Dharmasthala Case, Belthangady Court: ಧರ್ಮಸ್ಥಳ ಪ್ರಕರಣದಲ್ಲಿ ಎಸ್ಐಟಿಗೆ ಹಿನ್ನಡೆ ; ಅಂತಿಮ ವರದಿ ಬಳಿಕವೇ ಆದೇಶ, ಎಸ್ಐಟಿ ವರದಿ ಬಗ್ಗೆ ಬೆಳ್ತಂಗಡಿ ಕೋರ್ಟ್ ತೀರ್ಪು 

04-01-26 01:57 pm       Mangalore Correspondent   ಕರಾವಳಿ

ಧರ್ಮಸ್ಥಳ ಹೆಣ ಹೂತ ಪ್ರಕರಣ ಸಂಬಂಧಿಸಿ ಎಸ್ಐಟಿ ವರದಿಯನ್ವಯ ಬೆಳ್ತಂಗಡಿ ಜೆಎಂಎಫ್ ಕೋರ್ಟ್ ಆರೋಪಿಗಳ ವಿರುದ್ಧ ಕ್ರಮಕ್ಕೆ ಅನುಮತಿ ನೀಡಿಲ್ಲ. ಅಂತಿಮ ವರದಿ ನೀಡಿದ ಬಳಿಕವೇ ಈ ಕುರಿತು ಆದೇಶ ನೀಡುವುದಾಗಿ ನ್ಯಾಯಾಲಯ ಸ್ಪಷ್ಟಪಡಿಸಿದೆ. 

ಮಂಗಳೂರು, ಜ.4: ಧರ್ಮಸ್ಥಳ ಹೆಣ ಹೂತ ಪ್ರಕರಣ ಸಂಬಂಧಿಸಿ ಎಸ್ಐಟಿ ವರದಿಯನ್ವಯ ಬೆಳ್ತಂಗಡಿ ಜೆಎಂಎಫ್ ಕೋರ್ಟ್ ಆರೋಪಿಗಳ ವಿರುದ್ಧ ಕ್ರಮಕ್ಕೆ ಅನುಮತಿ ನೀಡಿಲ್ಲ. ಅಂತಿಮ ವರದಿ ನೀಡಿದ ಬಳಿಕವೇ ಈ ಕುರಿತು ಆದೇಶ ನೀಡುವುದಾಗಿ ನ್ಯಾಯಾಲಯ ಸ್ಪಷ್ಟಪಡಿಸಿದೆ. 

ಧರ್ಮಸ್ಥಳ ಗ್ರಾಮದಲ್ಲಿ ಹಿಂದೆ ನಡೆದಿದೆ ಎನ್ನಲಾದ ಹೆಣ ಹೂತ ಪ್ರಕರಣ ಸಂಬಂಧಿಸಿ ಆರು ತಿಂಗಳಿನಿಂದ ತನಿಖೆ ನಡೆಸಿದ ವಿಶೇಷ ತನಿಖಾ ತಂಡವು ಕಳೆದ ನವೆಂಬರ್ 20ರಂದು ಬೆಳ್ತಂಗಡಿ ನ್ಯಾಯಾಲಯಕ್ಕೆ ಪ್ರಾಥಮಿಕ ವರದಿ ನೀಡಿತ್ತು. ಮುಂದೆ ಯಾವ ರೀತಿಯ ಕ್ರಮ ಕೈಗೊಳ್ಳಬೇಕು, ಆರೋಪಿಗಳ ವಿರುದ್ಧ ತನಿಖೆ ನಡೆಸಿ ಕ್ರಮ ಕೈಗೊಳ್ಳಲು ಅನುಮತಿ ನೀಡಬೇಕು ಎಂಬ ಕೋರಿಕೆಗೆ ಡಿ.27ರಂದು ಕೋರ್ಟ್ ತೀರ್ಪು ನೀಡುವ ನಿರೀಕ್ಷೆ ಇತ್ತು. ಆನಂತರ, ತೀರ್ಪು ಮುಂದೂಡಿದ್ದ ಕೋರ್ಟ್ ಇದೀಗ ಎಸ್ಐಟಿ ಅಂತಿಮ ವರದಿ ಸಲ್ಲಿಸಿದ ಬಳಿಕವಷ್ಟೇ ಈ ಬಗ್ಗೆ ನಿರ್ಧಾರ ಪ್ರಕಟಿಸುವುದಾಗಿ ಹೇಳಿದೆ. 

