ವಿಧವೆ ಮೊಮ್ಮಗಳು, ಮರಿ ಮಕ್ಕಳೊಂದಿಗಿದ್ದ ವೃದ್ಧೆಯ ಗುಡಿಸಲು ರಣಮಳೆಗೆ ಆಹುತಿ ; ಅದೃಷ್ಟದಿಂದ ಬದುಕುಳಿದಿದ್ದ ಉಳ್ಳಾಲದ ಕುಟುಂಬಕ್ಕೆ 'ಧನಲಕ್ಷ್ಮೀ' ಕೃಪೆ, ದಾನಿಗಳ ನೆರವಿನಿಂದ ಹೊಸ ಮನೆಯ ಆಸರೆ ! 

06-01-26 08:25 pm       Mangalore Correspondent   ಕರಾವಳಿ

ಕಳೆದ ವರ್ಷ ಮೇ ತಿಂಗಳ ಕೊನೆಯಲ್ಲಿ ಸುರಿದಿದ್ದ ರಣಮಳೆಗೆ ಕೊಲ್ಯದ ಸಾರಸ್ವತ ಕಾಲನಿಯ ನಿವಾಸಿ ತೊಂಬತ್ತು ವರ್ಷದ ವೃದ್ಧೆ ಗಿರಿಜಾ ಗಟ್ಟಿ ಅವರ ಗುಡಿಸಲಿನ ಮೇಲೆ ಪಕ್ಕದ ಖಾಸಗಿ ಶಾಲೆಯ ಆವರಣ ಗೋಡೆ ಕುಸಿದು ಬಿದ್ದು ಮನೆ ಸಂಪೂರ್ಣ ನೆಲಸಮಗೊಂಡಿತ್ತು. ನಾಲ್ಕು ದಿವಸಗಳ ಹಿಂದಷ್ಟೆ ಮನೆ ಮಂದಿಯನ್ನ ಬೇರೆಡೆಗೆ ಸ್ಥಳಾಂತರಿಸಿದ್ದರಿಂದ ಅದೃಷ್ಟವಶಾತ್ ಕುಟುಂಬವು ಬದುಕುಳಿದಿತ್ತು.

ಉಳ್ಳಾಲ, ಜ.6 : ಕಳೆದ ವರ್ಷ ಮೇ ತಿಂಗಳ ಕೊನೆಯಲ್ಲಿ ಸುರಿದಿದ್ದ ರಣಮಳೆಗೆ ಕೊಲ್ಯದ ಸಾರಸ್ವತ ಕಾಲನಿಯ ನಿವಾಸಿ ತೊಂಬತ್ತು ವರ್ಷದ ವೃದ್ಧೆ ಗಿರಿಜಾ ಗಟ್ಟಿ ಅವರ ಗುಡಿಸಲಿನ ಮೇಲೆ ಪಕ್ಕದ ಖಾಸಗಿ ಶಾಲೆಯ ಆವರಣ ಗೋಡೆ ಕುಸಿದು ಬಿದ್ದು ಮನೆ ಸಂಪೂರ್ಣ ನೆಲಸಮಗೊಂಡಿತ್ತು. ನಾಲ್ಕು ದಿವಸಗಳ ಹಿಂದಷ್ಟೆ ಮನೆ ಮಂದಿಯನ್ನ ಬೇರೆಡೆಗೆ ಸ್ಥಳಾಂತರಿಸಿದ್ದರಿಂದ ಅದೃಷ್ಟವಶಾತ್ ಕುಟುಂಬವು ಬದುಕುಳಿದಿತ್ತು. ಆದರೆ ಮನೆ ಕಳಕೊಂಡು ಕಂಗಾಲಾಗಿದ್ದ ವೃದ್ಧೆಗೆ ಮಾಜಿ ಜಿಪಂ ಸದಸ್ಯೆ, ಸಮಾಜ ಸೇವಕಿ ಧನಲಕ್ಷ್ಮಿ ಗಟ್ಟಿ ಆಸರೆಯಾಗಿ ನಿಂತಿದ್ದು ದಾನಿಗಳ ನೆರವಿನಿಂದ ಸುಂದರ ಮನೆ ನಿರ್ಮಿಸುತ್ತಿದ್ದಾರೆ.

