ಜ.9ರಿಂದ ತಣ್ಣೀರುಬಾವಿಯಲ್ಲಿ ಬೀಚ್ ಉತ್ಸವ, ಟ್ರಯತ್ಲಾನ್, ಮ್ಯಾರಥಾನ್, ಬೀಚ್ ರೆಸ್ಲಿಂಗ್ ಚಾಂಪ್ಯನ್ ಶಿಪ್

06-01-26 04:01 pm       Mangalore Correspondent   ಕರಾವಳಿ

ವಿಭಿನ್ನ ರೀತಿಯ ಕ್ರೀಡೆಗಳು, ಅತ್ಲೆಟಿಕ್ ಮತ್ತು ಸಾಂಸ್ಕೃತಿಕ ಉತ್ಸವಗಳಲ್ಲಿ ಒಂದಾದ 4ನೇ ಆವೃತ್ತಿಯ ಮಂಗಳೂರು ಟ್ರಯತ್ಲಾನ್, ಬೀಚ್ ಮ್ಯಾರಥಾನ್ ಮತ್ತು ಆಲ್ ಕಾರ್ಗೋ ಮಂಗಳೂರು ಬೀಚ್ ಫೆಸ್ಟಿವಲ್ ಇದೇ ಜನವರಿ 9ರಿಂದ 11ರ ವರೆಗೆ ತಣ್ಣೀರುಬಾವಿ ಬೀಚ್ ನಲ್ಲಿ ನಡೆಯಲಿದೆ.

ಮಂಗಳೂರು, ಜ.6 : ವಿಭಿನ್ನ ರೀತಿಯ ಕ್ರೀಡೆಗಳು, ಅತ್ಲೆಟಿಕ್ ಮತ್ತು ಸಾಂಸ್ಕೃತಿಕ ಉತ್ಸವಗಳಲ್ಲಿ ಒಂದಾದ 4ನೇ ಆವೃತ್ತಿಯ ಮಂಗಳೂರು ಟ್ರಯತ್ಲಾನ್, ಬೀಚ್ ಮ್ಯಾರಥಾನ್ ಮತ್ತು ಆಲ್ ಕಾರ್ಗೋ ಮಂಗಳೂರು ಬೀಚ್ ಫೆಸ್ಟಿವಲ್ ಇದೇ ಜನವರಿ 9ರಿಂದ 11ರ ವರೆಗೆ ತಣ್ಣೀರುಬಾವಿ ಬೀಚ್ ನಲ್ಲಿ ನಡೆಯಲಿದೆ. ಕ್ಯಾನ್ಸರ್ ರೋಗಿಗಳಿಗೆ ಸೇವೆ ನೀಡುತ್ತಿರುವ ತಪಸ್ಯ ಫೌಂಡೇಶನ್ ಮತ್ತು ದಕ್ಷಿಣ ಕನ್ನಡ ಜಿಲ್ಲಾಡಳಿತ ಸಹಯೋಗದಲ್ಲಿ ಕಾರ್ಯಕ್ರಮ ನಡೆಯಲಿದೆ ಎಂದು ತಪಸ್ಯ ಫೌಂಡೇಶನ್ ನಿರ್ದೇಶಕಿ ಸಬಿತಾ ಆರ್. ಶೆಟ್ಟಿ ತಿಳಿಸಿದ್ದಾರೆ.

ಸುದ್ದಿಗೋಷ್ಟಿಯಲ್ಲಿ ಮಾಹಿತಿ ನೀಡಿದ ಅವರು, ರಾಜ್ಯ ಮಟ್ಟದ ಬೀಚ್ ಕುಸ್ತಿ, ವಿಜ್ಞಾನ ಮತ್ತು ಕಲಾ ವಸ್ತು ಪ್ರದರ್ಶನ, ಮಕ್ಕಳಿಗೆ ಐಟಿ ಕ್ವಿಜ್, ಬೀಚ್ ಮ್ಯಾರಥಾನ್, ಡುಯಾಥ್ಲಾನ್, 40ಕೆ ಡ್ರೀಮ್ ಡಿಸ್ಟನ್ಸ್ ಟ್ರಯಾಥ್ಲಾನ್, ಸ್ಟ್ರಿಂಟ್ ಟ್ರಯಾಥ್ಲಾನ್, ಟೀಮ್ ರಿಲೇ ಟ್ರಯಾಥ್ಲಾನ್, 1000 ಮೀಟರ್ ಡ್ರೀಮ್ ಸ್ವಿಮ್, 500 ಮೀ. ಫನ್ ಸ್ವಿಮ್, ಅಕ್ವಾಥಾನ್, ಫುಲ್ ಮ್ಯಾರಥಾನ್, ಹಾಫ್ ಮ್ಯಾರಥಾನ್, 10 ಕೆ ಡ್ರೀಮ್ ರನ್, 5ಕೆ ಫನ್ ರನ್ ಹೀಗೆ ವಿವಿಧ ರೀತಿಯ ಸ್ಪರ್ಧೆಗಳು ನಡೆಯಲಿವೆ.

