ನವೋದಯ ಟ್ರಸ್ಟ್ ನಿಂದ ಮಹಿಳಾ ಸಬಲೀಕರಣಕ್ಕೆ ಕೊಡುಗೆ ; ಎಂ.ಎನ್ ರಾಜೇಂದ್ರ ಕುಮಾರ್ ಗೆ ಅಮೆರಿಕದ ಪೆನ್ಸಿಲ್ವೇನಿಯಾ ವಿವಿಯಿಂದ 'ವಿಷನರಿ ಲೀಡರ್‌ಶಿಪ್ ಅವಾರ್ಡ್' ಗೌರವ 

06-01-26 07:51 pm       Mangalore Correspondent   ಕರಾವಳಿ

ನವೋದಯ ಸ್ವಸಹಾಯ ಗುಂಪುಗಳ ಮೂಲಕ ಮಹಿಳಾ ಸಬಲೀಕರಣದಲ್ಲಿ ಸಲ್ಲಿಸಿದ ಮಹತ್ತರ ಸಾಧನೆಯನ್ನು ಗುರುತಿಸಿ ಅಮೆರಿಕದ ಪ್ರತಿಷ್ಠಿತ ಪೆನ್ಸಿಲ್ವೇನಿಯಾ ವಿಶ್ವವಿದ್ಯಾಲಯವು ಎಸ್‌ಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ 'ಸಹಕಾರ ರತ್ನ' ಡಾ. ಎಂ.ಎನ್. ರಾಜೇಂದ್ರ ಕುಮಾರ್ ಅವರಿಗೆ ‘ವಿಷನರಿ ಲೀಡರ್‌ಶಿಪ್ ಅವಾರ್ಡ್ ಇನ್ ವುಮೆನ್ ಎಂಪವರ್‌ಮೆಂಟ್’ ಅನ್ನುವ ಪ್ರಶಸ್ತಿ ನೀಡಿ ಗೌರವಿಸಿದೆ.

ಮಂಗಳೂರು, ಜ.6 : ನವೋದಯ ಸ್ವಸಹಾಯ ಗುಂಪುಗಳ ಮೂಲಕ ಮಹಿಳಾ ಸಬಲೀಕರಣದಲ್ಲಿ ಸಲ್ಲಿಸಿದ ಮಹತ್ತರ ಸಾಧನೆಯನ್ನು ಗುರುತಿಸಿ ಅಮೆರಿಕದ ಪ್ರತಿಷ್ಠಿತ ಪೆನ್ಸಿಲ್ವೇನಿಯಾ ವಿಶ್ವವಿದ್ಯಾಲಯವು ಎಸ್‌ಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ 'ಸಹಕಾರ ರತ್ನ' ಡಾ. ಎಂ.ಎನ್. ರಾಜೇಂದ್ರ ಕುಮಾರ್ ಅವರಿಗೆ ‘ವಿಷನರಿ ಲೀಡರ್‌ಶಿಪ್ ಅವಾರ್ಡ್ ಇನ್ ವುಮೆನ್ ಎಂಪವರ್‌ಮೆಂಟ್’ ಅನ್ನುವ ಪ್ರಶಸ್ತಿ ನೀಡಿ ಗೌರವಿಸಿದೆ. ವಿವಿಯ ಪ್ರತಿನಿಧಿಗಳು ಮಂಗಳೂರಿಗೆ ಬಂದಿದ್ದು ಮಂಗಳವಾರ ಎಸ್‌ಸಿಡಿಸಿಸಿ ಬ್ಯಾಂಕ್ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರದಾನ ಮಾಡಿದರು. 