ಗಿರಿಜಾ ಅವರು ಸಾರಸ್ವತ ಕಾಲನಿಯ ಐದು ಸೆಂಟ್ ಸಣ್ಣ ಜಾಗದಲ್ಲಿ ಮಣ್ಣಿನ ಇಟ್ಟಿಗೆಯ ಮನೆಯನ್ನ ಕಟ್ಟಿಕೊಂಡು ಕಳೆದ ಐವತ್ತು ವರುಷಗಳಿಂದಲೂ ಅಲ್ಲಿಯೇ ನೆಲೆಸಿದ್ದರು. ಅವರ ಕಿರಿಯ ಮೊಮ್ಮಗಳ ಪತಿ ಕೊರೊನಾ ಸಂದರ್ಭದಲ್ಲಿ ಕಾಯಿಲೆಗೆ ತುತ್ತಾಗಿ ತೀರಿ ಹೋಗಿದ್ದರಿಂದ ಮೊಮ್ಮಗಳು ಸಣ್ಣ ಪ್ರಾಯದಲ್ಲೇ ವಿಧವೆಯಾಗಿದ್ದಳು. ಮೊಮ್ಮಗಳು ಮತ್ತು ಆಕೆಯ ಇಬ್ಬರು ಪುಟ್ಟ ಮಕ್ಕಳನ್ನ ಸಾಕುವ ಜವಾಬ್ದಾರಿಯೂ ಗಿರಿಜಾ ಹೆಗಲ ಮೇಲೇರಿತ್ತು. ಇಂತಹ ದಯನೀಯ ಸ್ಥಿತಿಯಲ್ಲಿಯೇ ರಣಮಳೆಗೆ ಗಿರಿಜಾ ಅವರ ಮನೆಯೂ ಕುಸಿದು ಬಿದ್ದಿತ್ತು.

ಅಶಕ್ತ ಕುಟುಂಬದ ಪಾಡನ್ನು ಕಂಡು ಮರುಗಿದ ಧನಲಕ್ಷ್ಮಿ ಅವರು ಮೊದಲಿಗೆ ಗಿರಿಜಾ ಅವರ ವಿಧವೆ ಮೊಮ್ಮಗಳಿಗೆ ಜೀವನೋಪಾಯಕ್ಕಾಗಿ ಕುತ್ತಾರಿನ ಶಿಶುಪಾಲನಾ ಕೇಂದ್ರದಲ್ಲಿ ಶಿಶುಪಾಲಕಿ ಉದ್ಯೋಗವನ್ನು ಒದಗಿಸಿ ಕೊಟ್ಟಿದ್ದಾರೆ. ದಾನಿಗಳ ನೆರವಿಂದ ವೃದ್ಧೆಗೆ ಮನೆ ಕಟ್ಟಿಕೊಡಲು ಧನಲಕ್ಷ್ಮಿ ಮುಂದಾಗಿದ್ದು, ಆ ನಿಟ್ಟಿನಲ್ಲಿ ಕುಟುಂಬವನ್ನ ಬೇರೆಡೆ ಸ್ಥಳಾಂತರಿಸಿದ್ದರು. ಗೋರಿಗುಡ್ಡೆ ಕಿಟ್ಟೆಲ್ ಪಿಯು ಕಾಲೇಜಿನ ಪ್ರಾಂಶುಪಾಲ ವಿಠಲ್ ಮಾಸ್ಟರ್ ಅವರು ತನಗೆ ಸೇರಿದ ಕೊಲ್ಯದ ಖಾಲಿ ಮನೆಯಲ್ಲಿ ಗಿರಿಜಾ ಕುಟುಂಬಕ್ಕೆ ಮೂರು ತಿಂಗಳ ಕಾಲ ಉಚಿತವಾಗಿ ಆಶ್ರಯ ನೀಡಿದ್ದರು. ಬಳಿಕ‌ ಕುಟುಂಬವನ್ನ ಸೋಮೇಶ್ವರ ಉಚ್ಚಿಲದ ಬಾಡಿಗೆ ಮನೆಗೆ ಸ್ಥಳಾಂತರಿಸಲಾಗಿತ್ತು. ಕುಟುಂಬ ಸ್ಥಳಾಂತರಗೊಂಡ ನಾಲ್ಕೇ ದಿನದಲ್ಲಿ ಸುರಿದ ಜಡಿಮಳೆಗೆ ಹಳೆ ಮನೆಯ ಮೇಲೆ ಶಾಲೆಯ ಆವರಣ ಗೋಡೆ ಕುಸಿದಿದ್ದು, ಭಾರೀ ಅನಾಹುತ ತಪ್ಪಿತ್ತು.