ಧರ್ಮಸ್ಥಳ ಪ್ರಕರಣದಲ್ಲಿ ತನಿಖೆ ನಡೆಸಿದ ಎಸ್ಐಟಿ ದೂರು ನೀಡಿದ್ದ ಚಿನ್ನಯ್ಯನನ್ನೇ ಬಂಧಿಸಿತ್ತು. ಆದರೆ ಆರೋಪಿಯನ್ನು ಬಂಧಿಸಿದ 90 ದಿನಗಳಲ್ಲಿ ಎಸ್ಐಟಿ ವರದಿ ನೀಡಬೇಕಾಗಿತ್ತು. ಆದರೆ ವಿವಿಧ ಕಾರಣಗಳಿಂದಾಗಿ ಎಸ್ಐಟಿ ವರದಿಯನ್ನು ವಿಳಂಬಿಸಿ ಕೊನೆಗೆ 3900 ಪುಟಗಳ ವರದಿಯನ್ನು ಕೋರ್ಟಿಗೆ ಸಲ್ಲಿಸಿತ್ತು. ತನಿಖೆಯ ದಾರಿ ತಪ್ಪಿಸಿದ್ದಾಗಿ ಹೇಳಿ ಚಿನ್ನಯ್ಯ, ಮಹೇಶ್ ಶೆಟ್ಟಿ ತಿಮರೋಡಿ, ಜಯಂತ್, ವಿಠಲ ಗೌಡ, ಸುಜಾತಾ ಭಟ್ ವಿರುದ್ಧ ಕ್ರಮ ಕೈಗೊಳ್ಳಲು ಅವಕಾಶ ನೀಡಬೇಕೆಂದು ಕೋರ್ಟಿಗೆ ಕೇಳಿಕೊಂಡಿತ್ತು. 

ವರದಿಯ ಬಗ್ಗೆ ಸದ್ಯಕ್ಕೆ ಯಾವುದೇ ಆದೇಶ ಪ್ರಕಟಿಸುವುದಿಲ್ಲ, ತನಿಖೆಯ ಅಂತಿಮ ವರದಿ ಸಲ್ಲಿಸಿದ ಬಳಿಕವೇ ತೀರ್ಪು ಪ್ರಕಟಿಸುವುದಾಗಿ ನ್ಯಾಯಾಧೀಶರಾದ ಟಿ‌.ಎಚ್ ವಿಜಯೇಂದ್ರ ತಿಳಿಸಿದ್ದಾರೆ. ಇದೇ ವೇಳೆ, ಧರ್ಮಸ್ಥಳ ಕ್ಷೇತ್ರವನ್ನು ಸಂತ್ರಸ್ತ ಎಂದು ಪರಿಗಣಿಸಿ ವಾದ ಮಂಡನೆಗೆ ಅವಕಾಶ ನೀಡುವಂತೆ ದೇವಸ್ಥಾನ ಪರವಾಗಿ ಹೈಕೋರ್ಟ್ ಹಿರಿಯ ವಕೀಲ ಸಿವಿ ನಾಗೇಶ್ ಹಾಜರಾಗಿದ್ದಾರೆ. ಈ ಬಗ್ಗೆ ಆಕ್ಷೇಪ ಸಲ್ಲಿಸಲು ಕಾಲಾವಕಾಶ ಕೇಳಿದ್ದರಿಂದ ನ್ಯಾಯಾಲಯ ವಿಚಾರಣೆಯನ್ನು ಜ.23ಕ್ಕೆ ಮುಂದೂಡಿದೆ.

In a significant development in the Dharmasthala buried-body case, the Belthangady JMFC Court has refused to grant permission to proceed against the accused based on the SIT’s preliminary report. The court stated that it will issue any order only after the SIT submits its final report.