ದೇಶ- ವಿದೇಶದ ಸ್ಪರ್ಧಿಗಳು ಭಾಗವಹಿಸುತ್ತಿದ್ದು, ಸ್ಥಳೀಯರು ಕೂಡ ಉಚಿತವಾಗಿ ಪಾಲ್ಗೊಳ್ಳಬಹುದು. ಇದರಲ್ಲಿ ತೇರ್ಗಡೆಯಾಗುವವರಿಗೆ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಕ್ರೀಡೆಯಲ್ಲಿ ಪಾಲ್ಗೊಳ್ಳುವ ಅವಕಾಶ, ಉದ್ಯೋಗದಲ್ಲಿ ಅರ್ಹತೆ ಲಭಿಸಲಿದೆ. ಇದರೊಂದಿಗೆ ಬೈಕ್ ಸ್ಟಂಟ್ ಶೋ, ಬ್ಯಾಟಲ್ ಆಫ್ ಬ್ಯಾಂಡ್ಸ್, ಫ್ಯಾಶನ್ ಶೋ, ಥ್ರೋಬಾಲ್ ಕೂಡ ಇರಲಿದೆ ಎಂದರು.

ಈಗಾಗಲೇ 10ರಿಂದ 15 ವರ್ಷದ ಮಕ್ಕಳಿಗೆ ಟ್ರಯಾಥ್ಲಾನ್ ತರಬೇತಿ ನೀಡುತ್ತಿದ್ದು, ಅತ್ಲೆಟಿಕ್ ನಲ್ಲಿ ಒಲಿಂಪಿಕ್ ಸ್ಪರ್ಧೆಗೆ ಭಾಗವಹಿಸುವ ಅರ್ಹತೆ ಗಳಿಸಬೇಕೆಂಬ ಗುರಿಯಿದೆ. ಅಲ್ಲದೆ, ಮಂಗಳೂರಿನಲ್ಲಿ ಹೊಸ ಸ್ಟಾರ್ಟಪ್ ಗಳಿಗೆ ಬೆಂಬಲ ನೀಡುವುದು, ಮಂಗಳೂರನ್ನು ಜಾಗತಿಕ ಪ್ರವಾಸೋದ್ಯಮ ನಕ್ಷೆಗೆ ಸೇರಿಸುವ ಉದ್ದೇಶ ಇದೆ. ಅಲ್ಲಿನ ಸ್ಥಳೀಯರ ಮನೆಗಳನ್ನೇ ಹೋಮ್ ಸ್ಟೇಗಳನ್ನಾಗಿಸಿ ಟೂರಿಸಂ ಬೆಳೆಸಲಾಗುತ್ತಿದೆ. ಮೂರು ವರ್ಷಗಳಲ್ಲಿ 800ಕ್ಕೂ ಹೆಚ್ಚು ಹೋಮ್ ಸ್ಟೇ ಕೊಠಡಿಗಳನ್ನು ಬುಕ್ ಮಾಡಲಾಗಿದೆ ಎಂದು ಉತ್ಸವದ ಸಂಯೋಜಕರಲ್ಲಿ ಒಬ್ಬರಾದ ನವೀನ್ ಹೆಗ್ಡೆ ಹೇಳಿದರು.

9ರಂದು ಸಂಜೆ 4 ಗಂಟೆಗೆ ರಾಜ್ಯ ಮಟ್ಟದ ಬೀಚ್ ರೆಸ್ಲಿಂಗ್ ಚಾಂಪ್ಯನ್ ಶಿಪ್ ಉದ್ಘಾಟನೆಯಾಗಲಿದ್ದು, ಅಖಿಲ ಭಾರತ ಬೀಚ್ ರೆಸ್ಲಿಂಗ್ ಕಮಿಟಿಯ ಅಧ್ಯಕ್ಷ ಬೆಳ್ಳಿಪ್ಪಾಡಿ ಗುಣರಂಜನ್ ಶೆಟ್ಟಿ ಪಾಲ್ಗೊಳ್ಳಲಿದ್ದಾರೆ. ಅಂಡರ್ -15 ಮತ್ತು ಅಂಡರ್ -17 ಒಳಪಟ್ಟ ಹಾಗೂ ಹಿರಿಯರ ವಿಭಾಗದಲ್ಲಿ ಪುರುಷರು ಮತ್ತು ಮಹಿಳೆಯರ ಪ್ರತ್ಯೇಕ ಕುಸ್ತಿ ಸ್ಪರ್ಧೆ ಇರಲಿದೆ. ರಾಜ್ಯ ಮತ್ತು ರಾಷ್ಟ್ರ ಮಟ್ಟದ ಸ್ಪರ್ಧೆಯಲ್ಲಿ ಪದಕ ಗಳಿಸಿದವರು ಇದರಲ್ಲಿ ಪಾಲ್ಗೊಳ್ಳಲಿದ್ದು, ಇಲ್ಲಿ ಪ್ರಶಸ್ತಿ ಗಳಿಸಿದವರು ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಲಿದ್ದಾರೆ ಎಂದು ಕರ್ನಾಟಕ ಬೀಚ್ ರೆಸ್ಲಿಂಗ್ ಕಮಿಟಿ ಉಪಾಧ್ಯಕ್ಷ ನಿತ್ಯಾನಂದ ಶೆಟ್ಟಿ ಹೇಳಿದರು. ರಿತೇಶ್, ಅರವಿಂದ್, ಕರುಣಾಕರ್ ಉಪಸ್ಥಿತರಿದ್ದರು.

The 4th edition of the Mangaluru Triathlon, Beach Marathon and Allcargo Mangaluru Beach Festival will be held from January 9 to 11 at Tannirbhavi Beach. The event is jointly organized by Tapasya Foundation—which works for cancer patients—and the Dakshina Kannada District Administration, said Foundation Director Sabitha R. Shetty.