ಎಸ್ಡಿಪಿಐ ರಾಷ್ಟ್ರ ವಿರೋಧಿ ನಿಲುವನ್ನು ತೋರಿಸಿದೆ ; ನಳಿನ್ ಕುಮಾರ್

31-12-20 03:57 pm       Mangalore Correspondent   ಕರಾವಳಿ

ಗೆಲುವಿನ ಉನ್ಮಾದದಲ್ಲಿ ಎಸ್ ಡಿಪಿಐ ಕಾರ್ಯಕರ್ತರು ರಾಷ್ಟ್ರ ವಿರೋಧಿ ವರ್ತನೆಯನ್ನು ತೋರಿದ್ದಾರೆ ಎಂದು ನಳಿನ್ ಕುಮಾರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ಮಂಗಳೂರು, ಡಿ.31: ಗೆಲುವಿನ ಉನ್ಮಾದದಲ್ಲಿ ಎಸ್ ಡಿಪಿಐ ಕಾರ್ಯಕರ್ತರು ರಾಷ್ಟ್ರ ವಿರೋಧಿ ವರ್ತನೆಯನ್ನು ತೋರಿದ್ದಾರೆ. ವಿಜಯೋತ್ಸವದಲ್ಲಿ ಭಾರತ್ ಮಾತಾ ಕಿ ಜೈ ಹಾಕುವ ಬದಲು ವಿರೋಧಿ ರಾಷ್ಟ್ರಕ್ಕೆ ಜೈಕಾರ ಹಾಕಿದ್ದಾರೆ. ಎಸ್ ಡಿಪಿಐ ಸಂಘಟನೆಯ ಇತ್ತೀಚಿನ ಚಟುವಟಿಕೆಗಳು ರಾಷ್ಟ್ರ ವಿರೋಧಿ ಅನ್ನೋದು ಸ್ಪಷ್ಟವಾಗುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ಮಂಗಳೂರಿನ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಟಿ ನಡೆಸಿದ ನಳಿನ್ ಕುಮಾರ್, ಗೆಲುವು, ಅದರಿಂದ ಹುಮ್ಮಸ್ಸುಗೊಳ್ಳುವುದು ಸಹಜ. ಆದರೆ, ಎಸ್ ಡಿಪಿಐ ರಾಷ್ಟ್ರ ವಿರೋಧಿ ವರ್ತನೆಯನ್ನು ತೋರಿದ್ದು ಅಕ್ಷಮ್ಯ. ಹುಟ್ಟಿ ಬೆಳೆದ ತಾಯ್ನಾಡಿನ ಬದಲಿಗೆ ವಿರೋಧಿ ರಾಷ್ಟ್ರಕ್ಕೆ ಜೈಕಾರ ಹಾಕಿದ್ದಾರೆ. ಎಸ್ ಡಿಪಿಐ ಅನ್ನು ಭಯೋತ್ಪಾದರ ಪೋಷಕ ಪಕ್ಷ ಅಲ್ಲ ಎಂದು ಭಾವಿಸಿದ್ದೆವು. ಆದರೆ, ಅದರ ವರ್ತನೆ ಭಯೋತ್ಪಾದಕರ ಹೊರತಾಗಿಲ್ಲ ಎನಿಸುತ್ತಿದೆ. ಬೆಂಗಳೂರಿನ ಡಿಜೆ ಹಳ್ಳಿ, ಕೆಜೆ ಹಳ್ಳಿಯ ಗಲಭೆ ಮತ್ತು ಮಂಗಳೂರಿನಲ್ಲಿ ಗಲಭೆ ನಡೆಸಿದ ಪ್ರಕರಣದಲ್ಲಿ ಎಸ್ ಡಿಪಿಐ ಪಾತ್ರ ಕೇಳಿಬಂದಿತ್ತು. ಇವರ ರಾಷ್ಟ್ರ ವಿರೋಧಿ ಕೃತ್ಯದಿಂದಾಗಿ ಎಸ್ ಡಿಪಿಐ ಅನ್ನು ನಿಷೇಧಿಸಬೇಕೆಂದು ಒತ್ತಾಯ ಬಂದಿತ್ತು. ಆ ಬಗ್ಗೆ ನಮ್ಮ ಸರಕಾರ ಕಾನೂನು ಅಂಶಗಳನ್ನು ಪರಿಗಣಿಸುತ್ತಿದೆ. ಆದರೆ, ಇಂಥ ವಿಚಾರದಲ್ಲಿ ಬಿಜೆಪಿ ಸರಕಾರ ಕಠಿಣ ಕ್ರಮ ಕೈಗೊಳ್ಳಲಿದೆ ಎನ್ನುವುದನ್ನು ಹೇಳುತ್ತೇನೆ ಎಂದು ಹೇಳಿದ್ದಾರೆ. 

ದ್ವಂದ್ವ ನೀತಿಯಿಂದಾಗಿ ವಿಶ್ವಾಸ ಕಳಕೊಂಡ ಕಾಂಗ್ರೆಸ್ ! 