ಗಿರಿಜಾ ಕುಟುಂಬಕ್ಕೆ ಮನೆ ಕಟ್ಟಿಕೊಡಲು ಮುಂದಾದ ಧನಲಕ್ಷ್ಮಿಯವರ ಸಾಮಾಜಿಕ ಕಳಕಳಿಗೆ ಸ್ವಜಾತಿ ಭಾಂದವರು ಆರಂಭದಲ್ಲಿ 52,000 ರೂ.ಗಳಷ್ಟು ದೇಣಿಗೆ ನೀಡಿದ್ದರು. ಕಳೆದ ಡಿಸೆಂಬರ್ ತಿಂಗಳ ಸಂಕಷ್ಟ ಚತುರ್ಥಿಯಂದು ನೂತನ ಮನೆ ನಿರ್ಮಾಣ ಕಾಮಗಾರಿಗೆ ಮುಹೂರ್ತ ನೆರವೇರಿಸಲಾಗಿತ್ತು. ಸೋಮೇಶ್ವರ ಪುರಸಭೆ ಉಪಾಧ್ಯಕ್ಷರಾದ ರವಿಶಂಕರ್ ಸೋಮೇಶ್ವರ, ಸ್ಥಾಯಿ ಸಮಿತಿ ಅಧ್ಯಕ್ಷರಾದ ಪುರುಷೋತ್ತಮ ಗಟ್ಟಿ ಮತ್ತು ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಮಮತಾ ಗಟ್ಟಿಯವರ ಪ್ರಯತ್ನದಿಂದ ಗಿರಿಜಾ ಅವರಿಗೆ ಸರಕಾರದ ಪೃಕೃತಿ ವಿಕೋಪ ಯೋಜನೆಯಡಿ 1.20 ಲಕ್ಷ ರೂಪಾಯಿ ಪರಿಹಾರ ಧನ ಕಳೆದ ವಾರ ಬಿಡುಗಡೆಯಾಗಿದೆ.

ಗಿರಿಜಾ ಅವರ ಮನೆ ನಿರ್ಮಾಣ ಕಾಮಗಾರಿಯನ್ನು ಫೆಬ್ರವರಿ ತಿಂಗಳ ಮೊದಲ ವಾರದೊಳಗೆ ಸಂಪೂರ್ಣಗೊಳಿಸುವ ಉದ್ದೇಶವಿದೆ. ಸುಮಾರು ಏಳು ಲಕ್ಷ ರೂ. ವೆಚ್ಚದಲ್ಲಿ ಮನೆಯನ್ನ ನಿರ್ಮಿಸಲಾಗುತ್ತಿದೆ. ಸ್ವಜಾತಿ ಸಮಾಜ ಭಾಂದವರಲ್ಲದೆ, ಎಲ್ಲಾ ಸಮಾಜ ಭಾಂದವರು, ಸಂಘ ಸಂಸ್ಥೆಗಳು ಉದಾರ ಮನಸ್ಸಿನಿಂದ ವಸ್ತು ರೂಪ ಮತ್ತು ಧನ ಸಹಾಯ ನೀಡಿ ಸಹಕರಿಸಿದ್ದಾರೆ. ಕಾಮಗಾರಿ ಪೂರ್ಣಗೊಳಿಸಲು ಇನ್ನಷ್ಟು ಸಹಾಯವನ್ನು ನಿರೀಕ್ಷಿಸುತ್ತಿದ್ದೇವೆ. ಮನೆ ನಿರ್ಮಾಣ ಕಾರ್ಯದಲ್ಲಿ ಉತ್ಸಾಹಿ ತರುಣ ಅರುಣ್ ಗಟ್ಟಿ ನನ್ನೊಂದಿಗೆ ನಿರಂತರ ಸಹಕರಿಸುತ್ತಿದ್ದು, ಗುತ್ತಿಗೆದಾರ ಸುಂದರ ಗಟ್ಟಿ ಅವರು ಕಡಿಮೆ ವೆಚ್ಚದಲ್ಲಿ ಸುಸಜ್ಜಿತ ಮನೆಯನ್ನು ನಿರ್ಮಿಸುತ್ತಿದ್ದಾರೆಂದು ಧನಲಕ್ಷ್ಮಿ ಗಟ್ಟಿ ತಿಳಿಸಿದ್ದಾರೆ.

In May last year, torrential rains caused the compound wall of a nearby private school to collapse on the hut of 90-year-old Girija Gatti, a resident of Saraswath Colony in Kolyar. The house was completely destroyed. Fortunately, the family had been shifted elsewhere just four days earlier, narrowly escaping a major tragedy. Left homeless and devastated, the elderly woman found a guardian angel in social worker and former ZP member Dhanalakshmi Gatti, who took the lead in rebuilding their lives.