ಮನರೇಗಾ ಜಾರಿಗೆ ಒತ್ತಾಯಿಸಿ ಸುಳ್ಯದಿಂದ ಮುಲ್ಕಿಗೆ ಪಾದಯಾತ್ರೆ ; 21ರಂದು ಉಪವಾಸ ಸತ್ಯಾಗ್ರಹ, ಕಾಂಗ್ರೆಸ್ ಕಾರ್ಯಕರ್ತರ ಸಭೆ ನಿರ್ಣಯ  

15-01-26 08:12 pm       Mangalore Correspondent   ಕರಾವಳಿ

ದ.ಕ. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ.ಹರೀಶ್ ಕುಮಾರ್ ಅಧ್ಯಕ್ಷತೆಯಲ್ಲಿ ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ (ಮನರೇಗಾ) ಯೋಜನೆ ಬಚಾವ್ ಸಂಗ್ರಾಮ್ ಪೂರ್ವಭಾವಿ ಸಭೆ ಗುರುವಾರ ಮಲ್ಲಿಕಟ್ಟೆಯ ಕಾಂಗ್ರೆಸ್ ಭವನದಲ್ಲಿ ನಡೆಯಿತು.

ಮಂಗಳೂರು, ಜ.15 : ದ.ಕ. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ.ಹರೀಶ್ ಕುಮಾರ್ ಅಧ್ಯಕ್ಷತೆಯಲ್ಲಿ ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ (ಮನರೇಗಾ) ಯೋಜನೆ ಬಚಾವ್ ಸಂಗ್ರಾಮ್ ಪೂರ್ವಭಾವಿ ಸಭೆ ಗುರುವಾರ ಮಲ್ಲಿಕಟ್ಟೆಯ ಕಾಂಗ್ರೆಸ್ ಭವನದಲ್ಲಿ ನಡೆಯಿತು.

ಬಳಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಹರೀಶ್ ಕುಮಾರ್, ಗ್ರಾಮೀಣ ಭಾಗದ ಬಡ ಕಾರ್ಮಿಕರು ಹಾಗೂ ಪಂಚಾಯಿತಿಗಳ ಅಭಿವೃದ್ಧಿಗೆ ಪೂರಕವಾಗಿದ್ದ ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾಯ್ದೆಯನ್ನು ಕೇಂದ್ರ ಬಿಜೆಪಿ ಸರ್ಕಾರ ಬದಲಿಸಿರುವುದನ್ನು ಖಂಡಿಸಿ ಮತ್ತು ಕಾಯ್ದೆ ಮರು ಜಾರಿಗೆ ಆಗ್ರಹಿಸಿ ಎಐಸಿಸಿ ಸೂಚನೆ ಮೇರೆಗೆ ಹಾಗೂ ಕೆಪಿಸಿಸಿ ನಿರ್ದೇಶನ ಮೇರೆಗೆ ‘ನರೇಗಾ ಬಜಾವ್ ಸಂಗ್ರಾಮ್’ ಆಂದೋಲನವನ್ನು ದ.ಕ. ಜಿಲ್ಲೆಯಾದ್ಯಂತ ನಡೆಸಲಾಗುವುದು ಎಂದು ತಿಳಿಸಿದರು.

ವಿಬಿ ಜಿ ರಾಮ್ ಜಿ ಯೋಜನೆಯ ಹೆಸರು ಬದಲಿಸುವುದು ಮಾತ್ರವಲ್ಲ ಜನರ ಜೀವನೋಪಾಯ ಹಾಗೂ ಪಂಚಾಯಿತಿಗಳ ಅಧಿಕಾರವನ್ನು ಕೇಂದ್ರ ಸರ್ಕಾರ ಕಸಿದುಕೊಂಡಿದೆ. ಇದು ದೇಶದ ಗ್ರಾಮೀಣ ಕಾರ್ಮಿಕರ ಪಾಲಿನ ಮರಣ ಶಾಸನವಾಗಿದೆ ಎಂದು ಹೇಳಿದರು. 

ಜ.31ರ ಒಳಗಾಗಿ ಪ್ರತಿ ವಿಧಾನಸಭಾ ವ್ಯಾಪ್ತಿಗಳಲ್ಲಿ ‘ಮನರೇಗಾ ಬಜಾವ್ ಸಂಗ್ರಾಮ್’  ಪಾದಯಾತ್ರೆ ಆಯೋಜಿಸುವುದು, ಜ.21ರಂದು ಕುದ್ಮುಲ್ ರಂಗರಾವ್ ಪುರಭವನದ ಬಳಿ ಮಹಾತ್ಮಾ ಗಾಂಧಿ ಪ್ರತಿಮೆ ಎದುರು ಉಪವಾಸ ಸತ್ಯಾಗ್ರಹ, ಫೆ.9, 10 ಮತ್ತು 11ರಂದು ಸುಳ್ಯದಿಂದ ಮುಲ್ಕಿ ವರೆಗೆ ಮೂರು ದಿನಗಳ ಕಾಲ ಪಾದಯಾತ್ರೆ ನಡೆಸುವುದು, ಇತ್ತೀಚಿಗೆ ಕೆಪಿಸಿಸಿ ಸಭೆಯಲ್ಲಿ ನಡೆದ ಎಲ್ಲ ಕಾರ್ಯಕ್ರಮ ಮತ್ತು ಸೂಚನೆಗಳನ್ನು ಸುಸೂತ್ರವಾಗಿ ಅನುಷ್ಠಾನ ಮಾಡಲು ಸಭೆಯಲ್ಲಿ ನಿರ್ಣಯಿಸಲಾಯಿತು.

ಈ ಸಂದರ್ಭ ಮಾಜಿ ಸಚಿವ ಬಿ.ರಮಾನಾಥ ರೈ, ವಿಧಾನ ಪರಿಷತ್ ಶಾಸಕ ಐವನ್ ಡಿಸೋಜ, ಕೆಪಿಸಿಸಿ ಮಾಜಿ ಪ್ರಧಾನ ಕಾರ್ಯದರ್ಶಿ ಪದ್ಮರಾಜ್ ಆರ್.ಪೂಜಾರಿ, ಮಾಜಿ ಶಾಸಕರಾದ ಜೆ.ಆರ್.ಲೋಬೊ, ಶಕುಂತಲಾ ಶೆಟ್ಟಿ, ಸುಳ್ಯ ವಿಧಾನಸಭಾ ಅಭ್ಯರ್ಥಿ ಜಿ.ಕೃಷ್ಣಪ್ಪ, ಮೂಡಾ ಅಧ್ಯಕ್ಷ ಸದಾಶಿವ್ ಉಳ್ಳಾಲ್, ಮಾಜಿ ಮೇಯರ್ ಶಶಿಧರ್ ಹೆಗ್ಡೆ, ಜಿಲ್ಲಾ ಗ್ಯಾರಂಟಿ ಯೋಜನೆ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಭರತ್ ಮುಂಡೋಡಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು, ತಾಲೂಕು ಗ್ಯಾರಂಟಿ ಯೋಜನೆ ಅಧ್ಯಕ್ಷರು, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷರು, ಜಿಲ್ಲಾ ಮುಂಚೂಣಿ ಘಟಕಾಧ್ಯಕ್ಷರು, ಬ್ಲಾಕ್ ಉಸ್ತುವಾರಿಗಳು ಉಪಸ್ಥಿತರಿದ್ದರು.

A preparatory meeting for the “MGNREGA Bachao Sangram” was held on Thursday at the Congress Bhavan in Mallikatte under the chairmanship of Dakshina Kannada District Congress President K. Harish Kumar.