ಯಾಗ್‌ ಎನರ್ಜಿಟೆಕ್ನಿಕ್‌ ಪ್ರೈವೆಟ್‌ ಲಿ.ನ ಉತ್ಪಾದನಾ ಘಟಕ ಸ್ಥಾಪಿಸುತ್ತಿರುವ ಬ್ರೂನೋ ಮಾರ್ಸೆಲ್‌ ಪ್ರಕಾಶ್‌ ಪಿರೇರಾ, ಶೆಫ್‌ ಹಾಗೂ ಪುಣೆಯಲ್ಲಿ ಉದ್ಯಮಿಯಾಗಿರುವ ಶ್ರೇಯಾ ಶೆಟ್ಟಿ, ಅಗ್ರಿಲೀಫ್‌ ಮೂಲಕ ಗ್ರಾಮೀಣ ಭಾಗದಲ್ಲಿ ಸುಸ್ಥಿರ ಉತ್ಪಾದನಾ ಕಂಪೆನಿ ಸ್ಥಾಪಿಸಿರುವ ಅವಿನಾಶ್‌ ರಾವ್‌, ಇಂಡಸ್ಟ್ರೀಯಲ್‌ ಅಟೋಮೇಷನ್‌ & ಡಿಜಿಟಲ್‌ ಟೆಕ್ನಾಲಜೀಸ್‌ ಮೂಲಕ ಮಂಗಳೂರಿಗೆ ಕೊಡುಗೆ ನೀಡುತ್ತಿರುವ ಸ್ಮಿತಾ ರಾವ್‌, ಬೋಸ್ ಫ್ರೊಫೆಷನಲ್ಸ್‌ನ ಇಂಡಿಯಾ ಆರ್‌ ಅಂಡ್‌ ಡಿ ಸೆಂಟರ್‌ನ್ನು ಮಂಗಳೂರಿನಲ್ಲಿ ಸ್ಥಾಪಿಸಿರುವ ನಮಿತಾ ಪಿ.ಪಿ., ಹೈದರಾಬಾದ್‌ನಿಂದ ಎಂಎನ್‌ಸಿ ಕಂಪೆನಿ ಕೆಲಸ ಬಿಟ್ಟು ಬಂದು ಮಂಗಳೂರಿನಲ್ಲಿ ಡಿ ನೆಟ್‌ ಸರ್ವೀಸಸ್‌ ಪ್ರೈ.ಲಿ. ಮೂಲಕ ಇಂಟರ್‌ನೆಟ್‌ ಸೇವೆ ಒದಗಿಸಿ ನೂರಾರು ಮಂದಿಗೆ ಉದ್ಯೋಗ ನೀಡಿರುವ ಸಂದೇಶ್‌ ಡಿ. ಪೂಜಾರಿ, ಉದ್ಯಮಿಯಾಗಿ ಎಸ್‌ಎನ್‌ ಪೂಂಜಾ & ಕೋ. ಮೂಲಕ ಮಂಗಳೂರು ನಗರದಲ್ಲಿ ಕದ್ರಿ ಪಾರ್ಕ್‌ ಅಭಿವೃದ್ಧಿ ಸೇರಿ ವಿವಿಧ ವೆಂಚರ್‌ಗಳನ್ನು ಮಾಡಿರುವ ಸುಧಾಕರ್‌ ಪೂಂಜಾ, ಸೌದಿ ಅರೇಬಿಯಾ ಸೇರಿ ಹಲವೆಡೆ ಇಂಡಿಪೆಂಡೆಂಟ್‌ ಇನ್ನೋವೇಷನ್‌ ಎಂಬ ಕಂಪೆನಿ ಮೂಲಕ ತಮ್ಮ ಉದ್ಯಮವನ್ನು ಮಂಗಳೂರಿಗೆ ವಿಸ್ತರಿಸಿರುವ ಅನ್ಸಾರ್ ಅಲಿ ಅವರನ್ನು ಕಂಬಳ ವೇದಿಕೆಯಲ್ಲಿ ಸನ್ಮಾನಿಸಲಾಯಿತು. 