ಇನ್ನು ಕಾಂಗ್ರೆಸ್, ಬೆಂಗಳೂರಿನ ಗಲಭೆ ಸಂದರ್ಭದಲ್ಲಿ ಎಸ್ ಡಿ ಪಿಐ ಜೊತೆ ಸಂಬಂಧ ಇಲ್ಲ ಎನ್ನುತ್ತದೆ. ಆದರೆ, ಅವಕಾಶ ಸಿಕ್ಕಾಗ ಜೊತೆಯಾಗಿ ಅಧಿಕಾರ ನಡೆಸುತ್ತಾರೆ. ಬಂಟ್ವಾಳ ನಗರಸಭೆಯಲ್ಲಿ ಅಧಿಕಾರ ಹಂಚಿಕೊಂಡಿದ್ದಾರೆ. ಆದರೆ, ಕಾಂಗ್ರೆಸ್ ತನ್ನ ದ್ವಂದ್ವ ನೀತಿಯಿಂದಾಗಿ ಮತಗಳನ್ನು ಕಳಕೊಳ್ಳುತ್ತಿದೆ‌.‌ ರಾಜ್ಯದಲ್ಲಿ ಹೀನಾಯ ಸ್ಥಿತಿಗೆ ಹೋಗುತ್ತಿದೆ. ಹಿಂದುಗಳ ಮತಗಳು ಸೇರಿದಂತೆ ಕಾಂಗ್ರೆಸಿನ ಪಾರಂಪರಿಕ ಮುಸ್ಲಿಂ ಮತದಾರರು ವಿಶ್ವಾಸ ಕಳಕೊಳ್ತಿದಾರೆ. ಕಾಂಗ್ರೆಸ್ ದ್ವಂದ್ವ ನೀತಿಯಿಂದಾಗಿಯೇ ಜನರ ವಿಶ್ವಾಸ ಕಳಕೊಳ್ಳುತ್ತಿದೆ ಎಂದು ನಳಿನ್ ಕುಮಾರ್ ಹೇಳಿದರು. 

ಬಿಜೆಪಿ ಬೆಂಬಲಿತರಿಗೆ ಅಭೂತಪೂರ್ವ ಗೆಲುವು 

ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ರಾಜ್ಯದಲ್ಲಿ ಬಿಜೆಪಿ ಬೆಂಬಲಿತರು ಅಭೂತಪೂರ್ವ ಗೆಲುವು ಕಂಡಿದ್ದಾರೆ. ರಾಜ್ಯದಲ್ಲಿ 55 ಶೇಕಡಾ ಬಿಜೆಪಿ ಬೆಂಬಲಿತರು ಗೆಲುವು ಪಡೆದಿದ್ದು ಬಿಜೆಪಿ ನಗರ ಕೇಂದ್ರೀತ ಪಕ್ಷ ಎನ್ನುವ ಅಪವಾದವನ್ನು ದೂರ ಮಾಡಿಸಿದೆ.‌ ರಾಜ್ಯದಲ್ಲಿ ಸುಮಾರು 28400 ಸ್ಥಾನಗಳನ್ನು ಬಿಜೆಪಿ, 24000 ಕಾಂಗ್ರೆಸ್, 15 ಸಾವಿರ ಜೆಡಿಎಸ್, 9753 ಸ್ಥಾನಗಳಲ್ಲಿ ಇತರರು ಗೆದ್ದಿದ್ದಾರೆ ಎಂಬ ಮಾಹಿತಿಯಿದೆ. ಪಕ್ಷದ ಪಂಚಸೂತ್ರಗಳು, ಪಂಚರತ್ನಗಳ ಆಧಾರದಲ್ಲಿ ಚುನಾವಣೆ ಎದುರಿಸಿದ್ದೆವು. ಈ ಬಗ್ಗೆ ಬಿಜೆಪಿ ಕಾರ್ಯಕರ್ತರಿಗೆ ತರಬೇತಿ ನೀಡಿ ತಂಡಗಳನ್ನು ರಚಿಸಲಾಗಿತ್ತು. ಮತಗಟ್ಟೆ , ಶಕ್ತಿಕೇಂದ್ರ, ಕುಟುಂಬ ಮಿಲನ, ಗ್ರಾಮ ಸ್ವರಾಜ್ ಇವೆಲ್ಲವನ್ನೂ ಅಚ್ಚುಕಟ್ಟಾಗಿ ನಿರ್ವಹಿಸಿದ ಕಾರಣದಿಂದ ಈ ಗೆಲುವಾಗಿದೆ. ಪ್ರಧಾನಿ ಮೋದಿ, ಮುಖ್ಯಮಂತ್ರಿ ಯಡಿಯೂರಪ್ಪ ಆಡಳಿತಕ್ಕೆ ಜನ ಮತ ಚಲಾಯಿಸಿದ್ದಾರೆ ಅನ್ನೋದು ವೇದ್ಯವಾಗುತ್ತದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಹೇಳಿದರು.

Video: 

The SDPI has proved that it's a Anti National Organisation after shouting Pro Pakistan Slogan at Ujre, Belthangady slammed Naleen Kumar Kateel in Mangalore.