ಜನಸಾಮಾನ್ಯರಲ್ಲಿ ಉಳಿತಾಯ ಭಾವನೆ ಮತ್ತು ಅಭಿವೃದ್ಧಿ ಕುರಿತ ಕನಸನ್ನು ಹುಟ್ಟಿಸಿ, ಅಭಿವೃದ್ಧಿಯತ್ತ ಮುನ್ನಡೆಸುತ್ತಿರುವ ನವೋದಯ ಸ್ವಸಹಾಯ ಗುಂಪುಗಳ ಕಾರ್ಯದಕ್ಷತೆ ಹಾಗೂ ಸಂಘಟನಾ ಕಾರ್ಯದ ವಿಶೇಷ ಅಧ್ಯಯನಕ್ಕಾಗಿ ಅಮೆರಿಕದ ಪೆನ್ಸಿಲ್ವೇನಿಯಾ ವಿಶ್ವವಿದ್ಯಾಲಯದ ಅಧ್ಯಯನ ತಂಡವು ಎಸ್‌ಸಿಡಿಸಿಸಿ ಬ್ಯಾಂಕಿಗೆ ಆಗಮಿಸಿದ್ದು, ಬ್ಯಾಂಕ್ ಮತ್ತು ನವೋದಯ ಕಾರ್ಯ ಚಟುವಟಿಕೆ ಬಗ್ಗೆ ಮಾಹಿತಿ ಸಂಗ್ರಹಿಸಿದೆ. ಇದೇ ವೇಳೆ ಡಾ.ಎಂ.ಎನ್. ರಾಜೇಂದ್ರಕುಮಾರ್ ಅವರಿಗೆ ಪ್ರಶಸ್ತಿ ಪ್ರದಾನ ನೆರವೇರಿಸಲಾಯಿತು. 

ಪೆನ್ಸಿಲ್ವೇನಿಯಾ ವಿಶ್ವವಿದ್ಯಾಲಯ ಪರವಾಗಿ ಪ್ರೊಫೆಸರ್ ಫೆಮಿಡಾ ಹ್ಯಾಂಡಿ ಅವರು ಪ್ರಶಸ್ತಿ ಪ್ರದಾನ ಮಾಡಿದರು. ಬಳಿಕ ಮಾತನಾಡಿದ ಪ್ರೊ.ಫೆಮಿಡಾ ಹ್ಯಾಂಡಿ, ಡಾ.ಎಂ.ಎನ್. ರಾಜೇಂದ್ರ ಕುಮಾರ್ ಅವರು ನವೋದಯ ಸ್ವಸಹಾಯ ಸಂಘದ ಮೂಲಕ ಸಮಾಜದಲ್ಲಿ ಹಿಂದುಳಿದ ವರ್ಗಗಳು ಹಾಗೂ ವಿಶೇಷವಾಗಿ ಮಹಿಳೆಯರ ಸಬಲೀಕರಣಕ್ಕಾಗಿ ಅಹೋರಾತ್ರಿ ಶ್ರಮಿಸುತ್ತಿದ್ದಾರೆ. ಅಸಂಖ್ಯಾತ ಜನರ ಬದುಕಿಗೆ ಬೆಳಕು ನೀಡಿದ ಅವರ ದೂರದೃಷ್ಟಿ ಮತ್ತು ಸೇವಾಭಾವನೆಯನ್ನು ಗೌರವಿಸುವ ಸಲುವಾಗಿ ಈ ಪ್ರಶಸ್ತಿ ಪ್ರದಾನ ಮಾಡಲಾಗಿದೆ ಎಂದರು. 

ಎಸ್‌ಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ರಾಜೇಂದ್ರ ಕುಮಾರ್ ಮಾತನಾಡಿ,  ಕಳೆದ 15 ವರ್ಷಗಳಿಂದ ಪೆನ್ಸಿಲ್ವೇನಿಯಾ ವಿಶ್ವವಿದ್ಯಾಲಯದ ತಂಡ ಪ್ರೊ. ಫೆಮಿಡಾ ಹ್ಯಾಂಡಿ ಅವರ ನೇತೃತ್ವದಲ್ಲಿ ಎಸ್‌ಸಿಡಿಸಿಸಿ ಬ್ಯಾಂಕ್ ಹಾಗೂ ನವೋದಯ ಗ್ರಾಮ ವಿಕಾಸ ಚಾರಿಟೇಬಲ್ ಟ್ರಸ್ಟ್‌ಗೆ ನಿರಂತರವಾಗಿ ಭೇಟಿ ನೀಡುತ್ತಿದೆ. ಸ್ವಸಹಾಯ ಸಂಘಗಳ ಮೂಲಕ ಜಾರಿಗೊಳಿಸಿರುವ ಮಹಿಳಾ ಸಬಲೀಕರಣ ಹಾಗೂ ಸೂಕ್ಷ್ಮ ಹಣಕಾಸು (ಮೈಕ್ರೋ ಫೈನಾನ್ಸ್) ಮಾದರಿಯ ಯಶಸ್ಸನ್ನು ಅಧ್ಯಯನ ಮಾಡುತ್ತಿದೆ ಎಂದರು.