ಕಂಬಳಕ್ಕೆ ಮೆರುಗು ತಂದ ಬಾಕ್ಸರ್ ಮೇರಿ ಕೋಮ್‌ 

ವಿಶ್ವ ಬಾಕ್ಸಿಂಗ್‌ ಚಾಂಪಿಯನ್‌ ಮೇರಿ ಕೋಮ್‌ ಈ ಬಾರಿಯ ಮಂಗಳೂರು ಕಂಬಳದಲ್ಲಿ ಪಾಲ್ಗೊಂಡಿದ್ದು ವಿಶೇಷ. ಅವರಿಗೆ ಕಂಬಳದ ಬೆತ್ತ ಹಾಗೂ ಕಂಬಳ ಕೋಣಗಳ ಸ್ಮರಣಿಕೆ ನೀಡಿ ಗೌರವಿಸಲಾಯಿತು. ನಾನು ಕೂಡ ಮಣಿಪುರದ ಸಣ್ಣ ಹಳ್ಳಿಯಿಂದ ಬಂದವಳು. ಇಂಥ ಕ್ರೀಡೆ ಆಯೋಜಿಸಿದ್ದಕ್ಕೆ ಅಭಿನಂದನೆಗಳು. ಮೊದಲ ಬಾರಿಗೆ ಕಂಬಳವನ್ನು ನೋಡುತ್ತಿದ್ದು, ಬಹಳ ಖುಷಿ ಮತ್ತು ಹೆಮ್ಮೆಯಾಗುತ್ತಿದೆ ಎಂದು ಹೇಳಿದ್ದಾರೆ.  

ಕಂಬಳ ಸಮಿತಿ ಗೌರವಾಧ್ಯಕ್ಷ ಡಾ.ಕೆ. ಪ್ರಕಾಶ್‌ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ವಿಧಾನ ಪರಿಷತ್‌ ಪ್ರತಿಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ, ಸಂಸದ ಕೋಟ ಶ್ರೀನಿವಾಸ ಪೂಜಾರಿ, ಶಾಸಕರಾದ ಹರೀಶ್‌ ಪೂಂಜ, ವೇದವ್ಯಾಸ ಕಾಮತ್‌, ಭಾಗೀರಥಿ ಮುರುಳ್ಯ,  ಡಾ.ವೈ.ಭರತ್‌ ಶೆಟ್ಟಿ, ರಾಜೇಶ್‌ ನಾೖಕ್‌, ಗುರುರಾಜ ಗಂಟಿಹೊಳೆ, ವಿಧಾನ ಪರಿಷತ್‌ ಸದಸ್ಯರಾದ ಪ್ರತಾಪ ಸಿಂಹ ನಾಯಕ್‌, ಕಿಶೋರ್‌ ಕುಮಾರ್‌ ಬೊಟ್ಯಾಡಿ, ಮಾಜಿ ಸಚಿವರಾದ ಪ್ರಮೋದ್‌ ಮಧ್ವರಾಜ್‌, ಬಿ.ನಾಗರಾಜ ಶೆಟ್ಟಿ, ಉದ್ಯಮಿ ಶಶಿಧರ ಶೆಟ್ಟಿ ಬರೋಡಾ ಸೇರಿದಂತೆ ಹಲವು ಉದ್ಯಮಿಗಳು, ಗಣ್ಯರು ಭಾಗವಹಿಸಿದ್ದರು.

At the 9th edition of the Mangaluru Kambala held at Bangrakooluru’s Gold Finch City, BJP State President B.Y. Vijayendra lauded MP Brijesh Chowta’s innovative ‘Back to Ooru’ concept, which encourages global Tuluva achievers to return home and invest in local industries. Ten entrepreneurs who established companies in Mangaluru and generated employment were honoured on the grand Kambala stage.