ಪೆನ್ಸಿಲ್ವೇನಿಯಾ ವಿವಿಯ ಅಧ್ಯಯನ ತಂಡದಲ್ಲಿ ಪ್ರೊಫೆಸರ್ ಫೆಮಿಡಾ ಹ್ಯಾಂಡಿ, ಪ್ರೊಫೆಸರ್ ಲ್ಯೂಕಸ್ ವಿನೋದ್ ದೀಕ್ಷಿತ್, ನಿಕೋಲ್, ಅಲೆಸ್ಸಾಂಡ್ರೊ (ಅಲೆಕ್ಸ್), ಅಬಿಗೈಲ್ (ಪ್ರೊಫೆಸರ್ ಫೆಮಿಡಾ ಅವರ ಬೋಧನಾ ಸಹಾಯಕ), ಬಿಜಾನ್ ಚಾನೆಲ್ ಆಂಡರ್ಸನ್, ಗ್ರೇಸ್ ಕ್ಯಾಂಬೆಲ್, ಎಲಿಷಾ ಚೋಯ್, ಎಮ್ಮಾ ಕ್ಲಾರ್ಕ್, ಜೆನ್ನಿ ಬೆತ್, ಕ್ರಿಸ್ಟಾ ಸ್ಮಿತ್, ಮಂಡಿಸಾ ಥಾಮಸ್, ಎಲಿಜಬೆತ್ ರೀಲಿ ಇದ್ದರು. 

ಕಾರ್ಯಕ್ರಮದಲ್ಲಿ ಎಸ್‌ಸಿಡಿಸಿಸಿ ಬ್ಯಾಂಕಿನ ಉಪಾಧ್ಯಕ್ಷ ವಿನಯ ಕುಮಾರ್ ಸೂರಿಂಜೆ , ಬ್ಯಾಂಕ್ ನಿರ್ದೇಶಕ ಎಂ.ವಾದಿರಾಜ ಶೆಟ್ಟಿ , ಶಶಿಕುಮಾರ್ ರೈ ಬಾಲ್ಯೋಟ್ಟು , ಸದಾಶಿವ ಉಳ್ಳಾಲ್, ಎಸ್.ಬಿ. ಜಯರಾಮ್ ರೈ, ಅಶೋಕ್ ಕುಮಾರ್ ಶೆಟ್ಟಿ, ಎಂ.ಮಹೇಶ್ ಹೆಗ್ಡೆ, ಕೆ.ಜೈರಾಜ್ ಬಿ ರೈ, ರಾಜೇಶ್ ರಾವ್, ಸದಾಶಿವ ಉಳ್ಳಾಲ್, ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಗೋಪಾಲಕೃಷ್ಣ ಭಟ್, ನವೋದಯ ಚಾರಿಟೆಬಲ್ ಟ್ರಸ್ಟ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಪೂರ್ಣಿಮಾ ಶೆಟ್ಟಿ ಮತ್ತಿತರರಿದ್ದರು.

The prestigious University of Pennsylvania (USA) has conferred the ‘Visionary Leadership Award in Women Empowerment’ on Dr. M.N. Rajendra Kumar, President of SCDCC Bank and founder of Navodaya Self-Help Groups (SHGs), recognizing his significant contribution to women’s empowerment through microfinance and community development.